ಗುರುವಾರ , ಏಪ್ರಿಲ್ 15, 2021
24 °C

ಅಧಿಕಾರ ನಡೆಸುವ ಕೈಗಳು ಪಿಕಾಸಿ ಹಿಡಿದಾಗ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಬಿಸಲು ಏರುತ್ತಿದ್ದಂತೆ ಅವರು ಸುಸ್ತಾದರು.. ಕೈಗಳಲ್ಲಿ ಒಂದಿಬ್ಬರಿಗೆ ಬೊಬ್ಬೆಗಳು ಬಂದರೂ ಹುಮ್ಮಸ್ಸು ಮಾತ್ರ ಅವರಲ್ಲಿ  ಕಡಿಮೆಯಾಗಲಿಲ್ಲ. ಪ್ರತಿ ದಿನ ಟಿಪ್‌ಟಾಪಾಗಿ ಧಿರಿಸಿನೊಂದಿಗೆ ಕಚೇರಿಗೆ ಹೋಗಿ ನೆರಳಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದವರೆಲ್ಲ ಶುಕ್ರವಾರ ಗುದ್ದಲಿ, ಪಿಕಾಸಿ ಹಿಡಿದು ಅಗೆಯಲು ನಿಂತಾಗ ಆ ಗ್ರಾಮದ ಜನ ಮೂಕ ವಿಸ್ಮಿತರಾದರು.ಸರ್ಕಾರದ ಸಹಾಯಧನದ ನಡುವೆಯೂ ಶೌಚಾಲಯ ಕಟ್ಟಿಕೊಳ್ಳಲು ಗ್ರಾಮದ ಜನರು ಹಿಂದೇಟು ಹಾಕುತ್ತಿರುವುದನ್ನು ಮನಗಂಡ ತಾಲ್ಲೂಕಿನ ಗ್ರಾ.ಪಂ. ಕಾರ್ಯದರ್ಶಿಗಳು,    ಗ್ರಾಮಾಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಳ್ಳಿ ಜನರ ಮನಸ್ಸು ಗೆಲ್ಲಲು ತಾವೇ ಗುದ್ದಲಿ, ಪಿಕಾಸಿ ಹಿಡಿದು ಕೆಲಸಕ್ಕೆ ಇಳಿದಿದ್ದಾರೆ.ವಿಶ್ವ ಸಂಸ್ಥೆಯಲ್ಲಿ ‘ಗೋಳ್ತಮಜಲು ಮಾದರಿ’ ಎಂದೇ ಪ್ರಸಿದ್ಧಿ ಪಡೆದುಕೊಂಡು ಬೇರೆಬೇರೆ     ದೇಶಗಳು ಜನರು ದಕ್ಷಿಣ ಕನ್ನಡ ಜಿಲ್ಲೆಗೆ ತಿರುಗು ನೋಡುವಂತೆ ಮಾಡಿದ ವಿಭಿನ್ನ ಎನ್ನುವಂತ     ಶ್ರಮದಾನದ ಕಲ್ಪನೆ ತಾಲ್ಲೂಕಿಗೂ ಕಾಲಿಟ್ಟಿರುವುದು ವಿಶೇಷವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಾಲ್ಲೂಕು ಒಕ್ಕೂಟವು ಮೊತ್ತಮೊದಲಿಗೆ ಶ್ರಮದಾನದ ಮೂಲಕ ಗೋಳ್ತಮಜಲಿನಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿ 60  ಶೌಚಾಲಯ ಗುಂಡಿಗಳನ್ನು ನಿರ್ಮಿಸಿದ್ದರು. ಇದೀಗ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಕೂಡ ಜನರ ಮನೆಯೆಡೆಗೆ ನಡೆಯುವ ಮೂಲಕ ಜಿಲ್ಲೆಯ ಸ್ವಚ್ಛತಾ ಆಂದೋಲನಕ್ಕೆ ಹೊಸ ಹುರುಪು ಮೂಡಿಸಿದ್ದಾರೆ. ತಾಲ್ಲೂಕಿನ ದೇವಸಂದ್ರ       ಗ್ರಾಮವನ್ನು ಇವರು ಆಯ್ಕೆ ಮಾಡಿಕೊಂಡಿದ್ದು, ಶ್ರಮದಾನದ ಮೂಲಕ ಗ್ರಾಮದ 80 ಮನೆಗಳಲ್ಲಿ 70 ಮನೆಗಳಿಗೆ ಶೌಚಾಲಯ ಗುಂಡಿಗಳನ್ನು ತೆಗೆದು  ಕೊಡುವ ಪಣ ತೊಟ್ಟಿದ್ದಾರೆ. ಉಳಿದ ಕೆಲಸವನ್ನು ಸರ್ಕಾರದ ಧನ ಸಹಾಯದಲ್ಲಿ  ಮಾಡಲಾಗುವುದು. ಶನಿವಾರದೊಳಗೆ ಈ ಗ್ರಾಮ ಸಂಪೂರ್ಣ ಸ್ವಚ್ಛತಾ ಗ್ರಾಮವಾಗಿ ನಳನಳಿಸಲಿದೆ.ಅಧಿಕಾರಿಗಳ ಈ ‘ಸಾಹಸಕ್ಕೆ’ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಎನ್.ರವಿ, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ್, ಲೆಕ್ಕಾಧಿಕಾರಿ ರಾಮಚಂದ್ರಯ್ಯ, ಯೋಜನಾ ನಿರ್ದೇಶಕರಾದ ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷೆ ಜಮುನಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ್, ತಾ.ಪಂ. ಇ.ಓ.ರವಿಕುಮಾರ್ ಶುಭ ಹಾರೈಸಿದರು.ವಿಷಾದ: ಗ್ರಾಮ ನೈರ್ಮಲ್ಯಕ್ಕೆ ಸರ್ಕಾರವು ಆರ್ಥಿಕ ನೆರವು ನೀಡುತ್ತಿದ್ದರೂ ನಿರೀಕ್ಷಿತ ಗುರಿ ಸಾಧಿಸಲಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಡಾ.ಬಿ.ಎನ್.ರವಿ ವಿಷಾದಿಸಿದರು.ಜಲ್ಲೆಯಲ್ಲಿ 2,42,842 ಬಿಪಿಎಲ್ ಕುಟುಂಬಗಳಿದ್ದು, 1,7 ಲಕ್ಷ ಕುಟುಂಬಗಳು ಶೌಚಾಲಯವನ್ನು ಹೊಂದಿವೆ. 1,37,000 ಎಪಿಎಲ್ ಕುಟುಂಬಗಳಿದ್ದು, 70,000 ಕುಟುಂಬಗಳು ಶೌಚಾಲಯವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.ತಾಲ್ಲೂಕಿನ ನಿಡಸಾಲೆ, ಉಜ್ಜಿನಿ, ಸಂತೇಮಾವತ್ತೂರು, ಜೋಡಿಹೊಸಹಳ್ಳಿ, ಹುಲಿಯೂರುದುರ್ಗ, ಕೆ.ಹೊನ್ನಮಾಚನಹಳ್ಳಿ ಗ್ರಾ.ಪಂ.ಗಳನ್ನು ಶೌಚಾಲಯ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ರೂ. 7 ಕೋಟಿ ಹಣ ಮೀಸಲಿಡಲಾಗಿದೆ. ಬಿಪಿಎಲ್ ಫಲಾನುಭವಿಗಳಿಗೆ ರೂ. 6,750, ಎಪಿಎಲ್ ಪಡಿತರರಿಗೆ ರೂ. 3,750 ಸಹಾಯಧನ ನೀಡಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.