ಸೋಮವಾರ, ನವೆಂಬರ್ 18, 2019
24 °C
ಬಿಬಿಎಂಪಿ ಕಾಮಗಾರಿ ಹಗರಣ: ತಾಂತ್ರಿಕ ಜಾಗೃತದಳದ ವರದಿಯಿಂದ ಬಹಿರಂಗ

ಅನಗತ್ಯವಾಗಿ ರೂಪಿಸಿದ ಚರಂಡಿ ಕಾಮಗಾರಿ

Published:
Updated:

ಬೆಂಗಳೂರು: ಸುಸ್ಥಿತಿಯಲ್ಲಿದ್ದ ಚರಂಡಿಯ ಜಾಗದಲ್ಲಿ ಹೊಸದಾಗಿ ಕಾಮಗಾರಿ ನಡೆಸಲು ಮುಂದಾಗಿದ್ದ ಬಿಬಿಎಂಪಿ ಚಂದ್ರಾ ಲೇಔಟ್ ವಿಭಾಗದ ಹಗರಣ ಬೆಳಕಿಗೆ ಬಂದಿದೆ. ನಾಗರಬಾವಿ (128) ವಾರ್ಡ್‌ನ ನಾಲ್ಕು ಕಡೆಯ ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದ ಹಗರಣ `ಆಯುಕ್ತರ ನೇತೃತ್ವದ ತಾಂತ್ರಿಕ ಜಾಗೃತ ದಳ'ದ (ಟಿವಿಸಿಸಿ) ವರದಿಯಿಂದ ಹೊರಬಂದಿದೆ.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿರೂ 3 ಕೋಟಿ ಅಂದಾಜು ವೆಚ್ಚದ ಚರಂಡಿ ಕಾಮಗಾರಿಗೆ ಈ ವರ್ಷದ ಜನವರಿ 19ರಂದು ಬಿಬಿಎಂಪಿಯಿಂದ ಅನುಮೋದನೆ ಪಡೆಯಲಾಗಿತ್ತು. ಚಂದ್ರಾ ಲೇಔಟ್ ವಿಭಾಗದ ಸಹಾಯಕ ಎಂಜಿನಿಯರ್ ತಾರಾನಾಥ್ ಕಾಮಗಾರಿಯ ಯೋಜನೆ ಸಿದ್ಧಪಡಿಸಿದ್ದರು. ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾಕರ್ ಅವರು ಯೋಜನೆಯನ್ನು ಅನುಮೋದಿಸಿ ಬಿಬಿಎಂಪಿ ಕೇಂದ್ರ ಕಚೇರಿಗೆ ಕಳಿಸಿದ್ದರು.ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಈಗಾಗಲೇ ಸಮರ್ಪಕವಾದ ಚರಂಡಿ ಇದ್ದು, ಅನಗತ್ಯವಾಗಿ ಚರಂಡಿಯ ಕಲ್ಲುಗಳನ್ನು ತೆಗೆಯಲಾಗುತ್ತಿದೆ ಎಂದು ಇತ್ತೀಚೆಗೆ ಸ್ಥಳೀಯರು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯ ತನಿಖೆ ನಡೆಸಲು ಆಯುಕ್ತರು ಟಿವಿಸಿಸಿಗೆ ಸೂಚಿಸಿದ್ದರು. ಇತ್ತೀಚೆಗೆ ಕಾಮಗಾರಿಯ ಪರಿಶೀಲನೆ ನಡೆಸಿದ ಟಿವಿಸಿಸಿ ತಂಡ ಈ ಬಗ್ಗೆ ಆಯುಕ್ತರಿಗೆ ವರದಿ ನೀಡಿದೆ.ನಾಲ್ಕು ಕಾಮಗಾರಿಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರವೇಶ ದ್ವಾರದ 80 ಅಡಿ ರಸ್ತೆಯ ಚರಂಡಿ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗೆರೂ 72 ಲಕ್ಷ ಮತ್ತು ಎನ್‌ಜಿಇಎಫ್ ಮುಖ್ಯರಸ್ತೆಯ ಚರಂಡಿ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗೆರೂ 98 ಲಕ್ಷ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಎರಡೂ ಕಾಮಗಾರಿಗಳು ಪ್ರಾರಂಭವಾಗಿವೆ.ಗುಡ್‌ವಿಲ್ ಅಪಾರ್ಟ್‌ಮೆಂಟ್‌ನಿಂದ ಜ್ಯೋತಿನಗರದ ಕಡೆಗಿನ ಮುಖ್ಯರಸ್ತೆಯ ಚರಂಡಿ ನಿರ್ಮಾಣ ಕಾಮಗಾರಿಗೆರೂ 61.60 ಲಕ್ಷ ಮತ್ತು ಜ್ಯೋತಿನಗರದಿಂದ ಜ್ಞಾನಭಾರತಿಗೆ ಸಾಗುವ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆರೂ 68.40 ಲಕ್ಷ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆಯಲಾಗಿದೆ. ಈ ಎರಡೂ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ.ಈ ನಾಲ್ಕೂ ಕಡೆಗಳಲ್ಲಿ ಚರಂಡಿಯು ಸುಸ್ಥಿತಿಯಲ್ಲಿದ್ದು, ಹೊಸದಾಗಿ ಕಾಮಗಾರಿ ನಡೆಸುವ ಅಗತ್ಯವಿಲ್ಲ. ಕೆಲವು ಕಡೆ ಪಾದಚಾರಿ ಮಾರ್ಗದ ಕಾಂಕ್ರಿಟ್ ಸ್ಲ್ಯಾಬ್ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಚಂದ್ರಾ ಲೇಔಟ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕಾಮಗಾರಿಗೆ ಯೋಜನೆ ಸಿದ್ಧಪಡಿಸಿ ಅದಕ್ಕೆ ಅನುಮೋದನೆ ಪಡೆದಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ಕಾಮಗಾರಿಯ ಟೆಂಡರ್ ನೀಡಲಾಗಿದೆ. ಈ ಕಾಮಗಾರಿಯಿಂದ ಪಾಲಿಕೆಗೆ ರೂ 2.07 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಟಿವಿಸಿಸಿ ವರದಿಯಲ್ಲಿ ತಿಳಿಸಿದೆ.ಬಿಬಿಎಂಪಿ ಆಯುಕ್ತರು 2011ರ ಜುಲೈ 7ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಪಾಲಿಕೆಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಅನಗತ್ಯವಾಗಿ ಕಾಮಗಾರಿಗಳನ್ನು ರೂಪಿಸಬಾರದು ಎಂದು ಸೂಚಿಸಿದ್ದರು. ಆದರೆ, ಈ ಸೂಚನೆಯನ್ನು ಉಲ್ಲಂಘಿಸಿ ತಾಂತ್ರಿಕವಾಗಿ ಯೋಜನೆಯನ್ನು ಸಿದ್ಧಪಡಿಸದೇ ಅನಗತ್ಯ ವೆಚ್ಚದ ಯೋಜನೆ ರೂಪಿಸಲಾಗಿದೆ. ಅಲ್ಲದೇ ಕಾಂಟ್ರಿಕ್ ಸ್ಲ್ಯಾಬ್ ಚೆನ್ನಾಗಿರುವ ಕಡೆ ಅದನ್ನು ಒಡೆದು ಹೊಸದಾಗಿ ಸ್ಲ್ಯಾಬ್ ಹಾಕಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ನಾಗರಬಾವಿ ವಾರ್ಡ್‌ನಲ್ಲಿ ಮೂರು ವರ್ಷಗಳ ಹಿಂದೆರೂ 1.5 ಕೋಟಿ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿದೆ. ಆದರೆ, ಮತ್ತೊಮ್ಮೆ ಚರಂಡಿ ನಿರ್ಮಾಣ ಕಾಮಗಾರಿ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆಯಲಾಗಿದೆ. ಈವರೆಗೆ ನಾಲ್ಕೂ ಕಾಮಗಾರಿಗಳ ಹಣ ಬಿಡುಗಡೆಯಾಗಿಲ್ಲ. ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟಿವಿಸಿಸಿ ತಿಳಿಸಿದೆ.

ಪ್ರತಿಕ್ರಿಯಿಸಿ (+)