ಅನಧಿಕೃತ ನೀರು ಬಳಸಿದರೆ ಕಠಿಣ ಕ್ರಮ

ಸೋಮವಾರ, ಮೇ 27, 2019
27 °C

ಅನಧಿಕೃತ ನೀರು ಬಳಸಿದರೆ ಕಠಿಣ ಕ್ರಮ

Published:
Updated:

ಮುನಿರಾಬಾದ್: ತುಂಗಭದ್ರಾ ಜಲಾಶಯ ಮತ್ತು ಯೋಜನೆಯಡಿ ಬರುವ ನೀರಾವರಿ ಕಾಲುವೆಗಳಿಂದ ಅನಧಿಕೃತ ನೀರು ಪಡೆಯುವ ರೈತರು ಮತ್ತು ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಬಿ.ಎಸ್.ಆನಂದಸಿಂಗ್ ತಿಳಿಸಿದ್ದಾರೆ.  

ಸೋಮವಾರ ತುಂಗಭದ್ರಾ ಕಾಡಾ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚುಕಟ್ಟು ವ್ಯಾಪ್ತಿಯ ರೈತ ಮುಖಂಡರು ಮತ್ತು ಜನಪ್ರತಿನಿಧಿಗಳ ದೂರಿನನ್ವಯ ಅಧಿಕಾರಿಗಳು ಪರಿಶೀಲಿಸಿದಾಗ ಅನಧಿಕೃತವಾಗಿ ಪಂಪ್‌ಸೆಟ್ ಅಳವಡಿಸಿ ನೀರಾವರಿ ಮಾಡಿದ್ದು, ಕೈಗಾರಿಕೆಗಳು ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ನೀರು ಪಡೆಯುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಚರ್ಚಿಸಲು ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಶಾಸಕರ ಹಾಗೂ ನೀರಾವರಿ ಎಂಜಿನಿಯರ್‌ಗಳನ್ನು ಒಳಗೊಂಡ ಸಭೆಯನ್ನು ಇಂದು ಕರೆಯಲಾಗಿತ್ತು. ಸಭೆಯಲ್ಲಿ ನಿರ್ಣಯಿಸಿದಂತೆ ಅನಧಿಕೃತ ನೀರು ಬಳಕೆಯನ್ನು ತಕ್ಷಣ ತಡೆಗಟ್ಟಲು ಆಯಾ ಜಿಲ್ಲಾಧಿಕಾರಿ, ನೀರಾವರಿ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವನ್ನು ರಚಿಸಲಾಗುವುದು. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು. ಜಲಾಶಯದಿಂದ ನೀರು ಪಡೆಯುವ ಕಾರ್ಖಾನೆಗಳು ಮತ್ತು ಅವುಗಳು ಪಡೆಯುತ್ತಿರುವ ನೀರಿನ ಪ್ರಮಾಣವನ್ನು ಪರೀಕ್ಷಿಸಿ ವರದಿ ಸಿದ್ಧಪಡಿಸಲಾಗುತ್ತಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಕೈಗಾರಿಕೆಗಳು ಸಂಚಾರಿ ಮೋಟರ್ (ಮೂವೆಬಲ್ ಮೋಟರ್) ಜಲಾಶಯಕ್ಕೆ ಇಳಿಸಿ ನೀರು ಪಂಪ್ ಮಾಡುವ ಪದ್ಧತಿಯನ್ನು ನಿಲ್ಲಿಸಲಾಗುವುದು. ಎಲ್ಲ ಕೈಗಾರಿಕೆಗಳಿಗೆ ಜಾಕ್‌ವೆಲ್ ನಿರ್ಮಿಸಿ ಅದರಿಂದ ನೀರು ಪಡೆಯುವಂತೆ ತಾಕೀತು ಮಾಡಲಾಗುವುದು. ಜಾಕ್‌ವೆಲ್ ನಿರ್ಮಿಸದ ಕಾರ್ಖಾನೆಗಳಿಗೆ ನೀರು ಕೊಡುವುದಿಲ್ಲ. ಹೆಚ್ಚಿನ ಪ್ರಮಾಣದ ನೀರು ಪಡೆಯದಂತೆ ನಿರ್ಬಂಧಿಸಲು ಮೀಟರ್ ಅಳವಡಿಸಿ, ಅವಶ್ಯಕವೆನಿಸಿದರೆ ಸಿಸಿ ಕ್ಯಾಮೆರಾ ಕೂಡಿಸಲು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ನದಿಗೆ ಹರಿದು ಬರುವ ಮಹಾನಗರಗಳ ಮಾಲಿನ್ಯಯುಕ್ತ ನೀರಿನಿಂದ ಕಲುಷಿತವಾಗುತ್ತಿರುವ ಜಲಾಶಯದ ಹಿನ್ನೀರಿನ ಪರೀಕ್ಷೆ ಮತ್ತು ಕ್ರಮ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಕುಡಿಯುವ ಉದ್ದೇಶಕ್ಕೆ ನದಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಮಾತನಾಡಿ, ಅನಧಿಕೃತ ನೀರಾವರಿ ಮಾಡಿಕೊಂಡ ರೈತರು ಸುಳ್ಳು ಮಾಹಿತಿ ನೀಡಿ, ಬೆಳೆ ನಷ್ಟದ ನೆಪಯೊಡ್ಡಿ ತಪ್ಪಿಸಿಕೊಳ್ಳುವ ಹಾಗಿಲ್ಲ. ಎಲ್ಲ ಅನಧಿಕೃತ ಬಳಕೆದಾರರನ್ನು ನಿಯಂತ್ರಿಸಿದರೆ ನೀರು ಕೊನೆ ಭಾಗದ ರೈತರ ಹೊಲಗಳಿಗೆ ಸಿಗುತ್ತದೆ. ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಶಾಸಕರಾದ ಸಂಗಣ್ಣ ಕರಡಿ, ಪರಣ್ಣ ಮುನವಳ್ಳಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry