ಗುರುವಾರ , ಏಪ್ರಿಲ್ 15, 2021
27 °C

ಅಧಿಕ ಇಳುವರಿ ತಂತ್ರಜ್ಞಾನ ಅಭಿವೃದ್ಧಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷಿ ಭೂಮಿ, ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಲಭ್ಯ ಭೂಮಿಯಲ್ಲೇ ಅಧಿಕ ಇಳುವರಿ ತರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು’ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್)ಯ ತೋಟಗಾರಿಕೆ ವಿಭಾಗದ ಉಪ ಮಹಾನಿರ್ದೇಶಕ ಡಾ.ಎಚ್.ಪಿ.ಸಿಂಗ್ ಸಲಹೆ ನೀಡಿದರು.ಹೆಸರಘಟ್ಟದಲ್ಲಿರುವ ‘ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ’ (ಐಐಎಚ್‌ಆರ್)ಯು ಗುರುವಾರ ಏರ್ಪಡಿಸಿದ್ದ ‘ಆವಿಷ್ಕಾರಕ ತೋಟಗಾರಿಕೆ ಬೆಳೆಗಾರರ ರಾಷ್ಟೀಯ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ಮೇಣದಬತ್ತಿ ತಯಾರಿಕೆ ಅಥವಾ ಜಾಮೂನು ತಯಾರಿಕೆಯನ್ನು ಯಾರು ಬೇಕಾದರೂ ಕಲಿಸಬಲ್ಲರು. ಅದು ವಿಜ್ಞಾನಿಗಳ ಕೆಲಸವಲ್ಲ. ರೈತರ ಆದ್ಯತೆಗಳನ್ನು ಗ್ರಹಿಸಿ ಅವರ ಕೈಗೆಟುಕುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ರೈತರನ್ನು ಲಾಭದಾಯಕ ಕೃಷಿಯತ್ತ ಕೊಂಡೊಯ್ಯಬೇಕು’ ಎಂದು ತಿಳಿಸಿದರು.ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು, ‘ರೈತರೂ ವಿಜ್ಞಾನಿಗಳೇ ಎಂಬುದನ್ನು ನಾವು ಗುರುತಿಸಬೇಕು. ರೈತರು ತಮ್ಮ ಮನೆಯನ್ನು ಪ್ರಯೋಗಾಲಯವನ್ನಾಗಿ ಮಾಡಿಕೊಳ್ಳಬೇಕು. ಜಮೀನನ್ನು ಕಾರ್ಯಕ್ಷೇತ್ರವನ್ನಾಗಿ ಮಾರ್ಪಡಿಸಬೇಕು. ತಮ್ಮ ಜಮೀನಿನಲ್ಲಿ ಹನಿ ನೀರಾವರಿಯನ್ನು ಅಳವಡಿಸಬೇಕು. ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಉನ್ನತ ಯಾಂತ್ರೀಕರಣದ ಮೂಲಕ ಪ್ರಸ್ತುತ ಇಳುವರಿ ಪ್ರಮಾಣವನ್ನು ನಾಲ್ಕೈದು ಪಟ್ಟು ಹೆಚ್ಚಿಸಬೇಕು.ತಾಂತ್ರಿಕತೆ ಅಭಿವೃದ್ಧಿಪಡಿಸಲು ಸಾಕಷ್ಟು ಹಣಕಾಸು ಅಗತ್ಯವಿದೆ. ಸರ್ಕಾರವೂ ಸಹ ಈ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿ ಕಾನೂನುಗಳನ್ನು ಮಾರ್ಪಾಟು ಮಾಡಬೇಕು’ ಎಂದರು.‘ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮುಂಚೂಣಿಯಲ್ಲಿವೆ. ಕರ್ನಾಟಕವು ಬರೀ ಹತ್ತಿಯಂಥ ವಾಣಿಜ್ಯ ಬೆಳೆಗಳನ್ನು ಬೆಳೆಯದೇ ಮನೆಯಲ್ಲೇ ತೋಟಗಾರಿಕೆ ಮಾಡುವ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ತರಕಾರಿ ದರವನ್ನು ನಿಯಂತ್ರಿಸಬಹುದು ಮತ್ತು ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ನುಡಿದರು.ನಗರ ಮತ್ತು ಉಪನಗರಗಳಲ್ಲಿರುವ ಮನೆಗಳಲ್ಲಿ ತೋಟಗಾರಿಕೆ ಮಾಡುವ ಬಗೆಯ ಬಗ್ಗೆ ಮಾಹಿತಿ ನೀಡಲು ಮಾರ್ಚ್ 22ರಂದು ನವದೆಹಲಿಯಲ್ಲಿ ಉಪನ್ಯಾಸವನ್ನೂ ಏರ್ಪಡಿಸಲಾಗಿದೆ ಎಂದರು.ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಆರ್.ಹಂಚಿನಾಳ ಮಾತನಾಡಿ, ‘ಕೃಷಿಯು ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ಸಹ ತಂತ್ರಜ್ಞಾನವನ್ನು ಅಳವಡಿಸಿದ ನಂತರವೇ ಬೆಳವಣಿಗೆ ಹೊಂದಿದೆ. ರೈತರೇ ಹಲವು ಸಂದರ್ಭಗಳಲ್ಲಿ ಕೃಷಿ ಉಪಯೋಗಿ ಉಪಕರಣಗಳನ್ನು ಸಂಶೋಧನೆ ಮಾಡಿದ್ದಾರೆ. ಆದ್ದರಿಂದಲೇ ಧಾರವಾಡ ಕೃಷಿ ವಿವಿಯು ತನ್ನ ವ್ಯಾಪ್ತಿಯ ಜಿಲ್ಲೆಗಳ ತಲಾ ಒಬ್ಬ ರೈತ ಮತ್ತು ರೈತ ಮಹಿಳೆಯನ್ನು ಗುರುತಿಸಿ ಗೌರವಿಸುತ್ತಿದೆ’ ಎಂದರು.ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಎನ್.ಜಯರಾಮ್ ಮಾತನಾಡಿ, ‘ತೋಟಗಾರಿಕೆ ಅಭಿವೃದ್ಧಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರ ಹಣಕಾಸು ನೆರವು ನೀಡುತ್ತಿದೆ. ತೋಟಗಾರಿಕೆ ನಿರ್ವಹಣೆ, ವೈವಿಧ್ಯಮಯ ನರ್ಸರಿ ಸೇರಿದಂತೆ ನೂತನ ಆವಿಷ್ಕಾರಗಳನ್ನು ಕೈಗೊಳ್ಳಲು ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.ಐಐಎಚ್‌ಆರ್ ನಿರ್ದೇಶಕ ಡಾ.ಅಮ್ರಿಕ್ ಸಿಂಗ್ ಸಿಧು, ಸಂಸ್ಥೆಯ ವಿಸ್ತರಣೆ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ.ಎಸ್.ಡಿ.ದೊಯಿಜೊಡೆ, ಸಂಶೋಧನಾ ನಿರ್ವಹಣೆ ಮತ್ತು ಸಮನ್ವಯ ಘಟಕದ ಮುಖ್ಯ ವಿಜ್ಞಾನಿ ಡಾ.ಎಂ.ಆರ್.ಹೆಗಡೆ ಅವರು ವೇದಿಕೆಯಲ್ಲಿದ್ದರು.13 ರಾಜ್ಯಗಳ ನೂರಕ್ಕೂ ಹೆಚ್ಚಿನ ರೈತರು, ವಿಜ್ಞಾನಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಐಐಎಚ್‌ಆರ್ ಸೇರಿದಂತೆ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಯಂತ್ರಗಳು, ನರ್ಸರಿಗಳು, ತೋಟಗಾರಿಕೆ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.