ಗುರುವಾರ , ಅಕ್ಟೋಬರ್ 17, 2019
21 °C

ಅನಗತ್ಯವಾದ ಅವಸರದ ನಿರ್ಧಾರ

Published:
Updated:

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ರಾಜ್ಯಸರ್ಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹ ನಿರ್ಧಾರವೇನೋ ಸರಿ. ಆದರೆ ಹಣಕಾಸು ಮತ್ತು ಕಾನೂನು ಇಲಾಖೆಗಳು ಮಾತ್ರವಲ್ಲ, ಮುಖ್ಯಮಂತ್ರಿಗಳು ವಿರೋಧಿಸಿದರೂ ಜಲಸಂಪನ್ಮೂಲ ಸಚಿವರು ಹಟ ಹಿಡಿದು ಯೋಜನೆಗೆ ಅನುಮೋದನೆ ಪಡೆದಿರುವ ರೀತಿ ಈ ನಿರ್ಧಾರದ ಬಗ್ಗೆ ಅನುಮಾನ ಮೂಡಿಸುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಕೃಷ್ಣಾ `ಬಿ~ಸ್ಕೀಮ್‌ನಲ್ಲಿ ಕರ್ನಾಟಕ ಕೇಳಿದ್ದ 278 ಟಿಎಂಸಿ ನೀರಿನ ಬದಲಿಗೆ 177ಟಿಎಂಸಿ ನೀರನ್ನು ನ್ಯಾಯಮೂರ್ತಿ ಬೃಜೇಶ್‌ಕುಮಾರ್ ಅಧ್ಯಕ್ಷತೆಯ ನ್ಯಾಯಮಂಡಳಿ ಹಂಚಿಕೆ ಮಾಡಿತ್ತು.ಈ ಐತೀರ್ಪಿಗೆ ಆಂಧ್ರಪ್ರದೇಶ ತಡೆಯಾಜ್ಞೆ ಕೋರಿರುವುದು ಮಾತ್ರವಲ್ಲ, ಕರ್ನಾಟಕ ಕೂಡಾ ಅದನ್ನು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದೆ. ಈ ವಿವಾದ ಇನ್ನೂ ಇತ್ಯರ್ಥವಾಗಿಲ್ಲ.

 

ಹೀಗಿರುವಾಗ ಕೇವಲ 130 ಟಿಎಂಸಿ ನೀರನ್ನು ಬಳಸಿಕೊಂಡು ಯೋಜನೆಯನ್ನು ರೂಪಿಸುವುದರಿಂದ ನ್ಯಾಯಮಂಡಳಿಯ ಮುಂದೆ  ಕರ್ನಾಟಕದ ವಾದವನ್ನು ದುರ್ಬಲಗೊಳಿಸಿದಂತಾಗುವುದಿಲ್ಲವೇ? ಎನ್ನುವುದು ಮೊದಲ ಪ್ರಶ್ನೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕಾನೂನು ಇಲಾಖೆ ಆಕ್ಷೇಪ ಎತ್ತಿರುವುದು ಸರಿಯಾಗಿಯೇ ಇದೆ.ಎರಡನೆಯದಾಗಿ. ಮುಂದಿನ ಏಳು ವರ್ಷಗಳಲ್ಲಿ 17,207 ಕೋಟಿ ರೂಪಾಯಿ ವೆಚ್ಚದಲ್ಲಿ 130 ಟಿಎಂಸಿ ಅಡಿ ನೀರಿಗೆ ಯೋಜನೆಗಳನ್ನು ರೂಪಿಸುವ ನಿರ್ಧಾರ ಕೂಡಾ ಸರ್ಕಾರದ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ.ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಒಳ್ಳೆಯ ಹೆಸರಿಲ್ಲ. ಕಾವೇರಿ ಮತ್ತು ಕೃಷ್ಣಾ ಕೊಳ್ಳಗಳಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳು ಕಣ್ಣಮುಂದಿವೆ.ಬಚಾವತ್ ನ್ಯಾಯಮಂಡಳಿ `ಎ~ಸ್ಕೀಮ್‌ನಲ್ಲಿ ಹಂಚಿಕೆ ಮಾಡಿದ್ದ ಕೃಷ್ಣಾ ನದಿಯ 734 ಟಿಎಂಸಿ ನೀರನ್ನು 37 ವರ್ಷಗಳ ನಂತರವೂ ಪೂರ್ಣವಾಗಿ ಬಳಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗಿಲ್ಲ. ಈಗಲೂ ಆ ಸ್ಕೀಮ್‌ನಲ್ಲಿ ಸುಮಾರು 100 ಟಿಎಂಸಿ ನೀರು ಬಳಕೆಯಾಗದೆ ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿದೆ.ಕೃಷ್ಣಾ ಮೇಲ್ದಂಡೆಯ ಎರಡನೇ ಹಂತದ ನೀರಾವರಿ ಯೋಜನೆಗಳಲ್ಲಿ ಹೆಚ್ಚಿನವು ಪೂರ್ಣಗೊಂಡಿಲ್ಲ. ಹೀಗಿರುವಾಗ ಮೂರನೇ ಹಂತಕ್ಕೆ ಅನುಮೋದನೆ ಪಡೆಯಲು ಸಚಿವರು ತರಾತುರಿ ತೋರಿರುವುದು ಅಚ್ಚರಿ ಹುಟ್ಟಿಸಿದೆ.

 

ಸಚಿವ ಸಂಪುಟ ಅನುಮೋದನೆ ನೀಡಿದರೂ ಅದಕ್ಕೆ ಬೇಕಾಗಿರುವ ಹಣಕಾಸು ನೆರವನ್ನು ಇನ್ನೆರಡು ತಿಂಗಳಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿಯೇ ಪಡೆಯಬೇಕಾಗಿರುವಾಗ ಅದಕ್ಕಿಂತ ಮೊದಲೇ ಇದನ್ನು ಘೋಷಣೆ ಮಾಡುವ ಅಗತ್ಯ ಏನಿತ್ತು? ನಮ್ಮ ಯಾವ ನೀರಾವರಿ ಯೋಜನೆಯೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗಿಲ್ಲ.

 

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿರುವ ಗಣಿ ಲೂಟಿಕೋರರಿಗಿಂತ ಮೊದಲು ರಾಜಕೀಯಕ್ಕೆ ಬೇಕಾದ ಹಣ ದೊಡ್ಡ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದದ್ದು ನೀರಾವರಿ ಮತ್ತು ಲೋಕೋಪಯೋಗಿ ಕಾಮಗಾರಿಗಳಲ್ಲಿ ತೊಡಗಿರುವ ಗುತ್ತಿಗೆದಾರರಿಂದ ಎನ್ನುವುದು ಸಾಮಾನ್ಯ ಜನರಿಗೂ ತಿಳಿದ ಸಂಗತಿ.

 

ಇಂತಹ ಆರೋಪಗಳಿಗೆ ಗುರಿಯಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು. ಕೃಷ್ಣಾ ನದಿ ನೀರನ್ನು ಬಳಸಿಕೊಳ್ಳುವ ನಿರ್ಧಾರ ಪ್ರಾಮಾಣಿಕತೆಯಿಂದ ಕೂಡಿದ್ದರೆ ಮೊದಲು ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು ಯೋಜನೆಯನ್ನು ಕಾಲಬದ್ಧವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು.

Post Comments (+)