ಗುರುವಾರ , ಮೇ 6, 2021
24 °C

ಅಧ್ಯಕ್ಷರ ಭಾಷಣಕ್ಕೆ ಚುಟುಕಿನ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧ್ಯಕ್ಷರ ಭಾಷಣಕ್ಕೆ ಚುಟುಕಿನ ಮೆರುಗು

ಹಾಸನ:ನಗರದಲ್ಲೊಂದು ಮನೆಯ ಮಾಡಿ

ಹಗರಣಕ್ಕಂಜಿದೊಡೆಂತಯ್ಯಾ

ಸಭೆಯ ಅಧ್ಯಕ್ಷತೆ ವಹಿಸಿದ ಮೇಲೆ

ಭಾಷಣಕ್ಕಂಜಿದೊಡೆಂತಯ್ಯಾ

ರಾಜಕೀಯಕ್ಕೆ ಇಳಿದ ಮೇಲೆ

ಭರವಸೆಗಂಜಿದೊಡೆಂತಯ್ಯಾ

ಇದ ಸರಿಪಡಿಸೆ ಬಸವಣ್ಣ

ಮತ್ತೆ ಹುಟ್ಟಿ ಬರಬೇಕಯ್ಯಾ ...ಆಲೂರು ತಾಲ್ಲೂಕು ಮಟ್ಟದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಾನಪದ ಸಾಹಿತಿ ಹಳೇ ಆಲೂರು ನಾಗರಾಜು ಅವರು ಈ ಮೇಲಿನ ಸಾಲುಗಳ ಮೂಲಕ ತಮ್ಮ ಭಾಷಣ ಆರಂಭಿಸಿದರು.ಭಾಷಣದ ಉದ್ದಕ್ಕೂ ಸಾಮಾಜಿಕ ಕಳಕಳಿಯ  ಹಾಸ್ಯದ ಸಾಲುಗಳನ್ನು ಹೇಳುತ್ತಲೇ ಸಾಹಿತ್ಯಾಭಿಮಾನಿಗಳನ್ನು ಆಕರ್ಷಿಸಿದರು.`ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿರುವುದು ಸಹಜ. ಆದರೆ ಭಾಷೆಯ ಬಗ್ಗೆ  ಬದ್ಧತೆಯ ಕೊರತೆ ಕಾಣುತ್ತಿದೆ. ಕನ್ನಡ ಭಾಷೆ ಆಂಗ್ಲ ಮಿಶ್ರತ ಕನ್ನಡವಾಗಿ ಹೆಮ್ಮರವಾಗಿ ಬೆಳೆಯುತ್ತಿರುವುದು ಕನ್ನಡ ಸಾಹಿತ್ಯಕ್ಕೆ ಕೊಡಲಿಪೆಟ್ಟಾಗಿದೆ. ನೆಲ, ಜಲವನ್ನು ಕಬಳಿಕೆ ಮಾಡುವವರ ಸಂಖ್ಯೆ ದಿನ ನಿತ್ಯ ಹೆಚ್ಚಾಗುತ್ತಿದ್ದು, ಇದು ಹೀಗೇ ಮುಂದುವರಿದಲ್ಲಿ ಕನ್ನಡಿಗರು ಕನ್ನಡ ನಾಡನ್ನು ಬಿಟ್ಟು ಬೇರೆ ರಾಜ್ಯಕ್ಕೆ ವಲಸೆ ಹೊಗಬೇಕಾದ ಪರಿಸ್ಥಿತಿ ಬರಬಹುದು ಎಂದು ಆತಂಕಪಟ್ಟರು.`ಮಗು ಒಂದೆ ಸಾಕು; ಸರ್ಕಾರಿ ಶಾಲೆಗೆ ಬೀಗ ಹಾಕು' ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ. ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿರುವುದು ದುರ್ದೈವ. ದೃಶ್ಯ ಮಾಧ್ಯಮಗಳಲ್ಲಿ ಪ್ರದರ್ಶಿಸುವ ಹಿಂಸೆ, ಕ್ರೌರ್ಯ, ಕೊಲೆ, ಸುಲಿಗೆ ಹಾಗೂ ವಿಚಿತ್ರ ಶೈಲಿಯ ಜಾಹೀರಾತುಗಳಿಂದ ಯುವ ಪೀಳಿಗೆ ಹಾದಿ ತಪ್ಪುತ್ತಿದೆ. ಇವುಗಳಿಗೆ ಅಂಕುಶ ಹಾಕಬೇಕಾಗಿದೆ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಕನ್ನಡ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಬೇಕು. ಹೀಗಾದರೆ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ.ಕನ್ನಡದಲ್ಲಿ ಪದ ಸಂಪತ್ತಿಗೆ ಬರವಿಲ್ಲ. ಬಳಸುವ ಮನಸು ಬೇಕು ಅಷ್ಟೆ. ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಹೊಸ- ಹೊಸ ಕನ್ನಡ ಪದಗಳ ಬಳಕೆ ಹಾಗೂ ಹೊಸ ಸಾಹಿತ್ಯವನ್ನು ರೂಪಿಸುವ ಕೆಲಸ ನಡೆಯಬೇಕು. ಭಾಷಾಭಿಮಾನ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷವಿಡೀ ಭಾಷೆಯನ್ನು ಬಳಸುವಂತಾಗಲಿ ಹಾಗೂ ಪ್ರೀತಿಸುವಂತಾಗಲಿ ಎಂದು ನಾಗರಾಜ್ ಆಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.