ಮಂಗಳವಾರ, ಮೇ 18, 2021
28 °C

ಅನಂತರಾಂಗೆ ಕಲಾಭೂಷಣ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಾಜಿನಗರದ ಶ್ರೀತ್ಯಾಗರಾಜ ಗಾನಸಭೆಯ 41ನೇ ವರ್ಷದ ಶ್ರೀಶಂಕರ ಜಯಂತಿ ಸಂಗೀತೋತ್ಸವದ ಅಧ್ಯಕ್ಷರನ್ನಾಗಿ ಅನಂತರಾಂ ಅವರನ್ನು ಆಯ್ಕೆ ಮಾಡಲಾಗಿದೆ.ಶ್ರೀವಾಣಿ ವಿದ್ಯಾ ಕೇಂದ್ರದಲ್ಲಿ ಬುಧವಾರದಿಂದ (ಏ.25)ನಡೆಯುವ ಐದು ದಿನಗಳ ಸಂಗೀತೋತ್ಸವದಲ್ಲಿ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳನ್ನೂ ಸಂಜೆ ಸಂಗೀತ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿ.ಕೆ.ಅನಂತರಾಂ ಅವರಿಗೆ `ಕಲಾಭೂಷಣ~ ಬಿರುದನ್ನು ನೀಡಿ ಸನ್ಮಾನಿಸಲಾಗುವುದು.ಅದೇ ಕಾರ್ಯಕ್ರಮದಲ್ಲಿ ಕಲಾವಿದರಾದ ಎಂ.ಎಸ್.ಗೋವಿಂದಸ್ವಾಮಿ (ಪಿಟೀಲು), ಉಷಾ ರಾಮಮೂರ್ತಿ (ಗೋಟುವಾದ್ಯ), ಶಿವಮೂರ್ತಿ(ಗಮಕ), ಫಾಲಚಂದ್ರಶಾಸ್ತ್ರಿ (ವೇದ) ಮತ್ತು ಎಚ್.ಆರ್.ಉಷಾ (ಶಿಕ್ಷಣ) ಅವರನ್ನೂ ಗೌರವಿಸಲಾಗುವುದು.ಅನಂತರಾಂ ಕಿರುಪರಿಚಯ

ಬಿ.ಕೆ. ಅನಂತರಾಂ ಸಂಗೀತವನ್ನು ರಕ್ತಗತವಾಗಿ ಪಡೆದುಕೊಂಡವರು. ಪ್ರಸಿದ್ಧ ಗಾಯಕಿ ರಾಜಮ್ಮ ಕೇಶವಮೂರ್ತಿ ಮತ್ತು ಗಾಯಕ ಬಿ.ಎಂ.ಕೇಶವಮೂರ್ತಿಯವರ ಮಗ. ಬಾಲ್ಯದಿಂದಲೇ ಕರ್ನಾಟಕ ಸಂಗೀತದೆಡೆಗೆ ಆಕರ್ಷಿತರಾದರು. ಅಣ್ಣ (ಮೃದಂಗ ವಿದ್ವಾಂಸ) ಬಿ.ಕೆ.ಚಂದ್ರಮೌಳಿಯೂ ಸೇರಿದಂತೆ ಅವರ ಸೋದರರೆಲ್ಲಾ ಸಂಗೀತ ಕಲಾವಿದರೇ.ಕೊಳಲು ವಾದನವನ್ನು ಕಲಿಯಬೇಕೆಂಬ ಹಂಬಲವಿದ್ದರೂ ತಾಯಿ ರಾಜಮ್ಮ ಹೇಳಿಕೊಟ್ಟ ಗಾಯನದಿಂದ ಕಲಿಕೆ ಆರಂಭಿಸಿದರು. ನಂತರ ಟಿ.ಆರ್. ಮಹಾಲಿಂಗಂ ಶಿಷ್ಯರಾಗಿದ್ದ ಹಿರಿಯ ವೇಣುವಾದಕ ಸಿ.ಎಂ.ಮಧುರಾನಾಥ್ ಬಳಿ ಕೊಳಲು ವಾದನದ ಕಲೆ ಮತ್ತು ತಂತ್ರಗಳನ್ನು ಕಲಿತರು.

 

ಆಗಿನ ಕಾಲದ ಮುಂಚೂಣಿ ಕೊಳಲು ವಾದಕರಾಗಿದ್ದ ಬಿ.ಎನ್. ಸುರೇಶ್ ಮತ್ತು ಎಂ.ಆರ್.ದೊರೆಸ್ವಾಮಿ ಅವರಲ್ಲೂ ಕಲಿಕೆ ಮುಂದುವರೆಸಿ ಆ ವಾದ್ಯದ ಸೂಕ್ಷ್ಮತೆ ರೂಢಿಸಿಕೊಂಡರು.

 

ಅದಕ್ಕೆ ಪೂರಕವಾಗಿ ಹಿರಿಯ ಪಿಟೀಲು ವಾದಕರಾಗಿದ್ದ ಆನೂರು ಎಸ್.ರಾಮಕೃಷ್ಣವರಲ್ಲಿ ಕೆಲಕಾಲ ಅಧ್ಯಯನ ನಡೆಸಿ, ಹಿರಿಯ ಚೇತನ ಡಾ. ಆರ್.ಕೆ.ಶ್ರೀಕಂಠನ್ ಮತ್ತು ಸುಪ್ರಸಿದ್ಧ ವೇಣುವಾದಕ ಡಾ.ಎನ್.ರಮಣಿ ಅವರಿಂದಲೂ ಮಾರ್ಗದರ್ಶನ ಪಡೆದುಕೊಂಡರು.ದೇಶ-ವಿದೇಶಗಳಲ್ಲಿ ಕಛೇರಿಗಳನ್ನು ನೀಡಿದರು. ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದರಾಗಿಯೂ ಐಸಿಸಿಆರ್‌ನ ನೋಂದಾಯಿತ ಕಲಾವಿದರಾಗಿಯೂ ಅವರು ಗುರುತಾಗಿದ್ದಾರೆ.ಕಳೆದ ಒಂದೂವರೆ ದಶಕಗಳಿಂದ ತಮ್ಮ ಮಗ ಅಮಿತ್ ನಾಡಿಗ್ ಅವರೊಡನೆ ಯುಗಳ ವೇಣುವಾದನ ಕಛೇರಿಗಳನ್ನು ನೀಡುತ್ತಿದ್ದಾರೆ. ಕೊಳಲು ವಾದನವನ್ನು ಕಲಿಸುವ ಅವರು ಮಗ ಅಮಿತ್ ನಾಡಿಗ್ ಸೇರಿದಂತೆ ಕೆಲವು ಪ್ರತಿಭಾವಂತ ಕೊಳಲು ವಾದಕರನ್ನು ತಯಾರು ಮಾಡಿದ್ದಾರೆ.ವಂಶೀ ಸಂಗೀತ ಅಕಾಡೆಮಿ ಟಸ್ಟ್ ಹುಟ್ಟು ಹಾಕಿರುವ ಅವರು ಸಂಗೀತ ಶಿಬಿರ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ವಾರ್ಷಿಕ ಸಂಗೀತ ಸಮ್ಮೇಳನ, ಹಿರಿಯ ಕಲಾವಿದರಿಗೆ ಬಿರುದು ಸನ್ಮಾನ ನೀಡುವಂಥ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

 

ತಮ್ಮ ಮನೆಯ ಛಾವಣಿಯ ಮೇಲೆಯೇ ಚಿಕ್ಕ ಹಾಗೂ ಚೊಕ್ಕವಾದ ಸಭಾಂಗಣವನ್ನು ನಿರ್ಮಿಸಿ ಅದರಲ್ಲಿ ನಿರಂತರವಾದ ಸಂಗೀತ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.