ಅನಕ್ಷರಸ್ಥ ಪೋಷಕರು; ಚುರುಮುರಿ, ಉಪ್ಪಿಟ್ಟು ತಯಾರಿ ಕಾಯಕ:ಡಬ್ಬಿ ಚಾ ಅಂಗಡಿ ಹುಡುಗನಿಗೆ ಶೇ 89 ಅಂಕ!

7

ಅನಕ್ಷರಸ್ಥ ಪೋಷಕರು; ಚುರುಮುರಿ, ಉಪ್ಪಿಟ್ಟು ತಯಾರಿ ಕಾಯಕ:ಡಬ್ಬಿ ಚಾ ಅಂಗಡಿ ಹುಡುಗನಿಗೆ ಶೇ 89 ಅಂಕ!

Published:
Updated:
ಅನಕ್ಷರಸ್ಥ ಪೋಷಕರು; ಚುರುಮುರಿ, ಉಪ್ಪಿಟ್ಟು ತಯಾರಿ ಕಾಯಕ:ಡಬ್ಬಿ ಚಾ ಅಂಗಡಿ ಹುಡುಗನಿಗೆ ಶೇ 89 ಅಂಕ!

ಹುಬ್ಬಳ್ಳಿ: ಈತ ರುದ್ರೇಶ. ಅಪ್ಪ- ಅಮ್ಮ ಅನಕ್ಷರಸ್ಥರು. ಕಡುಬಡತನ. ಡಬ್ಬಿ ಚಾ ಅಂಗಡಿಯೇ ಆ ಕುಟುಂಬಕ್ಕೆ ಜೀವನಾಧಾರ. ಅಲ್ಲಿ ಬೆಳಿಗ್ಗೆ ಮತ್ತು ಸಂಜೆ ಗಿರ್ಮಿಟ್, ಬಳ್ಳೊಳ್ಳಿ ಚುರುಮುರಿ, ಉಪ್ಪಿಟ್ಟು ತಯಾರಿ, ತಟ್ಟೆ, ಗ್ಲಾಸ್ ತೊಳೆಯುವುದು ಆತನ ಕಾಯಕ. ಹಗಲು ಶಾಲೆ. ಹೀಗೆ ಬಡತನದ ಬೇಗೆಯಲ್ಲಿ ಪೆನ್ನು ಹಿಡಿದ ಈತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 89 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ!ರುದ್ರೇಶನ ತಂದೆ ಈರಪ್ಪ ನಾಯಕ. ತಾಯಿ ಸೀತಮ್ಮ. ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೋಟಿಪುರದವರು. ಈರಪ್ಪ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಆರಿಸಿಕೊಂಡದ್ದು ವಾಚ್‌ಮನ್ ಕೆಲಸ. ಇಲ್ಲಿನ ರೇಣುಕಾ ನಗರದಲ್ಲಿ ಕಳೆದ 28 ವರ್ಷಗಳಿಂದ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ಈ ದಂಪತಿ ಮಕ್ಕಳ ಜೊತೆ ನೆಲೆಸಿದ್ದಾರೆ.

 

ಮನೆ ಸಮೀಪವಿರುವ ಬಸ್ ನಿಲ್ದಾಣ ಮುಂಭಾಗದಲ್ಲಿ ಡಬ್ಬಿ ಚಹಾ ಅಂಗಡಿಯಲ್ಲಿ ಬರುವ ಲಾಭ ನಂಬಿ ಬದುಕುತ್ತಿದ್ದಾರೆ. ದಂಪತಿಯ ನಾಲ್ವರು ಹೆಣ್ಣುಮಕ್ಕಳ ಪೈಕಿ ಮೂವರಿಗೆ ಮದುವೆಯಾಗಿದೆ. ಒಬ್ಬನೇ ಮಗ ರುದ್ರೇಶನ ಈ ಸಾಧನೆ ಕಂಡು `ಮುಂದೇನು?~ ಎಂಬ ಚಿಂತೆ ಈ ಪೋಷಕರನ್ನು ಕಾಡತೊಡಗಿದೆ.ಸ್ಥಳೀಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ರುದ್ರೇಶ ಈ ಸಾಧನೆ ಮಾಡಿದ್ದಾನೆ. ಈ ವಿದ್ಯಾಕೇಂದ್ರದಿಂದ ಹೊರಬಂದ ಮೊದಲ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನಲ್ಲಿ ತೇರ್ಗಡೆಗೊಂಡಿರುವ ಈತ ಶಾಲೆಗೆ ಮೊದಲಿಗ. ರುದ್ರೇಶ ಕನ್ನಡ ವಿಷಯದಲ್ಲಿ 111, ಇಂಗ್ಲಿಷ್ 92, ಹಿಂದಿ 96, ಗಣಿತ 86, ವಿಜ್ಞಾನ 77, ಸಮಾಜ ವಿಜ್ಞಾನ 93 ಸೇರಿ ಒಟ್ಟು 625ರಲ್ಲಿ 555 ಅಂಕ ಗಳಿಸಿದ್ದು, ಶೇಕಡಾ 89 ಅಂಕ ಪಡೆದಿದ್ದಾನೆ.`ನನ್ನ ಪಾಲಿಗೆ ಡಬ್ಬಿ ಅಂಗಡಿಯಲ್ಲಿ ಕೆಲಸ ಮತ್ತು ಓದು ಎರಡೂ ಮುಖ್ಯವಾಗಿತ್ತು. ಹೀಗಾಗಿ ಬೆಳಿಗ್ಗೆ 6ರಿಂದ 9, ಸಂಜೆ 6ರಿಂದ 8.30 ಗಂಟೆವರೆಗೆ ಅಂಗಡಿಯಲ್ಲಿ ಕೆಲಸ ಮಾಡಲೇಬೇಕಿತ್ತು. ಅಪ್ಪನಿಗೆ ಅನಾರೋಗ್ಯ ಇದ್ದುದರಿಂದ ಅಮ್ಮನಿಗೆ ಸಾಥ್ ನೀಡಬೇಕಿತ್ತು. ನಮ್ಮ ಬಡತನ ಕಂಡು ಸ್ಥಳೀಯ ಸುವರ್ಣ ದೀಕ್ಷಿತ್ ಎಂಬವರು ನನ್ನ ಏಳನೇ ತರಗತಿಯಿಂದ ಈವರೆಗೆ ಪುಸ್ತಕ, ಉಡುಗೆ, ಶಾಲಾ ಶುಲ್ಕವನ್ನು ನೀಡಿದ್ದಾರೆ. ಅವರ ಸಹಾಯಹಸ್ತವೇ ನನ್ನ ಸಾಧನೆಗೆ ಕಾರಣ~ ಎನ್ನುತ್ತಾನೆ ರುದ್ರೇಶ.`ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಗಳಲ್ಲಿ ಬೆಳಿಗ್ಗೆ 4 ಗಂಟೆಗೆ ಎದ್ದು ಮತ್ತು ರಾತ್ರಿ 11.30 ಗಂಟೆವರೆಗೆ ತಯಾರಿ ನಡೆಸಿದ್ದೆ. ನಮ್ಮ ಶಾಲೆಯಲ್ಲಿ ಪ್ರಯೋಗಾಲಯ. ಗ್ರಂಥಾಲಯ ಸೌಲಭ್ಯ ಇಲ್ಲ. ತೀರಾ ಬಡತನ ಇದ್ದುದರಿಂದ ಟ್ಯೂಷನ್ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಸ್ಫೂರ್ತಿ ನೀಡಿದರು. ಟ್ಯೂಷನ್ ಇರುತ್ತಿದ್ದರೆ ಶೇ. 95 ಅಂಕ ಗಳಿಸುತ್ತಿದ್ದೆ~ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾನೆ ರುದ್ರೇಶ್.`ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಬೇಕು. ಭವಿಷ್ಯದಲ್ಲಿ ಎಂಜಿನಿಯರ್ ಆಗಬೇಕು ಎಂಬ ಆಸೆ ಇದೆ. ಯಾರಾದರೂ ಆರ್ಥಿಕ ಸಹಾಯ ನೀಡಿದರೆ ಮಾತ್ರ ಮುಂದೆ ಓದಲು ಸಾಧ್ಯ~ ಎನ್ನುತ್ತಾನೆ ರುದ್ರೇಶ್. ಆತನ ಪೋಷಕರೂ (ಚಾ ಅಂಗಡಿ 0836-2232112) ಅದೇ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry