ಶುಕ್ರವಾರ, ಜೂಲೈ 10, 2020
27 °C

ಅಧಿಕ ಶುಲ್ಕ ವಸೂಲಿಗೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಪಠ್ಯಕ್ರಮ ಬೋಧಿಸುವ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಖಾಸಗಿ ಶಾಲೆಗಳು ಯರ್ರಾಬಿರ್ರಿ ಶುಲ್ಕ ವಸೂಲು ಮಾಡುವುದಕ್ಕೆ ಕಡಿವಾಣ ಹಾಕಿರುವ ಹೈಕೋರ್ಟ್, ಈ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆಗೆ ಒಳಪಡುವುದಿಲ್ಲ ಎಂಬ ತಿದ್ದುಪಡಿಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.1998ರ ಕರ್ನಾಟಕ ಶಿಕ್ಷಣ ಕಾಯ್ದೆಗೆ 1(3-ಎ) ಕಲಮನ್ನು ಸೇರಿಸಿ ಮಾಡಲಾದ ತಿದ್ದುಪಡಿಯನ್ನು ರದ್ದು ಮಾಡಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, ಈ ತಿದ್ದುಪಡಿ ಸಂವಿಧಾನ ಬಾಹಿರ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ಸೋಮವಾರ ಹೇಳಿದ್ದಾರೆ.ಅದರಂತೆ ಹೈಕೋರ್ಟ್‌ನಲ್ಲಿ ಪ್ರತಿವಾದಿಗಳಾಗಿರುವ ನಗರದ ಬಿಷಪ್ ಕಾಟನ್ ಹೆಣ್ಣುಮಕ್ಕಳ ಶಾಲೆ, ಏರ್‌ಫೋರ್ಸ್ ಶಾಲೆ, ಪ್ಯಾರಾಚ್ಯೂಟ್ ರೆಜಿಮೆಂಟ್ ಶಾಲೆ ಹಾಗೂ ಇತರ ಶಿಕ್ಷಣ ಸಂಸ್ಥೆಗಳು 2009ನೇ ಸಾಲಿನಲ್ಲಿ ವಿವಿಧ ದಿನಾಂಕಗಳಲ್ಲಿ ಶುಲ್ಕ ಹೆಚ್ಚು ಮಾಡಿ ಹೊರಡಿಸಿದ್ದ ಆದೇಶಗಳನ್ನು ನ್ಯಾಯಮೂರ್ತಿಗಳು ರದ್ದು ಮಾಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಹೊಸದಾಗಿ ಶುಲ್ಕ ನಿಗದಿ ಮಾಡುವಂತೆ ಈ ಎಲ್ಲ ಶಾಲೆಗಳಿಗೆ ಅವರು ಸೂಚಿಸಿದ್ದಾರೆ. ಏಕಾಏಕಿ ಶುಲ್ಕ ಹೆಚ್ಚಳ ಮಾಡಿದ್ದನ್ನು ಪ್ರಶ್ನಿಸಿ ಈ ಮೂರೂ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಸಂಘಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.ಮಾನ್ಯವಾಗದ ವಾದ: ತಮ್ಮ ಶಾಲೆಗಳಲ್ಲಿ ಹೆಚ್ಚಿನ ಸೌಕರ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಅಧಿಕ ವೆಚ್ಚವಾಗುತ್ತಿದೆ. ಇದನ್ನು ಸರಿದೂಗಿಸಲು ಮಕ್ಕಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎನ್ನುವುದು ಶಾಲೆಗಳ ಮುಖ್ಯ ವಾದವಾಗಿತ್ತು. ಆದರೆ ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಲಿಲ್ಲ.‘ಅಗತ್ಯಕ್ಕಿಂತ ಹೆಚ್ಚಿನ ಸೌಕರ್ಯ ನೀಡಿ, ಅದರ ಹೊರೆಯನ್ನು ಪೋಷಕರ ಮೇಲೆ ಹಾಕುವುದು ಸರಿಯಲ್ಲ. ಒಂದು ಆಟದ ಮೈದಾನ ಅಗತ್ಯವಿದ್ದರೆ ಅನಗತ್ಯವಾಗಿ 3-4 ಮೈದಾನ ನಿರ್ಮಾಣ ಮಾಡುವುದು, 10 ಸಿಬ್ಬಂದಿ ಅಗತ್ಯವಿದ್ದರೆ 20 ಮಂದಿಯನ್ನು ನೇಮಕ ಮಾಡುವುದು ಹೀಗೆ ಅನವಶ್ಯಕ ಖರ್ಚು ಮಾಡಿ ಅದನ್ನು ಸರಿದೂಗಿಸಲು ಹೆಚ್ಚಿನ ಶುಲ್ಕ ವಸೂಲು ಮಾಡುವಲ್ಲಿ ಅರ್ಥವೇ ಇಲ್ಲ.ಅಷ್ಟೇ ಅಲ್ಲದೆ, ಯಾವ ಆಧಾರದ ಮೇಲೆ ಅಥವಾ ಯಾವ ಕಾಯ್ದೆ- ನಿಯಮಗಳ ಅನ್ವಯ ಶುಲ್ಕ ಹೆಚ್ಚು ಮಾಡಲಾಗಿದೆ ಎಂಬ ಬಗ್ಗೆ ಯಾವುದೇ ರೀತಿಯ ದಾಖಲೆಗಳನ್ನು ನೀಡಲು ಈ ಶಿಕ್ಷಣ ಸಂಸ್ಥೆಗಳು ವಿಫಲವಾಗಿವೆ. ಈ ಶುಲ್ಕವನ್ನು ಯಾವುದೇ ಸಮಿತಿ ಅಥವಾ ಶಾಸನಬದ್ಧ ಸಂಸ್ಥೆಗಳು ಇದುವರೆಗೆ ಪ್ರಮಾಣೀಕರಿಸಿಲ್ಲ’  ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.ಶಿಕ್ಷಕರ ನೇಮಕಾತಿ: ಈ ಶಾಲೆಗಳಿಗೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ. ಆದರೆ ಈ ಸಿಬ್ಬಂದಿಗೆ ಅಮಾನತು ಇತ್ಯಾದಿ ಶಿಕ್ಷೆ ನೀಡಿದಾಗ ಅದನ್ನು ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ಯಾವುದೇ ಮಾಹಿತಿ ಇಲ್ಲ.ಈ ಹಿನ್ನೆಲೆಯಲ್ಲಿ ಅವರು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇದು ಕೂಡ ಈ ಶಾಲೆಗಳು ರಾಜ್ಯದ ಅಧೀನಕ್ಕೆ ಒಳಪಡುವುದನ್ನು ರುಜುವಾತು ಮಾಡುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.ಖಾಸಗಿ ಅನುದಾನ ರಹಿತ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ಯಾವ ರೀತಿ ಶುಲ್ಕ ವಿಧಿಸಬೇಕು ಎಂಬ ಬಗ್ಗೆ ಕರ್ನಾಟಕ ಶಿಕ್ಷಣ ಸಂಸ್ಥೆ (ಶುಲ್ಕ ಮತ್ತು ವಂತಿಗೆ) ನಿಯಮ 1999ರ ಅಡಿ ನಮೂದಾಗಿದೆ. ಒಂದು ವೇಳೆ ಈ ನಿಯಮದ ಅನ್ವಯ ಯಾವುದೇ ಶಾಲೆಗಳು ನಡೆದುಕೊಳ್ಳದೇ ಹೋದರೆ ಅದನ್ನು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ ಮತ್ತು ನಿಯಂತ್ರಣ) ನಿಯಮ 1995ರ ಅಡಿ ಜಿಲ್ಲಾ ಮಟ್ಟದ ಶಿಕ್ಷಣ ಪ್ರಾಧಿಕಾರಕ್ಕೆ ಪ್ರಶ್ನಿಸುವ ಅಧಿಕಾರ ಪೋಷಕರಿಗೆ ಇದೆ ಎಂದು ನ್ಯಾ. ನಾಗಮೋಹನದಾಸ್ ತಿಳಿಸಿದ್ದಾರೆ.ತೀರ್ಪಿಗೆ ಸ್ವಾಗತ:  ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳ ಮೇಲೆ ನಿಯಂತ್ರಣ ಹೊಂದಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬಹುದು ಎಂದು ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ತೀರ್ಪಿನ ಪೂರ್ಣ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಖಾಸಗಿ ಶಾಲೆಗಳು ಪೋಷಕರು, ವಿದ್ಯಾರ್ಥಿಗಳನ್ನು ಶೋಷಣೆ ಮಾಡುತ್ತಿವೆ ಎಂದು ಬಹಳಷ್ಟು ದೂರುಗಳು ಬರುತ್ತಿದ್ದರೂ, ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಅಧಿಕಾರ ಇರಲಿಲ್ಲ. ಅನೇಕ ಬಾರಿ ಕೇಂದ್ರಕ್ಕೂ ಈ ಬಗ್ಗೆ ಮನವಿ ಮಾಡಲಾಗಿತ್ತು. ಈಗ ನ್ಯಾಯಾಲಯವೇ ಈ ಬಗ್ಗೆ ತೀರ್ಪು ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.