ಅನಗತ್ಯ ಆತುರ

ಶನಿವಾರ, ಜೂಲೈ 20, 2019
24 °C

ಅನಗತ್ಯ ಆತುರ

Published:
Updated:

ರಾಷ್ಟ್ರದ ಶೇ 67ರಷ್ಟು  ಜನರಿಗೆ ಅಗ್ಗದ ಆಹಾರ ಧಾನ್ಯಗಳ ಹಕ್ಕು ಒದಗಿಸುವಂತಹ  ಆಹಾರ ಭದ್ರತಾ ಯೋಜನೆ ಸುಗ್ರೀವಾಜ್ಞೆಗೆ  ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ. ಇಷ್ಟೊಂದು ತರಾತುರಿಯಲ್ಲಿ ಈ ಯೋಜನೆಗೆ ಅಂಕಿತ ಪಡೆಯುವ ಅಗತ್ಯವಿರಲಿಲ್ಲ. ಸಾಮಾನ್ಯವಾಗಿ ದೇಶದ ಭದ್ರತೆಗೆ ಸಂಬಂಧಪಟ್ಟಂತೆ ರಾತ್ರೋರಾತ್ರಿ ಸುಗ್ರೀವಾಜ್ಞೆ ಹೊರಡಿಸಿದರೆ ಅದಕ್ಕೊಂದು ಅರ್ಥವಿದೆ.

  ಹಾಗೆಯೇ ದೆಹಲಿ ವಿದ್ಯಾರ್ಥಿನಿ ಅತ್ಯಾಚಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟಿದ್ದರಿಂದ, ಲೈಂಗಿಕ ಅಪರಾಧಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸಲು   ಈ ವರ್ಷದ ಆರಂಭದಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗೂ ಅರ್ಥವಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. 2009ರ ಚುನಾವಣಾ ಪ್ರಣಾಳಿಕೆಯಲ್ಲಿ ಆಹಾರ ಭದ್ರತೆಯ ಭರವಸೆಯನ್ನು ಯುಪಿಎ ನೀಡಿತ್ತು. ಆದರೆ ಅಧಿಕಾರ ವಹಿಸಿಕೊಂಡ ನಂತರ ಆಹಾರ ಭದ್ರತೆ ಮಸೂದೆ ಕರಡು ಸಿದ್ಧಪಡಿಸಲೇ ನಾಲ್ಕು ವರ್ಷ ತೆಗೆದುಕೊಳ್ಳಲಾಗಿದೆ.

  ಈಗ, ಸಂಸತ್ತಿನಲ್ಲಿ ಈ  ಮಸೂದೆಯನ್ನು ಚರ್ಚಿಸಿ ಅಂಗೀಕಾರ ಪಡೆದುಕೊಳ್ಳವಲ್ಲಿನ ವೈಫಲ್ಯ ಎದ್ದು ಕಾಣುತ್ತದೆ.  ಯುಪಿಎ  ಈಗಾಗಲೇ ಒಡೆದ ಮನೆಯಾಗಿರುವುದು ಗುಟ್ಟಿನ ವಿಷಯವೇನಲ್ಲ. ಹೀಗಾಗಿ ಸುಗ್ರೀವಾಜ್ಞೆಯ ಮಾರ್ಗವನ್ನು ಹಿಡಿಯಲಾಗಿದೆ. ಕೆಲವೇ ವಾರಗಳಲ್ಲಿ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಚರ್ಚೆಗಳಿಗೆ ಅವಕಾಶ ಕಲ್ಪಿಸದೆ ಸುಗ್ರೀವಾಜ್ಞೆ ಜಾರಿಗೊಳಿಸಿರುವುದು  ಪ್ರಜಾತಂತ್ರದ ಆಶಯಗಳಿಗೆ ಧಕ್ಕೆ ತರುವಂತಹದ್ದು.

2014ರ ಲೋಕಸಭಾ ಚುನಾವಣೆ ಹಾಗೂ ಸದ್ಯದಲ್ಲೇ ನಡೆಯಲಿರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಲಾಭ ಪಡೆಯುವ ದೃಷ್ಟಿ ಈ ಆತುರದ ಕ್ರಮದ ಹಿಂದಿರುವುದು ಸ್ಪಷ್ಟ. ಈ ಪ್ರಮುಖ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಾಗಿರುವುದು ಅತ್ಯವಶ್ಯ. ನಿಯಮದ ಪ್ರಕಾರ ಈ ಸುಗ್ರೀವಾಜ್ಞೆಗೆ ಆರು ತಿಂಗಳ ಒಳಗೆ ಸಂಸತ್ತಿನ ಒಪ್ಪಿಗೆಯನ್ನು ಪಡೆಯಬೇಕು.

ಈ ಯೋಜನೆ ಜಾರಿಗೆ ಮೊದಲು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಸುಧಾರಣೆಯಾಗಬೇಕು. ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡಬೇಕು. ದಾಸ್ತಾನು ಮತ್ತು ಸರಬರಾಜಿನ ವಿಷಯದಲ್ಲಿ ಮುಂಜಾಗ್ರತೆ ಅತ್ಯಗತ್ಯ. ಈಗ ಪಡಿತರ ವ್ಯವಸ್ಥೆಯ ಮೂಲಕ ವಿತರಣೆಯಾಗುತ್ತಿರುವ ಸಕ್ಕರೆ ಮತ್ತು ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ತಡೆಗಟ್ಟಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಗೋಧಿ, ಜೋಳ, ನವಣೆ, ಸಜ್ಜೆಯ ವಿತರಣೆ ಆರಂಭಿಸಿದಾಗ ಕಾಳಸಂತೆಯ ಮಾರುಕಟ್ಟೆ ವಿಸ್ತಾರವಾಗಕೂಡದು. ಯೋಜನೆಯ ಮೂಲ ಉದ್ದೇಶ ವಿಫಲವಾಗದಂತೆ ಕೇಂದ್ರ ನೋಡಿಕೊಳ್ಳಬೇಕಾಗಿದೆ.

ಅಸಂಘಟಿತ ವರ್ಗಕ್ಕೆ ಸೇರಿದವರಿಗೆ ಸ್ಥಿರವಾದ ಉದ್ಯೋಗವಿರುವುದಿಲ್ಲ. ಆದುದರಿಂದ ಸಹಜವಾಗಿ ಶಾಶ್ವತ ನೆಲೆ ಇರುವುದಿಲ್ಲ. ವಲಸೆ ಹೋಗುವವರ ಪಡಿತರದ ದವಸಧಾನ್ಯ ಪರರ ಪಾಲಾಗದಂತೆ ನೋಡಿಕೊಳ್ಳಬೇಕಾಗಿದೆ. ಪ್ರತಿ ವರ್ಷ ಇದಕ್ಕಾಗಿ ವೆಚ್ಚ ಮಾಡಬೇಕಾಗಿರುವ ಹಣ 1,25,000 ಕೋಟಿ ರೂಪಾಯಿ ಆಗಿರುವುದರಿಂದ ತೆರಿಗೆದಾರರ ಹಣ ದುರುಪಯೋಗದಂತೆ ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿಯೂ ಕೇಂದ್ರದ ಮೇಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry