ಭಾನುವಾರ, ಜನವರಿ 26, 2020
22 °C

ಅಧಿಕಾರಿಗಳ ‘ಹುಚ್ಚು’ ಬಿಡಿಸಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಸಕಾಫ್‌ ರೋಜಾ ದಲ್ಲಿ ಕಳೆದ ಒಂದು ವಾರದಿಂದ ಜನರ ನಿದ್ದೆಗೆಡಿಸಿದ್ದ ಹುಚ್ಚುನಾಯಿಯನ್ನು ಸಾಯಿಸಿ ಸಾಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ನಗರಸಭೆ ಅಧಿಕಾರಿಗಳನ್ನು ಜನರು ಹಾಗೂ ಶಾಸಕ ಡಾ.ಎಂ.ಎಸ್‌. ಬಾಗವಾನ, ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.ತಲೆಗೆ ಗಾಯವಾಗಿ ಹುಳು ಬಿದ್ದಿದ್ದ ನಾಯಿ ಸಕಾಫ್‌ ರೋಜಾದ ಮನೆಗಳಿಗೆ, ಕಚೇರಿಗಳಿಗೆ ನುಗ್ಗುತ್ತಿತ್ತು. ಎಲ್ಲರಲ್ಲೂ ಭಯ ಹುಟ್ಟಿಸುತ್ತಿತ್ತು. ಭಾನುವಾರವಂತೂ ಒಂದು ಕಚೇರಿಗೇ ನುಗ್ಗಿ ಅಲ್ಲಿಯೇ ಮಲಗಿತ್ತು.ಆ ಕಚೇರಿಯವರು, ಸಾರ್ವಜನಿಕರು ನಗರಸಭೆಯ ಪರಿಸರ ಎಂಜಿನಿಯರ್‌ ಜಗದೀಶ್‌, ಪೌರಾಯುಕ್ತ ರಾಮ ದಾಸ್‌ ಅವರ ಗಮನಕ್ಕೆ ತಂದರು. ಆದರೂ,  ಸಿಬ್ಬಂದಿ ಸ್ಥಳಕ್ಕೆ ಬರಲಿಲ್ಲ. ಕೊನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ ನಂತರ ನಗರಸಭೆಯ ಸಿಬ್ಬಂದಿ ಸ್ಥಳಕ್ಕ ಬಂದರು.ನಾಯಿ ಹಿಡಿಯುವುದನ್ನು ಬಿಟ್ಟು ಅಲ್ಲಿಯ ನಿವಾಸಿಗಳ ಮೇಲೆಯೇ ಹರಿಹಾಯಲಾರಂಭಿಸಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣ ವಾಯಿತು. ಇಷ್ಟಾದರೂ ಪರಿಸರ ಎಂಜಿ ನಿಯರ್‌ ಜಗದೀಶ ಸ್ಥಳಕ್ಕೆ ಬರಲೇ ಇಲ್ಲ.

ಜನರ ದೂರಿನ ಹಿನ್ನೆಯಲ್ಲಿ ಗಂಗೂಬಾಯಿ ಮಾನಕರ ಹಾಗೂ ನಗರ ಶಾಸಕ ಡಾ.ಎಂ.ಎಸ್‌. ಬಾಗ ವಾನ ಅವರು ಸ್ಥಳಕ್ಕೆ ದೌಡಾಯಿಸಿ ದರು. ಅವ್ಯವಸ್ಥೆ ಕಂಡು ನಗರಸಭೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಶಾಸಕರು–ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಪೌರಾಯುಕ್ತ ರಾಮದಾಸ ಬಂದರು. ನಗರಸಭೆ ಸಿಬ್ಬಂದಿ ಕಾರ್ಯವೈಖರಿ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಕೆಲ ದಿನಗಳ ಹಿಂದೆ ಇಲ್ಲಿ ಸತ್ತು ಬಿದ್ದಿದ್ದ ನಾಯಿಯ ಶವ ಸಾಗಿಸಲು ನಗರಸಭೆಯವರು ನಮ್ಮಿಂದ ₨100 ಪಡೆದರು. ರಮ್ಜಾನ್‌ ಸಮಯದಲ್ಲಿ ಇಫ್ತಾರ್‌ ಕೂಟ ಏರ್ಪಡಿಸುತ್ತೇವೆ. ಆಗ ಓಣಿಯನ್ನು ಶುಚಿಗೊಳಿಸಲೂ ನಮ್ಮಿಂದ ಹಣ ಪಡೆಯುತ್ತಾರೆ’ ಎಂದು ವಸೀಂ ಯಾದವಾಡ, ಸಾಧಿಕ್‌ ಶೇಖ, ನದೀಂ ಪಟವೇಗಾರ, ಮೊಯಿಸ್‌ ಮೋಮಿನ್‌, ಸೋಹೆಲ್‌ ನಾಯಕ್‌, ತನ್ವೀರ್‌ ಮುಶ್ರೀಫ್‌, ಪ್ರದೀಪ್‌ ಅಗರವಾಲ್‌ ಇತರರು ದೂರಿದರು.‘ಇಷ್ಟೊಂದು ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ಹೇಗೆ? ಸಾರ್ವಜ ನಿಕರ ದೂರಿಗೆ ಸ್ಪಂದಿಸುವುದು ಬೇಡವೇ? ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದ ಕೆಳ ಹಂತದ ಸಿಬ್ಬಂದಿಗೆ ತಿಳಿಹೇಳಲು ಆಗುವುದಿ ಲ್ಲವೇ? ಹುಚ್ಚು ನಾಯಿ ಸಾಗಿಸಲು ತಕ್ಷಣ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಶಾಸಕ ಬಾಗವಾನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಿರ್ಲಕ್ಷ್ಯ ವಹಿಸಿದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.ಕಾಶೀಫ್‌ ಯಾದವಾಡ, ಇಮ್ರಾನ್‌ ಕೊಲ್ಹಾರ, ಸಮೀರ್‌ ಪಟೇಲ್‌, ಚೇತನ್‌, ಸರ್ಪರಾಜ್‌ ಪಟವೇಗಾರ, ಮುಜಾಹಿದ್‌ ಗುಡಗುಂಟಿ, ಹಮೀದ್‌ ಕಲಾದಗಿ, ಫಜಾನ್‌ ಮುಲ್ಲಾ, ಫಜಲ್‌ ಗಣಿಹಾರ  ಸಂದರ್ಭದಲ್ಲಿದ್ದರು.

ಪ್ರತಿಕ್ರಿಯಿಸಿ (+)