ಅಧ್ಯಯನಕ್ಕೆ ಪರಿಣತರ ತಂಡ ಕಳುಹಿಸಲು ಒತ್ತಾಯ

7

ಅಧ್ಯಯನಕ್ಕೆ ಪರಿಣತರ ತಂಡ ಕಳುಹಿಸಲು ಒತ್ತಾಯ

Published:
Updated:
ಅಧ್ಯಯನಕ್ಕೆ ಪರಿಣತರ ತಂಡ ಕಳುಹಿಸಲು ಒತ್ತಾಯ

ನವದೆಹಲಿ: ಕಾವೇರಿ ಜಲಾಶಯಗಳಲ್ಲಿ ಲಭ್ಯವಿರುವ ನೀರು ಮತ್ತು ಅಚ್ಚುಕಟ್ಟು ಪ್ರದೇಶದ ಸ್ಥಿತಿಗತಿ ಕುರಿತ ವಸ್ತುನಿಷ್ಠ ಅಧ್ಯಯನಕ್ಕೆ ಪರಿಣತರ ತಂಡ ಕಳುಹಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಒತ್ತಾಯಿಸಿದ್ದಾರೆ.ಮನಮೋಹನ್‌ಸಿಂಗ್ ಅವರನ್ನು ಸೋಮವಾರ ಭೇಟಿ ಮಾಡಿದ್ದ ದೇವೇಗೌಡರು, ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿ ಕುರಿತು ವಿವರಿಸಿದರು.ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು, ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವ ಪ್ರಮಾಣ, ಬೆಳೆ ಸ್ಥಿತಿಗತಿ, ಬರಗಾಲ ಪರಿಸ್ಥಿತಿ ಕುರಿತು ಜೆಡಿಎಸ್ ವರಿಷ್ಠರೂ ಆಗಿರುವ ದೇವೇಗೌಡರು ಪ್ರಧಾನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಉಭಯ ರಾಜ್ಯಗಳ ನಡುವಿನ ವಿವಾದ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.`ಕಾವೇರಿ ವಿವಾದ ಸೇರಿದಂತೆ ರಾಜ್ಯದ ಸಮಸ್ಯೆಗಳನ್ನು ಕುರಿತು ಪ್ರಸ್ತಾಪಿಸಲು ಸಂಸತ್ತಿನಲ್ಲಿ ಹಲವಾರು ಸಲ ಪ್ರಯತ್ನ ಮಾಡಿದ್ದೇನೆ. ಆದರೆ, ಅವಕಾಶ ಸಿಕ್ಕಿಲ್ಲ. ಜೆಡಿಎಸ್‌ನ ಮೂವರು ಸಂಸದರು ಮಾತ್ರ ಇದ್ದಾರೆ. ಸಂಸತ್ತಿನಲ್ಲಿ ಸಂಸದರ ಸಂಖ್ಯಾಬಲದ ಮೇಲೆ ಎಲ್ಲವೂ ನಡೆಯುತ್ತಿದೆ. ಜನರ ಸಂಕಟಗಳನ್ನು ಕುರಿತು ಪ್ರಸ್ತಾಪಿಸಲು ಸಾಧ್ಯವಿಲ್ಲದ ಮೇಲೆ ಲೋಕಸಭೆಯಲ್ಲಿ ಇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ದೇವೇಗೌಡರು `ಪ್ರಜಾವಾಣಿ~ಗೆ ವಿವರಿಸಿದರು.`ಮುಂದಿನ ಅಧಿವೇಶನದವರೆಗೆ ಕಾಯುತ್ತೇನೆ. ಆಗಲೂ ರಾಜ್ಯದ ಸಮಸ್ಯೆ ಕುರಿತು ಪ್ರಸ್ತಾಪಿಸಲು ಅನುಮತಿ ಸಿಗದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಈಗಲೇ ರಾಜೀನಾಮೆ ನೀಡಬಹುದು. ಆದರೆ, ಕರ್ನಾಟಕದ ಜನ ಕಾನೂನು- ಕಟ್ಟಳೆ ಪಾಲಿಸುವುದಿಲ್ಲ ಎಂಬ ಭಾವನೆ ಉಳಿದವರಲ್ಲಿ ಬಂದಿದೆ. ಈ ಹಿನ್ನೆಲೆಯಲ್ಲಿ ಉಳಿದ ಪಕ್ಷಗಳಿಗೆ ನಮಗಾಗಿರುವ ಅನ್ಯಾಯದ ಬಗೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ನಮಗೆ ಆಗಲೂ ಅವಕಾಶ ದೊರೆಯದಿದ್ದರೆ ರಾಜೀನಾಮೆ ನೀಡುವುದು ಖಚಿತ ಎಂದು ವಿವರಿಸಿದರು.2007ರಲ್ಲಿ ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಹೊರಬಂದಾಗ ಲೋಕಸಭೆಯಲ್ಲಿ ಅರ್ಹತೆ ಆಧಾರದ ಮೇಲೆ ವಿಷಯ ಪ್ರಸ್ತಾಪ ಮಾಡಲು ಮೂರು ದಿನ ಪ್ರಯತ್ನ ಮಾಡಿದೆ. ತಮಿಳುನಾಡಿನ ಸದಸ್ಯರೆಲ್ಲರೂ ಎದ್ದು ನಿಂತು ವಿರೋಧ ಮಾಡಿದರು. ಸ್ಪೀಕರ್ ಕೂಡಾ ಅವಕಾಶ ಕೊಡಲಿಲ್ಲ ಎಂದು ವಿಷಾದಿಸಿದರು. ಸಂಜೆ ಮಾಜಿ ಪ್ರಧಾನಿ ರಾಜ್ಯದ ಪರ ವಕೀಲರಾದ ನಾರಿಮನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry