ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 11ಕ್ಕೆ

7

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 11ಕ್ಕೆ

Published:
Updated:

ಕುಂದಾಪುರ: ಜಿಲ್ಲೆಯ ಪ್ರಮುಖ ತಾಲ್ಲೂಕು ಪಂಚಾಯಿತಿಗಳಲ್ಲಿ ಒಂದಾಗಿರುವ ಕುಂದಾಪುರ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಸರ್ಕಾರ ಈಗಾಗಲೆ ಮೀಸಲಾತಿ ನಿಗದಿಪಡಿಸಿದ್ದು, ಜಿಲ್ಲಾಡಳಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ಚುನಾವಣೆ ದಿನಾಂಕವನ್ನು ನಿಗದಿ ಮಾಡಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ.ಚುನಾವಣೆ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಸದಾಶಿವ ಪ್ರಭು ಅವರ ನೇತೃತ್ವದಲ್ಲಿ ನಡೆಯಲಿದೆ.ಸರ್ಕಾರ ಪ್ರಕಟಿಸಿರುವ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ. ತಾಲ್ಲೂಕಿನಲ್ಲಿ ಪ್ರಥಮ ಬಾರಿ ಬಿಜೆಪಿ ಪೂರ್ಣ ಬಲದೊಂದಿಗೆ ಅಧಿಕಾರ ಹಿಡಿದಿದೆ. ಬದಲಾದ ಮೀಸಲಾತಿಯಿಂದಾಗಿ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಸದಸ್ಯರಾಗಿದ್ದ ಬಹುತೇಕ ಬಿಜೆಪಿ ಸದಸ್ಯರು ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶವನ್ನೆ ಪಡೆದುಕೊಂಡಿರಲಿಲ್ಲ. ಸ್ಪರ್ಧಿಸಲು ಅವಕಾಶ ಪಡೆದವರು ಚುನಾವಣೆಯಲ್ಲಿ ಸೋಲು  ಕಂಡಿದ್ದರಿಂದ ಸಹಜವಾಗಿ ಹೊಸದಾಗಿ ತಾಲ್ಲೂಕು ಪಂಚಾಯಿತಿ ಪ್ರವೇಶಿಸುವ ಸದಸ್ಯರ ನಡುವೆ ಅಧ್ಯಕ್ಷರು ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ.ಕುಂದಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಇರುವ 35 ಸ್ಥಾನದಲ್ಲಿ ಬಿಜೆಪಿ 22, ಕಾಂಗ್ರೆಸ್ 12 ಹಾಗೂ ಸಿಪಿಎಂ ಒಂದು  ಸದಸ್ಯರನ್ನು ಹೊಂದಿದೆ. ತಾಲ್ಲೂಕಿನ ಕಾಲ್ತೋಡು ಕ್ಷೇತ್ರ ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾಗಿದ್ದು ಇಲ್ಲಿ ಸ್ಪರ್ಧಿಸಿ ಜಯ ಗಳಿಸಿದ ಕಾಂಗ್ರೆಸ್ ಸದಸ್ಯೆ ಜ್ಯೋತಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆದ ಏಕೈಕ ಅರ್ಹ ಸದಸ್ಯರಾಗಿದ್ದಾರೆ.

ಅಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಪಕ್ಷದ ಯುವ ಮುಖಂಡ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿಕಟವರ್ತಿ ಹಾಲಾಡಿ ರಮೇಶ್ ಶೆಟ್ಟಿ ಹಿರಿತನದಲ್ಲಿ ಅಧ್ಯಕ್ಷರಾಗಬಹುದು ಎನ್ನುವ ಸಾಮಾನ್ಯ ನಿರೀಕ್ಷೆಗಳಿದ್ದವು. ಆದರೆ ರಮೇಶ್ ಸ್ವತ: ತಾನು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎನ್ನುವುದನ್ನು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದಾರೆ. ಹಾಗಾದರೆ ಅಧ್ಯಕ್ಷ ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ.ಅಧ್ಯಕ್ಷ ಗಾದಿಯ ರೇಸಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೇನಾಪುರ ಕ್ಷೇತ್ರದ ಶಂಕರ ಶೆಟ್ಟಿ, ಅಮಾಸೆಬೈಲಿನ ನವೀನಚಂದ್ರ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರ ಕ್ಷೇತ್ರದ ಮಂಜು ಬಿಲ್ಲವ ಹಾಗೂ ಹೊಂಬಾಡಿ-ಮಂಡಾಡಿಯ ಬಿದ್ಕಲ್‌ಕಟ್ಟೆ ಪ್ರದೀಪ್ ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿದೆ. ಶಂಕರ ಶೆಟ್ಟಿ ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್ನುವ ಹಿರಿತನ ಹೊಂದಿದ್ದಾರೆ. ನವೀನಚಂದ್ರ ಶೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅನುಭವ ಇದೆ ಹಾಗೂ ವ್ಯ.ಸೇ. ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್ನುವ ಅನುಭವದ ಹಿನ್ನೆಲೆ ಇದೆ. ಮಂಜು ಬಿಲ್ಲವ ಕಳೆದ ಹಲವು ವರ್ಷಗಳಿಂದ ಉತ್ತಮ ಸಂಘಟಕ ಹಾಗೂ ಪ್ರದೀಪ್ ಶೆಟ್ಟಿ ಯುವಜನ ಒಕ್ಕೂಟಗಳಲ್ಲಿ ಪದಾಧಿಕಾರಿಯಾಗಿ ಯಶಸ್ವಿ ಅಧಿಕಾರ ನಿಭಾಯಿಸಿದವರು ಎನ್ನುವ ಅಭಿಪ್ರಾಯಗಳು ಇದೆ.ತಾಲ್ಲೂಕಿನ ಎರಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಲಕ್ಷ್ಮೀನಾರಾಯಣ, ಪಕ್ಷದ ಹಿರಿಯರಾದ ಎ.ಜಿ ಕೊಡ್ಗಿ, ಯುವ ಮುಖಂಡ ಕಿರಣ್‌ಕುಮಾರ ಕೊಡ್ಗಿ ಹಾಗೂ ಕ್ಷೇತ್ರ ಸಮಿತಿಯ ಅಧ್ಯಕ್ಷರುಗಳ ಅಭಿಪ್ರಾಯಗಳೆ ನಿರ್ಣಾಯಕವಾಗಲಿದೆ. ಅಧ್ಯಕ್ಷ ಗಾದಿಗೆ ರೇಸಿನಲ್ಲಿರುವ ಆಕಾಂಕ್ಷಿಗಳು ಈಗಾಗಲೆ ಪಕ್ಷದ ಪ್ರಮುಖರಲ್ಲಿ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸೋಮವಾರ ಪಕ್ಷದ ಕೋರ್ ಕಮಿಟಿಯ ಸಭೆ ನಡೆದಿದ್ದು ಪಕ್ಷದ ಮುಖಂಡರು ಚರ್ಚೆ ನಡೆಸಿದ್ದು ಸಭೆಯ ವಿವರವನ್ನು ಗೋಪ್ಯವಾಗಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry