ಬುಧವಾರ, ಜೂನ್ 23, 2021
30 °C

ಅಧಿವೇಶನಕ್ಕೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿವೇಶನಕ್ಕೆ ಬಹಿಷ್ಕಾರ

ಬೆಂಗಳೂರು: ನಾಯಕತ್ವ ಬದಲಾವಣೆಗೆ ಪಟ್ಟುಹಿಡಿದು ನೆಲಮಂಗಲ ಸಮೀಪದ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗ  ಶಾಸಕರು ಮಂಗಳವಾರದಿಂದ ಆರಂಭವಾಗುವ ಬಜೆಟ್ ಅಧಿವೇಶನ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವವರೆಗೂ ರೆಸಾರ್ಟ್ ಬಿಟ್ಟು ಕದಲುವುದಿಲ್ಲ ಎಂದಿದ್ದಾರೆ. ಈ ಮೂಲಕ ಆಡಳಿತಾರೂಢ ಬಿಜೆಪಿಯಲ್ಲಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಂತಾಗಿದೆ.  ಈ ಮುಂಚೆ, ಕೇವಲ ಮೊದಲ ದಿನದ ಕಲಾಪ ಬಹಿಷ್ಕರಿಸಲು ನಿರ್ಧರಿಸಲಾಗಿತ್ತು. ಆದರೆ, ಸಂಜೆ ನಡೆದ ಸಭೆಯಲ್ಲಿ `ಪಕ್ಷದ ಹೈಕಮಾಂಡ್ ನಮ್ಮನ್ನು ಗಂಭೀರವಾಗಿ ಪರಿಗಣಿಸಬೇಕಾದರೆ ತಕ್ಕ ಪಾಠ ಕಲಿಸಬೇಕು.  ಸದ್ಯಕ್ಕೆ ಇರುವುದು ಇದೊಂದೇ ದಾರಿ. ಹೀಗಾಗಿ ಅಧಿವೇಶನ ಬಷ್ಕರಿಸುವುದೇ ಸೂಕ್ತ~ ಎಂದು ಯಡಿಯೂರಪ್ಪ ಸಭೆಗೆ ತಿಳಿಸಿದರು ಎನ್ನಲಾಗಿದೆ.  ಪ್ರಸ್ತುತ ಯಡಿಯೂರಪ್ಪ ಬಣದಲ್ಲಿ 67 ಮಂದಿ ಶಾಸಕರಿದ್ದು, ಅವರ ಸಂಖ್ಯೆ 70 ದಾಟುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್‌ಗೆ ಸೆಡ್ಡು ಹೊಡೆದಿರುವ ಯಡಿಯೂರಪ್ಪ ಬಣ ಬೇಡಿಕೆ ಈಡೇರುವವರೆಗೂ ತಮ್ಮ ಪಟ್ಟು ಸಡಿಲಿಸದಿರಲು ನಿರ್ಧರಿಸಿದೆ. ಭಾನುವಾರ ರಾತ್ರಿ ರೆಸಾರ್ಟ್‌ಗೆ ತೆರಳಿದ ಸಚಿವರು ಮತ್ತು ಶಾಸಕರು ಸೋಮವಾರ ಇಡೀ ದಿನ ಅಲ್ಲೇ ಇದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.  `ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಅಲ್ಲಿ ಹೊಸ ನಾಯಕನ ಆಯ್ಕೆ ಆಗಬೇಕು. ಯಾರಿಗೆ ಹೆಚ್ಚು ಶಾಸಕರ ಬೆಂಬಲ ಇದೆಯೊ ಅವರು ಮುಖ್ಯಮಂತ್ರಿಯಾಗಲಿ~ ಎನ್ನುವ ಸಲಹೆಯನ್ನು ಯಡಿಯೂರಪ್ಪ ಬಣ ಹೈಕಮಾಂಡ್ ಮುಂದೆ ಇಟ್ಟಿದೆ. ಈ ಸಂಬಂಧ ಪಕ್ಷದ ವರಿಷ್ಠರಿಗೂ ಪತ್ರ ಬರೆಯಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಚಿವರ ನಡೆ ಏನು?: `ಸಚಿವರಾಗಿದ್ದುಕೊಂಡು ಬಜೆಟ್ ಅಧಿವೇಶನ ಬಹಿಷ್ಕರಿಸುವುದು ತರವಲ್ಲ~ ಎಂದು ಸಚಿವ ಬೊಮ್ಮಾಯಿ ತಕರಾರು ತೆಗೆದಿದ್ದಾರೆ. `ಒಂದು ವೇಳೆ ಯಾರೂ ಅಧಿವೇಶನಕ್ಕೆ ಹೋಗುವುದು ಬೇಡ ಎನ್ನುವ ತೀರ್ಮಾನವಾದರೆ ಮಂಗಳವಾರವೇ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡುವುದು ಸೂಕ್ತ~ ಎಂದೂ ಅವರು ಸಲಹೆ ಮಾಡಿದ್ದಾರೆ.  ಇದಕ್ಕೆ ಸಚಿವ ಜಗದೀಶ ಶೆಟ್ಟರ್ ಹೊರತುಪಡಿಸಿ ಉಳಿದ ಎಲ್ಲರಿಂದಲೂ ಒಪ್ಪಿಗೆ ಸಿಕ್ಕಿದೆ. ಕೆಲ ಸಚಿವರು ಭಾನು ವಾರವೇ ತಮ್ಮ ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪ ಅವರಿಗೆ ತಲುಪಿಸಿದ್ದಾರೆ. ಬೇಕಾದಾಗ ಅವುಗಳನ್ನು ಅವರೇ ಮುಖ್ಯಮಂತ್ರಿಗೆ ಕಳುಹಿಸಬಹುದು ಎಂದೂ ಹೇಳಿದ್ದಾರೆ.ಹೀಗಾಗಿ ಅಧಿವೇಶನ ಬಹಿಷ್ಕಾರದ ಜತೆಗೆ ಬಿಎಸ್‌ವೈ ಬಣದ ಸಚಿವರು ಕೂಡ ಸರ್ಕಾರದಿಂದ ಹೊರ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಸಚಿವರು ಮಾತ್ರ ಅಧಿವೇಶನಕ್ಕೆ ಹಾಜರಾಗಲಿದ್ದಾರೆ.`ಇದೊಂದು ಸಂವಿಧಾನಾತ್ಮಕ ಬಿಕ್ಕಟ್ಟು. ಆ ಬಗ್ಗೆ ನಂತರ ನಿರ್ಧರಿಸಲಾಗುವುದು~ ಎಂದು ಶಾಸಕರಿಗೆ ಯಡಿಯೂರಪ್ಪ ವಿವರಿಸಿದ್ದಾರೆ.ಗಡ್ಕರಿ ಕರೆ: ರೆಸಾರ್ಟ್ ರಾಜಕಾರಣದ ಬಗ್ಗೆ ಆತಂಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಸೋಮವಾರ ಬೆಳಿಗ್ಗೆ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು.

ತಾವು ನಾಗಪುರದಲ್ಲಿದ್ದು, ಅಲ್ಲಿಗೆ ಬರುವಂತೆಯೂ ಯಡಿಯೂರಪ್ಪ ಅವರಿಗೆ ಗಡ್ಕರಿ ಸೂಚಿಸಿದರು. ಇದಕ್ಕೆ ಯಡಿಯೂರಪ್ಪ ಒಪ್ಪಿದರಾದರೂ ರೆಸಾರ್ಟಿನಲ್ಲಿ ಸೇರಿರುವ ಎಲ್ಲ ಶಾಸಕರ ಜತೆಗೆ ಬರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಗಡ್ಕರಿ ಒಪ್ಪಲಿಲ್ಲ ಎನ್ನಲಾಗಿದೆ. `ಬಂದರೆ ಒಬ್ಬರೇ ಬನ್ನಿ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ~ ಎನ್ನುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.ಇದಕ್ಕೆ ಯಡಿಯೂರಪ್ಪ ಒಪ್ಪಲಿಲ್ಲ. `ನಾವು ನಿರ್ಣಾಯಕವಾದ ರಾಜಕೀಯ ಹೋರಾಟಕ್ಕೆ ಇಳಿದಿದ್ದು, ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ವಚನ ಕೊಟ್ಟ ಹಾಗೆ ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ. ಇಲ್ಲದಿದ್ದರೆ ಪರಿಣಾಮ ಎದುರಿಸಿ~ ಎಂದು ಖಡಕ್ ಎಚ್ಚರಿಕೆ ನೀಡಿದರು ಎಂದು ಗೊತ್ತಾಗಿದೆ.ದೆಹಲಿಗೆ ಪಟ್ಟಿ ರವಾನೆ: ರೆಸಾರ್ಟ್‌ನಲ್ಲಿರುವ ಶಾಸಕರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಸುವ ಉದ್ದೇಶದ ಪಟ್ಟಿಯನ್ನು ಯಡಿಯೂರಪ್ಪ ಬಣ ಪಕ್ಷದ ಹೈಕಮಾಂಡ್‌ಗೆ ರವಾನಿಸಿದೆ. ಭಾನುವಾರ ಸಂಜೆ ಕೇವಲ 53 ಶಾಸಕರಿದ್ದರು. ಸೋಮವಾರ ಬೆಳಿಗ್ಗೆ ವೇಳೆಗೆ ಅವರ ಸಂಖ್ಯೆ 67ಕ್ಕೆ ಏರಿದೆ. ಇನ್ನೂ ಬರುವವರಿದ್ದು, ಅವರ ಸಂಖ್ಯೆ 70 ದಾಟುವ ಸಾಧ್ಯತೆ ಇದೆ ಎಂದು ಬಣದ ಪ್ರಮುಖರು `ಪ್ರಜಾವಾಣಿ~ಗೆ ತಿಳಿಸಿದರು.ರೆಡ್ಡಿ ಭೇಟಿ: ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಕೂಡ ದಿಢೀರ್ ರೆಸಾರ್ಟ್‌ನಲ್ಲಿ ಪ್ರತ್ಯಕ್ಷರಾದರು. ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಅವರು ಈ ಭೇಟಿ ಮಾಡಿದ್ದು, ಬೆಂಬಲಕ್ಕೆ ನಿಲ್ಲುವ ಭರವಸೆ ನೀಡಿದರು ಎಂದು ಗೊತ್ತಾಗಿದೆ. ಇವರನ್ನು ಹೊರತುಪಡಿಸಿ, ಬಳ್ಳಾರಿ ಇತರ ಶಾಸಕರ ನಡೆ ಏನು ಎನ್ನುವುದು ಇನ್ನೂ ನಿಗೂಢ.ಜಾರಕಿಹೊಳಿ ಬಣಕ್ಕೆ ಆಮಿಷ: ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡುತ್ತಿದ್ದು, ಅವರ ತಂಡದಲ್ಲಿನ ಶಾಸಕರ ಸಂಖ್ಯೆ ಕಡಿಮೆ ಮಾಡಲು ಆಮಿಷದ ತಂತ್ರವನ್ನು ಹೂಡಲಾಗಿದೆ.ಜಾರಕಿಹೊಳಿ ಜತೆ ಗುರುತಿಸಿಕೊಂಡಿರುವ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಮತ್ತು ರಾಜು ಕಾಗೆ ಅವರ ಜತೆ ಯಡಿಯೂರಪ್ಪ ಬಣ ಮಾತುಕತೆ ನಡೆಸಿದ್ದು, ಮೂವರಲ್ಲಿ ಒಬ್ಬರಿಗೆ ಸಚಿವ ಸ್ಥಾನದ ಆಮಿಷ ಒಡ್ಡಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಡಿಯೂರಪ್ಪ ಬಣ ಸೇರುವ ಸಾಧ್ಯತೆ ಇದೆ. ಆ ಮೂಲಕ ಜಾರಕಿಹೊಳಿ ಅವರ ಶಕ್ತಿ ಕುಂದಿಸುವ ಪ್ರಯತ್ನ ಕೂಡ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.