ಭಾನುವಾರ, ಡಿಸೆಂಬರ್ 15, 2019
20 °C

ಅಧಿವೇಶನ ದಿನವೇ ಸಚಿವರ ಸಭೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿವೇಶನ ದಿನವೇ ಸಚಿವರ ಸಭೆ!

ಬೆಂಗಳೂರು: ವಿಧಾನ ಮಂಡಲ ಅಧಿವೇಶನದ ಮೊದಲ ದಿನವಾದ ಸೋಮವಾರವೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಚಿವರ ಸಭೆ ಕರೆದಿರುವುದು ಮತ್ತು ಬಿಜೆಪಿ `ಕೋರ್ ಕಮಿಟಿ~ ಸಭೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸೋಮವಾರ ಮಧ್ಯಾಹ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅಂದರೆ ಮಧ್ಯಾಹ್ನ 3ಕ್ಕೆ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಪಕ್ಷದ ಸಂಘಟನೆ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ.ಅಧಿವೇಶನ ಆರಂಭಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆ ಕರೆಯುವುದು ಸಂಪ್ರದಾಯ. ಆದರೆ ಇದುವರೆಗೆ ಶಾಸಕಾಂಗ ಪಕ್ಷದ ಸಭೆ ಕರೆಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಇದಕ್ಕೆ ಬದಲು ಸಚಿವರ ಸಭೆ ನಡೆಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಸಚಿವರಿಗೆ ಸೂಚನೆ ಹೋಗಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಶಾಸಕರು ಸೋಮವಾರ ಸಭೆ ಸೇರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಮತ್ತು ಇದಕ್ಕೆ ಒಪ್ಪದಿದ್ದರೆ ಪರ್ಯಾಯವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಈ ಮುಂಚೆ ನಿರ್ಧರಿಸಿದ್ದರು. ಆದರೆ ಸದ್ಯಕ್ಕೆ ಆ ಯೋಚನೆಯನ್ನು ಕೈಬಿಟ್ಟಿದ್ದಾರೆ.ಆದರೂ ಯಡಿಯೂರಪ್ಪ ಬಣದ ಶಾಸಕರು ಗೊಂದಲ ಸೃಷ್ಟಿಸಬಹುದು ಎಂಬ ಶಂಕೆಯಿಂದ ಅಧಿವೇಶನದ ಆರಂಭದಲ್ಲೇ ಸದಾನಂದ ಗೌಡ ಕೋರ್ ಕಮಿಟಿ ಮತ್ತು ಸಚಿವರ ಸಭೆ ಕರೆಯುವ ಮೂಲಕ ತಮಗೆ ಪಕ್ಷ ಮತ್ತು ಹೈಕಮಾಂಡ್ ಬೆಂಬಲ ಇದೆ ಎಂಬ ಸಂದೇಶ ರವಾನಿಸಲು ಹೊರಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವಂತೆ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಆದರೆ ಅವರು ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ. 

ಪ್ರತಿಕ್ರಿಯಿಸಿ (+)