ಸೋಮವಾರ, ಏಪ್ರಿಲ್ 12, 2021
29 °C

ಅಧಿಕಾರ ತ್ಯಜಿಸಲು ಗಡಾಫಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ/ ಇಸ್ತಾನ್‌ಬುಲ್/ ಕೈರೊ (ಡಿಪಿಎ, ಪಿಟಿಐ): ನಾಲ್ಕು ದಶಕಗಳ ಸುದೀರ್ಘಾವಧಿಯ ಅಧಿಕಾರದಿಂದ ಕೆಳಗಿಳಿಯಲು ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರಿಗೆ ಬಂಡುಕೋರರು 72 ಗಂಟೆಗಳ ಗಡುವು ವಿಧಿಸಿದ್ದಾರೆ.‘ಈ ಅವಧಿಯಲ್ಲಿ ಬಾಂಬ್ ದಾಳಿಗಳನ್ನು ಸ್ಥಗಿತಗೊಳಿಸಿ ಲಿಬಿಯಾವನ್ನು ತೊರೆದರೆ ಅಪರಾಧ ಪ್ರಕರಣಗಳಿಂದ ಅವರಿಗೆ ವಿನಾಯಿತಿ ನೀಡಲಾಗುತ್ತದೆ’ ಎಂದು ಬಂಡುಕೋರರನ್ನು ಒಳಗೊಂಡ ‘ರಾಷ್ಟ್ರೀಯ ಪರಿವರ್ತನಾ ಮಂಡಳಿ’ ಮುಖ್ಯಸ್ಥ ಮುಸ್ತಫಾ ಅಬ್ದುಲ್ ಜಲೀಲ್ ‘ಅಲ್ ಜಜೀರ’ ಟಿ.ವಿ ವಾಹಿನಿಗೆ ತಿಳಿಸಿದ್ದಾರೆ.ಆದರೆ ಇದರಿಂದ ವಿಚಲಿತರಾಗದ ಗಡಾಫಿ, ಲಿಬಿಯಾದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ದೇಶದ ವಿರುದ್ಧ ಒಳಸಂಚು ನಡೆಸಿವೆ ಎಂದು ಆರೋಪಿಸಿದ್ದಾರೆ. ಬಂಡುಕೋರರನ್ನು ‘ದೇಶದ್ರೋಹಿಗಳು’ ಎಂದು ಜರಿದಿರುವ ಅವರು, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳ ವಿರುದ್ಧ ಹರಿಹಾಯ್ದಿದ್ದಾರೆ.ಬುಧವಾರ ಬೆಳಿಗ್ಗೆ ಸರ್ಕಾರಿ ಟಿ.ವಿಯಲ್ಲಿ ಭಾಷಣ ಮಾಡಿದ ಗಡಾಫಿ, ಬಂಡುಕೋರರನ್ನು ಬೆಂಬಲಿಸದೆ ಅವರಿಗೆ ಹಿನ್ನಡೆ ಉಂಟು ಮಾಡುವಂತೆ ಜನರನ್ನು ಕೋರಿದ್ದಾರೆ.ದೇಶವನ್ನು ‘ಹಾರಾಟ ರಹಿತ ವಲಯ’ವನ್ನಾಗಿ ಘೋಷಿಸಲು ಅಮೆರಿಕ ಮತ್ತು ಮಿತ್ರ ಪಕ್ಷಗಳು ಗಂಭೀರ ಚಿಂತನೆ ನಡೆಸಿರುವ ಬಗ್ಗೆ ಅವರು ಕಿಡಿಕಾರಿದ್ದಾರೆ. ಇಂತಹ ಕ್ರಮವು ಲಿಬಿಯಾದಲ್ಲಿ ವಸಾಹತು ಸ್ಥಾಪಿಸಿ ತೈಲ ನಿಧಿಯನ್ನು ವಶಪಡಿಸಿಕೊಳ್ಳುವ ಅಮೆರಿಕ ಮತ್ತು ಅದರ ಐರೋಪ್ಯ ಮಿತ್ರರಾಷ್ಟ್ರಗಳ ಹುನ್ನಾರವನ್ನು ತೋರಿಸುತ್ತದೆ. ಅದೇನಾದರೂ ಜಾರಿಗೆ ಬಂದರೆ ನಮ್ಮ ಜನ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.ನಗರ ಪ್ರವೇಶ: ಈ ಮಧ್ಯೆ ಗಡಾಫಿ ಅವರ ಯುದ್ಧ ಟ್ಯಾಂಕುಗಳು, ಅಧ್ಯಕ್ಷರ ಪರ- ವಿರೋಧಿ ಗುಂಪುಗಳ ನಡುವೆ ತೀವ್ರ ಸೆಣಸಾಟ ನಡೆಯುತ್ತಿರುವ ಜವಿಯ ನಗರವನ್ನು ಪ್ರವೇಶಿಸಿವೆ. ಪಟ್ಟಣದಲ್ಲಿ ಅನಾಮಿಕ ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಬಂಡುಕೋರರ ನಿಗ್ರಹಕ್ಕೆ ತಮ್ಮ ಪ್ರಮುಖ ಸೇನಾ ಬಲವನ್ನು ನಿಯೋಜಿಸದ ಗಡಾಫಿ, ಪಾಶ್ಚಿಮಾತ್ಯ ರಾಷ್ಟ್ರಗಳ ಸಂಭಾವ್ಯ ಮಧ್ಯಪ್ರವೇಶದ ಸಂದರ್ಭದಲ್ಲಿ ಬಳಸಲು ಅದನ್ನು ಕಾಯ್ದಿರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.ಪ್ರಮುಖರ ಬ್ಯಾಂಕ್ ಖಾತೆ ಸ್ಥಗಿತ

ಕ್ಯಾನ್‌ಬೆರಾ (ಐಎಎನ್‌ಎಸ್):
ಲಿಬಿಯಾ ಸರ್ಕಾರದ 16 ಪ್ರಮುಖ ನಾಯಕರ ಬ್ಯಾಂಕ್ ಖಾತೆಗಳ ಮೇಲೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ಹೇರಿದೆ.ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಬುಧವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಆಸ್ಟ್ರೇಲಿಯಾದ ಬ್ಯಾಂಕುಗಳಲ್ಲಿ ತಮ್ಮ ಖಾತೆಗಳನ್ನು ಹೊಂದಿರುವ ಈ ನಾಯಕರ ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದೆ. ಇವರಲ್ಲಿ ಲಿಬಿಯಾದ ನಾಯಕ ಕರ್ನಲ್ ಮುವಮ್ಮರ್ ಗಡಾಫಿ ಹಾಗೂ ಅವರ ಸಹೋದರ ಸಂಬಂಧಿಗಳೂ ಸೇರಿದ್ದಾರೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಲಿಬಿಯಾದ ರಕ್ಷಣಾ ಸಚಿವ ಹಾಗೂ ಗಡಾಫಿಯ ಖಾಸಗಿ ಭದ್ರತಾ ಪಡೆಯ ಮುಖ್ಯಸ್ಥರೂ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳ ಖಾತೆಗಳ ವ್ಯವಹಾರವನ್ನೂ ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಈಗ ಸ್ಥಗಿತಗೊಳಿಸಿದೆ ಎಂದು ವರದಿ ವಿವರಿಸಿದೆ.ಕೈರೊಗೆ ತೆರಳಿದ ಲಿಬಿಯಾ ಸೇನಾಧಿಕಾರಿ

ಟ್ರಿಪೋಲಿ/ ಕೈರೊ (ಡಿಪಿಎ/ಎಎಫ್‌ಪಿ):
ಜನಾಂದೋಲನದಿಂದ ಪ್ರಕ್ಷುಬ್ದವಾಗಿರುವ ಲಿಬಿಯಾದಿಂದ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಖಾಸಗಿ ವಿಮಾನದಲ್ಲಿ ಅವರ ಸೇನಾಧಿಕಾರಿ ಕೈರೊ ತಲಪಿದ್ದಾರೆ.ಈಜಿಪ್ಟ್‌ನ ಆಡಳಿತಕ್ಕೆ ಗಡಾಫಿಯವರ ಸಂದೇಶವೊಂದನ್ನು ಸೇನಾ ಅಧಿಕಾರಿ ಜನರಲ್ ಅಬ್ದೆಲ್ ರಹಮಾನ್ ಬೆನ್ ಅಲಿ ಅಲ್ ಜಾವಿ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಲಿಬಿಯಾದ ಬಂದರು ನಗರ ರಾಸ್ ಲಾನುಫ್ ವಶಕ್ಕಾಗಿ ಸರ್ಕಾರಿ ಸೇನೆ ಮತ್ತು ವಿರೋಧಿಗಳ ನಡುವೆ ಭಾರಿ ಕಾಳಗ ನಡೆಯುತ್ತಿದೆ. ಇತರೆಡೆಯೂ ಘರ್ಷಣೆ ಹಿಂಸಾಚಾರ ಹೆಚ್ಚಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.