ಬುಧವಾರ, ಮೇ 12, 2021
22 °C

ಅನಕ್ಷರಸ್ಥ ಮಹಿಳೆಯರ ದಿಟ್ಟ ದಾರಿ

ಕೆ. ನೀಲಾ Updated:

ಅಕ್ಷರ ಗಾತ್ರ : | |

ಅನಕ್ಷರಸ್ಥ ಮಹಿಳೆಯರ ದಿಟ್ಟ ದಾರಿ

ಚಳಿ ಅಂದ್ರೆ ಅದು ಚಳಿನೇ. ಗಾಢ ಕತ್ತಲನ್ನೂ ಸೀಳಿ ರೋಂಯ್ಯನೇ ಮುಖಕ್ಕಪ್ಪಳಿಸುವ ಮುಖವಿಲ್ಲದ ತಣ್ಣನೇ ಗಾಳಿಗೆ ಏನಂತ ಬಯ್ಯುವುದು? ಗಾಡಿಯ ಹ್ಯಾಂಡಲ್ ಹಿಡಿದ ಕೈಗಳು ಜೋಮು ಬಂದಂತೆ ಮರಗಟ್ಟುತ್ತಿವೆ. ಹಿಂದೆ ಕುಳಿತ ಚಂದಮ್ಮ ಜರಾ ಗಾಡಿ ನಿಲ್ಲಸ್ರಿ ಅಕ್ಕಾರೆ, ತಾರಿ ಕಟ್ಟಸ್ಕೊತಿನಿ ಅಂದಳು.ಏನದು ತಾರಿ? ತಾರಿ ಎಂದರೆ ಬಿರ್ಯಾನಿ ಊಟ. ಮುಂಜಾನೆಯ ನಾಷ್ಟಾ ಈಗಾಗಲೇ ಆಗಿದೆ. ಅಂದರೆ ನಸುಕು ಹೊತ್ತಿನಲ್ಲಿಯೇ ಇವರಿಗಾಗಿ ಕಾಸಿಂ ಸಾಬಣ್ಣ ತನ್ನ ತಟ್ಟಿ ಹೊಟೆಲ್ ತೆರೆದು ಬಿಸಿ ಬಿಸಿ ಭಜಿ, ಪಕೋಡಾ, ಪೂರಿ ಮತ್ತು ಗಂಟಲಿಗೆ ಚುರ‌್ರೆನ್ನುವಷ್ಟು ಬೆಚ್ಚಗಿನ ಚಹಾ ಮಾಡಿಡುತ್ತಾನೆ.ನಡು ರಾತ್ರಿಯಲ್ಲಿಯೇ ಎದ್ದು ಮುಖ-ಗಿಕ ತೊಳೆದುಕೊಂಡು ಸುಲಗಾಯಿ ಕಟ್ಟಿಕೊಳ್ಳಲು ಹಗ್ಗ-ಕುಂಚಗಿ-ಸಿಂಬಿ ತಗೊಂಡು ಭರ-ಭರಾ ಹೊಂಟರೆಂದರೆ ಕಾಸಿಂ ಸಾಬಣ್ಣನ ಹೊಟೆಲ್ ತನಕ ಬರುವಷ್ಟರಲ್ಲಿ ನಡುರಾತ್ರಿ ಜಾರಿ ನಸುಕೆಂಬುದು ಎದ್ದು ನಿಂತಿರುತ್ತದೆ.

 

ಕನಿಷ್ಠ ಹದಿನೈದರಿಂದ ಇಪ್ಪತ್ತು ಜನ ಹೆಣ್ಣುಮಕ್ಕಳಿವರು. ಕಾಸಿಂ ಸಾಬಣ್ಣ ಮಾಡಿದ ನಾಷ್ಟಾವನ್ನು ಡಬಲ್ ತಿಂದು, ಗರಂ ಚಹಾ ಕುಡಿದು ಹೊರಡುತ್ತಾರೆ. ಈ ಹೆಣಮಕ್ಕಳ್ಯಾರಿಗೂ ಅಕ್ಷರವೆಂಬುದರ ದರ್ಶನವೇ ಆಗಿಲ್ಲ. ಆದರೂ, ಸಣ್ಣ ನೋಟ್ಬುಕ್ಕಿನಲ್ಲಿ ಬಿಲ್ಲಿನ ಬಾಕಿಯನ್ನು ನೀಟಾಗಿ ಬರೆಸುತ್ತಾರೆ.ಬರೆಯುದೆಂದರೆ ಇಲ್ಲಿ ಗೆರೆ ಎಳೆಯುವುದು. ಅಲ್ಲಿಂದ ಇವರು ಸುಲಗಾಯಿ ಹೊಲದವರೆಗೂ ಥೇಟ್ ಪ್ರಭಾತಫೇರಿಯಂತೆ ಹೊರಡುತ್ತಾರೆ. ಇವರ ಅವಸರಕ್ಕೆ, ನಡಿಗೆಯ ಧಿಗಿ-ಧಿಮಿತಕ್ಕೆ ಗೊರಕೆ ಹೊಡೆಯುತ್ತಿರುವ ಸೂರ್ಯನೇ ಎಚ್ಚರವಾಗಬೇಕು.

ಈ ಹೆಣ್ಣುಮಕ್ಕಳ ಬಗ್ಗೆ ಹೇಳಬೇಕಾದುದು ಬಹಳ ಇದೆ. ಖಾಸಗೀಕರಣ ಉದಾರೀಕರಣ ಜಾಗತೀಕರಣವು ಈ ದುಡಿದುಣ್ಣುವ ಹೆಣ್ಣುಮಕ್ಕಳ ಕೆಲಸವನ್ನೂ ಕಸಿದುಕೊಂಡಿದೆ.ಗುಲ್ಬರ್ಗಾ ನಗರದ ರಾಮಜೀನಗರದ ಕೊಳಚೆ ಪ್ರದೇಶವಾಸಿಗಳಾದ ಈ ಹೆಣ್ಣುಮಕ್ಕಳು ಪೂರಾ ಕಟ್ಟಡ ಕಾರ್ಮಿಕರು. ಇಪ್ಪತ್ತು ವರ್ಷಗಳ ಹಿಂದೆ ಬೇಕಾಗು ವಷ್ಟು ಕೆಲಸ ಸಿಗುತ್ತಿತ್ತು. ಈಗ ಬಹಳಷ್ಟು ಕೆಲಸಕ್ಕೆ ಯಂತ್ರಗಳು ಬಂದಿವೆ.

 

ಲಿಫ್ಟ್ ಮನ್, ಸಿಮೆಂಟ್ ಕಂಕರ್, ಉಸುಕು ಒಟ್ಟುಗೂಡಿಸುವ ಮಿಕ್ಸರ್ ಮನ್‌ಗಳು ನೂರಾರು ಜನರ ಕೆಲಸ ಮಾಡುತ್ತವೆ.  ಕಡಿಮೆ ಕೂಲಿಗೆ ಇತರೆ ರಾಜ್ಯಗಳ ಕಾರ್ಮಿಕರೂ ಬರುತ್ತಿದ್ದಾರೆ.ಅಕ್ಷರ ಜ್ಞಾನವಿಲ್ಲ. ಹಳ್ಳಿಯಲ್ಲಿ ಅಂಗೈಯಗಲ ಹೊಲ ಕೂಡ ಇಲ್ಲ. ಏನು ಮಾಡುವುದು? ಕೆಲಸಕ್ಕಾಗಿ ಚೌಕನಲ್ಲಿ ಕಾದು ಕಾದು ಸುಸ್ತಾಗಿ ಬರಿಗೈಯಲ್ಲಿ ಹೊರಳಿ ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.ಕೆಲಸ ಸಿಕ್ಕರೂ ವಾರದಲ್ಲಿ ಮೂರು ನಾಲ್ಕು ದಿನಗಳು ಮಾತ್ರ. ಉಳಿದ ದಿನಗಳು ಹೊಟ್ಟೆಗೆ ಏನು ತಿನ್ನುವುದು? ಗಂಡನ ಅರ್ಧ ಕೂಲಿ ಮನೆಗೆ ಬಂದರೆ ಅದೇ ಸೌಬಾಗ್ಯ! ಜೀವನಾವಶ್ಯಕ ವಸ್ತುಗಳ ರೇಟು ಏರುತ್ತಲೇ ಇದೆ. ಹೇಗೆ ಬದುಕುವುದು? ಅನೇಕ ಹಳ್ಳಿಗಳಿಂದ ಕೃಷಿ-ಕೂಲಿ ಕಾರ್ಮಿಕರು ಮುಂಬೈ-ಪುಣೆಗೆ ವಲಸೆ ಹೋಗುತ್ತಾರೆ.ಆದರೆ ರಾಮಜೀನಗರದ ಹೆಣ್ಣುಮಕ್ಕಳು ಇದ್ದ ಊರಲ್ಲಿಯೇ ಬದುಕಿ ಬಾಳುವ ಹೊಸ ಹಾದಿ ಹುಡುಕಿದರು. ಅದೇನೆಂದರೆ ಚಳಿಗಾಲದ ಮೂರು ತಿಂಗಳು ಸುಲಗಾಯಿ ಮಾರುವುದು. ಭರ್ತಿ ಆದಾಯ ತರುವ ವ್ಯಾಪಾರ.ಏನೀ ಸುಲಗಾಯಿ?

ಉತ್ತರ ಕರ್ನಾಟಕದಲ್ಲಿ ಕಬ್ಬು, ತೊಗರೆ, ಬತ್ತ, ಜೋಳದೊಂದಿಗೆ ಕಡಲೆಯನ್ನೂ ಬೆಳೆಯುತ್ತಾರೆ. ತೊಗರಿ ಇಳುವರಿ ಬರಲು ಆರು ತಿಂಗಳಾದರೆ ಕಡಲೆಗೆ ನಾಲ್ಕೇ ತಿಂಗಳು ಸಾಕು. ಕಡಲೆಯನ್ನು ಇನ್ನೂ ಹಸಿ ಇರುವಾಗಲೇ ತಿನ್ನಲು ಬಳಸುತ್ತಾರೆ. ರುಚಿಕಟ್ಟಾದ ಪೌಷ್ಠಿಕಾಂಶಯುಕ್ತ ಈ ಕಡಲೆಯು ಹಸಿರಿರುವಾಗಲೇ ತಿನ್ನುವುದಕ್ಕೆ ನಮ್ಮ ಕಡೆ ಎಳ್ಳಮವಾಸ್ಯೆಯ ಸಂದರ್ಭ ಸರಿಯಾದುದು.ಅಂದರೆ ಭರ್ತಿ ಚಳಿಗಾಲ. ನವೆಂಬರ್ ಡಿಸೆಂಬರ್ ಮತ್ತು ಜನೆವರಿ. ಒಂದು ರೀತಿಯಲ್ಲಿ  ಭೂಮಿ ಹಬ್ಬದಂಥ ಆಚರಣೆಯುಳ್ಳ ಎಳ್ಳಮವಾಸ್ಯೆಯ ಹೊತ್ತಿನಲ್ಲಿ ಕಬ್ಬು, ಶೇಂಗಾದೊಂದಿಗೆ ಹಸಿಗಡಲೆ ಅಂದರೆ ಸುಲಗಾಯಿ ತಿನ್ನುವುದೇ ಒಂದು ಅಪೂರ್ವ ಸಂಭ್ರಮ. ಹಸಿ ಸುಲಗಾಯಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಹೆಚ್ಚಿನ ಪೌಷ್ಠಿಕಾಂಶವೂ ದೊರೆಯುತ್ತದೆ.ಯಾವ ಜಾಗತೀಕರಣವು ದುಡಿಯುವವರ ಕೈಯಿಂದ ತುತ್ತು ಕಸಿಯಿತೋ ಅದೇ ಜಾಗತೀಕರಣಕ್ಕೆ ಸವಾಲು ಹಾಕಿ ಸಾವಿರಾರು ಹೆಣ್ಣುಮಕ್ಕಳು ವರ್ಷದ ಮೂರು ತಿಂಗಳು ಸುಲಗಾಯಿ ವ್ಯಾಪಾರ ಮಾಡುತ್ತಾರೆ. ಇದರಿಂದಾಗಿ ಗುಲ್ಬರ್ಗಾದಲ್ಲಿ ಬೇಕೆನಿಸಿದವರ ಮನೆತನಕ ಸುಲಗಾಯಿ ಮುಟ್ಟುತ್ತದೆ.ಏನಿದು ಸುಲಗಾಯಿ ಕೆಲಸ?

ಸುಲಗಾಯಿ ಹೊಲವನ್ನು ಮೂರು ತಿಂಗಳವರೆಗೆ ಅಡಹಾಕಿಕೊಂಡ ಗುತ್ತಿಗೆದಾರ ಮಹಿಳೆಯರು ಮುಂದೆ ಹೋಗಿ ಸುಲಗಾಯಿ ಕಿತ್ತಿ ದೊಡ್ಡ ಗುಂಪೆ ಮಾಡುತ್ತಾರೆ. ಏಳರ ತರುವಾಯ ಹೊಲಕ್ಕೆ ಗುಂಪೆ ಮಾಡಿದ ಸುಲಗಾಯಿ ಹೋಲ್ಸೇಲ್ ಖರೀದಿ ಮಾಡಲು ಮಾರಾಟಗಾರರು ಬರುತ್ತಾರೆ. ಅವರಲ್ಲಿ ಗಂಡಸರ ಸಂಖ್ಯೆ ಬಹಳ ಕಡಿಮೆ.ಅನೇಕ ಜನ ಸಾಲು ಸಾಲು ಎಂಬಂತೆ ಒಂದೊಂದು ಪೆಂಡಿ ಸುಲಗಾಯಿಯನ್ನು ಕೊಂಡುಕೊಳ್ಳು  ತ್ತಾರೆ. ಹೆಚ್ಚು ಮಾರುವ ತಾಖತ್ತಿರುವವರು ನಾಲ್ಕು ಐದು ಪೆಂಡಿಯನ್ನು ಖರೀದಿಸುತ್ತಾರೆ.ಈ ಪ್ರಕಾರ ಸುಮಾರು ಏಳರಿಂದ ಹನ್ನೊಂದು ಗಂಟೆಯವರೆಗೆ ಹೋಲ್‌ಸೇಲ್ ನಡೆದೇ ಇರುತ್ತದೆ. ಹನ್ನೆರಡು ಗಂಟೆಯ ನಂತರ ಬರುವ ಜನ ಕಡಿಮೆಯಾಗುತ್ತಾರೆ. ಆಗ ಈ ಮುಖ್ಯ ಗುತ್ತಿಗೆದಾರ ಮಹಿಳೆಯರು ದಾರಿಯಲ್ಲಿ ತಾವು ತಂದ ತಾರಿ(ಬಿರ್ಯಾನಿ)ಯನ್ನು ಬಿಚ್ಚಿ ಊಟ ಮಾಡುತ್ತಾರೆ. ಅಷ್ಟರಲ್ಲಿ ಇವರು ನೇಮಕ ಮಾಡಿದ ದೊಡ್ಡ ಆಟೋ (ಟಂಟಂ) ಬರುತ್ತದೆ. 

 

ದಿಟ್ಟ ದಾರಿ....

ಉಂಡು ಒಂದರ್ಧ ಗಂಟೆ ಬೆನ್ನು ನೆಲಕ್ಕೆ ಕೊಟ್ಟು ನಕ್ಕು ನಗಿಸುವ ಗಮ್ಮತ್ತಿನಲ್ಲಿ ಮತ್ತೆ ಎದ್ದು ಹೊರಡುತ್ತಾರೆ. ಮನೆಗಲ್ಲ. ಸುಪರ್ ಮಾರುಕಟ್ಟೆಗೆ. ಈಗ ಇವರೂ ಚಿಲ್ಲರೆ ವ್ಯಾಪಾರಿಗಳೇ ಆಗಿ ಒಂದೊಂದು ಪೆಂಡಿ ಸುಲಗಾಯಿಯನ್ನು ತಗೊಂಡು ಸುಪರ್ ಮಾರುಕಟ್ಟೆಯಲ್ಲಿ ತಮ್ಮ ನಿಗದಿತ ಸ್ಥಳಕ್ಕೆ ಬಂದು ಕೂತು ವ್ಯಾಪಾರ ಮಾಡುತ್ತಾರೆ. ಸಂಜೆ ಹೊತ್ತಿನವರೆಗೂ ವ್ಯಾಪಾರ ಮಾಡಿಕೊಂಡು ನಗುತ್ತ ಕೆಲೆಯುತ್ತ  ಮನೆಗೆ ಹೊರಡುತ್ತಾರೆ.ಅದ್ಭುತ ಆರ್ಥಿಕ ಸಿದ್ಧಾಂತ...

ಸುಲಗಾಯಿ ವ್ಯಾಪಾರ ಇಷ್ಟೇ ಆಗಿದ್ದರೆ ಬರೆವ ಅವಶ್ಯಕತೆ ಏನಿತ್ತು? ಇದರ ಹಿಂದೆ ಈ ಅನಕ್ಷರಸ್ಥ ಲೋಕದ ಮಹಿಳೆಯರ ಅದ್ಭುತ ಎಕಾನಾಮಿ ಇದೆ. ಇವರು ನಗರದ ಸಮಿಪವಿರುವ ಕಡಲೆ ಬಿತ್ತಿದ ಹೊಲವನ್ನು ಮೊದಲು ಗುರುತಿಸುತ್ತಾರೆ. ಒಂದು ಎಕರೆಗೆ 12000ರಿಂದ 15000 ರೂಪಾಯಿ ವರೆಗೂ.ಹೊಲದ ಮಾಲೀಕ ಒಂದು ಬಾರಿ ಇವರಿಗೆ ಇಂತಿಷ್ಟು ಎಕರೆ ಹೊಲವನ್ನು ಮೂರು ತಿಂಗಳವರೆಗೆ ಅಡ ಹಾಕಿದನೆಂದರೆ ಮುಗಿಯಿತು. ಅಷ್ಟು ಹಣ ಕೊಟ್ಟು ಇಡೀ ಮೂರು ತಿಂಗಳು ಇವರೆ ಆ ಹೊಲದ ಯಜಮಾನರು. ಅಂದರೆ ಹಸಿಗಡಲೆ ಮಾರುವುದು, ಮತ್ತು ಕೊನೆಯಲ್ಲಿ ಕಡಲೆ ಒಣಗಿ ಉಳಿದರೆ ಅದು ಸಹ ರಾಶಿ ಮಾಡಿಕೊಂಡು ಮಾರಿಕೊಳ್ಳುವುದು ಅಥವಾ ತಾವೆ ಹಂಚಿಕೊಳ್ಳುವರು. ಹೊಲದ ಮಾಲೀಕನಿಗೂ ಭರಪೂರ ಲಾಭ. ಇವರಿಗೂ ಲಾಭ. ಹಾಗೆಯೇ ಚಿಲ್ಲರೆ ವ್ಯಾಪಾರಿಗಳಿಗೂ ಲಾಭ.ಒಂದು ಎಕರೆಯಲ್ಲಿ ಒಂದು ಆರು ಕಿಲೊ ಕಡಲೆ ಬೀಜ ಉತ್ತಮ ತಳಿಯದ್ದು ಬಿತ್ತಿದರೆ ಕನಿಷ್ಠ 8 ಚೀಲವಾದರೂ ಕಡಲೆ ಇಳುವರಿ ಕೊಡುತ್ತದೆ. ಬೆಳೆಯಲು ಒಟ್ಟೂ ಖರ್ಚು ಮೂರುವರೆ ಸಾವಿರದಿಂದ ನಾಲ್ಕು ಸಾವಿರದಷ್ಟು.

 

ಮಾಮೂಲಿ ಗುಣಮಟ್ಟದ ತಳಿಯಾದರೆ ಖರ್ಚು ಅಷ್ಟೆ ಬರುತ್ತದೆ. ಆದರೆ ಬಾಜಾರಿನ ರೇಟಿನಲ್ಲಿ  ವ್ಯತ್ಯಾಸವಿರುತ್ತದೆ. ಉತ್ತಮ ತಳಿಗೆ ಪ್ರತಿ ಕ್ವಿಂಟಾಲಿನ ಬೆಲೆ ರೂ 2200 ರಿಂದ ರೂ 2800 ಇದ್ದರೆ ಸಾಧಾರಣ  ತಳಿಯ ಪ್ರತಿ ಕ್ವಿಂಟಾಲಿಗೆ ರೂ 1600 ರೂ 1800.ಸಾಮಾನ್ಯವಾಗಿ ಪಕ್ಕಾ ಗ್ರಾಮಗಳಲ್ಲಿರುವ ರೈತರಿಗೆ ಒಂದಾದ ಕೂಡಲೆ ಒಂದು ಬೆಳೆ ತೆಗೆಯುವಲ್ಲಿ ಆಸಕ್ತಿ. ಆದರೆ ನಗರದ ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೆ ಅಂತಹ ಆಸಕ್ತಿ ಕಡಿಮೆ. ಅದರಲ್ಲಿಯೂ ಕೇವಲ ಒಕ್ಕಲುತನದ ಮೇಲೆಯೇ ನಿರ್ಭರವಿಲ್ಲದ ರೈತರು ಕೆಲವು ಎಕರೆ ಹೊಲದಲ್ಲಿ ಬಿತ್ತಿದ ಕಡಲೆಯನ್ನು ಪ್ರತಿ ವರ್ಷವೂ ಸುಲಗಾಯಿ ಗುತ್ತಿಗೆದಾರರಿಗೆ ಅಡ ಹಾಕುವಲ್ಲಿ ಆಸಕ್ತನಾಗಿರುವುದು ಗಮನಾರ್ಹ.ಏಕೆಂದರೆ ಒಮ್ಮೆ ಬೀಜ ಬಿತ್ತಿದರಾಯ್ತು ಮುಂದೆ ರಾಶಿ ಮಾಡುವ, ಮಾರಾಟ ಮಾಡುವ ಜವಾಬ್ದಾರಿ ಇರುವುದಿಲ್ಲ. ಮತ್ತು ಮಾರಾಟದ ಸಮಯದಲ್ಲಿ ಧಾರಣಿಯಲ್ಲಿನ ಏರಿಳಿತದ ಭಯವಿರುವುದಿಲ್ಲ. ಅಷ್ಟಕ್ಕೂ ಮಾಮೂಲಿ ಬೀಜ ಬಿತ್ತನೆ ಮಾಡಿದ್ದರೆ ಕಡಲೆ ಒಣಗಿದ ಮೇಲೆ ಮಾರಾಟ ಮಾಡುವಾಗ ಬರುವ ರೇಟಿಗಿಂತಲೂ ಈ ಹೆಣ್ಣುಮಕ್ಕಳು ಕೊಡುವ ರೇಟು ಹೆಚ್ಚು ಕಡಿಮೆ ಸರಿತೂಗಿಸುತ್ತದೆ. ಉತ್ತಮ ತಳಿಯ ಬೀಜ ಬಿತ್ತಿದರೆ ಮಾತ್ರ ಸ್ವಲ್ಪ ಕಷ್ಟ.ಅಷ್ಟಕ್ಕೂ ನಗರದ ಸುತ್ತು ಮುತ್ತ ಇರುವ ರೈತರು ಬೇರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರೆ. ಪಕ್ಕಾ ರೈತರು ಕಡಿಮೆ. ಬೆಳೆಯ ನಡುವಲ್ಲಿ ಸೊಳ್ಳು ಇದ್ದರೆ ಸುಲಗಾಯಿ ಸೂಡಿನ ನಡುವಲ್ಲಿ ಸೆಟ್ಟಾಗಿ ಹೋಗುವುದು.ಹೀಗಾಗಿ ಗುಲ್ಬರ್ಗಾ ನಗರದ ತೀರ ಸಮೀಪವಿರುವ ಹಳ್ಳಿಗಳಾದ ಮಾಲಗತ್ತಿ, ಹಾಗರಗಿ, ಅಜಾದಪೂರ, ತೆಗನೂರು, ಉಪಳಾಂವ್, ಔರಾದ, ಭೋಸಗಾ, ಸಿಂದಗಿ, ಡಬರಾಬಾದಿ, ಹಡಗಿಲ, ಶರಣಸಿರಸಗಿ, ಕುಸನೂರು, ಕಪನೂರು ಮುಂತಾದ ಹಳ್ಳಿಗಳಲ್ಲಿನ ರಸ್ತೆ ಬದಿಯ ಹೊಲಗಳಲ್ಲಿ ಈ ಹೆಣ್ಣುಮಕ್ಕಳು ಪ್ರತಿ ವರ್ಷವು ಬೆಳೆ ನೋಡಿ ಗುತ್ತಿಗೆ ಹಿಡಿಯುತ್ತಾರೆ.ಚಂದಮ್ಮನ ನೇತೃತ್ವದಲ್ಲಿ ಹದಿನೈದು ಜನ ಹೆಣ್ಣುಮಕ್ಕಳು. ಇವರಂತೆ ಅನೇಕ ಗುಂಪುಗಳಿವೆ. ಜನವಾದಿ ಮಹಿಳಾ ಸಂಘಟನೆ ಮತ್ತು ರಮಾಬಾಯಿ ಮಹಿಳಾ ಮಂಡಳವನ್ನು ಕಳೆದ ಹದಿನೆಂಟು ವರ್ಷಗಳಿಂದ ತಾವೆ ಸ್ವತ: ಮನೆಯ ಆರ್ಥಿಕ ನಿರ್ವಹಣೆಯಿಂದ ಎಲ್ಲ ಕೆಲಸನ್ನು ಮಾಡುತ್ತಾರೆ. ಇವರ ಟೀಮಿನಲ್ಲಿ ಒಬ್ಬ ಗಂಡಸು ಮಾತ್ರ ಇರುತ್ತಾನೆ.ಪ್ರತಿ ವರ್ಷವೂ ಒಂದೋ ಹೊಲದ ರೈತರೇ ಇವರಿದ್ದ ಓಣಿಗೆ ಬರುವರು. ಇಲ್ಲವೆ ಇವರೇ ಕೆಲವು ಹೊಲಗಳಿಗೆ ಭೇಟಿ ಕೊಡುತ್ತಾರೆ. ನೋಡಿದ ಕೂಡಲೇ ಹಸಿಗಡಲೆ ಹೇಗಿದೆ ಎಂದು ಗುರುತಿಸಿ ಗುತ್ತಿಗೆ ಪಡೆಯುತ್ತಾರೆ.ಇವರು ಹೊಲ ಹಿಡಿದದ್ದು ಗೊತ್ತಾದ ಕೂಡಲೆ ಸುಲಗಾಯಿ ಮಾರುವವರು ನಿರಂತರ ಸಂಪರ್ಕ ಇಟ್ಟುಕೊಂಡು ಖರೀದಿಗೆ ಬರುತ್ತಾರೆ. ಆರಂಭದಲ್ಲಿ ಗುಂಪಿನ ಪ್ರತಿ ಸದಸ್ಯರು ಮೂಲ ಠೇವಣಿ ಸ್ವಲ್ಪ ಮೊತ್ತ ಸೇರಿಸುತ್ತಾರೆ.ಅನಂತರ ಪ್ರತಿ ದಿನ ರೂ.200 ರಂತೆ ಒಂದೆಡೆ ಜಮಾಯಿಸುತ್ತಾರೆ. ಕೊನೆಯ ದಿನ ಹೊಲದ ರೈತರಿಗೆ ಹಣ ಕೊಡುವಾಗ ಕೂಡಿಟ್ಟ ಹಣ ತಂದು ಒಂದೆಡೆ ಸೇರಿಸಿ ಎಣಿಸುತ್ತಾರೆ. ಒಂದು ವೇಳೆ ಕಡಲೆ ಒಣಗಿದರೆ ಅದರ ರಾಶಿ ಮಾಡಿಕೊಂಡು ಬಂದ ಲಾಭವೂ ಈ ಹೆಣ್ಣುಮಕ್ಕಳಿಗೇ ಸೇರುತದೆ.ಸದಸ್ಯರಿಗೂ ಲಾಭ: ಹದಿನೈದು ಜನರು ರೈತರಿಗೆ ಕೊಡಬೇಕಾದ ಹಣ ಕೊಟ್ಟು ಮೂರು ತಿಂಗಳಲ್ಲಿ ಒಟ್ಟೂ ಕೆಲಸದಿಂದ ಪಡೆಯುವ ಆದಾಯ ಕನಿಷ್ಠ ಒಬ್ಬೊಬ್ಬರಿಗೆ ರೂ 20000ದಿಂದ ರೂ 25000 ವರೆಗೆ. ಅಂದರೆ ತಿಂಗಳಿಗೆ ಸರಾಸರಿ ರೂ 7000 ದಿಂದ ರೂ 8000 ರವರೆಗೆ ನಿವ್ವಳ ಲಾಭದಲ್ಲಿರುತ್ತಾರೆ.ಇವರಿಂದ ಒಂದೊಂದು ಪೆಂಡಿ ಸುಲಗಾಯಿ ಪಡೆದು ಮಾರಾಟ ಮಾಡುತ್ತಾರೆ. ಒಂದು ಪೆಂಡಿಯ ದರ ರೂ 50 ಅಂತಾದರೆ ಸಂಜೆಯವರೆಗೂ ಮಾರಾಟ ಮಾಡಿದ ಮೇಲೆ ಬರುವ ಒಟ್ಟು ಹಣ ರೂ 175 ರಿಂದ ರೂ 200. ಅಂದರೆ ಕನಿಷ್ಠ ನೂರರಿಂದ ನೂರೈವತ್ತು ಲಾಭ. ಎಲ್ಲಿಯೂ ಕೆಲಸ ಸಿಗದೇ ಇದ್ದಾಗಲೂ ನಮ್ಮ ಹೆಣ್ಣುಮಕ್ಕಳು ಸುಮ್ಮನೆ ಕೂರಲಾಗದೆ ದುಡಿದುಣ್ಣುವ ಪರಿ ಇದು.ವರ್ಷದಲ್ಲಿ ನಾಲ್ಕರಿಂದ ಐದು ತಿಂಗಳು ಮಾತ್ರ ಕೆಲಸ ಸಿಗುತ್ತದೆ. ಅದು ಎಲ್ಲರಿಗೂ ಅಲ್ಲ. ಇನ್ನು ಉಳಿದ ಏಳು ತಿಂಗಳು ಹೊಟ್ಟೆಗೆ ಉಣ್ಣುವುದು ಏನು? ಕೆಲಸವೇ ಸಿಗದ ಕುಟುಂಬ ಏನು ಮಾಡುತ್ತದೆ? ಚಂದಮ್ಮ ಹೇಳುತ್ತಾರೆ- ಸುಲಗಾಯಿ ಮಾರಿದ್ದಕ್ಕ ನಮ್ಮ ಹೆಣ್ಣಮಕ್ಕಳು ವರ್ಷಕ್ಕ ಬೇಕಾದಟು ಅನಾಜು ತಂದು ಮನೆ ನಡೆಸ್ತಾರ. ಆರು ತಿಂಗಳಲ್ಲಿ ಮಾಡಿದ ಸಾಲ ತೀರಿಸ್ತಾರ. ಮಕ್ಕಳಿಗೆ ಶಾಲೆ ಫೀಜು ಕಟ್ಟಿ, ಮದುವೆಗೊ, ದಾವಖಾನಿಗೋ ಇವರ ಹಣವೇ ನೆರವಿಗೆ ಬರೂದು. ನೆಂಟರು ಬೀಗರಿಗೆ ಆಹೇರು... ಕಷ್ಟದಲ್ಲಿದ್ದವರಿಗೆ ತಕ್ಷಣಕ್ಕ ಕೈಸಾಲ ನೀಡುವುದೂ ಇದರಲ್ಲಿಯೇ.ಸಂಸಾರ ನಡೆಸುವುದರಲ್ಲಿ ಎತ್ತಿದ ಕೈ

ಈ ಹೆಣ್ಣುಮಕ್ಕಳು ಸಂಸಾರ ನಡೆಸುವುದರಲ್ಲಿ ಎತ್ತಿದ ಕೈ. ನೂರು ಕಷ್ಟಗಳನ್ನು ಹಿಮ್ಮೆಟ್ಟಿಸಿ ಚಾಕಚಕ್ಯತೆಯಿಂದ ನಸುಕಲೆದ್ದು ದುಡಿಯುವ ಪರಿ, ಪಟಪಟನೆ ಮಾತಾಡುತ್ತ ಸುಲಗಾಯಿ ಮಾರುವ ರೀತಿ, ಪೋಲಿಸರು ಸತಾಯಿಸಿದರೆ ಅವರನ್ನು ಎದುರಿಸುವ ವೈಖರಿ, ತಾನೇ ತಾನಾಗಿ ಕೈಗೂಡಿದ ಎಲ್ಲ ವ್ಯವಹಾರದ ಜ್ಞಾನ. ಸಂಜೆ ಹೊತ್ತಲ್ಲಿ ಇಡೀ ದಿನ ಅನುಭವಿಸಿದ ನೋವು ನಲಿವುಗಳನ್ನು ನೆನಪಿಸಿಕೊಂಡು ನಗುತ ಕೆಲೆಯುತ್ತ ಮನೆ ಕಡೆಗೆ ಹೊರಡುತ್ತಾರೆ.ರಟ್ಟೆಯೊಂದರ ಮೇಲೆ ನಂಬಿಕೆ ಇಟ್ಟು, ಸಂಕಟಗಳನ್ನೆದುರಿಸುವ ಛಲ ತೊಟ್ಟು, ಬದುಕು ಜೈಸುವ ಈ ಧೀರೆಯರಿಗೆ ಜಾಗತೀಕರಣವು ಹೆದರಿಸಲು ಹೇಗೆ ಸಾಧ್ಯ?ಖಾಸಗೀಕರಣ ಉದಾರೀಕರಣ ಜಾಗತೀಕರಣವೆಂಬ ಹುಲಿಯ ಮೇಲೆ ಸವಾರಿ ಮಾಡುತ್ತಿರುವ ಸರ್ಕಾರಕ್ಕೆ ಜನರ ಸಂಕಟಗಳ ನಿವಾರಣೆಗೆ ಯೋಜನೆಗಳನ್ನು ಮಾಡಲಾಗುತ್ತಿಲ್ಲ. ಆದರೆ ಆ ಹುಲಿಯ ಹಲ್ಲು ತೆಗೆವ ತಾಖತ್ತೇನಾದರೂ ಇದ್ದರೆ ಅದು ಇಂಥ ದುಡಿಮೆಗಾರರಿಂದ ಅನ್ನಿಸಿತು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.