ಭಾನುವಾರ, ನವೆಂಬರ್ 17, 2019
28 °C

ಅಧ್ಯಕ್ಷರೇ, ಕಾಣುತ್ತಿಲ್ಲವೇ ಚೇಲಾಗಳ ಅಟಾಟೋಪ?

Published:
Updated:

ಬೆಂಗಳೂರು: `ಯಥಾ ರಾಜ ತಥಾ ಪ್ರಜಾ' ಎಂಬ ಉಕ್ತಿಯನ್ನು ಕೆಎಂಎಫ್ ವಿಷಯದಲ್ಲಿ `ಯಥಾ ಚೇಲಾ ತಥಾ ರಾಜ' ಎಂದು ಧಾರಾಳವಾಗಿ ಬದಲಿಸಿಕೊಳ್ಳಬಹುದೇನೋ. ಯಾಕೆಂದರೆ ಇಲ್ಲಿ ಅಧ್ಯಕ್ಷರ ಚೇಲಾಗಳು ಅಧ್ಯಕ್ಷರಿಗಿಂತ ಹೆಚ್ಚು ಪ್ರಭಾವಶಾಲಿಗಳು! ಗಣಿ ದೂಳಿನಲ್ಲಿ ಮುಳುಗೇಳುತ್ತಿರುವ ಅಧ್ಯಕ್ಷರಿಗೆ ಕೆಎಂಎಫ್‌ನ ನಾಡಿಮಿಡಿತ ಗೊತ್ತಿಲ್ಲದೇ ಇರಬಹುದು; ಯಾವುದೋ ಒಂದು ವಿಭಾಗದ ಪರಿಣತನನ್ನು ಇನ್ಯಾರದೋ ಹಿತ ಕಾಯಲು, ಅವನಿಗೆ ಗಂಧ ಗಾಳಿಯೇ ಗೊತ್ತಿರದ ಮತ್ಯಾವುದೋ ವಿಭಾಗಕ್ಕೆ ಎತ್ತಂಗಡಿ ಮಾಡಲು ಅವರು ಕಣ್ಣು ಮುಚ್ಚಿ ಒಪ್ಪಿಗೆ ನೀಡಬಹುದು.ಆದರೆ ಅವರ ಚೇಲಾಗಳು ಮಾತ್ರ ಅಷ್ಟೊಂದು`ಅಮಾಯಕ'ರಲ್ಲ. ಅಧ್ಯಕ್ಷರ ಪ್ರಭಾವ ಬಳಸಿ ಯಾವ ಬಗೆಯ `ವ್ಯವಹಾರ'ವನ್ನು ಕೆಎಂಎಫ್‌ನಲ್ಲಿ ಮಾಡಬಹುದು, ಯಾವ ಯಾವ ಅಧಿಕಾರಿಗೆ ಮೂಗುದಾರ ಹಾಕಿ ತಮ್ಮಾಟಕ್ಕೆ ತಕ್ಕಂತೆ ಪಳಗಿಸಿಕೊಳ್ಳಬಹುದು, ಯಾವ ವಹಿವಾಟಿನ `ಮೂಗನ್ನು' ಭದ್ರವಾಗಿ ಅಮುಕಿ ಹಿಡಿದರೆ ಕೆಎಂಎಫ್ ಥೈಲಿಯ `ಬಾಯಿ' ತನ್ನಿಂದ ತಾನೇ ತೆರೆದುಕೊಳ್ಳುತ್ತದೆ ಎಂಬುದರಲ್ಲೆಲ್ಲ ಅವರು ಅತ್ಯಂತ ನಿಷ್ಣಾತರು.ಇಲ್ಲದಿದ್ದರೆ ಆಂಧ್ರ ಪ್ರದೇಶದಲ್ಲಿ 2009ರ ಸುಮಾರಿಗೆ ಅತಿ ಹೆಚ್ಚಿನ ಬೇಡಿಕೆ ಇದ್ದ `ಗುಡ್‌ಲೈಫ್' ಹಾಲಿನ ಪ್ರಗತಿಯ ವೇಗಕ್ಕೆ ಈಗಿನಂತೆ ಒಡ್ಡು ಕಟ್ಟಿ ನಿಲ್ಲಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಕೋಲಾರದಲ್ಲಷ್ಟೇ ತಯಾರಾಗುತ್ತಿದ್ದ `ಗುಡ್‌ಲೈಫ್'ಗೆ ಆಂಧ್ರ ಭಾಗದಲ್ಲಿ ಇದ್ದ ಭಾರಿ ಬೇಡಿಕೆಯನ್ನು ಪೂರೈಸಲು ಸಂಸ್ಥೆ ಹೆಣಗಾಡುತ್ತಿತ್ತು. ಆ ಲೆಕ್ಕದಲ್ಲಿ ನೋಡಿದರೆ ಈಗ `ಗುಡ್‌ಲೈಫ್' ಅಲ್ಲಿನ ಹಾಲು ಮಾರುಕಟ್ಟೆಯ `ರಾಜ' ಆಗಿರಬೇಕಾಗಿತ್ತು. ಯಾಕೆಂದರೆ ಈಗ ಚನ್ನರಾಯಪಟ್ಟಣ, ಮಂಡ್ಯದಲ್ಲೂ `ಗುಡ್‌ಲೈಫ್' ತಯಾರಾಗುತ್ತಿದೆ.ಕೇಳಿದಷ್ಟು ಪ್ರಮಾಣದಲ್ಲಿ ಈ ಗುಣಮಟ್ಟದ ಹಾಲನ್ನು ಪೂರೈಸುವ ಸಾಮರ್ಥ್ಯ ಸಂಸ್ಥೆಗಿದೆ. ಹೀಗೆ ಉತ್ಪಾದನೆ ಹೆಚ್ಚಿದಂತೆಲ್ಲ ಹಂತಹಂತವಾಗಿ ಮಾರುಕಟ್ಟೆ ಅಭಿವೃದ್ಧಿ ಮಾಡುವ ಚಾಣಾಕ್ಷತನ ಸಂಸ್ಥೆಗೆ ಸಿದ್ಧಿಸಬೇಕಿತ್ತು. ಆದರೆ ಇಲ್ಲಿ ಆದದ್ದೇ ಬೇರೆ. ಅಧ್ಯಕ್ಷರ ಆಂಧ್ರ ನಂಟನ್ನು ಅವರ ಬಂಟರು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ ಹಿಂಬಾಲಕರನ್ನು ತೃಪ್ತಿಪಡಿಸಲು, ಬೆರಳೆಣಿಕೆಯಷ್ಟಿದ್ದ ಏಜೆನ್ಸಿಗಳ ಸಂಖ್ಯೆಯನ್ನು ಮನಬಂದಂತೆ ಏರಿಸಿದರು.ಆವರೆಗೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದ `ಗುಡ್‌ಲೈಫ್' ವಹಿವಾಟಿಗೆ ಹಿಂಬಾಲಕರ ಪಡೆಯ ನಡುವೆ ಹರಿದು ಹಂಚಿಹೋದ ವಿತರಣಾ ವ್ಯವಸ್ಥೆಯೇ ತೊಡರುಗಾಲಾಯಿತು. ಅವರವರಲ್ಲೇ ಕಿತ್ತಾಟ ಆರಂಭವಾಗಿ ಪ್ರಗತಿ ಕುಂಠಿತವಾಯಿತು. 2009ರ ಬೇಡಿಕೆಯ ಏರುಗತಿಗೆ ಹೋಲಿಸಿದರೆ ನಂತರದ ವರ್ಷಗಳ್ಲ್ಲಲಿ ನಿಂತ ನೀರಿನಂತೆ ಆಗಿಹೋಗಿರುವ ಆಂಧ್ರದ `ಗುಡ್‌ಲೈಫ್' ವಹಿವಾಟಿನ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಸಾಕು, ಅಧ್ಯಕ್ಷರ ಬಂಟರ ಕರಾಮತ್ತಿನ ದರ್ಶನ ಚೆನ್ನಾಗಿಯೇ ಆಗುತ್ತದೆ.ಇಷ್ಟೇ ಅಲ್ಲ ಸಿಬ್ಬಂದಿಯ ವರ್ಗಾವಣೆ ದಂಧೆಯಿಂದ ಹಿಡಿದು ಭದ್ರತಾ ಸೇವೆಯನ್ನು ಗುತ್ತಿಗೆಗೆ ನೀಡುವವರೆಗೂ ದಿನನಿತ್ಯದ ಬಹುತೇಕ ವ್ಯವಹಾರಗಳಲ್ಲಿ ಈ ಬಂಟರ ಪಡೆಯ ಮಾತಿಗೇ ಮನ್ನಣೆ; ವರ್ಗಾವಣೆ ಬೇಕಿದ್ದವರು ನೇರವಾಗಿ ಅವರ ಕೈಬೆಚ್ಚಗೆ ಮಾಡಿದರೆ ಸಾಕು ಎಂಬ ಮಾತಿದೆ. ಇಂತಹ ಪುಡಿ ನಾಯಕರ ಕೃಪಾಕಟಾಕ್ಷ ಹೊಂದಿದ ಭದ್ರತಾ ಏಜೆನ್ಸಿಯಿಂದ ಹಲವು ಒಕ್ಕೂಟಗಳು ಪಟ್ಟ ಪಾಡನ್ನು ಕೆಲವು ಸಿಬ್ಬಂದಿ ವಿಷಾದದಿಂದ ವಿವರಿಸುತ್ತಾರೆ.ಕೆಎಂಎಫ್ ಮುಖ್ಯ ಕಚೇರಿ ಸೇರಿದಂತೆ ಎಲ್ಲ 13 ಒಕ್ಕೂಟಗಳ ಭದ್ರತಾ ಸೇವೆಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ಟೆಂಡರ್ ಕರೆಯಲಾಗುತ್ತದೆ.

ಹೀಗೆ ಟೆಂಡರ್ ಪಡೆದುಕೊಳ್ಳುವ ಭದ್ರತಾ ಏಜೆನ್ಸಿಯ ಮಾಲೀಕ ತಾನು ನೇಮಿಸಿದ ಸಿಬ್ಬಂದಿಗೆ ಕೊಟ್ಟ ಸಂಬಳ, ಪಾವತಿಸಿದ ಭವಿಷ್ಯನಿಧಿ, ಇಎಸ್‌ಐ ಕಂತಿನ ದಾಖಲೆ ಎಲ್ಲವನ್ನೂ ಸಲ್ಲಿಸಿದರೆ ಮಾತ್ರ ಆಯಾ ಒಕ್ಕೂಟಗಳು ಮಾಲೀಕನಿಗೆ ಹಣ ಸಂದಾಯ ಮಾಡಬೇಕು. ಆದರೆ ಇದ್ಯಾವುದನ್ನೂ ಮಾಡದೆ ತನ್ನ ಸಿಬ್ಬಂದಿಯನ್ನು ಅತೀವವಾಗಿ ಶೋಷಿಸಿದ್ದರೂ, ಕೆಲವೆಡೆ ಕುರಿಮಂದೆಗೆ ತೋಳದ ಕಾವಲಿಟ್ಟಂತೆ ಪುಂಡಾಟಿಕೆ ತೋರಿದ ಭದ್ರತಾ ಸಿಬ್ಬಂದಿಯನ್ನು ಸಹ ಬದಲಿಸದೆ ಧಾರ್ಷ್ಟ್ಯ ತೋರಿದಾಗಲೂ ಹಣ ಸಂದಾಯವಾಗಿದೆ.ಆರು ಜನರನ್ನು ಕೊಡಬೇಕಾದ ಕಡೆ ಬರೀ ಮೂರು ಮಂದಿಯನ್ನೇ ಕೊಟ್ಟಾಗ, ದಿನವಿಡೀ ದುಡಿದು ದಣಿದವರನ್ನು ರಾತ್ರಿ ಪಾಳಿಗೂ ಮುಂದುವರಿಸಿ ಅವರು ತೂಕಡಿಸುತ್ತಾ ಕುಳಿತುಕೊಂಡಾಗ, ಸಣ್ಣಪುಟ್ಟ ಕಳ್ಳತನ ನಡೆಸಿ ಸಿಕ್ಕಿಹಾಕಿಕೊಂಡ ಭದ್ರತಾ ಸಿಬ್ಬಂದಿಯನ್ನು ಬದಲಿಸುವಂತೆ ಆಕ್ಷೇಪ ತೆಗೆದು, ಹಣ ಮಂಜೂರು ಮಾಡದ ಒಕ್ಕೂಟಗಳ ಹಿರಿಯ ಅಧಿಕಾರಿಗಳೇ ವರ್ಗಾವಣೆಯಾಗಿ ಹೋಗಿದ್ದಾರೆ. ಇಷ್ಟೆಲ್ಲ ಪ್ರಭಾವ ಬಳಸಿ ಎರಡನೇ ಅವಧಿಗೂ ನಿರಾತಂಕವಾಗಿ ಮುಂದುವರಿದ ಏಜೆನ್ಸಿಯ ಅವಾಂತರ ಮಿತಿಮೀರಿದಾಗಷ್ಟೇ ಅದನ್ನು ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ.ಆದರೆ ಹಿಂಬಾಲಕ ಪಡೆ ಇಷ್ಟೆಲ್ಲ ಪ್ರಭಾವಿಯಾಗಿದ್ದರೂ ಮಾಜಿ ಅಧ್ಯಕ್ಷರ ಬೆಂಬಲ ಹೊಂದಿರುವ ಸಿಬ್ಬಂದಿಯ ಕೂದಲು ಕೊಂಕಿಸುವುದೂ ಇವರಿಗೆ ಸಾಧ್ಯವಾಗಿಲ್ಲ. ಹೀಗಾಗಿಯೇ ಹಾಲಿ ಅಧ್ಯಕ್ಷರ ಬಣ, ಮಾಜಿ ಅಧ್ಯಕ್ಷರ ಬಣ ಮತ್ತು ಇವರ‌್ಯಾರೊಟ್ಟಿಗೂ ಗುರುತಿಸಿಕೊಳ್ಳದೆ ತಟಸ್ಥವಾಗಿ ಉಳಿದವರನ್ನು ಒಳಗೊಂಡ ಮೂರು ಬಣಗಳು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.`ಅಯ್ಯೋ ಅಧ್ಯಕ್ಷರಿಗೆ ಕೆಎಂಎಫ್‌ನ ದುಡ್ಡೂ ಬೇಕಾಗಿಲ್ಲ, ಸಂಸ್ಥೆ ಅಭಿವೃದ್ಧಿಯ ಬಗ್ಗೆ ಕಿಂಚಿತ್ ಕಾಳಜಿಯೂ ಇಲ್ಲ. ಇರುವ ತಮ್ಮ ದುಡ್ಡನ್ನೇ ಉಳಿಸಿಕೊಳ್ಳುವುದು ಹೇಗೆ ಎಂಬ ಆತಂಕದಲ್ಲಿ ಅವರಿದ್ದಾರೆ. ಅವರ ಹಿಂಬಾಲಕ ಪಡೆ ಇದೆಲ್ಲದರ ಲಾಭ ಪಡೆಯುತ್ತಿದೆ' ಎನ್ನುತ್ತಾರೆ ಮೂರನೇ ಬಣಕ್ಕೆ ಸೇರಿದ ಅಧಿಕಾರಿಯೊಬ್ಬರು.ಹಿಂಬಾಲಕರನ್ನು ಹದ್ದುಬಸ್ತಿನಲ್ಲಿಡದ ಕಾರಣಕ್ಕೇ ಹೇಳಹೆಸರಿಲ್ಲದಂತೆ ಆಗಿಹೋದ ಸಾಕಷ್ಟು ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷರು ಒಂದು ಸಮೀಕ್ಷೆ ಮಾಡಿಸಿದರೆ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿಂಬಾಲಕರು ನಡೆಸಿದ ಪುಂಡಾಟಿಕೆಗೆ ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ತಲೆದಂಡ ಕೊಟ್ಟ ಹಲವಾರು ಸಚಿವರ ಉದಾಹರಣೆಗಳು ಅವರಿಗೆ ಸಿಗುತ್ತವೆ.ಕೈಕೊಟ್ಟ ಪುಡಿ: ಕೆಎಂಎಫ್ ಅನುಭವಿಸುತ್ತಿರುವ ನಷ್ಟಕ್ಕೆ ಪ್ರಮುಖ ಕಾರಣ, ಗೋಡೌನ್‌ಗಳಲ್ಲಿ ತಿಂಗಳಾನುಗಟ್ಟಲೆಯಿಂದ ಮಾರಾಟವಾಗದೇ ಉಳಿದುಹೋದ ಟನ್‌ಗಟ್ಟಲೆ ಹಾಲಿನ ಪುಡಿ. ಕೇಂದ್ರದ ಮುಕ್ತ ಆಮದು ನೀತಿಯಿಂದ ಹಾಲಿನ ಪುಡಿಯ ದರದಲ್ಲಾದ ತೀವ್ರ ಕುಸಿತ ಸಂಸ್ಥೆಗೆ ದೊಡ್ಡ ಪೆಟ್ಟನ್ನೇ ನೀಡಿತು.ದಿನಾ ಸಂಗ್ರಹವಾಗುವ ಸರಾಸರಿ 50 ಲಕ್ಷ ಲೀಟರ್ ಹಾಲಿನಲ್ಲಿ ಗ್ರಾಹಕರಿಗೆ ಮಾರಾಟವಾಗುವುದು ಕೇವಲ 30 ಲಕ್ಷ ಲೀಟರ್. ಸುಗ್ಗಿ ಕಾಲದಲ್ಲಂತೂ 55 ಲಕ್ಷ ಲೀಟರ್ ಹಾಲು ಬಂದು ಬೀಳುತ್ತದೆ. ಹೀಗೆ ಉಳಿದುಹೋಗುವ ಲಕ್ಷಾಂತರ ಲೀಟರ್ ಹಾಲನ್ನು ಸಂಸ್ಥೆ ಪುಡಿಯ ರೂಪದಲ್ಲಿ ಮಾರಾಟ ಮಾಡುತ್ತದೆ. ಇಷ್ಟೆಲ್ಲ ಹಾಲನ್ನು ಪುಡಿ ಮಾಡುವ ಸಾಮರ್ಥ್ಯ ನಮ್ಮ ಘಟಕಗಳಿಗೆ ಇಲ್ಲವಾದ್ದರಿಂದ ಹೆಚ್ಚುವರಿ ಹಾಲನ್ನು ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಪುಡಿ ಮಾಡಿಸಿ ತರಲಾಗುತ್ತದೆ. ಆದರೆ ಕೆಎಂಎಫ್‌ಗೆ ಅದೃಷ್ಟ ಕೈಕೊಟ್ಟಿದ್ದೇ ಇಲ್ಲಿ.ಒಂದೆರಡು ವರ್ಷದ ಹಿಂದೆ ಇಡೀ ದೇಶಕ್ಕೆ ಬರ ಬಂದು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಾಲಿನ ಕೊರತೆಯ ಲಕ್ಷಣ ಕಂಡುಬಂತು. ಇದರಿಂದ ಒಂದೇ ಬಾರಿಗೆ 25 ಲಕ್ಷ ಟನ್ ಹಾಲಿನ ಪುಡಿಯನ್ನು ಆಮದು ಮಾಡಿಕೊಂಡ ಕೇಂದ್ರ, ಇಲ್ಲಿನ ಪುಡಿಯ ರಫ್ತಿಗೆ ನಿರ್ಬಂಧ ಹೇರಿತು. ಕ್ರಮೇಣ ಹೈನೋದ್ಯಮದಲ್ಲಿ ಉತ್ತಮವಾದ ಚೇತರಿಕೆ ಕಂಡುಬಂದದ್ದರಿಂದ, ದೇಸಿ ಪುಡಿಯನ್ನು ಕೇಳುವವರೇ ಇಲ್ಲದಂತಾಗಿ, ಅದರ ದರ ಗಣನೀಯವಾಗಿ ಕುಸಿಯಿತು.1 ಕೆ.ಜಿ ಹಾಲಿನ ಪುಡಿ ತಯಾರಿಸಲು 11 ಲೀಟರ್ ಹಾಲು ಬೇಕು. ಹೀಗಾಗಿ ಅದರ ಉತ್ಪಾದನಾ ವೆಚ್ಚವೇ 190- 200 ರೂಪಾಯಿ. ಕೆ.ಜಿ ಪುಡಿಗೆ 220- 230 ರೂಪಾಯಿ ಇದ್ದ ದರ ನೋಡನೋಡುತ್ತಿದ್ದಂತೆಯೇ 120- 130 ರೂಪಾಯಿಗೆ ಇಳಿಯಿತು. ಮಾರಿದರೆ ನಷ್ಟ- ಮಾರದಿದ್ದರೆ ಕಷ್ಟ ಎಂಬಂತಹ ಅಡಕತ್ತರಿಯ ಸ್ಥಿತಿಗೆ ಸಂಸ್ಥೆ ತಲುಪಿತು. ಅಧ್ಯಕ್ಷರ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರೆಲ್ಲರೂ ಒಗ್ಗಟ್ಟಿನ ಬಲ ಪ್ರದರ್ಶಿಸಿ ಸಮಸ್ಯೆಯನ್ನು ಸರ್ಕಾರಗಳ ಗಮನಕ್ಕೆ ತಂದು, ಪುಡಿಗೆ ಸಬ್ಸಿಡಿ ಕೊಡಿಸಲು ಅಥವಾ ರಫ್ತಿನ ಮೇಲಿನ ನಿರ್ಬಂಧ ತೆಗೆಸಲು ಯಶಸ್ವಿಯಾಗಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತು.ಗ್ರಹಚಾರ ಕೆಟ್ಟರೆ ಎಲ್ಲ ಒಟ್ಟಿಗೇ ಕೈಕೊಡುತ್ತವೆ ಎಂಬಂತೆ,  ಆಗೊಮ್ಮೆ ಈಗೊಮ್ಮೆ ಮಾತ್ರ ಸಂಸ್ಥೆ ಕಡೆ ತಲೆ ಹಾಕುತ್ತಿದ್ದ ಅಧ್ಯಕ್ಷರು, ಪದೇ ಪದೇ ಬದಲಾದ ಎಂ.ಡಿ.ಗಳ ನಡುವೆ ಕೆಎಂಎಫ್ ದಾರಿ ತಪ್ಪಿದ ಯಜಮಾನನ `ಮನೆ'ಯಂತಾಯಿತು. ಈ `ಮನೆ'ಯನ್ನು ಸುಸೂತ್ರವಾಗಿ ನಡೆಸಲು ಬೇಕಾದ ಹಣ ಬೇರ‌್ಯಾರದೋ ಕೈ ಸೇರಲಿಲ್ಲ. ಬದಲಿಗೆ `ಮನೆ'ಯ ಗೋಡೌನ್‌ಗಳಲ್ಲೇ 450- 500 ಕೋಟಿ ರೂಪಾಯಿ ಮೌಲ್ಯದ 17 ಸಾವಿರ ಟನ್ ಹಾಲಿನ ಪುಡಿಯ ರೂಪದಲ್ಲಿ ಕುಳಿತು ಸಂಸ್ಥೆಯನ್ನು ಅಣಕಿಸತೊಡಗಿತು.ಬೆಣ್ಣೆಯ ವಿಷಯದಲ್ಲೂ ಹೀಗೇ ಆಯಿತು. `ಉರಿಯುತ್ತಿರುವ ಮನೆಯಲ್ಲಿ ಗಳ ಹಿರಿಯುವ' ಮಂದಿ ಇಲ್ಲೂ ಕೈಯಾಡಿಸಲು ನೋಡಿದರು. ಇದೇ ಸಂದರ್ಭ ಬಳಸಿಕೊಂಡು, ಟೆಂಡರ್ ಕರೆಯದೆ ಕೊಟೇಶನ್ ಮಾತ್ರ ಕೊಟ್ಟು ಕೇವಲ 140- 145 ರೂಪಾಯಿಗೆ ಕೆ.ಜಿ.ಯಂತೆ ಬೆಣ್ಣೆ ಕೊಳ್ಳುವ ಹುನ್ನಾರ ನಡೆಸಿದರು.  ಹಾಗೇನಾದರೂ ಆಗಿದ್ದರೆ ಅದು ಈಗಿನ ಮೇವು ಖರೀದಿಗಿಂತಲೂ ದೊಡ್ಡ ಹಗರಣವೇ ಆಗುತ್ತಿತ್ತೇನೋ. ಆದರೆ ಇದ್ಯಾವುದಕ್ಕೂ ಜಗ್ಗದ ಕೆಲವು ನಿಷ್ಠಾವಂತ ಸಿಬ್ಬಂದಿಯ ಪ್ರಯತ್ನದಿಂದ ಈ ಕಾರ್ಯ ಫಲಿಸಲಿಲ್ಲ. ಅನಿವಾರ್ಯವಾಗಿ ಅಖಿಲ ಭಾರತ ಮಟ್ಟದಲ್ಲಿ ಟೆಂಡರ್ ಕರೆದಾಗ, ಉತ್ತಮವಾದ ದರಕ್ಕೇ ಬೆಣ್ಣೆಯನ್ನು ಮಾರಲು ಸಾಧ್ಯವಾಯಿತು. ಒಂದು ವೇಳೆ ಹಿಂಬಾಲಕರ ಲಾಬಿಗೆ ಮಣಿದಿದ್ದರೆ ಸಂಸ್ಥೆ 30 ಕೋಟಿಗೂ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತಿತ್ತು.ಇದರಿಂದ ಹಾಲಿನ ಪುಡಿಯನ್ನೂ ಬಂದಷ್ಟು ದರಕ್ಕೆ ಮಾರಿ ಮುಗಿಸುವ ಉತ್ಸಾಹಕ್ಕೆ ಕಡಿವಾಣ ಬಿತ್ತು. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ಈಗ ಕೆ.ಜಿ ಹಾಲಿನ ಪುಡಿ ದರ 145- 150 ರೂಪಾಯಿಗೆ ಏರಿದೆ. ಮುಂದೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಒಂದೊಂದಾಗಿ ಗೋಡೌನ್‌ಗಳು ಖಾಲಿಯಾಗುತ್ತಿವೆ. ಏಪ್ರಿಲ್ ಅಂತ್ಯದ ವೇಳೆಗೆ ಸಂಸ್ಥೆಯ ಬಳಿ ಕೇವಲ ನಾಲ್ಕೈದು ಸಾವಿರ ಟನ್ ಪುಡಿ ಬಾಕಿ ಉಳಿಯುವ ಅಂದಾಜಿದೆ.`ಮಾತು ಕೇಳದಿದ್ದರೆ ಹೆಚ್ಚೆಂದರೆ ಅವರು ನಮ್ಮನ್ನು ಏನು ಮಾಡಬಹುದು? ವರ್ಗಾವಣೆ ಮಾಡಬಹುದು ಅಷ್ಟೆ. ಅಷ್ಟಕ್ಯಾಕೆ ನಾವು ಅವರಿಗೆ ಶರಣಾಗಿ, ಅನ್ನ ಕೊಡುವ ಸಂಸ್ಥೆಗೆ ದ್ರೋಹ ಬಗೆಯಬೇಕು' ಎಂದು ಕೇಳುತ್ತಾರೆ ಅಧಿಕಾರಿಯೊಬ್ಬರು.

ಯಾರ ಪ್ರಭಾವಕ್ಕೂ ಮಣಿಯದೆ ತಮ್ಮಷ್ಟಕ್ಕೆ ತಾವು ಕಾರ್ಯ ನಿರ್ವಹಿಸಿಕೊಂಡು ಹೋಗುವ ಇಂತಹ ಇನ್ನೂ ಹಲವು ಮಂದಿ ಇರುವುದರಿಂದಲೇ, ಇದೆಲ್ಲದರ ನಡುವೆಯೂ `ನಂದಿನಿ' ಹಾಲು ಮತ್ತು `ನಂದಿನಿ' ಉತ್ಪನ್ನಗಳು ಉತ್ತಮವಾದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂಬ ಸಮಾಧಾನದ ಮಾತು ಸಂಸ್ಥೆಯ ಅಂಗಳದಲ್ಲಿ ಕೇಳಿ ಬರುತ್ತದೆ.

ಮುಂದುವರಿಯುವುದು...

ಪ್ರತಿಕ್ರಿಯಿಸಿ (+)