ಗುರುವಾರ , ಮೇ 13, 2021
19 °C

ಅಧ್ಯಕ್ಷರ ಮೆರವಣಿಗೆಗೆ `ಜಾನಪದ' ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 15 ಹಾಗೂ 16ರಂದು ನಂಜನಗೂಡಿನಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ನಂಜನಗೂಡಿನ ಹುಲ್ಲಹಳ್ಳಿ ವೃತ್ತದಿಂದ ಸಮ್ಮೇಳನ ನಡೆಯುವ ಶ್ರೀಕಂಠೇಶ್ವರ ದೇವಾಲಯದ ಆವರಣದ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಸರ್ವಾಧ್ಯಕ್ಷರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದ ನಂತರ ನಡೆಯುವ ಮೆರವಣಿಗೆಗೆ 30 ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.`ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿದ್ವತ್‌ಪೂರ್ಣ ವಿಚಾರಗೋಷ್ಠಿ, ಕವಿಗೋಷ್ಠಿ, ಕೃಷಿಗೋಷ್ಠಿ, ಮಹಿಳಾ ಸಂವೇದನೆ ಗೋಷ್ಠಿ ಮೊದಲಾದವು ಮೈಸೂರು ಜಿಲ್ಲೆ ಹಾಗೂ ನಂಜನಗೂಡು ತಾಲ್ಲೂಕಿನ ಐತಿಹಾಸಿಕ ಮಹತ್ವ ಸಾರುವ ಹತ್ತಾರು ಸಂಗತಿಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿವೆ' ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಜೂನ್ 15ರಂದು ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ತೀರ್ಥ ಎನ್ನುವ ಸ್ಮರಣ ಸಂಚಿಕೆಯನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ 12 ಕೃತಿಗಳನ್ನು ಸಂಸದ ಆರ್. ಧ್ರುವನಾರಾಯಣ್ ಬಿಡುಗಡೆಗೊಳಿಸುವರು. ಕಲಾಪ್ರದರ್ಶನವನ್ನು ಸಂಸದ ಎಚ್. ವಿಶ್ವನಾಥ್ ಉದ್ಘಾಟಿಸುವರು. ಪುಸ್ತಕಗಳ ಮಳಿಗೆಯನ್ನು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಕರ್ಮಿ ಮಂಡ್ಯ ರಮೇಶ್ ಉದ್ಘಾಟಿಸುವರು' ಎಂದು ಅವರು ಹೇಳಿದರು.`ಉದ್ಘಾಟನೆ ನಂತರ ನಂಜನಗೂಡು ತಾಲ್ಲೂಕು ದರ್ಶನ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ನಂತರ ಕಾವ್ಯ-ಕುಂಚ-ಗಾಯನ ಗೋಷ್ಠಿ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಕೃಪಾ ಫಡ್ಕೆ ನಿರ್ದೇಶನದಲ್ಲಿ `ಮದಗದ ಕೆಂಚವ್ವ' ನೃತ್ಯ ರೂಪಕ ಹಾಗೂ ಪದ್ಮಿನಿ ಅಚ್ಚಿ ಮತ್ತು ತಂಡದವರಿಂದ `ವಚನ ವೈಭವ' ನೃತ್ಯರೂಪಕ ಪ್ರದರ್ಶನಗೊಳ್ಳಲಿವೆ. ಜತೆಗೆ, ನಂಜನಗೂಡಿನ ವಿವಿಧ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ' ಎಂದರು.`ಜೂನ್ 16ರಂದು ಬೆಳಿಗ್ಗೆ 10.30 ಗಂಟೆಗೆ ಸಂಕೀರ್ಣ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30 ಗಂಟೆಗೆ ಕವಿಗೋಷ್ಠಿ ಏರ್ಪಡಿಸಿದ್ದು, ಡಾ.ನೀಲಗಿರಿ ತಳವಾರ ಉದ್ಘಾಟಿಸುವರು. ಡಾ.ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸುವರು. ಸಂಜೆ 4.30 ಗಂಟೆಗೆ ಸಾಧಕರಿಗೆ ಸನ್ಮಾನ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ದೇಸಿ ಕಾಲೇಜಿನ ಸಂಸ್ಥಾಪಕ ಹಂಸಲೇಖ ಸಮಾರೋಪ ಭಾಷಣ ಮಾಡುವರು' ಎಂದರು.`ಸಮ್ಮೇಳನಕ್ಕೆ ರೂ 10-15 ಲಕ್ಷ ವೆಚ್ಚವಾಗಲಿದೆ. ಕೇಂದ್ರ ಕಸಾಪ ರೂ 5 ಲಕ್ಷ ನೀಡಿದೆ. ನಂಜನಗೂಡಿನ ಸ್ಥಳೀಯರ ಸಹಕಾರದಿಂದ ಊಟ ಹಾಗೂ ಇತರ ವ್ಯವಸ್ಥೆ ಕೈಗೊಳ್ಳಲಾಗಿದೆ. ಅತಿಥಿಗಳಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇರುತ್ತದೆ. ಗುರುವಾರದಿಂದ ಫ್ಲೆಕ್ಸ್, ಕನ್ನಡ ಬಾವುಟ ಮೊದಲಾದವುಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ. ಸುಮಾರು 5 ಸಾವಿರ ಜನರು ಭಾಗವಹಿಸಬಹುದು. ಇದೇ ವರ್ಷದಲ್ಲಿ ಮೈಸೂರು ಹಾಗೂ ತಿ.ನರಸೀಪುರ ತಾಲ್ಲೂಕುಗಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ' ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.