ಶುಕ್ರವಾರ, ಮೇ 7, 2021
27 °C

ಅನಧಿಕೃತ ಡಬ್ಡಾ ಅಂಗಡಿಗಳ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಪಟ್ಟಣದ  ಮುಖ್ಯ ರಸ್ತೆಗಳಲ್ಲಿ  ಅನಧಿಕೃತ ಡಬ್ಬಾ ಅಂಗಡಿಗಳು ರಾತ್ರಿ ಕಳೆದು ಬೆಳಗಾದರೆ ತಲೆ ಎತ್ತುತ್ತಲಿದ್ದು, ಸಂಚಾರಿ ವ್ಯವಸ್ಥೆಗೆ ತೀವ್ರ ತೊಂದರೆ ಒಡ್ಡುತ್ತಿವೆ.ಪಟ್ಟಣದಲ್ಲಿ ಒತ್ತುವ (ನಾಲ್ಕು ಗಾಲಿಗಳ) ಅಂಗಡಿಗಳದು ಒಂದು ಸಮಸ್ಯೆಯಾದರೆ ಈ ಡಬ್ಬಾ ಅಂಗಡಿಗಳದು ಇನ್ನೊಂದು ಸಮಸ್ಯೆ. ಒತ್ತುವ ಗಾಡಿಗಳನ್ನು ಬೇರೆ ಬೇರೆ ಕಡೆ ಸಾಗಿಸಬಹುದು.ಆದರೆ ಈ ಡಬ್ಬಾ ಅಂಗಡಿಗಳ ಸ್ಥಿತಿ ಹಾಗಲ್ಲ. ಈ  ಅಂಗಡಿಗಳನ್ನು ಯಾರೂ ಕಿಳದಂತೆ ಯೇ ಶಾಶ್ವತವಾಗಿ ತಳಪಾಯದಲ್ಲಿ ಸಿಮೆಂಟ್ ಹಾಕಿ, ಮೇಲೆ ಕಬ್ಬಿಣದ ಶಟರ್ ಹಾಕಿಯೇ ಸ್ಥಾಪಿಸಲಾಗುತ್ತದೆ. ರಸ್ತೆಯ ಪಕ್ಕದಲ್ಲಿ ನೀರು ಹರಿದು ಹೋಗುವ ಪ್ರದೇಶದಲ್ಲಿಯೇ ಅತಿಕ್ರಮಣ ಮಾಡಿಕೊಂಡು ಕಟ್ಟುತ್ತಿರುವದರಿಂದ ಮಳೆಗಾಲದಲ್ಲಿ ಇವು ಸಣ್ಣ ಪ್ರಮಾಣದ ಪ್ರವಾಹಕ್ಕೂ ಕಾರಣವಾಗುತ್ತವೆ.ಚರಂಡಿಗಳ ಮೇಲೆ ಇವುಗಳನ್ನು ನಿರ್ಮಿಸಲಾಗುವದರಿಂದ ಚರಂಡಿ ಸ್ವಚ್ಛ ಮಾಡಲಾಗದೇ ಅನಾರೋಗ್ಯಕರ ವಾತಾವರಣ ಸಾಧ್ಯತೆಯೂ ಹೆಚ್ಚುತ್ತದೆ. ಪಟ್ಟಣ ಪುರಸಭೆಯ ಎದುರಿಗೇ ಇಂಥ ಅನೇಕ ಅಂಗಡಿಗಳು ಸ್ಥಾಪನೆಯಾಗಿವೆ. ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ನಿಧಾನವಾಗಿ ಸ್ಥಾಪಿತವಾಗುವ ಈ ಅಂಗಡಿಗಳು ನಿಧಾನವಾಗಿ ಹಂತ ಹಂತವಾಗಿ ತಮ್ಮ ಅಸ್ತಿತ್ವನ್ನು ಹೆಚ್ಚಿಸಿಕೊಳ್ಳುತ್ತ ಹೊರಟಿರುವದು ಪಟ್ಟಣದ ಸೌಂದರ್ಯಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಸುಗಮ ಸಂಚಾರಕ್ಕೂ ತೊಂದರೆ ತಪ್ಪಿದ್ದಲ್ಲ.`ಈ ಅಂಗಡಿಗಳಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಆಗುತ್ತದೆ. ಈ ಅಂಗಡಿಗಳ ಮುಂದೆ ನಿಲ್ಲುವ ವಾಹನಗಳು ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆ ಉಂಟು ಮಾಡುತ್ತವೆ. ಮುಂದೆ ಸಾಮಾನ್ಯ ಸಭೆ ನಡೆದಾಗ ಇದರ ಬಗ್ಗೆ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸುತ್ತೇನೆ' ಎಂದು ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಹೇಳಿದರು.`ನಾನು ಹೊಸದಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಈಗ ಮೈಸೂರಲ್ಲಿ ತರಬೇತಿಗೆಂದು ಬಂದಿದ್ದೇನೆ, ಈ ಅನಧಿಕೃತ ಅಂಗಡಿಗಳ ಬಗ್ಗೆ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು' ಎಂದು  ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ದಾಯಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.