ಅಧಿಕಾರಿ ವಿರುದ್ಧ ಕಲಾವಿದರ ಪ್ರತಿಭಟನೆ

7

ಅಧಿಕಾರಿ ವಿರುದ್ಧ ಕಲಾವಿದರ ಪ್ರತಿಭಟನೆ

Published:
Updated:

ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಥಳೀಯ ಕಲಾವಿದರತ್ತ ನಿರ್ಲಕ್ಷ್ಯ ತೋರುತ್ತಿದೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ವಿವಿಧ ಕಲಾವಿದರು ಇತ್ತೀಚೆಗೆ ಇಲಾಖೆಯ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.ನಗರದ ಎಂ.ಜಿ.ರಸ್ತೆ ಬಳಿಯಿರುವ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, `ಇಲಾಖೆಯು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದೇ ಹೊರಜಿಲ್ಲೆಯವರಿಗೆ ಮತ್ತು ಇತರ ಕಲಾವಿದರಿಗೆ ಅವಕಾಶ ನೀಡುತ್ತಿದೆ. ಸ್ಥಳೀಯ ಕಲಾವಿದರನ್ನು ಕಡೆಗಣಿಸುತ್ತಿದೆ~ ಎಂದು ಆರೋಪಿಸಿದರು.`ಈ ಧರೆ~ ಕಲಾವಿದರ ತಂಡದ ತಿರುಮಲ ಪ್ರಕಾಶ್ ಮಾತನಾಡಿ, `ಜಿಲ್ಲೆಯ ಕಲಾವಿದರು ಮೈಸೂರು ದಸರಾ, ಹಂಪೆ ಉತ್ಸವ, ವಿಶ್ವ ಕನ್ನಡ ಸಮ್ಮೇಳನ ಮುಂತಾದವುಗಳಲ್ಲಿ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ್ದಾರೆ. ಆದರೆ ಜಿಲ್ಲೆಯಲ್ಲಿಯೇ ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿಲ್ಲ~ ಎಂದರು.`ಇಲಾಖೆಯ ಸಹಾಯಕ ನಿರ್ದೇಶಕ ಎಂ.ಮಾದೇಗೌಡ ಅವರು ವ್ಯವಸ್ಥಿತವಾಗಿ ಸ್ಥಳೀಯ ಕಲಾವಿದರನ್ನು ಮತ್ತು ಕಲಾತಂಡಗಳನ್ನು ಮರೆಮಾಚುತ್ತಿದ್ದಾರೆ. ಎಲ್ಲಿಯೂ ಅವಕಾಶ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಅವಕಾಶ ನೀಡುವಂತೆ ಕೋರಿದರೆ, ಮನ ಬಂದಂತೆ ಮಾತನಾಡುತ್ತಾರೆ.

 

ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಲ್ಲ ಎಂಬಂತೆ ವರ್ತಿಸುತ್ತಾರೆ. ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ, ಹೊಸ ಅಧಿಕಾರಿಗಳನ್ನು ನಿಯೋಜಿಸಬೇಕು. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರಾಸಕ್ತಿ ತೋರಿದಲ್ಲಿ, ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಎಚ್ಚರಿಕೆ ನೀಡಿದರು.  ಕಲಾವಿದರಾದ ಜಿ.ಎಸ್.ಅಶ್ವತ್ಥಪ್ಪ, ಚಿಕ್ಕಬಳ್ಳಾಪುರದ ಮುನಿನಾರಾಯಣಪ್ಪ, ಗೊಟ್ಲಗುಂಟೆಯ ವೆಂಕಟರಮಣ, ಮುತ್ತೂರಿನ ಕೆ.ಗೋವಿಂದಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry