ಅನಕ್ಷರತೆ ಅಭಿವೃದ್ಧಿಗೆ ಅಡ್ಡಿಯಾಗದು

7

ಅನಕ್ಷರತೆ ಅಭಿವೃದ್ಧಿಗೆ ಅಡ್ಡಿಯಾಗದು

Published:
Updated:

ಲಿಂಗಸುಗೂರ: ತಾಲ್ಲೂಕಿನ ಗೆಜ್ಜಲ ಗಟ್ಟಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪರಿಶಿಷ್ಟ ಪಂಗಡ(ಮಹಿಳೆ)ಗೆ ಮೀಸ ಲಾಗಿತ್ತು. ಮಹಿಳಾ ಮೀಸಲು ಸ್ಥಾನ ದಿಂದ ಗೆಲವು ಸಾಧಿಸಿದ್ದು ಹರ್ಷ ಮೂಡಿಸಿದೆ. ತಾವು ಅನಕ್ಷರಸ್ಥೆ ಎಂಬ ಕೊರಗು ಇದ್ದರೂ ತಮ್ಮ ಪತಿ ಮತ್ತು ಸಹೋದರರ ಸಹಕಾರದಿಂದ ಈ ಕ್ಷೇತ್ರ ಅಭಿವೃದ್ಧಿ ಮಾಡಿ ತೋರಿಸುವೆ. ಕ್ಷೇತ್ರದ ಅಭಿವೃದ್ಧಿಗೆ ಅನಕ್ಷರತೆ ಅಡ್ಡಿ ಬರುವುದಿಲ್ಲ ಎಂದು ಗೆಜ್ಜಲಗಟ್ಟಾ ಜಿಪಂ ಕ್ಷೇತ್ರದ ನೂತನ ಸದಸ್ಯೆ ದುರುಗಮ್ಮ ಗುಂಡಪ್ಪ ನಾಯಕ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.ಈ ಮುಂಚೆ 1995ರಲ್ಲಿ ಇದೇ ಕ್ಷೇತ್ರದಿಂದ ತಮ್ಮ ಪತಿ ಗುಂಡಪ್ಪ ನಾಯಕ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. ರಾಯಚೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರ ಅಂದಿನ ಅಭಿವೃದ್ಧಿ ಕೆಲಸಗಳು, ನಡೆ ನುಡಿಯಲ್ಲಿನ ಸರಳತೆ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕವಾಗಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕದಂತಹ ಹಲವು ಸಮಸ್ಯೆಗಳು ಕೇಳಿಬಂದಿವೆ. ಅಂತಹ ಸಮಸ್ಯೆಗಳಿಗೆ ಸ್ಪಂದಿಸಿ ಮಾದರಿ ಕ್ಷೇತ್ರವಾಗಿ ಮಾರ್ಪಡಿಸುವ ಆಸೆ ಹೊಂದಿದ್ದಾಗಿ ತಿಳಿಸಿದರು.ಕ್ಷೇತ್ರದ ಸರ್ಜಾಪುರ, ಯರಡೋಣಿ, ಹೊನ್ನಳ್ಳಿ, ಕಾಳಾಪುರ, ಕುಪ್ಪಿಗುಡ್ಡ ಸೇರಿದಂತೆ ಬಹುತೇಕ ಗ್ರಾಮಗಳ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಿದ್ದಾರೆ. ಈಗಾಗಲೆ ಪಕ್ಷದ ಹಿರಿಯ ಮುಖಂಡ ಶಾಸಕ ಅಮರೆಗೌಡ ಬಯ್ಯಾಪೂರ ಅವರು ರಾಜೀವಗಾಂಧಿ ಟೆಕ್ನಾಲಾಜಿ ಯೋಜನೆಯಡಿ ವಿಶೇಷ ಯೋಜನೆ ಮಂಜೂರ ಮಾಡಿಸಿದ್ದಾರೆ. ಕಾಮಗಾರಿ ಸ್ಥಗಿತಗೊಂಡಿದ್ದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೂಡಲೆ ಅನುಷ್ಠಾನಕ್ಕೆ ಯತ್ನಿಸುವುದಾಗಿ ಹೇಳಿದರು.ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ, ಗ್ರಂಥಾಲಯ, ಅಂಗನವಾಡಿ ಕೇಂದ್ರಗಳ ಕೆಲ ಸಮಸ್ಯೆಗಳ ಕುರಿತು ಮತದಾರರು ಗಮನಕ್ಕೆ ತಂದಿದ್ದಾರೆ. ರಾಂಪೂರ ಏತ ನೀರಾವರಿ ಯೋಜನೆ ವಿಸ್ತರಣೆ, ಸರ್ಕಾರದ ಹೊಸ ಹೊಸ ಯೋಜನೆಗಳನ್ನು ಕ್ಷೇತ್ರದ ಜನತೆಯ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಇರಾದೆ ಹೊಂದಿದ್ದೇನೆ. ಅಧಿಕಾರಿ ಗಳು, ಸದಸ್ಯರ ಸಹಕಾರ ಕೂಡ ಅಗತ್ಯವಾಗಿದೆ ಎಂದು ತಮ್ಮ ಕಾರ್ಯಸೂಚಿಗಳ ಮಾಹಿತಿ ನೀಡಿದರು.ನಿರೀಕ್ಷೆ:  ಗೆಜ್ಜಲಗಟ್ಟಾ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದ ಸದಸ್ಯರು ಯಾರೊಬ್ಬರು ತಮ್ಮ ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗೆದ್ದು ಹೋದವರು ಮರಳಿ ತಮ್ಮ ಸಮಸ್ಯೆಗಳನ್ನು ಕೇಳುವುದು ಇರಲಿ, ಗ್ರಾಮದತ್ತ ಕೂಡ ಸುಳಿದಿಲ್ಲ. ಎಲ್ಲ ಸೌಲಭ್ಯಗಳು ನಮಗೆ ಬೇಡ ಕನಿಷ್ಠ ಮಟ್ಟದ ಅಗತ್ಯ ಸೌಲಭ್ಯಗಳು ತಮಗೆ ದೊರೆತಿಲ್ಲ. ನೂತನ ಸದಸ್ಯರು ತಮ್ಮ ನಿರೀಕ್ಷೆಗಳಿಗೆ ಸ್ಪಂದಿಸುವರೆ ಎಂಬುದು ಪ್ರಶ್ನೆಯಾಗಿದೆ ಎಂದು ಅಮರಪ್ಪ ಹೊನ್ನಳ್ಳಿ, ಹನುಮಂತ ಫೂಲಭಾವಿ, ಸಾಬಣ್ಣ ಕುಪ್ಪಿಗುಡ್ಡ ಮತ್ತಿತರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದಾರೆ.  

ಬಿ.ಎ ನಂದಿಕೋಲಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry