ಶನಿವಾರ, ಆಗಸ್ಟ್ 17, 2019
27 °C

ಅಧ್ಯಕ್ಷತೆ ತೊರೆಯಲು ಡಾ.ವಿಜಯಾ ನಿರ್ಧಾರ

Published:
Updated:

ಬೆಂಗಳೂರು: ಸಬ್ಸಿಡಿ ಕೋರಿ ಅರ್ಜಿ ಸಲ್ಲಿಸಿದ್ದ ಸಿನಿಮಾವೊಂದರಲ್ಲಿ ತಮ್ಮ ಪುತ್ರ ನಟಿಸಿದ್ದು ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ಸಬ್ಸಿಡಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಲು ಡಾ. ವಿಜಯಾ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.ಈ ಸಂಬಂಧ ಅವರು ವಾರ್ತಾ ಇಲಾಖೆಗೆ ಸೋಮವಾರ ಪತ್ರ ಬರೆದಿದ್ದು, ನೈತಿಕವಾಗಿ ಅಧ್ಯಕ್ಷೆಯಾಗಿ ಮುಂದುವರಿಯಲು ಸಾಧ್ಯವಾಗದ ಕಾರಣ ತಮ್ಮನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಡಾ. ವಿಜಯಾ ಅವರ ಪುತ್ರ ಬಿ. ಸುರೇಶ್ ಸಬ್ಸಿಡಿಗೆ ಅರ್ಜಿ ಸಲ್ಲಿಸಿದ್ದ `ತುಘಲಕ್' ಸಿನಿಮಾದಲ್ಲಿ ನಟಿಸಿದ್ದರು.ರಾಜೀನಾಮೆ ಕುರಿತಂತೆ ವಾರ್ತಾ ಇಲಾಖೆ ತಕ್ಷಣ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಕಾನೂನು ಸಲಹೆ ಪಡೆದು, ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಸಮಿತಿ ತಾತ್ಕಾಲಿಕವಾಗಿ ಸಿನಿಮಾ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದಿದೆ. ಒಂದು ವಾರದ ಬಳಿಕ ಸಮಿತಿ ಪುನಃ ಸಭೆ ಸೇರುವ ಸಾಧ್ಯತೆಗಳಿವೆ.ಈ ಬಾರಿ ಸಮಿತಿ 83 ಸಿನಿಮಾಗಳನ್ನು ಪರಿಶೀಲಿಸಬೇಕಿತ್ತು. ಕಡೆ ಗಳಿಗೆಯಲ್ಲಿ ಅಧಿಕಾರಿಗಳು ಸಿನಿಮಾ ಪಟ್ಟಿ ನೀಡಿದ್ದರಿಂದ ಗೊಂದಲ ಎದ್ದಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದು ಸಮಿತಿಯ ಸದಸ್ಯರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ನಿಯಮಗಳ ಪ್ರಕಾರ ಸಮಿತಿಯ ಪದಾಧಿಕಾರಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಬ್ಸಿಡಿ ಬಯಸುವ ಸಿನಿಮಾದೊಂದಿಗೆ ಗುರುತಿಸಿಕೊಳ್ಳುವಂತಿಲ್ಲ. ತಮ್ಮ ಸಿನಿಮಾಗಳಿದ್ದ ಕಾರಣಕ್ಕೆ ಕೆಲ ದಿನಗಳ ಹಿಂದೆ ಪದ್ಮಾ ವಾಸಂತಿ, ಕೃಷ್ಣೇಗೌಡ ಸೇರಿದಂತೆ ನಾಲ್ವರು ಸಮಿತಿ ಸದಸ್ಯತ್ವದಿಂದ ದೂರ ಸರಿದಿದ್ದರು.

Post Comments (+)