ಅಧಿಸೂಚನೆಗೆ ಅಂಕಿತ

7
ಕಾವೇರಿ ನೀರು ಹಂಚಿಕೆ ಐತೀರ್ಪು

ಅಧಿಸೂಚನೆಗೆ ಅಂಕಿತ

Published:
Updated:
ಅಧಿಸೂಚನೆಗೆ ಅಂಕಿತ

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತು ನ್ಯಾ.ಎನ್.ಪಿ.ಸಿಂಗ್ ನೇತೃತ್ವದ ನ್ಯಾಯಮಂಡಳಿ 2007ರ ಫೆಬ್ರುವರಿ 5ರಂದು ನೀಡಿದ `ಐತೀರ್ಪಿನ ಅಧಿಸೂಚನೆಗೆ' ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಎಸ್.ಕೆ. ಸರ್ಕಾರ್ ಮಂಗಳವಾರ ಅಂಕಿತ ಹಾಕಿದರು.ಅನಂತರ ಅಧಿಸೂಚನೆ ಕರಡನ್ನು ಗೆಜೆಟ್‌ನಲ್ಲಿ ಮುದ್ರಿಸುವುದಕ್ಕಾಗಿ ರಾಜಧಾನಿಯ ಮಾಯಾಪುರಿಯಲ್ಲಿರುವ ಸರ್ಕಾರಿ ಮುದ್ರಣಾಲಯಕ್ಕೆ ಕಳುಹಿಸಲಾಯಿತು.ಇದರೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಶಕಗಳ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ. ಈ ಅಧಿಕೃತ ಅಧಿಸೂಚನೆಯ ಗೆಜೆಟ್‌ಬುಧವಾರ ಬೆಳಿಗ್ಗೆ ಸಂಬಂಧಪಟ್ಟ ರಾಜ್ಯಗಳ ಕೈ ಸೇರಲಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸರ್ವಪಕ್ಷ ಮುಖಂಡರ ನಿಯೋಗ ಸೋಮವಾರ `ದೆಹಲಿ ಯಾತ್ರೆ' ಕೈಗೊಂಡು ಹಿಂತಿರುಗುತ್ತಿದ್ದಂತೆ ಕೇಂದ್ರ ಸರ್ಕಾರ ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆಗೆ ಕ್ರಮ ಕೈಗೊಂಡಿತು. ನ್ಯಾಯಮಂಡಳಿ ಅಧಿಸೂಚನೆ ಪ್ರಕಟಣೆಗೆ ಪ್ರಧಾನಿ ಕಚೇರಿ ಮಂಗಳವಾರ ಬೆಳಿಗ್ಗೆ `ಹಸಿರು ನಿಶಾನೆ' ತೋರಿಸಿ ಜಲ ಸಂಪನ್ಮೂಲ ಕಾರ್ಯದರ್ಶಿಗೆ ಸೂಚನೆ ನೀಡಿತು.ಕೇಂದ್ರ ಸರ್ಕಾರ ಐತೀರ್ಪು ಅಧಿಸೂಚನೆಯನ್ನು ಗುರುವಾರದಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಉಭಯ ಸದನದಲ್ಲಿ ಮಂಡಿಸಲಿದೆ. ಇದು ಬರೀ ಔಪಚಾರಿಕ ಪ್ರಕ್ರಿಯೆ ಮಾತ್ರ.ಕಾವೇರಿ ನ್ಯಾಯಮಂಡಳಿ ಐತೀರ್ಪು ಪ್ರಕಟಣೆಗೆ ಸುಪ್ರೀಂ ಕೋರ್ಟ್ ಬುಧವಾರದ (ಫೆ.20) ವರೆಗೆ ಗಡುವು ನೀಡಿತ್ತು. ಐತೀರ್ಪು ಕೊಟ್ಟು  ಆರು ವರ್ಷ ಕಳೆದರೂ ಅಧಿಕೃತ ಅಧಿಸೂಚನೆ ಹೊರಡಿಸದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಗಡುವು ಅಂತ್ಯಗೊಳ್ಳುವ ಒಂದು ದಿನ ಮೊದಲು ಅಧಿಸೂಚನೆಗೆ ಕ್ರಮ ಕೈಗೊಳ್ಳಲಾಗಿದೆ.  ಇದು 90 ದಿನದೊಳಗೆ ಜಾರಿಗೆ ಬರಲಿದೆ.ಕಾವೇರಿ `ಐತೀರ್ಪು' ಅಧಿಸೂಚನೆ ಪ್ರಕಟಣೆಯಿಂದಾಗಿ ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಹಾಗೂ ಇದರ ಅಧೀನದಲ್ಲಿರುವ ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ' (ಸಿಎಂಸಿ) ಅಸ್ತಿತ್ವ ಕಳೆದುಕೊಳ್ಳಲಿವೆ. ನ್ಯಾಯಮಂಡಳಿ ತೀರ್ಪು ಅನುಷ್ಠಾನಕ್ಕೆ `ಕಾವೇರಿ ನೀರು ನಿರ್ವಹಣಾ ಮಂಡಳಿ' ಹಾಗೂ `ನೀರು ನಿಯಂತ್ರಣ ಸಮಿತಿ' ರಚನೆ ಆಗಲಿವೆ. ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ನ್ಯಾಯಮಂಡಳಿ ಶಿಫಾರಸು ಮಾಡಿದೆ.`ಭಾಕ್ರಾ- ಬಿಯಾಸ್' ನದಿ ನೀರು ಹಂಚಿಕೆಗೆ ಸ್ಥಾಪಿಸಲಾಗಿರುವ ನಿಯಂತ್ರಣ ಮಂಡಳಿ ಮಾದರಿಯಲ್ಲೇ ಕಾವೇರಿ ಜಲ ನಿರ್ವಹಣಾ ಮಂಡಳಿ ಇರಲಿದೆ. 20ವರ್ಷ ಸೇವಾ ಅನುಭವ ಇರುವ ಮುಖ್ಯ ಎಂಜಿನಿಯರ್ ಮಂಡಳಿ ಅಧ್ಯಕ್ಷರಾಗಿರುತ್ತಾರೆ. ಕೇಂದ್ರ ಸರ್ಕಾರದ ತಾಂತ್ರಿಕ ಅಧಿಕಾರಿಗಳು, ಸಂಬಂಧಪಟ್ಟ ರಾಜ್ಯಗಳ ಪ್ರತಿನಿಧಿಗಳು ಮಂಡಳಿ ಸದಸ್ಯರಾಗಿರುತ್ತಾರೆ. ಈ ಮಂಡಳಿ ಅಧೀನದಲ್ಲಿ ದಿನನಿತ್ಯದ ನೀರು ಹಂಚಿಕೆ ವ್ಯವಹಾರಗಳನ್ನು ನೋಡಿಕೊಳ್ಳಲು ` ಕಾವೇರಿ ನೀರು ನಿಯಂತ್ರಣ ಸಮಿತಿ' ರಚನೆ ಆಗಲಿದೆ.ನಿರ್ವಹಣಾ ಮಂಡಳಿ ಸದಸ್ಯರೊಬ್ಬರು ನಿಯಂತ್ರಣ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಜಲ, ಕೃಷಿ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಕಾವೇರಿ ನದಿ ಪಾತ್ರದಲ್ಲಿ ಬರುವ ಎಲ್ಲ ಜಲಾಶಯಗಳು ಮಂಡಳಿ ನಿಯಂತ್ರಣಕ್ಕೆ ಒಳಪಡಲಿವೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ನೀರು ನಿರ್ವಹಣಾ ಮಂಡಳಿ ಇಲ್ಲವೆ ನಿಯಂತ್ರಣ ಸಮಿತಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.ಆದರೆ, ಈ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇರುವ ಸಿವಿಲ್ ಮೇಲ್ಮನವಿಗಳ ತೀರ್ಪಿನ ವ್ಯಾಪ್ತಿಗೊಳಪಟ್ಟಿರುತ್ತದೆ. ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿ ಸ್ಥಾಪನೆ ಔಚಿತ್ಯ ಕುರಿತು ಪ್ರಶ್ನೆ ಮಾಡಿ ಸಿವಿಲ್ ಮೇಲ್ಮನವಿ ಸಲ್ಲಿಸಿದೆ.ಈ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸರ್ವಪಕ್ಷ ನಾಯಕರ ನಿಯೋಗ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ಮಾಡದಂತೆ ಒತ್ತಡ ಹೇರಿತ್ತು. ಆದರೆ, ರಾಜ್ಯದ ಒತ್ತಡಕ್ಕೆ ಕೇಂದ್ರ ಸೊಪ್ಪು ಹಾಕಿಲ್ಲ.ಕಾವೇರಿ ನ್ಯಾಯಮಂಡಳಿ ಶಿಫಾರಸು ಆಧರಿಸಿ ನಿರ್ವಹಣಾ ಮಂಡಳಿ ಸ್ಥಾಪಿಸಲಾಗುತ್ತಿದೆ. ಮಂಡಳಿ ಬೇಡವೆನ್ನಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ. ಐತೀರ್ಪಿನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅಧಿಕಾರ ನ್ಯಾಯಮಂಡಳಿಗೆ ಮತ್ತು ಸುಪ್ರೀಂ  ಕೋರ್ಟ್‌ಗೆ ಮಾತ್ರವಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.ಎನ್.ಎಸ್. ರಾವ್, ಸುಧೀರ್ ನಾರಾಯಣ್ ಸದಸ್ಯರಾಗಿರುವ ನ್ಯಾಯಮಂಡಳಿ ಕಾವೇರಿ ನದಿ ಸರಾಸರಿ ನೀರಿನ ಸಂಗ್ರಹವನ್ನು 740ಟಿಎಂಸಿ ಅಡಿ ಎಂದು ಅಂದಾಜು ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 270 ಟಿಎಂಸಿ (ಕೇಳಿದ್ದು 465) ಅಡಿ ತಮಿಳುನಾಡಿಗೆ 419 ಟಿಎಂಸಿ (ಬೇಡಿಕೆ 562) ಅಡಿ, ಕೇರಳ 30 ಟಿಎಂಸಿ ಅಡಿ, ಪುದುಚೇರಿ 7 ಟಿಎಂಸಿ ಅಡಿ ಹಂಚಿಕೆ ಮಾಡಲಾಗಿದೆ. 10 ಟಿಎಂಸಿ ಅಡಿ ನೀರನ್ನು ಪರಿಸರ ಸಂರಕ್ಷಣೆಗಾಗಿ ನಿಗದಿಪಡಿಸಲಾಗಿದೆ.

..........ಕಾವೇರಿ ಜಲಾಶಯಗಳೆಲ್ಲಾ ಮಂಡಳಿ ಅಧೀನಕ್ಕೆ

ಪ್ರಜಾವಾಣಿ ವಾರ್ತೆ

ನವದೆಹಲಿ:
ಕೇಂದ್ರ ಸರ್ಕಾರ ಕಾವೇರಿ ನ್ಯಾಯಮಂಡಳಿ `ಐತೀರ್ಪು' ಅಧಿಸೂಚನೆ ಹೊರಡಿಸಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಬರುವ ಎಲ್ಲ ಜಲಾಶಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ `ನೀರು ನಿರ್ವಹಣಾ ಮಂಡಳಿ' ಅಧೀನಕ್ಕೆ ಒಳಪಡಲಿವೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಜಲಾಶಯದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಲಿವೆ.ಐತೀರ್ಪು ಅಧಿಸೂಚನೆ ಪ್ರಕಟಣೆ ಆಗಿರುವುದರಿಂದ ಕರ್ನಾಟಕ ಇನ್ನುಮುಂದೆ ತನ್ನ ಜಲಾಶಯಗಳಲ್ಲಿ ನೀರಿಲ್ಲ ಎಂದು ರಾಗ ಎಳೆಯುವಂತಿಲ್ಲ. ಏಕೆಂದರೆ ನೀರು ನಿರ್ವಹಣೆ- ಉಸ್ತುವಾರಿ ನೋಡಿಕೊಳ್ಳಲು ಅಸ್ತಿತ್ವಕ್ಕೆ ಬರುವ ನಿರ್ವಹಣಾ ಮಂಡಳಿ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳಲಿರುವುದರಿಂದ ರಾಜ್ಯ ಸರ್ಕಾರ ನೀರಿನ ಮೇಲಿನ ಹಕ್ಕು ಕಳೆದುಕೊಳ್ಳಲಿದೆ.ಕರ್ನಾಟಕದ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ತಮಿಳುನಾಡಿನ ಭವಾನಿ, ಅಮರಾವತಿ,

ಮೆಟ್ಟೂರು ಹಾಗೂ ಬನಸುರಸಾಗರ ಜಲಾಶಯಗಳು ಕಾವೇರಿ ನೀರು ನಿರ್ವಹಣಾ ಮಂಡಳಿ ಅಧೀನಕ್ಕೆ ಒಳಪಡಲಿದೆ. ಎಲ್ಲ ಜಲಾಶಯಗಳ ನೀರು ನಿರ್ವಹಣೆ ಹಾಗೂ ಉಸ್ತುವಾರಿ ಅಧಿಕಾರ ನಿರ್ವಹಣಾ ಮಂಡಳಿಗೆ ಹಸ್ತಾಂತರವಾಗಲಿದೆ.  ನಿಯಂತ್ರಣ ಸಮಿತಿ ಈ ಮಂಡಳಿಗೆ ಅಗತ್ಯ ಸಹಾಯ- ಸಹಕಾರ ನೀಡಲಿದೆ.ಕಾವೇರಿ ನಿರ್ವಹಣಾ ಮಂಡಳಿಗೆ ಪೂರ್ಣಾವಧಿ ಅಧ್ಯಕ್ಷರು, ಇಬ್ಬರು ಪೂರ್ಣಾವಧಿ ಸದಸ್ಯರಿರುತ್ತಾರೆ. ಇವರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ. ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ 20 ವರ್ಷ ಅನುಭವ ಹೊಂದಿದ ಮುಖ್ಯ ಎಂಜಿನಿಯರ್ ದರ್ಜೆ ಅಧಿಕಾರಿ ಅಧ್ಯಕ್ಷರಾಗಲು ಅರ್ಹತೆ ಪಡೆದಿರುತ್ತಾರೆ. ಬೃಹತ್ ಜಲಾಶಯಗಳ ನಿರ್ವಹಣೆಯಲ್ಲಿ 15 ವರ್ಷಗಳ ಪರಿಣತಿ ಪಡೆದ ಮುಖ್ಯ ಎಂಜಿನಿಯರ್ ದರ್ಜೆ ಅಧಿಕಾರಿ ಹಾಗೂ ಕೃಷಿ ಕ್ಷೇತ್ರದಲ್ಲಿ 15 ವರ್ಷಗಳ ಸೇವಾ ಅನುಭವ ಹೊಂದಿದ ತಜ್ಞರು ಪೂರ್ಣಾವಧಿ ಸದಸ್ಯರಾಗಿರುತ್ತಾರೆ.ಕಾವೇರಿ ನೀರು ನಿರ್ವಹಣಾ ಮಂಡಳಿ ಅಧ್ಯಕ್ಷರ ಅವಧಿ ಮೂರು ವರ್ಷ. ಅಗತ್ಯವಾದರೆ ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿದೆ. ಜಲ ಸಂಪನ್ಮೂಲ ಸಚಿವಾಲಯ ಹಾಗೂ ಕೃಷಿ ಸಚಿವಾಲಯ ಇಬ್ಬರು ಅರೆಕಾಲಿಕ ಸದಸ್ಯರನ್ನು ನೇಮಕ ಮಾಡಬಹುದಾಗಿದೆ. ಈ ಅರೆಕಾಲಿಕ ಸದಸ್ಯರು ಮುಖ್ಯ ಎಂಜಿನಿಯರ್ ಅಥವಾ ಕಮಿಷನರ್ ದರ್ಜೆ ಅಧಿಕಾರಿಗಳಾಗಿರಬೇಕು.ಇವರಲ್ಲದೆ, ಕರ್ನಾಟಕ, ತಮಿಳುನಾಡು , ಕೇರಳ ಹಾಗೂ ಪುದುಚೇರಿ ತಲಾ ಒಬ್ಬರು ಅರೆಕಾಲಿಕ ಸದಸ್ಯರನ್ನು ನೇಮಕ ಮಾಡಲು ಅಧಿಕಾರವಿದೆ. ಈ ಸದಸ್ಯರು ಮುಖ್ಯ ಎಂಜಿನಿಯರ್ ದರ್ಜೆ ಅಧಿಕಾರಿಗಳಾಗಿರಬೇಕು. ಸದಸ್ಯರ ಸ್ಥಾನ ಖಾಲಿಯಾದ ಸಂದರ್ಭದಲ್ಲಿ ಸಂಬಂಧಪಟ್ಟವರು ಭರ್ತಿ ಪ್ರಕ್ರಿಯೆ ನಡೆಸಬೇಕು. ಈ ಮಂಡಳಿ ಕಾರ್ಯದರ್ಶಿಯನ್ನು ಆಡಳಿತ ಮಂಡಳಿ ನೇಮಿಸಲು ಅಧಿಕಾರವಿದೆ. ಆದರೆ, ಕಾರ್ಯದರ್ಶಿ ಆಗಿ ನೇಮಕ ಆಗುವವರು ನಿರ್ದೇಶಕ ಅಥವಾ ಅಧೀಕ್ಷಕ ಎಂಜಿನಿಯರ್ ಮಟ್ಟದ ಅಧಿಕಾರಿ ಆಗಿರಬೇಕು. ವಿವಾದದಲ್ಲಿ ಭಾಗಿಯಾದ ಯಾವುದೇ ರಾಜ್ಯಕ್ಕೂ  ಸೇರಿರಬಾರದು.ನಿರ್ವಹಣಾ ಮಂಡಳಿ ಎಲ್ಲ ಸದಸ್ಯರಿಗೂ ಸಮಾನ ಅಧಿಕಾರವಿದೆ. ಬಹುಮತದ ಆಧಾರದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಬಹುದು. ಸಭೆ ಕೋರಂಗೆ ಆರು ಸದಸ್ಯರ ಅಗತ್ಯವಿದೆ. ಕೋರಂ ಇಲ್ಲದೆ ಮುಂದೂಡುವ ಸಭೆ ಮೂರು ದಿನದೊಳಗೆ ಮತ್ತೆ ಸೇರಬೇಕು. ಈ ಸಭೆಗೆ ಕೋರಂ ಅಗತ್ಯವಿಲ್ಲ. ನಿರ್ವಹಣಾ ಮಂಡಳಿಯ ನಿರ್ವಹಣಾ ವೆಚ್ಚವನ್ನು  ಭಾಗಿದಾರ ರಾಜ್ಯಗಳು ಪಾವತಿಸಬೇಕು.ಮಂಡಳಿ ನಿರ್ವಹಣಾ ವೆಚ್ಚದಲ್ಲಿ ತಲಾ ಶೇ 40ರಷ್ಟನ್ನು ಕರ್ನಾಟಕ ಮತ್ತು ತಮಿಳುನಾಡು ಕೊಡಬೇಕು. ಶೇ 15ರಷ್ಟನ್ನು ಕೇರಳ ಹಾಗೂ ಶೇ 5ರಷ್ಟನ್ನು ಪುದುಚೇರಿ ನೀಡಬೇಕು. ಮಂಡಳಿ ಅಧ್ಯಕ್ಷರು, ಸದಸ್ಯರ ಸಂಬಳ ಇದರಲ್ಲಿ ಸೇರಲಿದೆ.ಆಡಳಿತ ನಿರ್ವಹಣೆಗೆ ಅಗತ್ಯವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಮಂಡಳಿ ನೇಮಿಸಿಕೊಳ್ಳಬಹುದು.

ತನ್ನ ಕೇಂದ್ರ ಕಚೇರಿ ಎಲ್ಲಿರಬೇಕೆಂದು ಮಂಡಳಿ ನಿರ್ಧರಿಸಲಿದೆ. ಸಂಬಂಧಪಟ್ಟ ರಾಜ್ಯಗಳ ಜತೆ ಸಮಾಲೋಚಿಸಿದ ಬಳಿಕ ಕೇಂದ್ರ ಸರ್ಕಾರದ ಅನುಮತಿ ಪಡೆದು ಕೇಂದ್ರ ಕಚೇರಿ ಕುರಿತು ತೀರ್ಮಾನ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry