ಅಧ್ಯಕ್ಷರಾಗಿ ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಶಿವಕುಮಾರ್‌

7

ಅಧ್ಯಕ್ಷರಾಗಿ ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಶಿವಕುಮಾರ್‌

Published:
Updated:

ಪಾಂಡವಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಡಿ. ಶ್ರೀನಿವಾಸ್‌ (ವಾಸು) ಅಧ್ಯಕ್ಷರಾಗಿ ಹಾಗೂ ಶಿವಕುಮಾರ್‌ ಉಪಾಧ್ಯಕ್ಷ­ರಾಗಿ ಆಯ್ಕೆಯಾದರೆ, ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್ ಸೋತು ಮುಖಭಂಗ ಅನುಭವಿಸಿತು.ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಮೈತ್ರಿಕೂಟದ ಡಿ. ಶ್ರೀನಿವಾಸ್‌ 11 ಮತಗಳನ್ನು ಪಡೆದು ಜಯಶೀಲರಾದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಎಂ. ಗಿರೀಶ್‌ 9 ಮತಗಳನ್ನು ಪಡೆದು ಪರಾಭವಗೊಂಡರು.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೈತ್ರಿಕೂಟದ ಶಿವಕುಮಾರ್‌ 11ಮತಗಳನ್ನು ಪಡೆದು ಜಯಶೀಲರಾದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಎಚ್.ಬಿ. ರಾಧಮಣಿ 9 ಮತಗಳನ್ನು ಪಡೆದು ಪರಾಭವಗೊಂಡರು.ಒಟ್ಟು 18 ಮಂದಿ ಸದಸ್ಯರ ಬಲಬಲಾವನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷ 6, ಕಾಂಗ್ರೆಸ್‌ 3, ಹಾಗೂ ಜೆಡಿಎಸ್‌ 9 ಮಂದಿ ಸದಸ್ಯರನ್ನು ಹೊಂದಿತ್ತು. ಸಂಸದೆ ರಮ್ಯಾ ಮತ್ತು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮೈತ್ರಿಕೂಟಕ್ಕೆ ಬೆಂಬಲಿಸಿದ್ದರಿಂದ  ಸಂಖ್ಯೆ 11ಕ್ಕೇರಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಮಧ್ಯಾಹ್ನ 1.20ರಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಾಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಿಯಮದಂತೆ ಸಂಸದೆ ರಮ್ಯಾ, ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಹಾಗೂ ಮೈತ್ರಿಕೂಟದ 9ಜನ ಸದಸ್ಯರು ‘ಕೈ’ ಎತ್ತುವ ಮೂಲಕ ಮತದಾನ ಮಾಡಿದರು. ಅದೇ ರೀತಿ ಜೆಡಿಎಸ್‌ನ 9 ಜನ ಸದಸ್ಯರು ‘ಕೈ’ ಎತ್ತುವ ಮೂಲಕ ಮತದಾನ ಮಾಡಿದರು.ನಂತರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತಹಶೀಲ್ದಾರ್‌ ಡಿ.ಎಸ್‌. ಶಿವಕುಮಾರಸ್ವಾಮಿ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.ಒಗ್ಗೂಡಿ ಕೆಲಸ ಮಾಡಿ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರು ಎಲ್ಲ ಸದಸ್ಯರ ಸಹಕಾರ ಸಲಹೆ ತೆಗೆದುಕೊಂಡು ಕೆಲಸಮಾಡಬೇಕು. ಆಡಳಿತ ಪಕ್ಷದವರು ವಿರೋಧ ಪಕ್ಷದವನ್ನು ಗೌರವದಿಂದ ಕಾಣಬೇಕು. ಹಾಗೆಯೇ ವಿರೋಧ ಪಕ್ಷದವರ ಟೀಕೆ ಆರೋಗ್ಯಕರವಾಗಿ–ರಬೇಕು ಎಂದು ಹೇಳಿದರು.ಅಭಿವೃದ್ದಿಗೆ ಅನುದಾನ: ಸಂಸದೆ ರಮ್ಯಾ ಮಾತನಾಡಿ, ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅವರ ಸಂಪೂರ್ಣ ಬೆಂಬಲ ಸಿಕ್ಕಿತು. ಅದಕ್ಕಾಗಿ ಅವರಿಗೆ ಧನ್ಯವಾದಗಳು, ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗೆ ಅಗತ್ಯವಾದ ತಮ್ಮ ಅನುದಾನವನ್ನು ಬಿಡುಗಡೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಕಾರ್ಯಕರ್ತರ ಸಂಭ್ರಮ: ಸರ್ವೋದಯ ಕರ್ನಾಟಕ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಡಿ. ಶ್ರೀನಿವಾಸ್‌ ಅಧ್ಯಕ್ಷರಾಗಿ ಮತ್ತು ಶಿವಕುಮಾರ್‌ ಉಪಾಧ್ಯಕ್ಷರಾಗಿ ಆಯೆ್ಕಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಲ್‌.ಡಿ.ರವಿ, ಜಿ.ಪಂ.ಮಾಜಿ ಸದಸ್ಯ ಎಚ್‌. ಮಂಜುನಾಥ್‌, ಮನ್‌ಮುಲ್‌ ನಿರ್ದೇಶಕ ಎಲ್‌.ಸಿ. ಮಂಜುನಾಥ್ ಹಾಗೂ ಇತರರು ಆಯ್ಕೆಯಾದವರನ್ನು ಅಭಿನಂದಿಸಿದರು.ಅಸಮಾದಾನ, ಪ್ರತಿಭಟನೆ:  ಸರ್ವೋದಯ ಕರ್ನಾಟಕ ಪಕ್ಷದಿಂದ ಆಯ್ಕೆಯಾಗಿರುವ ಸದಸ್ಯ ಎಚ್‌.ಪಿ. ಸತೀಶ್‌ಕುಮಾರ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಸಹಕರಿಸಲಿಲ್ಲ ಎಂದು ಆರೋಪಿಸಿ ಹಾರೋಹಳ್ಳಿಯ 18ನೇ ವಾರ್ಡ್‌ನ ಕೆಲವು ಯುವಕರು ಪುಟ್ಟಣ್ಣಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ನಂತರ ಶಾಸಕ ಪುಟ್ಟಣ್ಣಯ್ಯ ಅವರು ಪ್ರತಿಭಟಿಸುತ್ತಿದ್ದ ಯುವಕರನ್ನು ಸಮಾದಾನಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರಾಗಿದ್ದವರಿಗೆಲ್ಲ  ಅವಕಾಶ ಮಾಡಿಕೊಡಲು ಕಾಲಾವಧಿಯನ್ನು ನಿಗದಿ­ಗೊಳಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry