ಶುಕ್ರವಾರ, ಮೇ 20, 2022
21 °C
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ

ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಜಿ.ಪಂ ಸದಸ್ಯನಿಗೆ ಕಪಾಳಮೋಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾರಾಮಾರಿ ನಡೆದು ಜಿಲ್ಲಾ ಪಂಚಾಯಿತಿ ಸದಸ್ಯ ಇ.ಎಚ್. ಲಕ್ಷ್ಮಣ್ ಅವರಿಗೆ ಅಧ್ಯಕ್ಷ ಸ್ಥಾನ ವಂಚಿತ ಅಭ್ಯರ್ಥಿ ಮೋಹನ್ ಕಪಾಳ ಮೋಕ್ಷ ಮಾಡಿದ ಘಟನೆ ಶುಕ್ರವಾರ ನಡೆದಿದೆ.ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನವಿಲೆ ಅಣ್ಣಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಶುಕ್ರವಾರ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಡಗೂರು ಆನಂದ್ ಮತ್ತು ಕೊರಟಿಗೆರೆ ಮೋಹನ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ನವಿಲೆ ಅಣ್ಣಪ್ಪ ಅವರು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಅಡಗೂರು ಆನಂದ್ ಅವರನ್ನು ಅಧ್ಯಕ್ಷರಾಗಿ ಘೋಷಿಸಿದ್ದಾರೆ.ಮೂರು ದಿನಗಳ ಹಿಂದೆ ಹಾಸನದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ವಿಚಾರ ಕುರಿತು ಚರ್ಚೆ ನಡೆದಿತ್ತು. ಅಲ್ಲಿ ನಡೆದ ಲಾಟರಿ ಆಯ್ಕೆಯಲ್ಲಿ ಕೊರಟಿಗೆರೆ ಮೋಹನ್ ಜಯ ಗಳಿಸಿದ್ದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಇ.ಎಚ್. ಲಕ್ಷ್ಮಣ್ ವಿರೋಧ ವ್ಯಕ್ತಪಡಿಸ್ದ್ದಿದರು. ಆಗ ಆಯ್ಕೆ ಕೈಬಿಡಲಾಗಿತ್ತು.`ಮೂರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ನಾನು ಆಯ್ಕೆಯಾಗಿದ್ದೆ. ಈಗ ಅಡಗೂರು ಆನಂದ್ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಗಿದೆ. ಇದಕ್ಕೆ ಲಕ್ಷ್ಮಣ್ ಅವರೇ ಕಾರಣ' ಎಂದು ಆರೋಪಿಸಿದ ಮೋಹನ್, ಸಭೆಯಲ್ಲಿದ್ದ ಲಕ್ಷ್ಮಣ್ ಅವರನ್ನು ಎಳೆದಾಡಿ ಕಪಾಳ ಮೋಕ್ಷ ಮಾಡಿದರು. ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿದ್ದವರು ಪರಿಸ್ಥಿತಿ ತಿಳಿಗೊಳಿಸಿದರು. ಘಟನೆಯಿಂದ ಅಸಮಾಧಾನಗೊಂಡ ಬಿಜೆಪಿ ಜಿಲ್ಲಾ ಘಟಕದ ಮುಖಂಡ ನವಿಲೆ ಅಣ್ಣಪ್ಪ ಸಭೆಯಿಂದ ಹೊರ ನಡೆದರು ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್‌ಕುಮಾರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರೇಣುಕುಮಾರ್, ಕಾರ್ಯದರ್ಶಿ ನಾಗೇಶ್ ಶೆಟ್ಟಿ, ಮುಖಂಡರಾದ ಜಿ.ಕೆ. ಕುಮಾರ್, ಪರ್ವತಯ್ಯ, ಶೇಖರಯ್ಯ, ಧನಂಜಯ, ಸೋಮಣ್ಣ, ಎಚ್.ಎಂ. ಗೋವಿಂದಪ್ಪ ಇದ್ದರು ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.