ಭಾನುವಾರ, ಜೂನ್ 13, 2021
22 °C
ಹರಪನಹಳ್ಳಿ ಪುರಸಭೆ ಚುನಾವಣೆ

ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಹಿಡಿದ ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ಸ್ಥಳೀಯ ಪುರಸಭೆಯ ಮೊದಲ ಅವಧಿಯ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಭಾ ಅಜ್ಜಣ್ಣ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಡಿ.ನಜೀರ್‌ ಅಹಮ್ಮದ್‌ ಅವರು ಕ್ರಮವಾಗಿ ಅಧ್ಯಕ್ಷ– ಉಪಾಧ್ಯಕ್ಷರಾಗಿ ಆಯ್ಕೆಯಾದರು.ಕಾಂಗ್ರೆಸ್‌, ಬಿಜೆಪಿ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ಸೇರಿದಂತೆ ಮೂರು ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದೇ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಪುರಸಭೆಯಲ್ಲಿ 10 ಸದಸ್ಯರನ್ನು ಬಿಜೆಪಿ ಹೊಂದಿದ್ದರೂ, ಅಧಿಕಾರದ ಗದ್ದುಗೆ ಹಿಡಿಯಲು ವಿಫಲವಾಯಿತು.ಅಧ್ಯಕ್ಷ ಸ್ಥಾನ ‘ಸಾಮಾನ್ಯ ವರ್ಗದ ಮಹಿಳೆ’ಗೆ ಹಾಗೂ ಉಪಾಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗಕ್ಕೆ’ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ 7ನೇ ವಾರ್ಡ್‌ನ ಪ್ರಭಾ ಅಜ್ಜಣ್ಣ, ಬಿಜೆಪಿಯಿಂದ 17ನೇ ವಾರ್ಡ್‌ನ ವಿಜಯಲಕ್ಷ್ಮೀ, 2ನೇ ವಾರ್ಡ್‌ನ ಭಂಗಿ ರತ್ನಮ್ಮ ಹಾಗೂ 16ನೇ ವಾರ್ಡ್‌ನ ವೈ.ಎಂ.ಉಮಾಬಾಯಿ ಸೇರಿದಂತೆ ನಾಲ್ವರು ಅಧ್ಯಕ್ಷ ಸ್ಥಾನಕ್ಕೆಉಮೇದುವಾರಿಕೆ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ 11ನೇ ವಾರ್ಡ್‌ನ ಡಿ.ಇಮ್ರಾನ್‌ಬಾಷಾ ಹಾಗೂ 13ನೇ ವಾರ್ಡ್‌ನ ಡಿ.ನಜೀರ್‌ ಅಹಮ್ಮದ್‌ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ನಾಲ್ಕು ನಾಮಪತ್ರಗಳ ಪೈಕಿ, ಕೊನೆಗಳಿಗೆಯಲ್ಲಿ ಬಿಜೆಪಿಯ ಉಮಾಬಾಯಿ ಹಾಗೂ ಭಂಗಿ ರತ್ನಮ್ಮ ತಮ್ಮ ಉಮೇದುವಾರಿಕೆ ಹಿಂಪಡೆದರು.  ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಎರಡು ನಾಮಪತ್ರ ಸಲ್ಲಿಕೆಯಾದ

ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಚುನಾವಣೆಗೆ ಹಾಕಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಭಾ ಅಜ್ಜಣ್ಣಅವರು 15 ಮತಗಳನ್ನು ಪಡೆಯುವಮೂಲಕ ವಿಜೇತರಾದರೆ ಪ್ರತಿಸ್ಪರ್ಧಿ ವಿಜಯಲಕ್ಷ್ಮೀ ಅವರು 13 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಜೀರ್‌ ಅಹಮ್ಮದ್‌ ಅವರು 15 ಮತ ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಡೆಂಕಿ ಇಮ್ರಾನ್‌ ಬಾಷಾ 13 ಮತ ಪಡೆದು ಸೋಲು ಅನುಭವಿಸಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ 27ಸದಸ್ಯರೂ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ಎಂ.ಆರ್‌.ನಾಗರಾಜ್ ಕಾರ್ಯನಿರ್ವಹಿಸಿದರು.  ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತಿಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಗುಪ್ತ ಮತದಾನಕ್ಕೆ ಕೋರಿಕೆ

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಸದಸ್ಯರು ಬೆಂಬಲ ಸೂಚಿಸುವಂತೆ ಚುನಾವಣಾಧಿಕಾರಿ ಆದ ತಹಶೀಲ್ದಾರ್‌ ನಾಗರಾಜ್‌ ಅವರು ಸದಸ್ಯರಿಗೆ ಸೂಚನೆ ನೀಡಿದರು. ಆದರೆ, ಇದಕ್ಕೆ ಬಿಜೆಪಿಯ ಎಂ.ವೆಂಕಟೇಶ್‌ ಗುಪ್ತ ಮತದಾನಕ್ಕೆ ಅವಕಾಶ ಕೋರಿದರು. ಆದರೆ, ಚುನಾವಣಾಧಿಕಾರಿ ನಾಗರಾಜ್‌ ಅವರು, ಅಧ್ಯಕ್ಷ– ಉಪಾಧ್ಯಕ್ಷ  ಸ್ಥಾನಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ಪರ ಅಥವಾ ವಿರುದ್ಧವಾಗಿ ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸದಸ್ಯರು ಕೈ ಎತ್ತಿ ಅಭ್ಯರ್ಥಿ ಬೆಂಬಲಿಸಿದರು.ಸದಸ್ಯನಿಗೆ ಗಡಿಪಾರು ನೋಟಿಸ್‌!

ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ್ದ 27ನೇ ವಾರ್ಡ್‌ನ ಬಿಎಸ್‌ಆರ್‌ ಕಾಂಗ್ರೆಸ್‌ ಸದಸ್ಯ ಎಚ್‌.ಕೊಟ್ರೇಶ್‌ ಎಂಬುವವರಿಗೆ ಗಡಿಪಾರು ಮಾಡಲು ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸ್‌ ಅನ್ನು ಪೊಲೀಸರು ಸಭಾಂಗಣದಲ್ಲಿ ಜಾರಿಮಾಡಿದರು.

ಸದಸ್ಯನ ಮೇಲೆ ‘ಮಟ್ಕಾ ಬುಕ್ಕಿ’ ಆರೋಪದ ಮೇಲೆ ವಿವಿಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ನೋಟಿಸ್‌ ಜಾರಿಯಾಗಿದ್ದು, ಮಟ್ಕಾ ದಂಧೆ ಕೈಬಿಡಬೇಕು ಇಲ್ಲವಾದಲ್ಲಿ; ಗಡಿಪಾರು ಮಾಡಬಾರದೇಕೆ ಎಂದು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.