ಮಂಗಳವಾರ, ನವೆಂಬರ್ 12, 2019
20 °C

ಅನಧಿಕೃತ ಜಾಹೀರಾತು ಫಲಕ: ಆದಾಯಕ್ಕೆ ಕತ್ತರಿ

Published:
Updated:

ಚಾಮರಾಜನಗರ: ಈಗ ಜಿಲ್ಲಾ ಕೇಂದ್ರದಲ್ಲೂ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರಿದೆ.ಆದರೆ, ಫ್ಲೆಕ್ಸ್, ಬ್ಯಾನರ್ ಭರಾಟೆ ಇಲ್ಲ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಪರಿಣಾಮ ಯಾವುದೇ ಸಂಘ-ಸಂಸ್ಥೆಗಳು, ರಾಜಕಾರಣಿಗಳು, ಪ್ರಚಾರಪ್ರಿಯರು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಬ್ಯಾನರ್, ಫ್ಲೆಕ್ಸ್ ಅಳವಡಿಸುತ್ತಿಲ್ಲ. ಚುನಾವಣೆ ಮುಗಿದ ನಂತರ ಮತ್ತೆ ಪ್ರಚಾರ ಪ್ರಿಯರ ಅಬ್ಬರ ಆರಂಭವಾಗಲಿದೆ ಎನ್ನುತ್ತಾರೆ ನಾಗರಿಕರು.ಯಾವುದೇ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಜಾಹೀರಾತು ಫಲಕ ಅಳವಡಿಸುವ ಮೊದಲು ಅಲ್ಲಿನ ಆಡಳಿತದ ಅನುಮತಿ ಪಡೆಯಬೇಕು. ಸ್ಥಳೀಯ ಆಡಳಿತ ಕೂಡ ಜಾಹೀರಾತು ಫಲಕಕ್ಕೆ ಅನುಗುಣವಾಗಿ ದರ ನಿಗದಿಪಡಿಸಬೇಕು. ಜತೆಗೆ, ನಿಗದಿಪಡಿಸಿದ ಸ್ಥಳದಲ್ಲಿಯೇ ಜಾಹೀರಾತು ಫಲಕ ಅಳವಡಿಸಬೇಕಿದೆ. ಖಾಸಗಿ ವ್ಯಕ್ತಿಗಳು ತಮ್ಮ ಮನೆಯ ಮೇಲೆ ಅಥವಾ ಮುಂಭಾಗದಲ್ಲಿ ಖಾಸಗಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಿದ್ದರೂ, ನಗರಸಭೆಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು.ಆದರೆ, ಇಂತಹ ಯಾವುದೇ ನಿಯಮಗಳು ನಗರಸಭೆ ವ್ಯಾಪ್ತಿ ಪಾಲನೆಯಾಗುತ್ತಿಲ್ಲ. ನಾಗರಿಕರು, ವಿದ್ಯಾರ್ಥಿಗಳು, ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗುವಂತೆ ಜಾಹೀರಾತು ಫಲಕ, ಫ್ಲೆಕ್ಸ್ ಅಳವಡಿಸುವ ಪ್ರಚಾರ ಪ್ರಿಯರು, ರಾಜಕಾರಣಿಗಳು, ಸಂಘ- ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ನಗರಸಭೆ ಆಡಳಿತ ಹಿಂದೇಟು ಹಾಕುತ್ತಿದೆ. ಇದರಿಂದ ಸ್ಥಳೀಯ ಆಡಳಿತದ ಆದಾಯ ಖೋತ ಆಗುತ್ತಿದೆ.ನಗರಸಭೆ ವ್ಯಾಪ್ತಿ 2012-13ನೇ ಸಾಲಿನಡಿ ಜಾಹೀರಾತು ತೆರಿಗೆಯಿಂದ ಕೇವಲ 2 ಲಕ್ಷ ರೂ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. 2013-14ನೇ ಸಾಲಿನಡಿಯೂ ಈ ಮೊತ್ತದಲ್ಲಿ ಬದಲಾವಣೆಯಾಗಿಲ್ಲ. ಒಂದೆಡೆ ನಗರಸಭೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಆದರೆ, ಆದಾಯ ಸಂಗ್ರಹಿಸುವ ಮೂಲಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಎಡವಿದೆ.ಜ್ಯೋತಿಷಿಗಳು, ಅಂಗಡಿ ಮಾಲೀಕರು, ರಾಜಕಾರಣಿಗಳು, ಸಂಘ-ಸಂಸ್ಥೆಗಳು ನಗರಸಭೆ ವ್ಯಾಪ್ತಿಯ ಫುಟ್‌ಪಾತ್, ರಸ್ತೆಬದಿ ಅತಿಕ್ರಮಿಸಿಕೊಂಡು ಜಾಹೀರಾತು ಫಲಕ ಅಳವಡಿಸುತ್ತಾರೆ. ಸರ್ಕಾರಿ ಕಾರ್ಯಕ್ರಮಗಳ ವೇಳೆಯೂ ಕೆಲವು ಪ್ರಚಾರ ಪ್ರಿಯರ ಫೆಕ್ಸ್‌ಗಳು ಕೂಡ ಜೋಡಿರಸ್ತೆಯಲ್ಲಿ ರಾರಾಜಿಸುತ್ತವೆ. ದಾರ್ಶನಿಕರ ಜಯಂತಿ ವೇಳೆ ಆಯಾ ಸಮುದಾಯದ ಸ್ವಾಮೀಜಿಗಳ ಭಾವಚಿತ್ರದೊಂದಿಗೆ ಸಂಘ- ಸಂಸ್ಥೆಗಳ ಮುಖಂಡರು ಭಾರೀ ಗಾತ್ರದ ಫ್ಲೆಕ್ಸ್ ಅಳವಡಿಸುತ್ತಾರೆ. ರಸ್ತೆಯನ್ನೂ ಈ ಫ್ಲೆಕ್ಸ್‌ಗಳು ಅತಿಕ್ರಮಿಸಿಕೊಳ್ಳುತ್ತವೆ!ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡರೆ ವಾರ್ಷಿಕವಾಗಿ ಜಾಹೀರಾತು ತೆರಿಗೆಯಿಂದಲೇ ಕನಿಷ್ಠ 10 ಲಕ್ಷ ರೂ ಆದಾಯ ಸಂಗ್ರಹಿಸಬಹುದು. ಆದರೆ, ಸ್ಥಳೀಯ ಆಡಳಿತ ಸ್ಪಷ್ಟವಾದ ನೀತಿ ರೂಪಿಸಿಲ್ಲ. ಹಳೆಯ ದರ ಪರಿಷ್ಕರಿಸಿ ಜಾಹೀರಾತು ಅಳವಡಿಸುವವರಿಗೆ ಶುಲ್ಕ ನಿಗದಿಪಡಿಸಿ ವಸೂಲಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಪ್ರಭಾವಿಗಳು ಅಳವಡಿಸುವ ಫ್ಲೆಕ್ಸ್‌ಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ತೆರವಿಗೆ ಮುಂದಾಗುವುದಿಲ್ಲ ಎಂಬುದು ಸಾರ್ವಜನಿಕರ ದೂರು.`ಸ್ಥಳೀಯವಾಗಿಯೇ ಆದಾಯ ಸಂಗ್ರಹಿಸಿ ಅಭಿವೃದ್ಧಿಗೆ ವಿನಿಯೋಗಿಸಲು ನಗರಸಭೆ ಆಡಳಿತ ವೈಫಲ್ಯ ಕಾಣುತ್ತಿದೆ. ಕಳೆದ ವರ್ಷದ ತೆರಿಗೆ ವಸೂಲಾತಿಯಲ್ಲಿ ನಿಗದಿತ ಗುರಿ ಸಾಧನೆಯಾಗಿಲ್ಲ. ಜಾಹೀರಾತು ತೆರಿಗೆ ವಸೂಲಿಯಲ್ಲೂ ಗುರಿ ನಿಗದಿ, ಸಾಧನೆ ತೃಪ್ತಿಕರವಾಗಿಲ್ಲ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಪರಿಣಾಮ ಈಗ ಫ್ಲೆಕ್ಸ್‌ಗಳ ಹಾವಳಿ ಇಲ್ಲ.ಚುನಾವಣೆ ಮುಗಿದ ನಂತರ ಮತ್ತೆ ಹಾವಳಿ ಹೆಚ್ಚಲಿದೆ. ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಬೇಕು. ಸರ್ಕಾರದ ನಿಯಮಾವಳಿ ಅನ್ವಯ ಜಾಹೀರಾತು ತೆರಿಗೆ ನಿಗದಿಪಡಿಸಿ ವಸೂಲಿ ಮಾಡಬೇಕು. ಜತೆಗೆ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು. ತೆರಿಗೆ ವಸೂಲಾತಿಯಲ್ಲಿ ಯಾರೊಂದಿಗೂ ಹೊಂದಾಣಿಕೆ ಸಲ್ಲದು' ಎನ್ನುತ್ತಾರೆ ಹಿರಿಯ ನಾಗರಿಕ ಗುರುಬಸಪ್ಪ.

ಪ್ರತಿಕ್ರಿಯಿಸಿ (+)