ಅಧ್ಯಕ್ಷರೇ ಬೆಳಕಿಗೆ ತಂದ ಮೋಟರ್‌ಪಂಪ್ ಹಗರಣ

7

ಅಧ್ಯಕ್ಷರೇ ಬೆಳಕಿಗೆ ತಂದ ಮೋಟರ್‌ಪಂಪ್ ಹಗರಣ

Published:
Updated:

ತುಮಕೂರು: ಜಿಲ್ಲೆಯಲ್ಲಿ ಬರದ ಹಿನ್ನೆಲೆಯಲ್ಲಿ ತುರ್ತು ಕುಡಿಯುವ ನೀರು ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ನೀಡಲಾಗಿರುವ ಪಂಪ್ ಮೋಟರ್, ಪೈಪ್, ಕೇಬಲ್, ಪಿವಿಸಿ ಪೈಪ್ ಕೊಳ್ಳುವಲ್ಲಿ ಭಾರೀ ಹಗರಣ ನಡೆದಿರು ವುದನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಆನಂದರವಿ ಬೆಳಕಿಗೆ ತಂದರು.ಕಳಪೆ ಗುಣಮಟ್ಟದ ಪಂಪ್ ಮೋಟರ್ ಸಾಮಾಗ್ರಿ ನೀಡಿರುವುದರಿಂದ ತಿಂಗಳಲ್ಲೇ ಮೋಟರ್ ಪಂಪ್‌ಗಳು ಕೆಟ್ಟಿವೆವೆ. ಕೇಬಲ್, ಪಿವಿಸಿ ಪೈಪ್ ಗುಣಮಟ್ಟ ತೀವ್ರ ಕಳಪೆಯಾಗಿವೆ ಎಂದು ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಗಂಭೀರ ಆರೋಪ ಮಾಡುವ ಮೂಲಕ ಹಗರಣ ಹೊರ ಹಾಕಿದರು.

ಪಿವಿಸಿ ಪೈಪ್, ಕೇಬಲ್‌ಅನ್ನು ಸಭೆಯಲ್ಲಿ ಪ್ರದರ್ಶಿಸಿ, ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲವಾದರು. ಪಿವಿಸಿ ಪೈಪ್ ಕಳಪೆ ಮಾತ್ರ ವಲ್ಲ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡ ಲಾಗಿದೆ. ಕಳಪೆ ಮೋಟರ್ ಪಂಪ್‌ಗೆ ಐಎಸ್‌ಐ ಮುದ್ರೆ ಹಾಕಿ ವಿತರಿಸಲಾಗಿದೆ. ಇದರಿಂದ ಹೊಸದಾಗಿ ಬಿಡಲಾಗಿರುವ ಮೋಟರ್ ಪಂಪ್‌ಗಳು ವಾರಕ್ಕೊಮ್ಮೆ ರಿಪೇರಿಗೆ ಬರತೊಡಗಿವೆ ಎಂದು ದೂರಿದರು.ಜಿಲ್ಲಾಧಿಕಾರಿ ಕಚೇರಿಯಿಂದಲೇ ಮೋಟರ್ ಪಂಪ್ ಖರೀದಿಸಿ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರಯ್ಯ ತಿಳಿಸಿದರು. ಆಗ ಅಧಿಕಾರಿ ಯೊಬ್ಬರು ಪಂಪ್ ಮೋಟರ್‌ಗಳ ಖರೀದಿ ಹೇಗೆ ನಡೆಯುತ್ತಿದೆ ಎಂದು ಹೇಳಲು ಎದ್ದು ನಿಂತರಾದರೂ ಅವರಿಗೆ ಅವಕಾಶ ಸಿಗಲಿಲ್ಲ.ಕೆಡಿಪಿ ಸಭೆಯುದ್ದಕ್ಕೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಪ್ರತಿ ಇಲಾಖೆ ಅಧಿಕಾರಿ ಗಳನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.ತಿಪಟೂರು ತಾಲ್ಲೂಕಿನಲ್ಲಿ 4 ಕೊಳವೆ ಬಾವಿಗೆ ವರ್ಷವಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ತಿಪಟೂರು ಬೆಸ್ಕಾಂ ಎಂಜಿನಿಯರ್ ವಿರುದ್ಧ ಆನಂದ ರವಿ ಹರಿಹಾಯ್ದರು. ಆರೋಪ ಅಲ್ಲಗಳೆದ ಅಧಿಕಾರಿ ಕುಡಿಯುವ ನೀರಿನ ಯಾವುದೇ ಸಂಪರ್ಕ ಬಾಕಿ ಉಳಿಸಿ ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.ಕೃಷಿ ಇಲಾಖೆ ಸಜ್ಜು: ರೈತರಿಗೆ ಬೀಜ, ರಸಗೊಬ್ಬರ ಕೊರತೆ ಬೀಳದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1200 ಕ್ವಿಂಟಲ್ ಹೆಸರುಕಾಳು ಬೀಜ ವಿತರಣೆ ಮಾಡಲಾಗಿದೆ.ಮುಂಚಿತವಾಗಿಯೇ ನೆಲಗಡಲೆ ಬಿತ್ತನೆ ಮಾಡಲು ರೈತರು ಉತ್ಸಾಹ ತೋರಿರುವುದರಿಂದ ಪಾವಗಡ ತಾಲ್ಲೂಕಿಗೆ 18000 ಕ್ವಿಂಟಲ್, ಶಿರಾಗೆ 8 ಸಾವಿರ, ಮಧುಗಿರಿಗೆ 4 ಸಾವಿರ, ಕೊರಟಗೆರೆಗೆ ಒಂದು ಸಾವಿರ ಕ್ವಿಂಟಲ್ ನೆಲಗಡಲೆ ಬೀಜ ವಿತರಣೆ ಮಾಡಲಾಗಿದೆ. ಖಾಸಗಿ ರಸಗೊಬ್ಬರ ಮಾರಾಟ ಗಾರರು ರೈತರಿಂದ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಗಳಿಗೆ ಈ ವರ್ಷ ಸಾಕಷ್ಟು ಪ್ರಮಾಣದ ಗೊಬ್ಬರ ನೀಡಲಾಗಿದೆ. ಸೊಸೈಟಿ ಗಳು ಎಷ್ಟು ಪ್ರಮಾಣದ ರಸಗೊಬ್ಬರ ಬೇಕಾದರೂ ಖರೀದಿಸ ಬಹುದು ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಕುಂದರಾವ್, ಆರ್.ಸಿ. ಆಂಜನಪ್ಪ ಇದ್ದರು.ಭೂಸೇನಾ ನಿಗಮಕ್ಕೆ ಗಡುವು


ಜಿಲ್ಲೆಯಲ್ಲಿ 31 ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆ ಕಾಮಗಾರಿ ಕೈಗೊಂಡಿರುವ ಭೂಸೇನಾ ನಿಗಮದ ನಿಧಾನಗತಿ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಎರಡು ವರ್ಷದ ಹಿಂದೆಯೇ ಯೋಜನೆ ಕೈಗೆತ್ತಿಕೊಂಡಿದ್ದರೂ ಈವರೆಗೂ 10 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿವೆ. 19 ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ. ಇನ್ನು 2 ಗ್ರಾಮಗಳಲ್ಲಿ ಕಾರಣಾಂತರಗಳಿಂದ ಕಾಮಗಾರಿ ಆರಂಭಗೊಂಡಿಲ್ಲ ಎಂದು ಭೂ ಸೇನಾ ನಿಗಮದ ಅಧಿಕಾರಿ ತಿಳಿಸಿದರು.ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸದಿದ್ದರೆ ಭೂಸೇನಾ ನಿಗಮವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ನೀಡಲಾಗಿರುವ ಗುತ್ತಿಗೆಯನ್ನು ವಾಪಸ್ ಪಡೆಯುವುದಾಗಿ ಭೂ ಸೇನಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.1500 ಕೊಳವೆಬಾವಿಗೆ ಸಂಪರ್ಕ

ಇನ್ನೂ ಮೂರು ತಿಂಗಳಲ್ಲಿ ಗಂಗಾ ಕಲ್ಯಾಣ ಯೋಜನೆಯ 1500 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದರು.ಪ್ರತಿ ದಿನ ಜಿಲ್ಲೆಯಲ್ಲಿ 20ರಿಂದ 25 ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗುತ್ತಿದ್ದು, ಗಂಗಾ ಕಲ್ಯಾಣ ವಿದ್ಯುದ್ದೀಕರಣ ವಿಳಂಬವಾಗಿದೆ. ಕುಡಿಯುವ ನೀರಿಗೆ ವೊದಲ ಆದ್ಯತೆ ನೀಡಲಾಗಿದೆ ಎಂದರು.ಬಿಜೆಪಿ ಬಾವುಟ: ಅಧ್ಯಕ್ಷ ಗರಂ

ತಿಪಟೂರು ತಾಲ್ಲೂಕಿನಲ್ಲಿ ಭೂ ಸೇನಾ ನಿಗಮದ ಕಾಮಗಾರಿಗಳ ಗುದ್ದಲಿ ಪೂಜೆ ವೇಳೆ ಬಿಜೆಪಿ ಬಾವುಟ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ ಪಕ್ಷದಿಂದ ಹಣ ಹಾಕಿ ಕಾಮಗಾರಿ ಮಾಡುತ್ತಿದ್ದೀರೋ ಅಥವಾ ಸರ್ಕಾರದ ಹಣದಲ್ಲಿ ಕಾಮಗಾರಿ ನಡೆಯುತ್ತಿದೆಯೇ ಎಂದು ಜಿ.ಪಂ. ಅಧ್ಯಕ್ಷ ಆನಂದ ರವಿ ಭೂಸೇನಾ ನಿಗಮದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry