ಅಧಿವೇಶನ ಕಾವೇರಿಸಿದ `ಕಬ್ಬು'

7

ಅಧಿವೇಶನ ಕಾವೇರಿಸಿದ `ಕಬ್ಬು'

Published:
Updated:

ಬೆಳಗಾವಿ: ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ನೇಮಕ ಮಾಡಿದ್ದ ಉನ್ನತಮಟ್ಟದ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 2ರಂದೇ ರಾಜೀನಾಮೆ ನೀಡಿರುವುದಾಗಿ ಕೃಷಿ ಸಚಿವ ಉಮೇಶ ಕತ್ತಿ ಬುಧವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಕಬ್ಬಿನ ದರ ನಿಗದಿ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಸದನದಲ್ಲಿ ವ್ಯಕ್ತವಾಯಿತು. ಸಚಿವರು, ಶಾಸಕರೇ ಸಕ್ಕರೆ ಕಾರ್ಖಾನೆ ಮಾಲೀಕರಾಗಿಯೂ ಇರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆಕ್ಷೇಪವೂ ಕೇಳಿಬಂತು. ಈ ಸಂದರ್ಭದಲ್ಲಿ ಕತ್ತಿ ಅವರು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯ ಪ್ರಕಟಿಸಿದರು.`ಸಕ್ಕರೆ ಸಚಿವ ಎಸ್.ಎ.ರವೀಂದ್ರನಾಥ್ ಅವರ ಅನಾರೋಗ್ಯದ ಕಾರಣದಿಂದ ನಾನು ಅನಿವಾರ್ಯವಾಗಿ ಈ ಸಮಿತಿಗೆ ಅಧ್ಯಕ್ಷನಾಗಿದ್ದೆ. ಮೂರು ಬಾರಿ ಸಭೆ ನಡೆಸಿದರೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯ ಆಗಲಿಲ್ಲ. ಆದ್ದರಿಂದ ನ.2ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದರು.ಶೂನ್ಯ ವೇಳೆಯ ಬಳಿಕ ಕಬ್ಬಿನ ದರ ನಿಗದಿ ಕುರಿತು ಸರ್ಕಾರದ ಗಮನ ಸೆಳೆದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಕಬ್ಬು ಬೆಳೆ ನಿಗದಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು  ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ನೇಮಿಸಿರುವ ಕಬ್ಬು ಬೆಲೆ ನಿಗದಿ ಸಮಿತಿಗೆ ಕೃಷಿ ಸಚಿವ ಉಮೇಶ ಕತ್ತಿ ಅಧ್ಯಕ್ಷರಾಗಿದ್ದಾರೆ. ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವುದರಿಂದ ಅವರಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂಬುದು ರೈತರ ಭಾವನೆಯಾಗಿದೆ. ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಹ ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಅದೇ ಕಾರಣ ಸದನದಲ್ಲಿ ಧ್ವನಿ ಎತ್ತು ತ್ತಿಲ್ಲ  ಎಂದು ಛೇಡಿಸಿದರು.ಮಧ್ಯೆ ಪ್ರವೇಶಿಸಿದ ಎಸ್.ಆರ್. ಪಾಟೀಲ್, ತಾವು ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವುದರಿಂದ ಹೊರಟ್ಟಿ ಆರೋಪದಲ್ಲಿ ಹುರುಳಿದೆ. ರೈತರು ಆಸಕ್ತಿ ತೋರಿದಲ್ಲಿ ತಮ್ಮ ಒಡೆತನದ ಬೀಳಗಿ ಸಕ್ಕರೆ ಕಾರ್ಖಾನೆಯನ್ನು 10 ವರ್ಷ ಕಾಲ ವಹಿಸಿಕೊಡಲು ಸಿದ್ಧ. ಕಾರ್ಖಾನೆ ಹೆಸರಿನಲ್ಲಿ 120 ಕೋಟಿ ರೂಪಾಯಿ ಸಾಲವಿದೆ. ಅದನ್ನು ತೀರಿಸಿ ನಡೆಸಿಕೊಂಡು ಹೋಗಲಿ. ರೈತರು ಮುಂದೆ ಬಾರದಿದ್ದಲ್ಲಿ ಯಾರಿಗಾದರೂ ಮಾರಾಟ ಮಾಡಲು ಸಿದ್ಧ ಎಂದರು.ಇನ್ನು ಮುಂದೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಸರ್ಕಾರ ಕಬ್ಬು ಬೆಲೆ ನಿಗದಿ ಮಾಡಲು ರಚಿಸುವ ಯಾವುದೇ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದರು.ಕತ್ತಿ ನೀವು ಕಾರ್ಖಾನೆ ಮಾರುತ್ತೀರಾ?: ಎಸ್.ಆರ್.ಪಾಟೀಲ್ ನೈತಿಕ ನೆಲೆಯಲ್ಲಿ ಯೋಚನೆ ಮಾಡಿ ತಮ್ಮ ಕಾರ್ಖಾನೆ ಮಾರಲು ಮುಂದಾಗಿದ್ದಾರೆ. ಕತ್ತಿ ನೀವು ಮಾರಾಟ ಮಾಡುವಿರಾ ಎಂದು ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಕೆಣಕಿದರು. `ನಾನ್ಯಾಕೆ ಮಾರಾಟ ಮಾಡಲಿ, ನಮ್ಮ ಕಾರ್ಖಾನೆಗಳು ನಷ್ಟದಲ್ಲಿಲ್ಲ' ಎಂದಾಗ ಗಂಭೀರವಾಗಿದ್ದ ಸದನದಲ್ಲಿ ನಗೆ ಕಾಣಿಸಿತು.ಬೆಳಗಾವಿ ಜಿಲ್ಲೆಯಲ್ಲಿ ಈಗ 20 ಸಕ್ಕರೆ ಕಾರ್ಖಾನೆಗಳಿವೆ. ಟನ್‌ಗೆ ಮೂರು ಸಾವಿರ ರೂಪಾಯಿ ಕೊಟ್ಟರೆ ಮುಂದಿನ ಹಂಗಾಮಿನ ವೇಳೆಗೆ ಕನಿಷ್ಠ 10 ಕಾರ್ಖಾನೆಗಳ ಬಾಗಿಲು ಬಂದ್ ಆಗಲಿದೆ. ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ ಬದಲಿಗೆ ಹೊರಟ್ಟಿ ಅವರ ಗೆಳೆಯರು. ಇದು ಚುನಾವಣೆ ವರ್ಷವಾಗಿರುವುದರಿಂದ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಲಿವೆ ಎಂದು ಕತ್ತಿ ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry