ಅಧ್ಯಾತ್ಮದ ಹುಡುಕಾಟ

7

ಅಧ್ಯಾತ್ಮದ ಹುಡುಕಾಟ

Published:
Updated:

ಬದಲಾಗುತ್ತಿರುವ ಸಮಾಜದ ಬದಲಾಗುತ್ತಿರುವ ಮನೋಭಾವದ ನಡುವೆ ಧರ್ಮ, ಅಧ್ಯಾತ್ಮ, ಪೂಜೆ, ಸಂಪ್ರದಾಯಗಳು ಅರ್ಥ ಕಳೆದುಕೊಳ್ಳುತ್ತಿವೆಯೇ? ಹೌದು ಎಂದು ಬಲವಾಗಿ ವಾದಮಂಡಿಸುವ ವರ್ಗವೇ ಇದೆ. ವೈಜ್ಞಾನಿಕ ಮತ್ತು ತಂತ್ರಜ್ಞಾನದ ಪ್ರಗತಿಯ ನಕಾರಾತ್ಮಕ ಪರಿಣಾಮವಿದು ಎಂದು ಹಳಿಯುವ ಅಧ್ಯಾತ್ಮವಾದಿಗಳು ಪರಂಪರಾಗತವಾಗಿ ಉಳಿಸಿ ಬೆಳೆಸಿಕೊಂಡು ಬಂದ ನಂಬಿಕೆ ಆಚರಣೆಗಳನ್ನು ಮರೆಯುತ್ತಿದ್ದಾರೆ ಎಂದು ಬೊಟ್ಟು ಮಾಡಿ ದೂರುತ್ತಿರುವುದು ಯುವಜನತೆಯನ್ನು.ಅಧ್ಯಾತ್ಮವನ್ನು ದೇವರು, ನಂಬಿಕೆ ಅಥವಾ ಧರ್ಮದ ಚೌಕಟ್ಟಿನಲ್ಲಿ ನೋಡಬೇಕೆ ಅಥವಾ ಅದು ಎಲ್ಲವನ್ನೂ ಮೀರಿದ್ದೇ ಎಂಬ ದ್ವಂದ್ವಗಳು ಕಾಡುತ್ತಿವೆ. ಯಾಕೆ ಅಧ್ಯಾತ್ಮಕ್ಕೆ ಜೋತು ಬೀಳಬೇಕು ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಸೂಕ್ತ ಉತ್ತರ ಸಿಗುವುದಿಲ್ಲ.ಅಧ್ಯಾತ್ಮವೆಂದರೆ ಏನು ಎಂದು ಕೇಳಿದರೆ ಧ್ಯಾನ, ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗ, ಕೊನೆಗೆ ಯಥಾಪ್ರಕಾರ ದೇವರು ದಿಂಡಿರು... ಹೀಗೆ ತರಾವರಿ ಉತ್ತರಗಳು ಹೊರಬರುತ್ತವೆ. ಅದನ್ನೇ ನಾವಿಲ್ಲಿ ಪಡೆಯುತ್ತೇವೆ ಎಂದು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಳ್ಳುವ ಯುವಜನರು ಕಂಡುಕೊಂಡಿರುವುದು ಅವರದೇ ಆದ ಅಧ್ಯಾತ್ಮ ಮಾರ್ಗ!

ಯುವಜನತೆಯ ಸ್ಥಿತಿ ಹಳ್ಳಕ್ಕೆ ಬಿದ್ದಿರುವ ತೋಳದಂತೆ. ಆಳಿಗೊಂದರಂತೆ ಕಲ್ಲು ಒಗೆಯುತ್ತಿರುವವರು ಕೆಸರಿನಲ್ಲಿ ಹೊರಳಾಡುತ್ತಿರುವುದರ ಬಗ್ಗೆ ಗೋಳಿಡುತ್ತಾರೆ.

 

ಆ ಕೆಸರಿನ ಮೂಲ ಕಲ್ಲು ಹೊಡೆಯುತ್ತಿರುವವರೇ. ಆ ಕೆಸರಿನಲ್ಲಿ ಅಧ್ಯಾತ್ಮವೂ ಮುಳುಗಿಹೋಗಿದೆ. ಆದರೆ ವಾಸ್ತವವಾಗಿ ಅಧ್ಯಾತ್ಮದಿಂದ ಯುವಜನತೆ ವಿಮುಖರಾಗಿಲ್ಲ. ಯುವಜನತೆ ಮನೋಭಾವದಲ್ಲಿ ಎಷ್ಟೇ ಬದಲಾವಣೆಗಳು ಆದರೂ ಆಧ್ಯಾತ್ಮಿಕತೆಯಿಂದ ದೂರ ಸರಿಯುವುದಿಲ್ಲ. ಅಧ್ಯಾತ್ಮ ಕುರಿತು ಯುವಜನತೆಯಲ್ಲಿ ಹೆಚ್ಚಿನ ಒಲವಿದೆ ಎಂಬುದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ. ಜೊತೆಗೆ ಅಧ್ಯಾತ್ಮದೆಡೆಗಿನ ಗೊಂದಲಗಳನ್ನೂ ವ್ಯಕ್ತಪಡಿಸಿದ್ದಾರೆ.ಸೈಕಲ್ ಪ್ಯೂರ್ ಅಗರ್‌ಬತ್ತಿ ಮತ್ತು `ಹಂಸ~ ಈ ಸಮೀಕ್ಷೆ ನಡೆಸಿರುವುದು 13 ರಿಂದ 23 ವರ್ಷದ ವಿದ್ಯಾರ್ಥಿಗಳ ಮೇಲೆ. ಜಗತ್ತಿನಲ್ಲಿ ನಾವು ನಮ್ಮದೇ ರೀತಿಯಲ್ಲಿ ಬದುಕಿದರೂ, ಪರಿಸರ, ಸಂಪನ್ಮೂಲ, ತಂತ್ರಜ್ಞಾನ, ವಿಜ್ಞಾನಗಳು ಪ್ರಪಂಚವನ್ನು ವರ್ಣಮಯವಾಗಿಸಿದ್ದರೂ ಅಧ್ಯಾತ್ಮವಿಲ್ಲದಿದ್ದರೆ ಇವೆಲ್ಲವೂ ಶೂನ್ಯ ಎಂಬುದು ಹೆಚ್ಚಿನ ಯುವಜನರ ಅಭಿಪ್ರಾಯ. ಅಧ್ಯಾತ್ಮವೇ ಈ ವಿಶ್ವವನ್ನು ಬದುಕಲು ಯೋಗ್ಯವಾಗಿಸಿದ ತಾಣವಾಗಿದೆ ಎಂದು ಶೇಕಡಾ 71ರಷ್ಟು ಯುವಜನತೆ ನಂಬಿದ್ದಾರೆ.

 

ಅಧ್ಯಾತ್ಮಕ್ಕೆ ಹೊರಳಿದಾಗ ಆಧುನಿಕ ಮನೋಭಾವದ, ಅಂತರರಾಷ್ಟ್ರೀಯ ಕಂಪೆನಿಯೊಂದರ ಭವಿಷ್ಯದ ಉದ್ಧಾರಕರೂ ಚಿಂತಿಸುವುದು ತಮ್ಮ ಹಿರೀಕರಂತೆಯೇ ಎಂಬುದು ಗೊತ್ತಾಗುತ್ತದೆ. ಆದರೆ ಧರ್ಮ ಮತ್ತು ಅಧ್ಯಾತ್ಮಗಳು ಎರಡೂ ಒಂದೆಯೇ ಅಥವಾ ಬೇರೆ ಬೇರೆಯೇ ಎಂಬುದರ ಬಗ್ಗೆ ಯುವಜನತೆಯಲ್ಲಿ ದ್ವಂದ್ವಗಳಿವೆ.ಧರ್ಮಾತೀತ ಮತ್ತು ಜಾತ್ಯತೀತ ಮನಸ್ಸು ನಮ್ಮದು ಘೋಷಣೆಗಳ ನಡುವೆಯೂ ಅವುಗಳಿಗೆ ಅಂಟಿಕೊಳ್ಳುವವರಿಗೆ ಅದರಿಂದ ಹೊರಬರುವ ಸಾಮರ್ಥ್ಯವಿಲ್ಲ. ಸುಮಾರು ಶೇ.51ರಷ್ಟು ಜನ ಧರ್ಮ ಮತ್ತು ಅಧ್ಯಾತ್ಮಗಳ ನಡುವೆ ಯಾವುದೇ ಸಂಬಂಧವಿಲ್ಲ. ಎರಡರ ಸ್ವರೂಪವೇ ಬೇರೆ ಎಂಬ ಅಭಿಪ್ರಾಯ ಹೊಂದಿದ್ದರೆ, ಇನ್ನು ಶೇ.49ರಷ್ಟು ವಿದ್ಯಾರ್ಥಿಗಳ ಪ್ರಕಾರ ಧರ್ಮ ಮತ್ತು ಅಧ್ಯಾತ್ಮ ಒಂದೇ ಮುಖದ ಎರಡು ನಾಣ್ಯಗಳು.ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಎಷ್ಟೇ ತೀವ್ರವಾಗಿದ್ದರೂ ಹೆಚ್ಚಿನ ಯುವಜನತೆ ತಾವು ಧರ್ಮನಿಷ್ಠರು ಎಂದು ಪ್ರತಿಪಾದಿಸುತ್ತಾರೆ. ಆದರೆ ಆಸ್ತಿಕವಾದಕ್ಕೆ ಹೆಚ್ಚಿನವರು ಸಂಪೂರ್ಣವಾಗಿ ಅಂಟಿಕೊಂಡಿಲ್ಲ. ಸ್ವಲ್ಪಮಟ್ಟಿಗೆ ತಮ್ಮ ನಂಬಿಕೆಗಳನ್ನು ತೇಲಿಬಿಡುತ್ತಾರೆ. ದೇವರನ್ನು ನಂಬಬೇಕೋ ಅಥವಾ ಬೇಡವೋ ಎಂಬ ಜಿಜ್ಞಾಸೆ. ಹೀಗಿರುವಾಗ ಅಧ್ಯಾತ್ಮ ಅವರನ್ನು ಎಷ್ಟರ ಮಟ್ಟಿಗೆ ಸೆಳೆಯುವುದೋ ದೇವರೇ ಬಲ್ಲ! ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿ ಧಾರ್ಮಿಕತೆಯನ್ನು ಹೆಚ್ಚಾಗಿ ಗುರುತಿಸುತ್ತಾರೆ. ಸಂಸ್ಕೃತಿ ಸಂಪ್ರದಾಯಗಳನ್ನು ಯುವಜನತೆ ತೊರೆಯುತ್ತಿದ್ದಾರೆ ಎಂಬ ಹಲುಬುವವರಿಗೆ ಇದು ಉತ್ತರ.ಅಧ್ಯಾತ್ಮವನ್ನು ಕಂಡುಕೊಳ್ಳುವಲ್ಲಿ ಯುವಜನತೆ ವಿಭಿನ್ನ ಹಾದಿಗಳನ್ನು ಹುಡುಕುತ್ತಾರೆ. ಶೇ.77ರಷ್ಟು ಮಂದಿ ಪ್ರಾರ್ಥನೆ ಮೂಲಕ ಅಧ್ಯಾತ್ಮ ಹುಡುಕಿದರೆ, ಉಳಿದವರು ಧ್ಯಾನ ಮತ್ತು ಯೋಗದ ಮೊರೆ ಹೋಗುತ್ತಾರಂತೆ. ದಿನದಲ್ಲಿ ಒಮ್ಮೆಯಾದರೂ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಶೇ.48. ದಿನಕ್ಕೆ ಹಲವು ಬಾರಿ ಪ್ರಾರ್ಥನೆ ಮಾಡುವವರು ಶೇ.27. ಪ್ರಾರ್ಥನೆ ಕೌಟುಂಬಿಕ ಆಚರಣೆಗಳನ್ನು ಒಂದಾಗಿರುವುದರಿಂದ ಈ ಪ್ರಕ್ರಿಯೆ ಸಹಜವಾಗಿಯೇ ಪಾಲನೆಯಾಗುತ್ತಿದೆ. ಪ್ರಾರ್ಥನೆ ಎಂದರೆ ದೇವರನಾಮವೇ ಆಗಬೇಕಿಲ್ಲ.

ಸ್ತೋತ್ರಗಳ ಪಠಣವಾದರೂ ಆದೀತು, ಮೈಕಲ್ ಜಾಕ್ಸನ್ ಸಂಗೀತವಾದರೂ ಆದೀತು. ಎಲ್ಲಾ ಬಗೆಯ ಸಂಗೀತದಲ್ಲೂ ನೆಮ್ಮದಿ ಮತ್ತು ಖುಷಿ ನೀಡುವ ಶಕ್ತಿಯಿದೆ. ಅಧ್ಯಾತ್ಮದ ಉದ್ದೇಶ ಇದೇ ಅಲ್ಲವೇ! ಇನ್ನು ಯೋಗದ ವಿಚಾರ. ಜಿಮ್‌ನಲ್ಲಿ ಬೆವರಿಳಿಸುವವರು ದೇಹ ದಂಡನೆಯ ಆಧುನಿಕ ಪರಿಕರಗಳನ್ನು ಬಳಸಿಕೊಳ್ಳುತ್ತಿದ್ದಾರಷ್ಟೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯಲ್ಲೂ ವೈರುಧ್ಯಗಳಿವೆ. ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಶೇ.33ರಷ್ಟಿದ್ದರೆ, ಆಗಾಗ್ಗೆ ಪಾಲ್ಗೊಳ್ಳುವವರ ಸಂಖ್ಯೆ ಶೇ.38. ದೇವಾಲಯಗಳಿಗೆ ಭೇಟಿ ಕೊಡುವ, ಧಾರ್ಮಿಕ ಪ್ರವಚನಗಳನ್ನಾಲಿಸಲು ತೆರಳುವುದರ ಹಿಂದೆ ಬೇರೆ ಬೇರೆ ಕಾರಣಗಳಿರುತ್ತವೆ!ಅಧ್ಯಾತ್ಮದತ್ತ ಒಲವು ಹೊಂದಿದ್ದರೂ ಕೆಲವರು ತುಂಬಾ ಅಪರೂಪವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸೋಜಿಗ. ತಾವು ಅಧ್ಯಾತ್ಮವಾದಿಗಳೆಂದು ಗುರುತಿಸಿಕೊಳ್ಳುವವರು ಶೇ.79 ಮಂದಿ. ಹಾಗೆಂದ ಮಾತ್ರಕ್ಕೆ ಇವರೆಲ್ಲಾ ದೇವರು, ಧ್ಯಾನ, ಸಂಪ್ರದಾಯಗಳನ್ನು ಪಾಲಿಸುತ್ತಾರೆ ಎಂದು ನಂಬಬೇಕಿಲ್ಲ. ಅಧ್ಯಾತ್ಮವೆಂದರೆ ದೇವರು ಎಂಬ ಅಭಿಪ್ರಾಯ ಶೇ.23ರಷ್ಟು ಜನರದ್ದು. ಶ್ರದ್ಧೆ ಮತ್ತು ವಿಶ್ವಾಸದ ಪ್ರತೀಕ ಅಧ್ಯಾತ್ಮವೆಂದು ಶೇ.20ರಷ್ಟು ಮಂದಿ ನಂಬಿದ್ದರೆ, ಮಾನಸಿಕ ನೆಮ್ಮದಿ ಸಾಧಿಸುವುದೇ ಅಧ್ಯಾತ್ಮ ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ.ಅಧ್ಯಾತ್ಮದತ್ತ ಒಲವು ತೋರುವುದರ ಉದ್ದೇಶ ಮನಸಿಗೆ ಶಾಂತಿ ಮತ್ತು ಸಂತೋಷ ಪಡೆಯುವುದು. ಶೇ.87ರಷ್ಟು ಜನ ಅಧ್ಯಾತ್ಮ ಸಂತೋಷ ಹಾಗೂ ಮಾನಸಿಕ ನೆಮ್ಮದಿ ಒದಗಿಸುತ್ತದೆ ಎನ್ನುತ್ತಾರೆ. ತಾವು ಅಧ್ಯಾತ್ಮವಾದಿಗಳಾಗಲು ಕೌಟುಂಬಿಕ ನಂಬಿಕೆ ಕಾರಣ ಎಂದು ಶೇ.45ರಷ್ಟು ಜನ ಒಪ್ಪಿಕೊಳ್ಳುತ್ತಾರೆ. ಅಂದರೆ ಅಪ್ಪಅಮ್ಮನ ಮಾತುಗಳನ್ನು ಮಕ್ಕಳು ಕೇಳುತ್ತಿದ್ದಾರೆ ಎಂದರ್ಥವಲ್ಲವೇ? ಶೇ.29ರಷ್ಟು ಮಂದಿ ವೈಯಕ್ತಿಕ ಅನುಭವಗಳ ಹಿನ್ನೆಲೆಯೇ ತಮ್ಮನ್ನು ಅಧ್ಯಾತ್ಮದತ್ತ ಆಕರ್ಷಿಸಿದೆ ಎನ್ನುತ್ತಾರೆ.

 

ಇವರ ಕನಸುಗಳಲ್ಲಿ ಅಧ್ಯಾತ್ಮವೂ ಬರುತ್ತದೆ ಎಂಬುದು ವಿಸ್ಮಯಕಾರಿ ಸತ್ಯ! ಧಾರ್ಮಿಕ ಸಂಸ್ಥೆಗಳು, ಸ್ನೇಹಿತರು ಹೀಗೆ ಅಧ್ಯಾತ್ಮದತ್ತ ಅವರನ್ನು ಸೆಳೆಯುವ ಮೂಲಗಳು ಸಾಕಷ್ಟಿವೆ.ಅಧ್ಯಾತ್ಮದೆಡೆಗಿನ ಸೆಳೆತ ಮತ್ತು ಅದರ ಆಚರಣೆಯಿಂದ ಯುವಜನತೆ ಇನ್ನೂ ದೂರವಾಗಿಲ್ಲ ಎಂಬುದು ಈ ಸಮೀಕ್ಷೆಯ ಒಟ್ಟಾರೆ ಫಲಿತಾಂಶ. ತಾವು ಸರಿಯಾಗಿದ್ದೇವೆ ಉಳಿದವರು ಸರಿಯಿಲ್ಲ ಎಂಬ ಮನೋಭಾವ ಅಧ್ಯಾತ್ಮದ ವಿಚಾರದಿಂದಲೂ ಹೊರತಲ್ಲ. ಶೇ.76ರಷ್ಟು ವಿದ್ಯಾರ್ಥಿಗಳದ್ದು ತಮ್ಮ ವಯೋಮಾನದ ಹೆಚ್ಚಿನವರು ಅಧ್ಯಾತ್ಮಕ್ಕೆ ಒತ್ತು ನೀಡುವುದಿಲ್ಲ ಎಂಬ ಅಭಿಪ್ರಾಯ. ಇದು ಯುವಜನತೆ ಅಧ್ಯಾತ್ಮವನ್ನು ತಿರಸ್ಕರಿಸುತ್ತಿದೆ ಎಂಬ ಹಲವರ ಆರೋಪವನ್ನು ಪ್ರತಿಧ್ವನಿಸುವಂತೆ ಕಾಣುತ್ತದೆ.ಯುವಜನತೆಯ ಅಧ್ಯಾತ್ಮದ ಆಚರಣೆಗೆ ಧಾರ್ಮಿಕ, ದೇವರು ಅಥವಾ ಕೌಟುಂಬಿಕ ನಂಬಿಕೆಗಳೇ ಮೂಲವಾಗಿದ್ದರೂ, ಆಚರಣೆ ಉದ್ದೇಶ ಧಾರ್ಮಿಕ ಅಥವಾ ದೇವರಿಗೆ ಸೀಮಿತವಲ್ಲ. ಧರ್ಮ ಅಥವಾ ಸಂಪ್ರದಾಯದ ಚೌಕಟ್ಟಿನಾಚೆಗೆ ಅಧ್ಯಾತ್ಮವನ್ನು ಯುವಜನತೆ ಬಯಸುತ್ತಿದೆ. ಉತ್ತಮ ವ್ಯಕ್ತಿಯಾಗಿ ಬೆಳೆಯಲು ಅಧ್ಯಾತ್ಮ ಸಹಕಾರಿಯಾಗುತ್ತದೆ ಎಂಬುದು ಶೇ.71ರಷ್ಟು ಅಧ್ಯಾತ್ಮವಾದಿಗಳ ನಂಬಿಕೆ. ಅದರ ಫಲಿತಾಂಶ ಸಮಾಜದ ಮುಂದಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅಧ್ಯಾತ್ಮವಾದಿಗಳಾಗಬೇಕು ಎಂಬ ಬಗ್ಗೆ ಶೇ.68ರಷ್ಟು ಜನ ಅಭಿಪ್ರಾಯಪಡುತ್ತಾರೆ.ಪಾಠ, ಓದು, ಟ್ಯೂಷನ್‌ಗಳಲ್ಲಿ ಮುಳುಗಿಹೋಗಿರುವವರಿಗೆ ಇದು ಒಂದು ತಮಾಷೆ ಸಲಹೆಯಾಗಿ ಕಾಣುತ್ತದೆ. ಸಂಪ್ರದಾಯ, ಆಚರಣೆಗಳ ಹಿನ್ನೆಲೆಯಲ್ಲಿ ಅಧ್ಯಾತ್ಮ ಧರ್ಮದ ಭಾಗವಾಗಿ ಕಂಡರೂ ಅದರಾಚೆಗಿನ ಅದರ ಅನುಕರಣೆಯನ್ನು ಯುವಜನತೆ ಇಷ್ಟಪಡುತ್ತಾರಂತೆ. ಹೀಗಾಗಿ ಹಿರಿಯರ ಕಣ್ಣಿಗೆ ಯುವಜನತೆ ಅಧ್ಯಾತ್ಮ ಮಾತ್ರವಲ್ಲ ಸಂಪ್ರದಾಯ, ಧರ್ಮ ಇತ್ಯಾದಿಗಳಿಗೆ ಬೆನ್ನುತಿರುಗಿಸಿದವರಂತೆ ಕಾಣುವುದು ವಿಶೇಷವಲ್ಲ.

 

ಊದಿನಕಡ್ಡಿ ಹಚ್ಚಿ ಎರಡು ಸುತ್ತು ಫೋಟೋಕ್ಕೆ ಸುತ್ತಿಸುವವರು, ಎರಡು ಮಂತ್ರದ ಸಾಲುಗಳನ್ನು ತಿರುವಿ ಪಠಿಸುವವರು, ಕೈ ಮುಗಿದು ಪ್ರಾರ್ಥನೆ ಸಲ್ಲಿಸುವವರು, ಕಣ್ಮುಚ್ಚಿ ಧ್ಯಾನಿಸುವವರು... ಇವರೆಲ್ಲ ಅಧ್ಯಾತ್ಮವನ್ನು ಕಂಡುಕೊಳ್ಳುವ ಬಗೆಯೇ ಬೇರೆ ಅಲ್ಲವೇ? ಧ್ಯಾನ, ಪ್ರಾರ್ಥನೆ, ಯೋಗಗಳ ಬೇರೆ ಆಯಾಮದಲ್ಲಿ ಅಧ್ಯಾತ್ಮವನ್ನು ಹುಡುಕುತ್ತಿದ್ದಾರೆ ಈಗಿನವರು. ಅದನ್ನು ಅಧ್ಯಾತ್ಮವೆಂದು ಕರೆಯಬಹುದೋ ಇಲ್ಲವೋ. ಅವರ ಪಾಲಿಗದು ಅಧ್ಯಾತ್ಮವೇ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry