ಸೋಮವಾರ, ಏಪ್ರಿಲ್ 19, 2021
23 °C

ಅಧಿಕಾರ ಹೋದ ಸ್ವಲ್ಪ ಸಮಯದಲ್ಲೇ ಜೈಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಧಿಕಾರ ಕಳೆದುಕೊಂಡ ಕೇವಲ ಎರಡೂವರೆ ತಿಂಗಳಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಜೈಲಿಗೆ ಸೇರಿದ್ದಾರೆ. ಕಳೆದ ಮೂರುವರೆ ವರ್ಷದಲ್ಲಿ ಆಡಳಿತಾರೂಢ ಬಿಜೆಪಿಯ ಒಟ್ಟು ಆರು ಮಂದಿ ಶಾಸಕರು ಜೈಲಿಗೆ ಹೋಗಿದ್ದಾರೆ.ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದ ಯಡಿಯೂರಪ್ಪ ಇದೇ ಜುಲೈ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಒಂದೇ ವಾರದಲ್ಲಿ ಅಂದರೆ ಆಗಸ್ಟ್ 8ರಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಅವರನ್ನು ಕೆಐಎಡಿಬಿ ಭೂ ಹಗರಣದಲ್ಲಿ ಸಿಲುಕಿರುವ ಆರೋಪದ ಮೇಲೆ ಬಂಧಿಸಲಾಗಿತ್ತು.ಈ ಮಧ್ಯೆ ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಬಲೆಗೆ ಬಿದ್ದಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸೆಪ್ಟೆಂಬರ್ 5ರಿಂದ ಆಂಧ್ರಪ್ರದೇಶದ ಚಂಚಲಗುಡ ಜೈಲಿನಲ್ಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಮತ್ತೊಬ್ಬ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಶನಿವಾರ ಜೈಲು ಸೇರಿದ್ದಾರೆ.

 

ಭೂ ಹಗರಣ, ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬರುವ ಮೊದಲೇ ಲಂಚ ಪಡೆದ ಆರೋಪದ ಮೇಲೆ ಕೆ.ಜಿ.ಎಫ್ ಶಾಸಕ ವೈ.ಸಂಪಂಗಿ ಸುಮಾರು ಎರಡು ವರ್ಷದ ಹಿಂದೆ ಜೈಲಿಗೆ ಹೋಗಿ ಹೊರಬಂದಿದ್ದರು.ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ವೈ.ಸಂಪಂಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರೆ, ಮತ್ತೊಬ್ಬ ಮಾಜಿ ಸಚಿವ ಎಚ್.ಹಾಲಪ್ಪ ಅವರು ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲಿಗೆ ಹೋಗುವಂತಾಯಿತು. ಆದರೆ ನ್ಯಾಯಾಂಗ ಬಂಧನಕ್ಕೆ ಒಳಗಾದಷ್ಟು ದಿನವೂ ಅನಾರೋಗ್ಯದಿಂದಾಗಿ ಬೌರಿಂಗ್ ಆಸ್ಪತ್ರೆಯಲ್ಲೇ ಉಳಿಯುವ ಮೂಲಕ ಜೈಲಿನ ವಾಸದಿಂದ ಬಚಾವಾಗಿದ್ದರು.ಸ್ವಕ್ಷೇತ್ರ ಮಾಲೂರಿನಲ್ಲಿ ಲಾಡು ಹಾಗೂ ಗಂಗಾಜಲ ಹಂಚುವ ಮೂಲಕವೇ ಜನಪ್ರಿಯರಾದ ಕೃಷ್ಣಯ್ಯ ಶೆಟ್ಟಿ, ಕೆಲ ದಿನಗಳ ಹಿಂದೆ ವಿಧಾನ ಸೌಧದಲ್ಲೂ ಮಧ್ಯಾಹ್ನದ ವೇಳೆ ಬಿಸಿಯೂಟ ನೀಡಲು ಶುರು ಮಾಡಿದ್ದರು. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯವರು ಅದಕ್ಕೆ ಅಡ್ಡಗಾಲು ಹಾಕಿದ ಕಾರಣ ಮಧ್ಯದಲ್ಲಿಯೇ ನಿಂತು ಹೋಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.