ಅಧಿಕಾರ ಹಸ್ತಾಂತರಕ್ಕೆ ಸಜ್ಜು

7

ಅಧಿಕಾರ ಹಸ್ತಾಂತರಕ್ಕೆ ಸಜ್ಜು

Published:
Updated:

ಕಳೆದ ವಾರ ಪ್ರಧಾನಿ ಮನಮೋಹನ್ ಸಿಂಗ್ ರಾಜಧಾನಿ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಹೆಚ್ಚಿನ ಅಚ್ಚರಿಯ ಅಂಶಗಳನ್ನೇನೂ ಹೊರ­ಹೊಮ್ಮಿ­ಸ­ಲಿಲ್ಲ. ಲೋಕಸಭೆ ಚುನಾವಣೆ ಸನಿಹವಾಗುತ್ತಿ­ರು­ವಂತೆಯೇ ಅಧಿ­­ಕಾರ ದಂಡವನ್ನು ಹಸ್ತಾಂತರಿಸುವ ವಿಷಯವನ್ನು ಈ ಗೋಷ್ಠಿ­ಯಲ್ಲಿ ಪ್ರಧಾನಿ ಪ್ರಕಟಿಸಿದ್ದಾರೆ. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಪೂರ್ಣ ಅರ್ಹತೆ ಉಳ್ಳವರು ಎಂಬಂತಹ ಮಾತುಗಳನ್ನೂ ಆಡಿದ್ದಾರೆ.ರಾಷ್ಟ್ರದ ಸದ್ಯದ ರಾಜಕೀಯ ವಾತಾವರಣವನ್ನು ಮನಮೋಹನ್ ಸಿಂಗ್ ಸರಿಯಾ­ಗಿಯೇ ಗ್ರಹಿಸಿದ್ದಾರೆ. ಇತ್ತೀಚಿನವರೆಗೂ ನಿವೃತ್ತಿ ವಿಚಾರ ಪ್ರಸ್ತಾಪ­ವಾದಾ­ಗ­ಲೆಲ್ಲಾ ಪ್ರಧಾನಿಯಾಗಿ ತಮ್ಮ ಹೊಣೆಗಾರಿಕೆಯಿಂದ ನುಣುಚಿ­ಕೊಳ್ಳು­ವುದಿಲ್ಲ ಎಂಬಂತಹ ಮಾತುಗಳ ನ್ನಾಡುತ್ತಿದ್ದರು ಅವರು. ಇನ್ನು ಈ ನುಡಿಗಳಿಗೆ ಆಸ್ಪದ­ವಿಲ್ಲ­­ದಂತಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯ ನಂತರ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.ಇತ್ತೀ­­ಚಿನ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ಕಾಂಗ್ರೆಸ್ ಸೋಲು ಮುಂಬ­­­ರುವ ಚುನಾವಣೆಗಳಲ್ಲಿನ ಫಲಿತಾಂಶಗಳಿಗೆ ಮುನ್ಸೂಚನೆ ಎಂಬ ಮಾತು ದೊಡ್ಡದಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ­ದಲ್ಲೂ ಹೆಚ್ಚಿನ ಪಕ್ಷಗಳು ಈಗ ಕಾಂಗ್ರೆಸ್ ಜೊತೆ ಉಳಿದುಕೊಂಡಿಲ್ಲ. ಭ್ರಷ್ಟಾ­­­ಚಾರ, ಹಣದುಬ್ಬರ ಹಾಗೂ ಆರ್ಥಿಕ ಹಿಂಜರಿತಗಳಿಗೆ ಮನ­ಮೋಹನ್ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯತ್ತಲೇ ಬೆರಳು ಮಾಡ­ಲಾ­ಗು­ತ್ತದೆ. ಚುನಾವಣೆ ಮುಂಚೆಗೇ ಮನಮೋಹನ್ ಅವರನ್ನು ಬದಲಾಯಿಸ­ಬೇಕೆಂಬ ಒತ್ತಡವೂ ಕೆಲವು ವಲಯಗಳಲ್ಲಿ ಇತ್ತು. ಇಂತಹ ಸನ್ನಿವೇಶದಲ್ಲಿ, ಚುನಾವಣೆ ನಂತರ ಉನ್ನತ ಹುದ್ದೆ ನಿಭಾಯಿಸಲು ತಾವಿರುವುದಿಲ್ಲ ಎಂಬಂತಹ ಪ್ರಧಾನಿಯ ಮಾತುಗಳಲ್ಲಿ ಅಚ್ಚರಿ ಏನೂ ಇಲ್ಲ.ಕಾಂಗ್ರೆಸ್ ಅಧ್ಯಕ್ಷರ ಅನುಕೂಲಕ್ಕಾಗಿ ಏರ್ಪಟ್ಟಿರುವ ಎರಡು ಅಧಿಕಾರ ಕೇಂದ್ರ­­ಗಳ ವ್ಯವಸ್ಥೆ ಪ್ರಧಾನಿ ಹುದ್ದೆಯನ್ನು ದುರ್ಬಲಗೊಳಿಸಿ ರುವುದು ಸರ್ವ­ವಿದಿತ. ಆದರೆ ತಾವು ದುರ್ಬಲ ಪ್ರಧಾನಿ ಎಂಬಂತಹ ಮಾತನ್ನು ಪ್ರಧಾನಿ ಅಲ್ಲ­ಗಳೆ­ದಿದ್ದಾರೆ. ಇತಿಹಾಸ ಮುಂದೆ ತಮ್ಮನ್ನು ಸರಿಯಾದ ರೀತಿ ಅಳೆಯ­ಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.‘ಹಣದುಬ್ಬರ ಇತ್ತೀಚಿನ ಚುನಾ­­ವಣಾ ಸೋಲುಗಳಿಗೆ ಕಾರಣವಾಗಿರಬಹುದಾದರೂ ಅದಕ್ಕೆ ಕಾರಣ­ವಾದದ್ದು ಜಾಗತಿಕ ಆರ್ಥಿಕ ಸ್ಥಿತಿಗತಿಗಳು. ಯಾವುದೇ ಸರ್ಕಾರಕ್ಕೂ ಇದು ದೊಡ್ಡ ಸವಾಲೇ ಆಗಿರುತ್ತಿತ್ತು’ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ತರಂಗಾಂತರ ಹಾಗೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಗಳ ನೈತಿಕ ಹೊಣೆ ಹೊತ್ತುಕೊಳ್ಳಲೂ ಪ್ರಧಾನಿ ತಿರಸ್ಕರಿಸಿರುವುದು ಎದ್ದು ಕಾಣಿಸು­ವಂತ­ಹದ್ದು. ಇವು ನಡೆದದ್ದು ಯುಪಿಎ ಮೊದಲ ಅವಧಿಯಲ್ಲಿ. ಆದರೆ ಎರಡನೇ ಅವಧಿಗೂ ಸಿಕ್ಕ ಜನಾದೇಶ ಭ್ರಷ್ಟಾ­ಚಾರ ಆರೋಪಗಳಿಂದ ಯುಪಿಎ­ಯನ್ನು ಮುಕ್ತ­ಗೊಳಿ­ಸು­ತ್ತದೆ ಎಂಬಂಥ ಸಮರ್ಥ­ನೀಯವಲ್ಲದ ವಾದವನ್ನು ಪ್ರಧಾನಿ ಮಂಡಿಸಿ­­ದ್ದಾರೆ. ಇದೇ ತರ್ಕ ಅನ್ವ­ಯಿಸಿದಲ್ಲಿ, ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆ­ಗೇರಿ­­ರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತಾಗಿ ಮೃದುಭಾಷಿ ಮನ­ಮೋಹನ್ ಸಿಂಗ್ ಮಾಡಿದ ಟೀಕೆಗಳು ಅರ್ಥಹೀನ­ವಾಗು­ತ್ತವೆ.ಹಲವು ಹಗರಣ­ಗಳನ್ನು ನಿರ್ವಹಿಸುವಲ್ಲಿ ಯುಪಿಎ ಎಡವಿದ್ದು ಸ್ಪಷ್ಟ. ಪ್ರಧಾನಿಗೆ ನಿಕಟ­ವಾಗಿದ್ದ ಕಾನೂನು ಸಚಿವ ಅಶ್ವನಿ ಕುಮಾರ್ ಹಾಗೂ ರೈಲ್ವೆ ಸಚಿವ ಪಿ.ಕೆ. ಬನ್ಸಲ್‌ ರಾಜೀನಾಮೆಗಳು  ಮನಮೋಹನ್ ಪ್ರತಿ­ಷ್ಠೆಗೆ ಭಂಗ ತಂದವು.  ಹಲವು ನಿರ್ಧಾರಗಳು, ಹಾಗೆಯೇ ನಿರ್ಧಾರಗಳನ್ನು  ಕೈಗೊ­ಳ್ಳದೆ ನಿಷ್ಕ್ರಿಯ­ವಾಗಿ ಉಳಿದದ್ದೂ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಕೊಡುಗೆ ಸಲ್ಲಿಸಿದವು ಎಂಬುದನ್ನು ಮರೆಯುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry