ಅಧಿಕಾರಿ ನಿರ್ಲಕ್ಷ್ಯ: ಸೂಳೆಕೆರೆ ನೀರು ಬಂದ್

7

ಅಧಿಕಾರಿ ನಿರ್ಲಕ್ಷ್ಯ: ಸೂಳೆಕೆರೆ ನೀರು ಬಂದ್

Published:
Updated:

ಹೊಳಲ್ಕೆರೆ: ಸೂಳೆಕೆರೆ ನೀರು ಸರಬರಾಜು ಬಂದ್ ಆಗಿದ್ದು, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಬೆಕ್ಕಿಗೆ ಚಿನ್ನಾಟ, ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತು ಪಟ್ಟಣದಲ್ಲಿನ ಕುಡಿಯುವ ನೀರಿನ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದಂತೆ ಇದೆ. ಕಳೆದ ಒಂದು ವಾರದಿಂದ ಪಟ್ಟಣಕ್ಕೆ ಒಂದು ಹನಿ ನೀರು ಬರದಿದ್ದರೂ, ಅಧಿಕಾರಿಗಳು ಮಾತ್ರ ಎಮ್ಮೆ ಮೇಲೆ ಮಳೆ ಸುರಿದಂತೆ ಕೂತಿದ್ದಾರೆ.

 

ಸೂಳೆಕೆರೆ ಹತ್ತಿರ ಚಿತ್ರದುರ್ಗಕ್ಕೆ ನೀರು ಸರಬರಾಜು ಮಾಡುವ ಕೇಂದ್ರದಲ್ಲಿನ ಎರಡು ಟ್ರಾನ್ಸ್‌ಫಾರ‌್ಮರ್‌ಗಳು ಸುಟ್ಟು ಹೋಗಿದ್ದು, ಈ ಮಾರ್ಗದಲ್ಲಿ ಕಳೆದ ಒಂದು ವಾರದಿಂದ ನೀರಿಲ್ಲ. ಇದರ ನಿರ್ವಹಣೆಯ ಜವಾಬ್ದಾರಿ ಚಿತ್ರದುರ್ಗ ನಗರಸಭೆಯ ಆಯುಕ್ತರಿಗೆ ಸೇರಿದೆ. ಸಮಸ್ಯೆ ಎದುರಾದಾಗ `ನೀರು ಸರಬರಾಜಿನಲ್ಲಿ ವ್ಯತ್ಯಯ~ ಎಂಬ ಪತ್ರಿಕಾ ಹೇಳಿಕೆ ಕೊಟ್ಟು ಕೈ ಕಟ್ಟಿ ಕೂರುವ ಅವರು, ಮುಂಜಾಗ್ರತೆ ವಹಿಸುವ ಗೋಜಿಗೆ ಹೋಗುವುದಿಲ್ಲ ಎಂಬುದು ಜನರ ಆರೋಪ.ಈಗ ಸುಟ್ಟಿರುವ ಟ್ರಾನ್ಸ್‌ಫಾರ‌್ಮರ್‌ಗಳು ಕೋಟ್ಯಂತರ ಮೌಲ್ಯದವುಗಳಾಗಿದ್ದು, ಅವುಗಳ ದುರಸ್ಥಿಗೆ ರೂ 90 ಲಕ್ಷ ವೆಚ್ಚವಾಗುತ್ತದೆ ಎಂಬ ಮಾಹಿತಿ ಇದೆ. ಅದರಲ್ಲೂ ಇವುಗಳ ದುರಸ್ತಿ ಚೆನ್ನೈನಲ್ಲೇ ಆಗಬೇಕು. ಇದರಿಂದ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.ಶಾಂತಿಸಾಗರದ ಹತ್ತಿರ 2, ಕೊಟ್ಟಿಗೆ ಹಳ್ಳಿ ಸಮೀಪ 2 ಟ್ರಾನ್ಸ್‌ಫಾರ‌್ಮರ್‌ಗಳಿವೆ. ಮುಂಜಾಗ್ರತಾ ಕ್ರಮವಾಗಿ ಸದಾ ಒಂದು ಟ್ರಾನ್ಸ್‌ಫಾರ‌್ಮರ್ ಅನ್ನು ರಿಸರ್ವ್ ಆಗಿ ಇಟ್ಟುಕೊಂಡಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ ಎನ್ನುತ್ತಾರೆ ಕೆಲವು ಅಧಿಕಾರಿಗಳು.ನೀರಿಗೆ ತತ್ವಾರ: ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಪಟ್ಟಣದ ಜನತೆ ಕಂಗಾಲಾಗಿದ್ದಾರೆ. ಅಲ್ಲದೆ, ತಾಲ್ಲೂಕಿನ ಹಿರೇಕಂದವಾಡಿ ಶುದ್ಧೀಕರಣ ಘಟಕದ ಮಾರ್ಗದಲ್ಲಿ ಬರುವ ಚಿಕ್ಕಜಾಜೂರು, ಬಿ. ದುರ್ಗ, ಆಡನೂರು ಮತ್ತಿತರ ಸುಮಾರು 10 ಹಳ್ಳಿಗಳ ಜನರೂ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳಲ್ಲಿ ಉಪ್ಪುನೀರು ಬರುವುದರಿಂದ ಶೇ 90ರಷ್ಟು ಮನೆಗಳಲ್ಲಿ ಬೋರ್‌ವೆಲ್‌ಗಳಿಲ್ಲ. ಇವರೆಲ್ಲರೂ ಪಟ್ಟಣ ಪಂಚಾಯ್ತಿ ಸರಬರಾಜು ಮಾಡುವ ನೀರನ್ನೇ ನಂಬಿಕೊಂಡಿದ್ದಾರೆ.ಈಗ ಇದ್ದಕ್ಕಿದ್ದಂತೆ ನೀರು ಬಂದ್ ಆಗಿರುವುದರಿಂದ ಸಾರ್ವಜನಿಕರ ಗೋಳು ಹೇಳತೀರದು. ಇದರಿಂದ ಆಟೋರಿಕ್ಷಾದಲ್ಲಿ ಒಂದು ಟ್ಯಾಂಕ್‌ಗೆ ರೂ 100ರಿಂದ 150, ಟ್ರ್ಯಾಕ್ಟರ್ ಟ್ಯಾಂಕ್‌ಗೆ ರೂ 500 ರಿಂದ 800 ಹಣ ತೆತ್ತು ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಇರುವ ಒಂದೆರಡು ಬೋರ್‌ವೆಲ್ ಮಾಲೀಕರಿಗೆ ಈಗ ಸುಗ್ಗಿಕಾಲ. ಇನ್ನು ಹೊಟೇಲ್ ಮಾಲೀಕರು ದುಪ್ಪಟ್ಟು ಬೆಲೆ ತೆತ್ತು ನೀರು ಪಡೆಯುತ್ತಿದ್ದಾರೆ.25 ಲಕ್ಷ ಲೀಟರ್ ನೀರು ಬೇಕು: ಪಟ್ಟಣದಲ್ಲಿ ಸುಮಾರು 16 ಸಾವಿರ ಜನಸಂಖ್ಯೆ ಇದ್ದು, ಪ್ರತಿಯೊಬ್ಬರಿಗೂ 150 ಲೀಟರ್‌ನಂತೆ ದಿನಕ್ಕೆ 25 ಲಕ್ಷ ಲೀಟರ್ ನೀರಿನ ಅಗತ್ಯವಿದೆ.ಆದರೆ, ಪಟ್ಟಣದಲ್ಲಿ ಕೇವಲ 5 ಓವರ್‌ಹೆಡ್ ಟ್ಯಾಂಕ್‌ಗಳಿದ್ದು, ಎಲ್ಲಾ ಸೇರಿ 6.75 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿವೆ. ಸೂಳೆಕೆರೆ ನೀರಿನ ಸಮಸ್ಯೆ ಇಲ್ಲದಿದ್ದರೂ, ಸಂಗ್ರಹಣಾ ಸಾಮರ್ಥ್ಯದ ಕೊರತೆಯಿಂದ 4, 5 ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತಿದೆ.ಪಟ್ಟಣಕ್ಕೆ 10 ಲಕ್ಷ ಲೀಟರ್‌ನ ಎರಡು ಟ್ಯಾಂಕ್‌ಗಳ ಅಗತ್ಯವಿದ್ದು, ಟ್ಯಾಂಕ್ ನಿರ್ಮಾಣಗೊಳ್ಳುವವರೆಗೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎನ್ನುತ್ತಾರೆ ಇಲ್ಲಿನ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೀರಯ್ಯ. 

                                                                 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry