ಶನಿವಾರ, ನವೆಂಬರ್ 23, 2019
17 °C

ಅಧಿಸೂಚನೆ ರದ್ದತಿಗೆ ಗಿರಿಜನರ ಆಗ್ರಹ

Published:
Updated:

ತೀರ್ಥಹಳ್ಳಿ: ಸೋಮೇಶ್ವರ ಅಭಯಾರಣ್ಯ ವಿಸ್ತರಣೆಗೆ  ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಹಸಲರು(ಗಿರಿಜನ, ಪರಿಶಿಷ್ಟ ಪಂಗಡ) ಸಮಾಜ ಸಂಘದ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಗಿರಿಜನರಾದ ನಾವು ವಾಸ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಬಿದರಗೋಡು, ಆಗುಂಬೆ ಹಾಗೂ ನಾಲೂರು ಗ್ರಾಮ ಪಂಚಾಯ್ತಿಯ ತಲ್ಲೂರು, ಬಾಳೇಹಳ್ಳಿ, ಶುಂಠಿಹಕ್ಕಲು, ಶಿವಳ್ಳಿ, ದಾಸನಕೊಡಿಗೆ ಸೇರಿದಂತೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ವ್ಯಾಪ್ತಿಯಲ್ಲಿನ ಸುಮಾರು 314.25 ಚ.ಕಿ.ಮೀ. ಪ್ರದೇಶವನ್ನು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.ಈ ಅಧಿಸೂಚನೆ ನಿಯಮ ಬಾಹಿರವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್19ರಿಂದ 25ರವರೆಗಿನ ಪ್ರಕ್ರಿಯೆಗಳನ್ನು ಅನುಸರಿಸದೇ ಈ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರಿಗೆ ಮಾಹಿತಿ ನೀಡದೇ, ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ವಿರೋಧಿಸಿದರು.ಅಧಿಸೂಚನೆಯಿಂದ ಒಕ್ಕಲೆಬ್ಬಿಸುವ ಭಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಭಯಾರಣ್ಯದ ಸುತ್ತಲೂ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಒಳಗೊಂಡಂತೆ `ಪರಿಸರ ಸೂಕ್ಷ್ಮ ವಲಯ ಘೋಷಣೆ ಆಗುವ ಸಂಭವವಿದ್ದು, ಇದರಿಂದ ಈ ಪ್ರದೇಶದ ಸಾಂಪ್ರದಾಯಿಕ ಕೃಷಿ ಹಾಗೂ ಬದುಕಿಗೆ ಭಯವುಂಟಾಗಲಿದೆ' ಎಂದು ಪ್ರತಿಭಟನಾಕಾರರು ದೂರಿದರು.ಪೂರ್ವಜರ ಕಾಲದಿಂದಲೂ ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸಮಾಡುತ್ತಿದ್ದು, ಇದುವರೆಗೂ ಸರ್ಕಾರದ ವತಿಯಿಂದ ನಮ್ಮ ಅರಣ್ಯ ಹಕ್ಕನ್ನು ಮಾನ್ಯ ಮಾಡುವ ಕನಿಷ್ಠ ಪ್ರಕ್ರಿಯೆಗಳು ನಡೆದಿಲ್ಲ. ಕೇಂದ್ರ ಸರ್ಕಾರದ ಅನುಸೂಚಿತ ಬುಡಕಟ್ಟುಗಳು ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗರ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ 2007ರ ರೀತಿ ನಾವು ಸಲ್ಲಿಸಿರುವ ಅರಣ್ಯ ಹಕ್ಕು ಮಾನ್ಯ ಮಾಡುವಂತೆ ಗ್ರಾಮ ಅರಣ್ಯ ಸಮಿತಿಗಳಿಗೆ ಸಲ್ಲಿಸಿರುವ ಅರ್ಜಿಗಳು ನೆನಗುದಿಗೆ ಬಿದ್ದಿವೆ.

27, ಎಪ್ರಿಲ್ 1978ರ ಪೂರ್ವದ ಅರಣ್ಯ ಒತ್ತುವರಿಯನ್ನು ಸಕ್ರಮ ಮಾಡದೇ ಈ ಅಧಿಸೂಚನೆ ಹೊರಡಿಸಿರುವುದಕ್ಕೆ ತೀವ್ರ ವಿರೋಧವಿದ್ದು, ಈ ಅಧಿಸೂಚನೆಯಿಂದ ಆಧಿವಾಸಿಗಳಾದ ನಮ್ಮ ಶಾಂತಿಯುತ ಹಾಗೂ ನೆಮ್ಮದಿ ಬದುಕಿಗೆ ಧಕ್ಕೆ ಉಂಟಾಗಿದೆ ಎಂದು  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯ ವಾಸಿಗಳ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡದೇ, ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸ ಬೇಕು. ಇಲ್ಲದಿದ್ದಲ್ಲಿ ನಿಯಮ ಬಾಹಿರ ಅಧಿಸೂಚನೆ ವಿರುದ್ಧ ಸಂಘದ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ತಹಶೀಲ್ದಾರ್ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ತಾಲ್ಲೂಕು ಹಸಲರು ಸಮಾಜ ಸಂಘದ ಸಂಚಾಲಕ ಬಿ.ಎ. ರಮೇಶ್ ಹೆಗ್ಡೆ, ಸಂಘದ ಅಧ್ಯಕ್ಷ ಎಂ.ಡಿ. ಗಣೇಶ್ ವಹಿಸಿದ್ದರು.

ಪ್ರತಿಕ್ರಿಯಿಸಿ (+)