ಅಧಿಕಾರಿಯ ಚಿನ್ನದ ಕೈಗಡಿಯಾರ: ಬೇನಾಮಿ ಲಾಕರ್!

7

ಅಧಿಕಾರಿಯ ಚಿನ್ನದ ಕೈಗಡಿಯಾರ: ಬೇನಾಮಿ ಲಾಕರ್!

Published:
Updated:
ಅಧಿಕಾರಿಯ ಚಿನ್ನದ ಕೈಗಡಿಯಾರ: ಬೇನಾಮಿ ಲಾಕರ್!

ವಿಜಾಪುರ: `ಇದು ಚಿನ್ನದ ಕೈಗಡಿಯಾರ. ರೋಮನ್ ಎಚ್‌ಎಂಟಿ ಕ್ವಾರ್ಟ್ಜ್ ಕಂಪೆನಿಯದ್ದು. ಕೈಗಡಿಯಾರದ ಯಂತ್ರ, ಮೇಲಿನ ಗಾಜು ಹಾಗೂ ಕೆಳಭಾಗದ ಹೊದಿಕೆಯನ್ನು ಹೊರತು ಪಡಿಸಿದರೆ ಉಳಿದ ಫ್ರೇಮ್, ಬೆಲ್ಟ್ ಎಲ್ಲವೂ ಚಿನ್ನದಲ್ಲಿ ಮಾಡಿದ್ದು. ಬರೋಬ್ಬರಿ 100 ಗ್ರಾಂ ಚಿನ್ನ ಬಳಸಿ ಈ ಕೈಗಡಿಯಾರ ತಯಾರಿಸಲಾಗಿದೆ' ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅಚ್ಚರಿಯಿಂದಲೇ ವಿವರಿಸಿದರು.ಇಲ್ಲಿಯ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ವಿಜಯನಾಮಾ ಮರಲಿಂಗಪ್ಪ ಚೌರ ಅವರ ಸ್ಥಳೀಯ ಗ್ಯಾಂಗ್ ಬಾವಡಿಯ ಮನೆಯ ಮೇಲೆ ನವೆಂಬರ್ 8ರಂದು ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರೆಸಿ ಈ ಚಿನ್ನದ ಕೈಗಡಿಯಾರ, ರೂ.30 ಲಕ್ಷ ನಗದು ಪತ್ತೆ ಹಚ್ಚಿದ್ದಾರೆ.ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್. ಜಗಮಯ್ಯ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಮೂರು ಲಾಕರ್: `ವಿ.ಎಂ. ಚೌರ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಅಲಹಾಬಾದ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ಎರಡು ಲಾಕರ್‌ನ ಕೀಲಿಗಳನ್ನು ಕೊಟ್ಟರು. ತಪಾಸಿಸಿದಾಗ ಅವು ಖಾಲಿ ಇದ್ದವು. ವಿಠ್ಠಲ ಮಲ್ಲಪ್ಪ ಚೌಧರಿ ಹೆಸರಿನಲ್ಲಿ ಅದೇ ಬ್ಯಾಂಕ್‌ನಲ್ಲಿ ಖಾತೆ-ಲಾಕರ್ ಇರುವ ಮಾಹಿತಿ ಲಭ್ಯವಾಯಿತು. ಆದರೆ, ಆ ಲಾಕರ್‌ನ ಕೀಲಿಯನ್ನು ಚೌರ ಕೊಡಲೇ ಇಲ್ಲ. ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ತನಿಖೆಗೂ ಸಹಕರಿಸುತ್ತಿಲ್ಲ. ಹೀಗಾಗಿ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ಸೋಮವಾರ ಸಂಜೆ ಈ ಲಾಕರ್ ಒಡೆದೆವು' ಎಂದರು.`ಈ ಬ್ಯಾಂಕ್‌ನಲ್ಲಿ ವಿಠ್ಠಲ ಮಲ್ಲಪ್ಪ ಚೌಧರಿ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ಆ ಖಾತೆಯಲ್ಲಿ ರೂ.4.50 ಲಕ್ಷ ಹಣ ಇಡಲಾಗಿದೆ. ಮನೆ ನಂ.84, ಜಯನಗರ ಕಾಲೋನಿ, ವಿಜಾಪುರ ಎಂಬ ವಿಳಾಸ ಇದೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಆ ವಿಳಾಸ ಬೇರೆಯವರದ್ದಾಗಿದೆ. ಇದೇ ವ್ಯಕ್ತಿಯ ಹೆಸರಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಸ್ಥಳೀಯ ಮುಖ್ಯ ಶಾಖೆಯಲ್ಲಿ ಖಾತೆ ಇದ್ದು, ಅಲ್ಲಿ ಮನೆ ನಂ.84, ಜಲನಗರ, ವಿಜಾಪುರ ಎಂಬ ವಿಳಾಸ ನೀಡಲಾಗಿದೆ' ಎಂದು ಹೇಳಿದರು.ಬ್ಯಾಂಕ್ ಅಧಿಕಾರಿ ಮೇಲೆ ತೂಗುಗತ್ತಿ: `ಸ್ಥಳೀಯ ಇಬ್ರಾಹಿಂರೋಜಾ ಹತ್ತಿರ ಶಾಖೆ ಹೊಂದಿರುವ ಅಲಹಾಬಾದ್ ಬ್ಯಾಂಕ್ ಒಂದು ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಉಳಿತಾಯ ಖಾತೆ ತೆರೆಯಬೇಕಾದರೆ ಪ್ಯಾನ್‌ಕಾರ್ಡ್, ಸೂಚಕರ ಹೆಸರು ಹಾಗೂ ಅವರ ವಿಳಾಸದ ದಾಖಲೆ, ಖಾತೆದಾರನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಈ ಬ್ಯಾಂಕ್‌ನವರು ಖಾತೆದಾರನ ಭಾವಚಿತ್ರ ಮಾತ್ರ ಪಡೆದಿದ್ದಾರೆ. ಸೂಚಕರ ಹೆಸರಿನಲ್ಲಿ ಗಿರೀಶ್ ಎಂದಷ್ಟೇ ಹೆಸರಿದೆ. ಅವರ ವಿಳಾಸದ ದಾಖಲೆ ಇಲ್ಲ.23.12.2008ರಂದು ಉಳಿತಾಯ ಖಾತೆ ತೆರೆಯಲಾಗಿದೆ. ಮೇಲಾಗಿ ಆ ಖಾತೆದಾರನಿಗೆ 75ನೇ ಸಂಖ್ಯೆಯ ಲಾಕರ್‌ನ್ನೂ ಸಹ ನೀಡಲಾಗಿದೆ. ಒಂದು ತಿಂಗಳಿನಿಂದ ಹುಡುಕುತ್ತಿದ್ದರೂ ಈತ ಯಾರು ಎಂಬುದು ಪತ್ತೆಯಾಗಿಲ್ಲ' ಎಂದು ಎಸ್ಪಿ ದಾಖಲೆ ಪ್ರದರ್ಶಿಸಿದರು.`ಬ್ಯಾಂಕ್ ಲಾಕರ್‌ನಲ್ಲಿ\ವಸ್ತುಗಳನ್ನು ಇಡುವ-ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಗ್ರಾಹಕರಿಗೆ ಇದೆ. ಅದರ ಮೇಲುಸ್ತುವಾರಿಯನ್ನು ಬ್ಯಾಂಕ್‌ನವರು ಮಾಡುವುದಿಲ್ಲ. ನಾಳೆ ಉಗ್ರವಾದಿಗಳೂ ಬೇನಾಮಿ ಹೆಸರಿನಲ್ಲಿ ಲಾಕರ್ ಪಡೆದು ಅದರಲ್ಲಿ ಸ್ಫೋಟಕ ವಸ್ತು ಇಡಬಹುದಲ್ಲ? ಈ ಖಾತೆ ತೆರೆಯುವಾಗ ಇದ್ದ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತೂ ಸಂಬಂಧಿಸಿದವರಿಗೆ ಪತ್ರ ಬರೆಯುತ್ತೇವೆ' ಎಂದರು.`ಈ ಲಾಕರ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ವಿಜಾಪುರ ಮತ್ತು ಬಾಗಲಕೋಟೆ ಶಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪಾಸ್‌ಬುಕ್‌ಗಳು ಲಭ್ಯವಾಗಿವೆ. ಇವುಗಳಲ್ಲಿ ಎರಡು ವಿ.ಎಂ. ಚೌರ್ ಹೆಸರಿನಲ್ಲಿದ್ದರೆ ಇನ್ನೆರಡು ಖಾತೆಗಳು ವಿ.ಎಂ. ಚೌಧರಿ ಹೆಸರಿನಲ್ಲಿವೆ. ಅವುಗಳ ತಪಾಸಣೆ ನಡೆಸಬೇಕಿದೆ' ಎಂದು ಜಗಮಯ್ಯನವರ ಹೇಳಿದರು.2 ಲಕ್ಷ ಠೇವಣಿ: `ವಿಜಾಪುರದ ರಾಜಾಜಿನಗರದಲ್ಲಿರುವ ಬಸವಸಿರಿ ವಿವಿಧೋದ್ದೇಶಗಳ ಸೌಹಾರ್ದ ಸಂಘದಲ್ಲಿ ವಿ.ಎಂ. ಚೌರ ಹೆಸರಿನಲ್ಲಿ ರೂ.1.50 ಲಕ್ಷ ಹಾಗೂ ಚೌರ ಅವರ ಮೊಮ್ಮಗ ಸೋಹನ ಅನಿಲ ಕಾಳೆ ಹೆಸರಿನಲ್ಲಿ ರೂ.50 ಸಾವಿರ ಮೌಲ್ಯದ ನಿಶ್ಚಿತ ಠೇವಣಿ ಪತ್ರಗಳು ಲಭ್ಯವಾಗಿವೆ. 100 ಗ್ರಾಂ ಚಿನ್ನದ ಕೈಗಡಿಯಾರ, ಒಟ್ಟಾರೆ 25 ಗ್ರಾಂ ಚಿನ್ನದ ಮೂರು ಉಂಗುರು, ಒಂದು ಚೈನ್ ಪತ್ತೆಯಾಗಿದೆ' ಎಂದು ತನಿಖಾ ತಂಡದಲ್ಲಿರುವ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ಗಳಾದ ಚಂದ್ರಕಾಂತ ಎಲ್.ಟಿ., ರವೀಂದ್ರ ಕುರಬಗಟ್ಟಿ ಮಾಹಿತಿ ನೀಡಿದರು.ನಿರೀಕ್ಷಣಾ ಜಾಮೀನು:  `ಚೌರ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ನಾವೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ' ಎಂದು ಚಂದ್ರಕಾಂತ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry