ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷಗಳ ಕಸರತ್ತು

7
ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು

ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷಗಳ ಕಸರತ್ತು

Published:
Updated:

ಮೈಸೂರು: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಮಹಾನಗರಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಎರಡೂ ಗದ್ದುಗೆಯನ್ನು ತನ್ನದಾಗಿಸಿಕೊಂಡಿರುವ ಜೆಡಿಎಸ್‌ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ತಪ್ಪಿಸಲು ಕಾಂಗ್ರೆಸ್‌ ಪಕ್ಷ ಚುನಾವಣೆ ಕೊನೆ ಕ್ಷಣದಲ್ಲಿ ಬಿರುಸಿನ ಕಸರತ್ತು ನಡೆಸಿತು. ಈ ನಡುವೆ ಹೇಗಾದರೂ ಮಾಡಿ ಅಧಿಕಾರ ಹಿಡಿಯುವ ಮೂಲಕ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ, ಮುಖ್ಯಮಂತ್ರಿಗೆ ಮುಖಭಂಗ ಉಂಟು ಮಾಡಲು ಬಿಜೆಪಿ–ಜೆಡಿಎಸ್‌ ಒಳತಂತ್ರ ರೂಪಿಸಿವೆ.ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೆ. 18 (ಬುಧವಾರ) ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದೆ.20 ತಿಂಗಳ ಎರಡನೇ ಅವಧಿಯ ಉಳಿದ ಎಂಟೂವರೆ ತಿಂಗಳ ಅಧಿಕಾರ ಹಿಡಿಯುವ ಸಲುವಾಗಿ ಜೆಡಿಎಸ್-–ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೀವ್ರ ಹಣಾಹಣಿ ನಡೆಸಿವೆ.ಮ್ಯಾಜಿಕ್‌ ಸಂಖ್ಯೆ 24 ತಲುಪಲು ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದೆ. ಇಬ್ಬರು ಬಿಜೆಪಿ ಸದಸ್ಯರೊಂದಿಗೆ ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಕಾಂಗ್ರೆಸ್ ಸದಸ್ಯರು ಬೀಡುಬಿಟ್ಟಿದ್ದಾರೆ. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಜೆಡಿಎಸ್–-ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ಸಿನ ಇಬ್ಬರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ರೆಸಾರ್ಟ್‌ವೊಂದರಲ್ಲಿ ತಂಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ತಮ್ಮೊಂದಿಗೆ ಇಬ್ಬರು ಸದಸ್ಯರು ಇದ್ದು, ನಮ್ಮ ಬಲ 24 ಆಗಲಿದೆ. ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿಯುವುದು ಸುಲಭ ಎನ್ನುತ್ತಾರೆ ಕಾಂಗ್ರೆಸ್‌ನ ಸದಸ್ಯರೊಬ್ಬರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಇಬ್ಬರು ಸದಸ್ಯರು ತಮ್ಮೊಂದಿಗೆ ಇದ್ದಾರೆ ಎನ್ನುತ್ತಾರೆ ಜೆಡಿಎಸ್‌ ಸದಸ್ಯರು. ಆದರೆ, ಹೆಸರುಗಳನ್ನು ಬಹಿರಂಗಪಡಿಸಲು ಅವರು ಇಚ್ಛಿಸಲಿಲ್ಲ.ಕಾಂಗ್ರೆಸ್‌ ದೂರ ಇಡಬೇಕು ಎಂಬುದು ಜೆಡಿಎಸ್‌–ಬಿಜೆಪಿ ಲೆಕ್ಕಾಚಾರ. ಹಾಗಾಗಿ, ಎರಡೂ ಪಕ್ಷಗಳು ತನ್ನ ಸದಸ್ಯರಿಗೆ ವಿಪ್‌ ಜಾರಿ ಮಾಡಿವೆ. ಕಾಂಗ್ರೆಸ್‌ ಸಹ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ. ಈ ನಡುವೆ ಕಾಂಗ್ರೆಸ್‌ನ ಶಕುಂತಲಾ ಅವರು ಪಕ್ಷದ ಸಂಪರ್ಕ ಕಡಿದುಕೊಂಡಿದ್ದಾರೆ. ಹಾಗಾಗಿ, ಶಕುಂತಲಾ ವೆಂಕಟಯ್ಯ ಅವರ ಮನೆ ಬಾಗಿಲಿಗೆ ವಿಪ್‌ ಅಂಟಿಸಲಾಗಿದೆ.ವಿಪ್‌ ಸ್ವೀಕರಿಸದ ಆಲನಹಳ್ಳಿಯಲ್ಲಿ ವಾಸವಿರುವ ದೇವಾಲಾಪುರ ಕ್ಷೇತ್ರದ ಬಿಜೆಪಿ ಸದಸ್ಯೆ ಎಂ. ಮಂಜುಳಾ ಹಾಗೂ ಸಿಂಧುವಳ್ಳಿ ಗ್ರಾಮದಲ್ಲಿರುವ ಬದನವಾಳು ಕ್ಷೇತ್ರದ ಬಿಜೆಪಿ ಸದಸ್ಯ ಎಸ್.ಎಂ. ಕೆಂಪಣ್ಣ ಅವರ ಮನೆ ಬಾಗಿಲಿಗೆ ಪಕ್ಷ ವಿಪ್‌ ಅಂಟಿಸಿದೆ.ಹಿಂದಿನ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಉಪಾಧ್ಯಕ್ಷ ಸುಚಿತ್ರಾ ಅವರ ವಿರುದ್ಧ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಬಿಜೆಪಿಯ ಡಾ.ಶಿವರಾಮ್‌ (ಕಳಲೆ ಕ್ಷೇತ್ರ), ಮಂಜುಳಾ ಹಾಗೂ ಕೆಂಪಣ್ಣ ಅವರು ಸಹಿ ಹಾಕಿದ್ದರು. ಕೊನೆ ಕ್ಷಣದಲ್ಲಿ ಪಕ್ಷ ಶಿವರಾಮ್‌ ಅವರನ್ನು ಸಮಾಧಾನ ಮಾಡಿತ್ತು. ಶಿವರಾಮ್‌ ಪಕ್ಷದಿಂದ ವಿಪ್ ಸ್ವೀಕರಿಸಿದ್ದಾರೆ. ಕೆಂಪಣ್ಣ ಮತ್ತು ಮಂಜುಳಾ ಅವರ ಬೆಂಬಲ ಚುನಾವಣೆಯ ದಿಕ್ಕನ್ನೆ ಬದಲಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry