ಅನಧಿಕೃತ ಕಟ್ಟಡ ತೆರವಿಗೆ ಗಡುವು

7

ಅನಧಿಕೃತ ಕಟ್ಟಡ ತೆರವಿಗೆ ಗಡುವು

Published:
Updated:

ಮುದ್ದೇಬಿಹಾಳ: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಗುರುವಾರ ತಹಸೀಲ್ದಾರ ಕಚೇರಿಯಲ್ಲಿ ವಿವಿಧ ಇಲಾಖೆಗಳ ನೌಕರರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆ ನಡೆಯಿತು.ತಂಗಡಗಿ ರಸ್ತೆಯಲ್ಲಿರುವ ಬಸವೇಶ್ವರ ಮೂರ್ತಿ, ಪಿಲೇಕಮ್ಮ ದೇವಸ್ಥಾನ ಹಾಗೂ ಅದರ ಮುಂದಿರುವ ಪಾದಗಟ್ಟೆ, ಕುಂಬಾರ ಓಣಿಯಲ್ಲಿರುವ ದ್ಯಾಮವ್ವನ ಗುಡಿ, ಮಾರುತಿ ನಗರದ ಮಡಿವಾಳೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ, ಸರಾಫ ಬಜಾರದಲ್ಲಿರುವ ಮರುಳಸಿದ್ಧಪ್ಪನ ಗುಡಿ, ಬಸ್ ನಿಲ್ದಾಣದ ಹತ್ತಿರದ ಆಂಜನೇಯ ದೇಗುಲ, ನಿಯೋಜಿತ ನ್ಯಾಯಾಲಯದ ಹತ್ತಿರದ ಶಿವಾಲಯ ಇವುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಲಾಗಿದೆ ಎಂದು ಗುರುತಿಸಲಾಗಿದ್ದು, ಇವುಗಳ ತೆರವಿಗೆ ಜ.23ರಂದು ಗಡುವು ನೀಡಲಾಯಿತು.ಈ ಅವಧಿಯಲ್ಲಿ ಸಂಬಂಧಪಟ್ಟವರು ಅತಿಕ್ರಮಣವನ್ನು ತೆರವುಗೊಳಿಸದಿದ್ದರೆ ತಾಲ್ಲೂಕು ಆಡಳಿತ ತಾನೇ ಈ ಕಾರ್ಯಾಚರಣೆಗೆ ಮುಂದಾಗುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಾರ್ವಜನಿಕ ಸ್ಥಳಗಳಲ್ಲಿರುವ ಮಾರುತಿ ನಗರದ ಮಡಿವಾಳೇಶ್ವರ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನಗಳು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡತಡೆ ಮಾಡುವುದಿಲ್ಲವಾದ್ದರಿಂದ ಇವುಗಳನ್ನು ಯಥಾಸ್ಥಾನಗಳಲ್ಲಿ ಮುಂದುವರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ  ಸಲ್ಲಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇವುಗಳ ಜೊತೆಗೆ ಈಗ ದ್ಯಾಮವ್ವನ ಗುಡಿಯಾಗಿರುವ ಈ ಹಿಂದೆ ಚಾವಡಿಯ ವಿಷಯವನ್ನೂ ಮತ್ತೊಮ್ಮೆ ಪರಿಶೀಲಿಸಿ ಅಂತಿಮ ತೀರ್ಮಾನ ಕೈಕೊಳ್ಳುವುದಾಗಿ ತಹಸೀಲ್ದಾರ ಗಂಗಪ್ಪ ಸಭೆಗೆ ತಿಳಿಸಿದರು.ಪಿಲೇಕಮ್ಮನ ಗುಡಿಗೆ ಬೇರೆ ಜಾಗ ತೋರಿಸಿ ಅಲ್ಲಿ ಕಟ್ಟಲು ಅವಕಾಶ ನೀಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಹೊನ್ನಳ್ಳಿ ತಿಳಿಸಿದರು. ಸಭೆಯಲ್ಲಿ ಶಾಂತಗೌಡ ಬಿರಾದಾರ, ಬಸವರಾಜ ಸುಕಾಲಿ, ಎಚ್.ಆರ್. ಕಲಕೇರಿ, ನಾರಾಯಣಸ್ವಾಮಿ, ಡಾ. ವೀರೇಶ ಪಾಟೀಲ, ರಾಜು ಕಲಬುರ್ಗಿ, ಸತೀಶ ಓಸ್ವಾಲ, ರವಿ ತಡಸದ, ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry