ಅಧೋಗತಿಯತ್ತ ಪಿಎಲ್‌ಡಿ ಬ್ಯಾಂಕ್

7

ಅಧೋಗತಿಯತ್ತ ಪಿಎಲ್‌ಡಿ ಬ್ಯಾಂಕ್

Published:
Updated:

ಶಿರಾ: ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಹಲವು ವರ್ಷಗಳಿಂದ ಲೆಕ್ಕವನ್ನೇ ಸರಿಯಾಗಿಡದೆ ಅವ್ಯವಹಾರ ನಡೆಸಿರುವುದನ್ನು 2010-11ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಬಹಿರಂಗಪಡಿಸಿದೆ.ಸ್ವತಂತ್ರ ಪೂರ್ವ 1945ರಲ್ಲಿ ಆರಂಭವಾದ ಬ್ಯಾಂಕ್ ಉನ್ನತಿಗೇರದೆ ದಿನೇ ದಿನೇ ಅವ್ಯವಹಾರ, ಅಶಿಸ್ತು, ಅದಕ್ಷ ಆಡಳಿತದ ಮೂಲಕ ಪ್ರಸ್ತುತ 2ನೇ ದರ್ಜೆ ಬ್ಯಾಂಕ್ ಆಗಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೇರೊಂದು ಊರಿನ ಇಂಥದ್ದೇ ಬ್ಯಾಂಕ್‌ಗೆ ವಿಲೀನಗೊಳಿಸುವ ಸಾಧ್ಯತೆ ನಿಚ್ಚಳವಾದಂತಿದೆ. ಪ್ರತಿ ವರ್ಷ ಬ್ಯಾಂಕಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಹಾಯಧನ ಬರುತ್ತಿದ್ದರೂ; 10 ವರ್ಷಗಳ ಹಿಂದಿನ ಸಹಾಯಧನದ ಪಟ್ಟಿಯನ್ನೇ ಪ್ರತಿ ವರ್ಷದ ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸುವ ಜೊತೆಗೆ ಪ್ರಸಕ್ತ ಸಾಲಿನಲ್ಲೂ ಅದನ್ನೇ ತೋರಿಸಿರುವುದು ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.ಫಲಾನುಭವಿಗಳಿಗೆ ಸಹಾಯಧನ ವಿತರಣೆಯಲ್ಲಿ ಕೂಡ ಸಾಕಷ್ಟು ಅವ್ಯವಹಾರ ಎಸಗಿರುವುದನ್ನು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಉದಾಹರಣೆಗೆ ಬುಕ್ಕಾಪಟ್ಟಣದ ತಿಪ್ಪೇರಾಮಯ್ಯ ಎಂಬಾತ ಪಡೆದಿದ್ದ ತೆಂಗಿನ ಸಾಲವನ್ನು 2001ರಲ್ಲೇ ಮರುಪಾವತಿಸಿದ್ದ. ಆದರೆ ಆತನ ಖಾತೆಗೆ 2003ರಲ್ಲಿ 1800 ರೂಪಾಯಿ ಸಹಾಯಧನ ಜಮೆ ಮಾಡಿ ಅವ್ಯವಹಾರ ಎಸಗಲಾಗಿದೆ. ಇಂಥದ್ದೇ ಪ್ರಕರಣ ಅನೇಕ ಇದ್ದು, ಈವರೆಗಿನ ಎಲ್ಲ ಸಹಾಯಧನಗಳನ್ನು ಸರ್ಕಾರಕ್ಕೆ ವಾಪಸ್ ಮಾಡುವಂತೆ ಸೂಚಿಸಲಾಗಿದೆ.

ನಿಯಮದ ಪ್ರಕಾರ ಬ್ಯಾಂಕಿನಲ್ಲಿ ದೈನಂದಿನ ಶಿಲ್ಕಿನ ಪರಮಾವಧಿ ಮೊತ್ತ 5 ಸಾವಿರ ರೂಪಾಯಿ ಆಗಿದ್ದು, ಅನೇಕ ದಿನ ಲಕ್ಷಾಂತರ ರೂಪಾಯಿ ಇಟ್ಟುಕೊಂಡಿರುವ ಉದಾಹರಣೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿತವಾಗಿವೆ.ಇಷ್ಟಲ್ಲದೆ ದೈನಂದಿನ ನಗದು ಪುಸ್ತಕವನ್ನು ಕ್ರಮಬದ್ದವಾಗಿ ಬರೆದಿಲ್ಲ ಎಂದು ವರದಿಯಲ್ಲಿ ಎಚ್ಚರಿಸಲಾಗಿದ್ದು, ನಗದು ಹಣ ಕೊಂಡೊಯ್ಯುವಾಗ ಆಗುವ ದರೋಡೆ, ಕಳ್ಳತನ, ಬೆಂಕಿ ಅಪಘಾತಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮೆ ಮಾಡಿಸಿಲ್ಲದಿರುವುದು ದೋಷ ಎಂದು ಗುರುತಿಸಲಾಗಿದೆ.ಬ್ಯಾಂಕಿನಲ್ಲಿ ಯಾರ ಖಾತೆಗೆ ಯಾವಾಗ ಹಣ ಜಮಾ ಮಾಡುತ್ತಾರೆ. ಮತ್ಯಾವಾಗ ಅದನ್ನು ಖರ್ಚಿಗೆ ತೋರಿಸುತ್ತಾರೆ ಎಂಬುದು ಅಯೋಮಯವಾಗಿದ್ದು, ಇದಕ್ಕೆ ಉದಾಹರಣೆಯಾಗಿ ಹಲವು ಪ್ರಕರಣ ಉಲ್ಲೇಖಿಸಲಾಗಿದೆ.ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪರ ಅಮಾನತ್ತು ಖಾತೆಗೆ 1995 ಮಾರ್ಚ್ 31ರಂದು 11ಸಾವಿರ ಜಮಾ ಬಂದಿದೆ. ಅದರಲ್ಲಿ 7035 ರೂಪಾಯಿ ಸಾಲದ ಕಂತಿಗೆ ಜಮಾ ಖರ್ಚು ಮಾಡುವ ಮೂಲಕ ಖರ್ಚು ಹಾಕಲಾಗಿದೆ. ಮತ್ತೇ ಅದೇ ವರ್ಷ ಡಿಸೆಂಬರ್ 1ರಂದು ಅವರ ಖಾತೆಗೆ 29 ಸಾವಿರ ಖರ್ಚು ಹಾಕಿದೆ. ಈ ರೀತಿ ಒಟ್ಟು ರೂ.36,655 ಖರ್ಚು ಹಾಕುವ ಮೂಲಕ ಖಾತೆಯಲ್ಲಿನ ಮೊಬಲಗಿಗಿಂತ ರೂ. 25,655 ಬ್ಯಾಂಕಿಗೆ ನಷ್ಟವುಂಟು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಇಂಥದ್ದೇ ಅವ್ಯವಾಹರ ಎಚ್.ಜಿ.ಲಿಂಗಯ್ಯ, ಕರೇಜವನಹಳ್ಳಿ ಮನುಪಾಟೀಲ, ವಡ್ಡನಹಳ್ಳಿ ಹೆಂಜಾರಪ್ಪನ ಪತ್ನಿ ಲಕ್ಷ್ಮಿದೇವಮ್ಮ ಸೇರಿದಂತೆ ಹಲವರ ಖಾತೆಗಳಲ್ಲಿ ನಡೆದಿರುವುದನ್ನು ಗುರುತಿಸಲಾಗಿದೆ.ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರಿಂದ ರೂ.4.95 ಲಕ್ಷಕ್ಕೆ ತಾಂತ್ರಿಕ ಅನುಮೋದನೆ ಪಡೆದು, ರೂ. 16.35 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಉಳಿದ ಹಣಕ್ಕೆ ಅನುಮೋದನೆ ಪಡೆಯದಿರುವುದು ಅವ್ಯವಹಾರದ ಸಂಗತಿಯಾಗಿದೆ.ಸದಸ್ಯರಿಗೆ ಷೇರು ಸರ್ಟಿಫಿಕೇಟ್ ನೀಡದಿರುವುದು, ವರ್ಷದಿಂದ ವರ್ಷಕ್ಕೆ ಪಾಲು ಹಾಗೂ ದುಡಿಯುವ ಬಂಡವಾಳ ಕುಸಿಯುತ್ತಿರುವುದು ಸೇರಿದಂತೆ ಹಲವು ಅಂಶಗಳು ಬ್ಯಾಂಕ್ ಅಧೋಗತಿಯತ್ತ ನಡೆದಿರುವುದನ್ನು ಸೂಚಿಸಿವೆ.ಇಂಥ ಅವ್ಯಹಾರಗಳಿಂದ ಬೇಸತ್ತ ತಾಲ್ಲೂಕಿನ ಜನ ಕೂಡ ಆ ಬ್ಯಾಂಕಿನ ಕಡೆಗೆ ಸಾಲಕ್ಕೆ ಹೋಗುವುದನ್ನೇ ಕೈಬಿಟ್ಟಿದ್ದಾರೆ. ವಾಣಿಜ್ಯ ಬ್ಯಾಂಕ್ ಆಶ್ರಯಿಸಿದ್ದಾರೆ. ಅಪ್ಪಿತಪ್ಪಿ ಆ ಬ್ಯಾಂಕ್‌ಗೆ ಸಾಲಕ್ಕೆ ಹೋಗುವವರಿಗೆ ಅನುಭವಸ್ಥರು `ಲೇ ಪಿಎಲ್‌ಡಿ ಬ್ಯಾಂಕಿನಲ್ಲಿ ಸಾಲ ಮಾಡಬೇಡ. ಎಷ್ಟು ವರ್ಷ ತೀರಿಸಿದರೂ ಅದು ಮುಗಿಯಲ್ಲ~ ಎಂದು ಹೇಳುವ ಮಾತು ನಾಣ್ಣುಡಿಯಂತಾಗಿದೆ.ಬ್ಯಾಂಕ್ ಜನರ ವಿಶ್ವಾಸ ಕಳೆದುಕೊಂಡಿದ್ದರೂ ಆಡಳಿತ ಮಂಡಳಿಯ ಹಾಲಿ-ಮಾಜಿ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು ತಮ್ಮ ಸಂಬಂಧಿಕರ ಹೆಸರಿನ ಖಾತೆಗಳಿಗೆ ಸಹಾಯಧನ ಮತ್ತಿತರರ ಸವಲತ್ತು ವರ್ಗಾಯಿಸಿಕೊಂಡು ಕಾರುಬಾರು ನಡೆಸುತ್ತಿರುವುದು ಮುಂದುವರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry