ಬುಧವಾರ, ನವೆಂಬರ್ 20, 2019
20 °C
ನಗರಸಭೆಯ ದಿಢೀರ್ ಕಾರ್ಯಾಚರಣೆ

ಅನಧಿಕೃತ ಪೆಟ್ಟಿಗೆ ಅಂಗಡಿ ತೆರವು

Published:
Updated:

ಕೋಲಾರ: ನಗರದ ಬಾಲಕರ ಕಾಲೇಜು ವೃತ್ತದಲ್ಲಿ ಬುಧವಾರ ಬೆಳಿಗ್ಗೆ ದಿಢೀರನೆ ಕಾರ್ಯಾಚರಣೆ ನಡೆಸಿದ ಪೌರಾಯುಕ್ತ ಮಹೇಂದ್ರಕುಮಾರ್ ನೇತೃತ್ವದ ಸಿಬ್ಬಂದಿ, ಹಳೇ ಬಸ್‌ನಿಲ್ದಾಣದವರೆಗೆ ಸ್ಥಾಪಿಸಲಾಗಿದ್ದ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರು.ಕಾಲೇಜು ವೃತ್ತದಲ್ಲಿ ಬಾಲಕರ ಸರ್ಕಾರಿ ಕಾಲೇಜು ಗೇಟ್ ಪಕ್ಕದ ಪಾದಚಾರಿ ರಸ್ತೆಯಲ್ಲಿ ಇತ್ತೀಚೆಗಷ್ಟೆ ಸ್ಥಾಪಿಸಲಾಗಿದ್ದ ಕಬ್ಬಿಣದ ಪೆಟ್ಟಿಗೆ ಅಂಗಡಿ, ಸರ್ವಜ್ಞ ಉದ್ಯಾನದ ಮುಂಭಾಗದಲ್ಲಿದ್ದ ಅಂಗಡಿಗಳು, ರಂಗಮಂದಿರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಂಭಾಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.ವಾಗ್ವಾದ: ತೆರವುಗೊಳಿಸುವ ಸಂದರ್ಭದಲ್ಲಿ ಕೆಲವು ಅಂಗಡಿ ಮಾಲೀಕರು ಪೌರಾಯುಕ್ತರೊಡನೆ ವಾಗ್ವಾದ ನಡೆಸಿದರು. ನಗರಸಭೆಯಿಂದ ಪರವಾನಗಿ ಪಡೆದು ಅಂಗಡಿ ಸ್ಥಾಪಿಸಲಾಗಿದೆ. ಕಂದಾಯವನ್ನು ಪಾವತಿಸಲಾಗುತ್ತಿದೆ ಎಂದು ಕೆಲವು ದಾಖಲೆಗಳನ್ನೂ ಪ್ರದರ್ಶಿಸಿದರು.ಆದರೆ, ಅದ್ಯಾವುದನ್ನೂ ಲೆಕ್ಕಿಸದ ಪೌರಾಯುಕ್ತರು ಮುಲಾಜಿಲ್ಲದೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು.ಪೆಟ್ಟಿಗೆ ಅಂಗಡಿಗಳನ್ನು ಸ್ಥಳದಿಂದ ತೆರವು ಮಾಡಿದ್ದೇ ಅಲ್ಲದೆ, ಮತ್ತೆ ಬೇರೆ ಕಡೆ ಸ್ಥಾಪಿಸಲು ಅವಕಾಶವಾಗದ ರೀತಿ ಅಂಗಡಿಗಳನ್ನು ನಜ್ಜುಗಜ್ಜು ಮಾಡಲಾಯಿತು.  ಬೆಳಗಿನ ಜಾವ 5.20ರ ವೇಳೆಗೆ ಶುರುವಾದ ಕಾರ್ಯಾಚರಣೆ 9.30ರವರೆಗೂ ನಡೆಯಿತು. ನಂತರ ಸಿಬ್ಬಂದಿ ಸ್ಥಳವನ್ನು ಸ್ವಚ್ಛಗೊಳಿಸಿದರು.ಕಾರ್ಯಾಚರಣೆಯಲ್ಲಿ ಕಂದಾಯಾಧಿಕಾರಿ ಚಲಪತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗರುಡಾಚಲ, ಸಹಾಯಕ ಎಂಜಿನಿಯರ್ ಕೊಟ್ರೇಶಪ್ಪ, ಆರೋಗ್ಯ ನಿರೀಕ್ಷಕ ರಮೇಶ್ ಪಾಲ್ಗೊಂಡಿದ್ದರು.ಎಚ್ಚರಿಕೆ: ನಂತರ ನಗರದ ಡೂಂಲೈಟ್ ವೃತ್ತಕ್ಕೆ ತೆರಳಿದ ಪೌರಾಯುಕ್ತರು ವೃತ್ತದ ಗಣೇಶ ದೇವಾಲಯದ ಹಿಂಭಾಗದಲ್ಲಿರುವ ಪೆಟ್ಟಿಗೆ ಅಂಗಡಿ ಮತ್ತು ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಹಣ್ಣಿನಂಗಡಿ ಮಾಲಿಕರಿಗೆ ಕೂಡಲೇ ಸ್ಥಳದಿಂದ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದರು. ಇಲ್ಲವಾದರೆ ನಗರಸಭೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)