ಅಧ್ಯಾತ್ಮವೇ ಬಲ; ಬದುಕಿನ ದಾರಿ

7

ಅಧ್ಯಾತ್ಮವೇ ಬಲ; ಬದುಕಿನ ದಾರಿ

Published:
Updated:

ವಿಜಾಪುರ: ‘ನಮ್ಮಲ್ಲಿ  ನಮಗೆ ವಿಶ್ವಾಸ ಇರಬೇಕು. ಜನರು ಮತ್ತು ದೇವರಲ್ಲಿ ವಿಶ್ವಾಸವಿಡಬೇಕು. ಈ ಆತ್ಮವಿಶ್ವಾಸ,  ಎಲ್ಲರೂ ಒಳ್ಳೆಯವರು ಎಂಬ ಭಾವನೆ ಬಂದರೆ ಸಮಾಜದಲ್ಲಿಯ ಎಲ್ಲ ಅನಾಚಾರಗಳು ನಿವಾರಣೆಯಾ­ಗುತ್ತವೆ’ ಎಂದು ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.ಏಳು ವರ್ಷಗಳ ನಂತರ ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು, ಸಂಜೆ ಇಲ್ಲಿ ದಿವ್ಯ ಸತ್ಸಂಗ ನಡೆಸಿಕೊಟ್ಟರು.

‘ಬೋಲೊ ಬೋಲೆ ಸಬ್‌ಮಿಲ್‌ಬೋಲೆ ಓಂ ನಮಃ ಶಿವಾಯ...’ ಎಂಬ ಭಜನೆಯ ಮೂಲಕ ಕಾರ್ಯಕ್ರಮ ಆರಂಭಿಸಿದ ಗುರೂಜಿ, ಉಪದೇಶದ ನಂತರ 15 ನಿಮಿಷ ಧ್ಯಾನವನ್ನೂ ಮಾಡಿಸಿದರು. ಆ ನಂತರ ಭಜನೆಯ ಉನ್ಮಾದದಲ್ಲಿ ತೇಲುತ್ತ ವೇದಿಕೆಯಲ್ಲಿ ಸುತ್ತಾಡಿ ಜನತೆಯತ್ತ ಹೂವುಗಳನ್ನು ತೂರಿದರು.‘ಅಧ್ಯಾತ್ಮದ ಬಲದಲ್ಲಿಯೇ ನಮ್ಮ ದೇಶ ಉಳಿದಿದೆ. ಮಹಾತ್ಮಾ ಗಾಂಧೀಜಿ ಅವರೂ ಈ ಆಧ್ಯಾತ್ಮಿಕತೆಯಿಂದಲೇ ದೇಶವಾಸಿಗಳಲ್ಲಿ ಚೈತನ್ಯ ಬೆಳೆಸಿದರು. ಕಾವ್ಯ–ಶಾಸ್ತ್ರ– ಸಂಗೀತದ ಮೂಲಕ ಜ್ಞಾನ ಕೊಡಬೇಕು. ನಮ್ಮ ಭಾರತದ ಜ್ಞಾನ ಜಗತ್ತಿಗೂ ಬೇಕಿದೆ. ನಮಗೂ ಬೇಕಾಗಿದೆ’ ಎಂದು ಮಾರ್ಮಿಕವಾಗಿ ಹೇಳಿದರು.‘ಆತ್ಮೀಯತೆ–ಸ್ನೇಹತ್ವ ಇದ್ದರೆ ಎಲ್ಲರೂ ನಮ್ಮವರು ಎಂಬ ಭಾವನೆ ಬರುತ್ತದೆ. ಅವಿಶ್ವಾಸ ಮತ್ತು ಮನಸ್ಸಿನ ಒತ್ತಡ ದೂರವಾಗಲು ಧ್ಯಾನ ಬೇಕು. ಧ್ಯಾನದಿಂದ ಶರೀರ ಮತ್ತು ಮನಸ್ಸು ಸದೃಢವಾಗುತ್ತದೆ. ನಮ್ಮನ್ನು ನಾವು ವಿಶ್ವ ಮಾನವರನ್ನಾಗಿ ಪರಿಗಣಿಸಬೇಕು. ನಮ್ಮ ಮನಸ್ಸು ನಿಷ್ಕಳಂಕವಾಗಿದ್ದು, ದ್ವೇಷ ಭಾವನೆ ಇರದಿದ್ದರೆ ಇನ್ನೊಬ್ಬರಿಗೆ ಆಶೀರ್ವಾದ ಮಾಡುವ ಶಕ್ತಿ ಪ್ರಾಪ್ತಿಯಾಗುತ್ತದೆ’ ಎಂದರು.‘ಉತ್ತರ ಕರ್ನಾಟಕದ ಜನರಲ್ಲಿ ಭಕ್ತಿಯ ರಸ ಅಡಗಿದೆ. ಸರಳ ಮತ್ತು ಆತ್ಮೀಯತೆ ಅವರಲ್ಲಿದೆ. ದೇಹವೇ ದೇಗುಲ ಎಂದು ಬಸವಣ್ಣ ಹೇಳಿದ್ದಾರೆ. ಆ ಮಾತು ಸತ್ಯ. ನಮ್ಮ ಶರೀರವನ್ನು ಸರಿಯಾಗಿ ತಿಳಿದುಕೊಂಡಿಲ್ಲ. ರಸಾಯನಿಕ ಮುಕ್ತ ಪೌಷ್ಟಿಕ ಆಹಾರ ಸೇವಿಸಬೇಕು. ವಿಷಪೂರಿತ ದ್ರವ್ಯ ಭೂಮಿಗೆ ಹಾಕಿ ಅದರಿಂದ ಬರುವ ಆಹಾರ ತಿಂದರೆ ನಮ್ಮ ಆರೋಗ್ಯವೂ ಕೆಡುತ್ತದೆ. ಭೂಮಿಯ ಫಲವತ್ತಲೆಯೂ ಹಾಳಾಗುತ್ತದೆ. ನೆಲ–ನೀರು ಸಂರಕ್ಷಣೆಗಾಗಿ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ತಾಯಿಯ ಹಾಲಿನಲ್ಲಿರುವ ಎ–2 ಪೌಷ್ಟಿಕಾಂಶ ಭಾರತೀಯ ತಳಿಯ ಹಸುವಿನಲ್ಲಿಯೂ ಇದೆ. ಆ ತಳಿಯನ್ನು ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.‘ಪರಮಾತ್ಮ ಒಂದು ಶಕ್ತಿ. ಎಲ್ಲವೂ ಶೂನ್ಯದಿಂದ ಬಂದಿದ್ದು. ಪ್ರಪಂಚ ಒಂದೇ ತತ್ವದಿಂದ ರೂಪಗೊಂಡಿದೆ ಎಂದು ನಮ್ಮ ಹಿರಿಯರು ಹೇಳುತ್ತಿರುವುದನ್ನೇ ಈಗ ವಿಜ್ಞಾನಿಗಳು ಹೇಳುತ್ತಿದ್ದಾರೆ’ ಎಂದರು.‘ನಾವು ಕೈದಿಗಳೊಂದಿಗೆ ಬೆರೆತರೆ ನಮ್ಮಲ್ಲಿಯ ದ್ವೇಷ ಭಾವನೆ ಹೊರಟು ಹೋಗುತ್ತದೆ. ರೈತರೊಂದಿಗೆ ಕಳೆದರೆ ಅನ್ನ–ಭೂತಾಯಿಯ ಮೇಲೆ ಪ್ರೀತಿ ಉಕ್ಕುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಮನಿಸಿದರೆ ಅವರಲ್ಲಿಯ ಸಹನಶೀಲತೆ ನಮ್ಮಲ್ಲಿಯೂ ಬೆಳೆಯುತ್ತದೆ. ಒಂದು ದಿನ ಆಸ್ಪತ್ರೆಗೆ ಭೇಟಿ ನೀಡಿದರೆ ಭಗವಂತ ನಮಗೆಷ್ಟು ಉತ್ತಮ ಆರೋಗ್ಯ ಕೊಟ್ಟಿದ್ದಾನೆ, ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂಬುದರ ಅರಿವಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಇವೆಲ್ಲವೂ ಪೂರಕವಾಗು­ತ್ತವೆ’ ಎಂದು ಗುರೂಜಿ ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕ ರಾಜು ಆಲಗೂರ, ಡಾ. ಎಲ್‌.ಎಚ್‌. ಬಿದರಿ, ಹಾಸಿಂಪೀರ ವಾಲಿಕಾರ, ಡಾ.ಮಹಾಂತೇಶ ಬಿರಾದಾರ, ಚಂದ್ರು ಶೆಟ್ಟಿ, ಸುರೇಶ ಗೊಣಸಗಿ, ಡಾ.ಪ್ರಭುಗೌಡ ಇತರರು ಪಾಲ್ಗೊಂಡಿದ್ದರು.ವಿಜಾಪುರ ಸ್ವಚ್ಛವಾಗಿಟ್ಟುಕೊಳ್ಳಿ!

‘ಎಲ್ಲರೂ ನಿತ್ಯ ಒಂದು ಗಂಟೆ ಸಮಾಜ ಸೇವೆಗೆ ಮೀಸಲಿಡಬೇಕು. ಬರುವ ಭಾನುವಾರದಿಂದ ವಿಜಾಪುರ ಸ್ವಚ್ಛತಾ ಆಂದೋಲನ ಆರಂಭಿಸಬೇಕು’ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಮನವಿ ಮಾಡಿದರು.ದೈವ ಪ್ರೇಮ ಮತ್ತು ದೇಶ ಪ್ರೇಮ ಒಂದೇ ನಾಣ್ಯದ ಎರಡು ಮುಖಗಳು. ಕರ್ತವ್ಯ ಪಾಲನೆ ಮಾಡಬೇಕು. ಎಲ್ಲರೂ ನಿತ್ಯ ಒಂದು ಗಂಟೆ ಸಮಾಜ ಸೇವೆಗೆ ಮೀಸಲಿಟ್ಟರೆ ವಿಜಾಪುರ ನಗರ ಝಗಮಗಿಸುವಂತೆ ಮಾಡಬಹುದು ಎಂದರು.

ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ 900 ಹಡಗುಗಳಲ್ಲಿ ಇಲ್ಲಿಯ ಚಿನ್ನವನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. ಸ್ವಾತಂತ್ರ್ಯದ ನಂತರ ನಮ್ಮವರು ವಿದೇಶಗಳಲ್ಲಿ ಹೇರಳವಾಗಿ ಕಪ್ಪು ಹಣ ಇಟ್ಟಿದ್ದಾರೆ. ಆ ಕಪ್ಪು ಹಣವನ್ನೆಲ್ಲ ವಾಪಸ್ಸು ತಂದರೆ ನಮ್ಮ ದೇಶದ ಪ್ರತಿ ಪ್ರಜೆಗೂ ₨ 3 ಲಕ್ಷ ನೀಡಬಹುದಂತೆ. ಆ ಹಣವನ್ನು ತರಬೇಕು ಎಂದರು.ಮಕ್ಕಳಿಂದ ವಚನ ಪಡೆಯಿರಿ

‘ಕುಡಿತ ಮತ್ತು ದುಶ್ಚಟ ಅಪಾಯಕಾರಿ. ನಾನು ಯಾವುದೇ ದುಶ್ಚಟಕ್ಕೆ ಅಂಟಿಕೊಳ್ಳುವುದಿಲ್ಲ ಎಂದು ತಾಯಂದಿರುವ ತಮ್ಮ ಮಕ್ಕಳಿಂದ ಪ್ರಮಾಣ ಮಾಡಿಸಿಕೊಳ್ಳಬೇಕು’ ಎಂದು ಗುರೂಜಿ ಸಲಹೆ ನೀಡಿದರು.ಯುವ ಜನತೆಯಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಅಪಾಯಕಾರಿ. ಜೀವನದ ಮೌಲ್ಯಗಳ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಎಲ್ಲ ಮಕ್ಕಳಿಗೂ ಜೀವನ ಮೌಲ್ಯಗಳನ್ನು ತಿಳಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry