ಭಾನುವಾರ, ನವೆಂಬರ್ 17, 2019
21 °C
ಗ್ರಾಮೀಣ ಗೂಡಂಗಡಿಗಳಲ್ಲೂ ಮದ್ಯ ಮಾರಾಟ

ಅಧಿಕೃತ ಮದ್ಯಕ್ಕೆ `ಅಕ್ರಮ ರೆಸ್ಟೋರೆಂಟ್'

Published:
Updated:

ದಾವಣಗೆರೆ: ಚುನಾವಣಾ ಅಕ್ರಮದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮದ್ಯದ ಹಾವಳಿ ನಿಯಂತ್ರಣಕ್ಕೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಎಲ್ಲೆಡೆ ತಲೆ ಎತ್ತಿರುವ ಅನಧಿಕೃತ ರೆಸ್ಟೋರೆಂಟ್ ಹಾಗೂ ಗ್ರಾಮೀಣ ಪ್ರದೇಶಗಳ ಗೂಡಂಗಡಿಗಳಲ್ಲಿ ನಿಯಮ ಮೀರಿ ಮದ್ಯದ ವಹಿವಾಟು ನಡೆಯುತ್ತಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಅನುಷ್ಠಾನಕ್ಕೆ ಆಯೋಗ ಬಿಗಿ ಕ್ರಮ ಕೈಗೊಂಡರೂ, ಗ್ರಾಮೀಣ ಭಾಗವೂ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಯಮ ಬಾಹಿರವಾಗಿ ನಡೆಯುತ್ತಿದೆ. ಇಂತಹ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದು ಅಬಕಾರಿ, ಪೊಲೀಸ್ ಇಲಾಖೆಗೆ ಹಾಗೂ ಚುನಾವಣಾ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ 125 ಬಾರ್ ಅಂಡ್ ರೆಸ್ಟೋರೆಂಟ್‌ಗಳು (ಸಿಎಲ್-9), 118 ಬಾರ್‌ಗಳು (ಸಿಎಲ್-2) ಸೇರಿದಂತೆ 250ಕ್ಕೂ ಹೆಚ್ಚು ಪರವಾನಗಿ ಪಡೆದ ಮದ್ಯ ಮಾರಾಟ ಮಳಿಗೆಗಳು ಇವೆ. ಜತೆಗೆ, ಕೆಲ ಭಾಗಗಳಲ್ಲಿ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಮಳಿಗೆಗಳನ್ನು ತೆರೆಯಲಾಗಿದೆ. ಆದರೂ, ಜಿಲ್ಲೆಯ ಬಹುತೇಕ ಗ್ರಾಮಗಳ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಕೆಲವು ಗ್ರಾಮಗಳಲ್ಲಿ ದೇವರ ಹೆಸರಿನಲ್ಲಿ ಹರಾಜು ನಡೆಸಿ, ಹೆಚ್ಚಿನ ಬೆಲೆ ನೀಡಿದ ವ್ಯಕ್ತಿಗೆ ಗ್ರಾಮ ಮುಖಂಡರ ಸಮ್ಮುಖದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ `ವ್ಯವಸ್ಥೆ' ಇದೆ.`ಅನಧಿಕೃತ ಮದ್ಯ ಮಾರಾಟದ ಬಗ್ಗೆ ದೂರು ಬಂದಾಗ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿದ್ದೇವೆ. ಪ್ರತಿ ತಿಂಗಳು ಸರಾಸರಿ 60-80 ಪ್ರಕರಣ ದಾಖಲಿಸಿದ್ದೇವೆ' ಎನ್ನುತ್ತಾರೆ ಅಬಕಾರಿ ಡಿಸಿ ಜಗದೀಶ್ ನಾಯ್ಕ.ಚುನಾವಣೆಗೂ ಮೊದಲೇ ಸಂಗ್ರಹ: ಚುನಾವಣೆಯ ಸಂದರ್ಭದಲ್ಲಿ ಆಯೋಗ ಮದ್ಯ ಮಾರಾಟ ಹಾಗೂ ಸಂಗ್ರಹದ ಬಗ್ಗೆ ಹದ್ದಿನ ಕಣ್ಣು ಇಡುತ್ತದೆ. ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆಗೂ ಮೊದಲೇ `ವಾರ್ಷಿಕ ಗುರಿ' ಆಧಾರದಲ್ಲಿ ಎಲ್ಲ ಮದ್ಯದ ಅಂಗಡಿಗಳಿಗೂ ಹೆಚ್ಚುವರಿ ಮದ್ಯ ಸಂಗ್ರಹಕ್ಕೆ ಅವಕಾಶ ಕಲ್ಪಿಸಿದ್ದಾರೆ.ಕೆಲ ಮದ್ಯ ಮಾರಾಟಗಾರರು ಮಾರ್ಚ್‌ನಲ್ಲೇ ಮದ್ಯದ ದರ ಹೆಚ್ಚಾಗುವ ಸೂಚನೆ ಸಿಕ್ಕಿದ್ದರಿಂದ ಹೆಚ್ಚುವರಿಯಾಗಿ ಮದ್ಯ ಸಂಗ್ರಹ ಮಾಡಿಕೊಂಡಿದ್ದರು. ಮಾರ್ಚ್‌ನಲ್ಲಿ ಒಂದು ಲಕ್ಷ ಬಾಕ್ಸ್ ಮಾರಾಟದ ಗುರಿ ಇದ್ದರೆ, 1,36,278 ಬಾಕ್ಸ್ ಸಂಗ್ರಹ ಮಾಡಿಕೊಳ್ಳಲಾಗಿತ್ತು. ಅಂದರೆ, ಮಾರ್ಚ್‌ನಲ್ಲಿ ಜಿಲ್ಲೆಯ ಮದ್ಯ ಮಾರಾಟಗರರು ರೂ 3.42 ಕೋಟಿ ಮೌಲ್ಯದ ಮದ್ಯ ಖರೀದಿ ಮಾಡಿದ್ದಾರೆ. ಇದು ಇತರೆ ತಿಂಗಳಿಗೆ ಹೋಲಿಸಿದರೆ ಶೇ  20ರಷ್ಟು ಹೆಚ್ಚು.ಅನಧಿಕೃತ ರೆಸ್ಟೋರೆಂಟ್: ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅನಧಿಕೃತ ರೆಸ್ಟೋರೆಂಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಹೋಟೆಲ್‌ಗಳು ಹೆಚ್ಚಾಗಿ ಮದ್ಯದ ಅಂಗಡಿಗಳ ಸಮೀಪವೇ ಹುಟ್ಟಿಕೊಂಡಿವೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಪರವಾನಗಿಗೆ ವಾರ್ಷಿಕ ರೂ 5,31,300 ಶುಲ್ಕ ಪಾವತಿಸಬೇಕು. ಕೇವಲ ಬಾರ್‌ಗೆ ಪರವಾನಗಿ ಪಡೆದರೆ ರೂ 4.18 ಲಕ್ಷ ಪಾವತಿಸಬೇಕು. ಹೀಗೆ ಕೇವಲ ಮದ್ಯದ ಅಂಗಡಿಗೆ ಪರವಾನಗಿ ಪಡೆದು, ಇನ್ನೊಬ್ಬರ ಹೆಸರಲ್ಲಿ ಕೇವಲ ಸ್ಥಳೀಯ ಪೌರಸಂಸ್ಥೆಗಳ ಅನುಮತಿ ಪಡೆದು ರೆಸ್ಟೋರೆಂಟ್ ಆರಂಭಿಸುವ ಮೂಲಕ ಬಹುತೇಕ ಕಡೆ ಅಬಕಾರಿ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಲಾಗಿದೆ.ಕೆಲವು ಭಾಗಗಳಲ್ಲಿ ಎಂಎಸ್‌ಐಎಲ್ ಮಳಿಗೆಗಳ ಬಳಿಯೂ ಇಂತಹ ರೆಸ್ಟೋರೆಂಟ್ ತಲೆ ಎತ್ತಿವೆ. ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ, ಅಲ್ಲೇ ಪಕ್ಕದಲ್ಲಿ ಇರುವ ರೆಸ್ಟೋರೆಂಟ್‌ಗಳಲ್ಲಿ ಮದ್ಯಪಾನ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ.`ಮದ್ಯ ವ್ಯಸನಿ ಗಿರಾಕಿಗನ್ನು ಸೆಳೆಯಲು ಹಲವು ಭಾಗಗಳಲ್ಲಿ ಬಾರ್‌ಗಳು ಇರುವ ಮಳಿಗೆಯಲ್ಲೇ ರೆಸ್ಟೋರೆಂಟ್‌ಗಳು ಆರಂಭಿಸಲಾಗಿದ್ದು, ಅಲ್ಲೆಲ್ಲ ಮದ್ಯ ಸೇವನೆಗೆ ಅನಧಿಕೃತವಾಗಿ ಅವಕಾಶ ನೀಡಲಾಗಿದೆ. ಅವುಗಳ ಹಾವಳಿ ನಿಯಂತ್ರಣಕ್ಕೆ ಬರಬೇಕಾದರೆ `ಸ್ನ್ಯಾಕ್ಸ್ ಬಾರ್'ಗೆ ಅವಕಾಶ ನೀಡಬೇಕು.ಈ ಬಗ್ಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಆ ಬೇಡಿಕೆ ಈಡೇರಲಿಲ್ಲ' ಎನ್ನುತ್ತಾರೆ ಮದ್ಯ ಮಾರಾಟಗಾರ ಸಂಘದ ಪ್ರತಿನಿಧಿಗಳು.

ಪ್ರತಿಕ್ರಿಯಿಸಿ (+)