ಅಧಿಕ ಆದಾಯಕ್ಕೆ ತಂತ್ರಜ್ಞಾನ

7

ಅಧಿಕ ಆದಾಯಕ್ಕೆ ತಂತ್ರಜ್ಞಾನ

Published:
Updated:

ರಾಯಚೂರು: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಕೃಷಿ ತಂತ್ರಜ್ಞಾನಗಳನ್ನು ಮೋಸಂಬಿ ಬೆಳೆಗಾರರು ಅಳವಡಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಹಾಗೂ ಪೋಷಕಾಂಶಗಳ ಅವಶ್ಯಕತೆಯನ್ನು ಅರಿತು ಮಣ್ಣಿಗೆ ಸೇರಿಸಿದರೆ ಭೂಮಿ ಹಾಳಾಗುವುದನ್ನು ತಡೆಯಬಹುದು ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್)  ಪ್ರಧಾನ ವಿಜ್ಞಾನಿ ಡಾ.ಟಿ ಶಿವಾನಂದ ಹೇಳಿದರು.ಅವರು ಬುಧವಾರ ತಾಲ್ಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಪಾಂಡುರಂಗ ಶೆಟ್ಟಿಯವರ ತೋಟದಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಏರ್ಪಡಿಸಿದ್ದ ಮೋಸಂಬಿ ಬೆಳೆಯ ಕಾರ್ಯಾಗಾರದಲ್ಲಿ ಮೋಸಂಬಿ ಬೆಳೆಗಾರರನ್ನುದ್ದೇಶಿಸಿ ಮಾತನಾಡಿದರು.ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಕಂಡುಬರುವ ರೋಗಗಳು ಹಾಗೂ ಕೀಟಗಳನ್ನು ಹತೋಟಿ ಮಾಡಲು ಭಾರತೀಯ ತೋಟಗಾರಿಕೆ ಸಂಶೋಧನಾ  ಸಂಸ್ಥೆಯವರು ಅಭಿವೃದ್ಧಿಪಡಿಸಿದ ವಿವಿಧ ತಂತ್ರಜ್ಞಾನಗಳನ್ನು ವಿವರಿಸಿದರು. ರೈತರ ತೋಟಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆಯ ಮುಖಾಂತರ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬಗೆಯನ್ನು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಯಚೂರು  ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವಿಶ್ವನಾಥ ಕೆ.ಪಿ. ಅವರು ಮಾತನಾಡಿ, ರೈತರನ್ನು ತಲುಪಲು ಕೃಷಿ ವಿಶ್ವವಿದ್ಯಾಲಯದಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ರೈತರು ಇವುಗಳ ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ಪ್ರಮೋದ ಕಟ್ಟಿಯವರು ಮೋಸಂಬಿ ಬೆಳೆಯಲ್ಲಿ ಕೀಟಭಾದೆ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕೋರಮಂಡಲ ಇಂಟರ್‌ನ್ಯಾಶನಲ್ ಲಿಮಿಟೆಡ್ ವಲಯ ವ್ಯವಸ್ಥಾಪಕರಾದ  ನಾಗರಾಜ ಅವರು, ವಿವಿಧ ಪೋಷಕಾಂಶಗಳ ಕೊರತೆಯನ್ನು ಕಂಡು ಹಿಡಿಯಲು ಲಭ್ಯವಿರುವ ತಾಂತ್ರಿಕತೆಗಳ ಬಗ್ಗೆ ವಿವರಣೆ ನೀಡಿ, ಎಲೆ ಹಾಗೂ ಮಣ್ಣು ಪರೀಕ್ಷೆಗಳನ್ನು ಸ್ಥಳದಲ್ಲಿಯೇ ಮಾಡಿ ತೋರಿಸುವ ತಂತ್ರಜ್ಞಾನವೂ ಸಹ ಲಭ್ಯ ಎಂದು ವಿವರಿಸಿದರು.ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿಯಾದ ಡಾ. ಹೇಮಾ ಅವರು ಮಾತನಾಡಿ, ಮೋಸಂಬಿ ತೋಟಗಳ ಪುನಃಶ್ಚೇತನಕ್ಕಾಗಿ ವಿವಿಧ ಯೋಜನೆಯಡಿ ಲಭ್ಯವಿರುವ ಸೇವೆಗಳ ಬಗ್ಗೆ ವಿವರಿಸಿದರು.

ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ವೈ.ಎಸ್. ಅಮರೇಶ ಅವರು ಮೋಸಂಬಿ ರೋಗ ನಿರ್ವಹಣೆ ಬಗ್ಗೆ, ಡಾ.ಜಿ.ಎಮ್ ಹಿರೇಮಠ ಅವರು ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆ, ಡಾ. ಎಸ್.ಎಸ್. ಪಾಟೀಲ್ ಅವರು ಹನಿ ನೀರಾವರಿಯ ಬಗ್ಗೆ ಮಾಹಿತಿ ನೀಡಿದರು.ಅಪ್ಪನದೊಡ್ಡಿ ಗ್ರಾಮದ ಪ್ರಗತಿಪರ ರೈತರು, ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಆರು ಗ್ರಾಮದ ನೂರಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು. ಡಾ. ಜಿ. ರಮೇಶ, ತೋಟಗಾರಿಕಾ ತಜ್ಞರು, ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಮೋಸಂಬಿ ಬೆಳೆಯ ತಂತ್ರಜ್ಞಾನಗಳು ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆಯ ಮಹತ್ವ ಎಂಬ ಎರಡು ಹಸ್ತಪ್ರತಿಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಡಾ. ಮೌನೇಶ್ವರಿ ಆರ್. ಕಮ್ಮೋರ ಇವರು ನಿರೂಪಿಸಿದರು. ಡಾ. ಮೋಹನ್ ಚವ್ಹಾಣ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry