ಮಂಗಳವಾರ, ಡಿಸೆಂಬರ್ 10, 2019
26 °C

ಅನಧಿಕೃತ ಮನೆ ನಿವಾಸಿಗಳ ಆತಂಕದ ಜೀವನ

ಕೆ.ವಿ.ನಾಗರಾಜ್/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಧಿಕೃತ ಮನೆ ನಿವಾಸಿಗಳ ಆತಂಕದ ಜೀವನ

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಬಡಾವಣೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ಕೊಂಡು ಹಲವಾರು ವರ್ಷಗಳಿಂದ ವಾಸಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರಗಳಿಲ್ಲದೆ ಆತಂಕದಿಂದ ಬದುಕು ಸಾಗಿಸುವಂತಾಗಿದೆ.ಪ್ರಮುಖವಾಗಿ ಪಟ್ಟಣದ ವಾರ್ಡ್ ಸಂಖ್ಯೆ 7ರ ಅಂಬೇಡ್ಕರ್‌ನಗರದಲ್ಲಿ 66, ವಾರ್ಡ್ ನಂ 1ರ ಹಳೆ ಮಂಡಗದ್ದೆ ರಸ್ತೆಯ ಹಿಳುವಳ್ಳಿ ವ್ಯಾಪ್ತಿಯಲ್ಲಿ 47 ಹಾಗೂ ವಾರ್ಡ್ ನಂ 3ರ ಪೌರ ಕಾರ್ಮಿಕ ಕಾಲೊನಿಯಲ್ಲಿ 31 ಜನ  ಕಳೆದ 30-40 ವರ್ಷಗಳಿಂದಲೂ ಅನಧಿಕೃತವಾಗಿ ಮನೆ ನಿರ್ಮಿಸಿ ಕೊಂಡು ವಾಸ ಮಾಡುತ್ತಿದ್ದಾರೆ, ಇವರಲ್ಲಿ ಪರಿಶಿಷ್ಟಜಾತಿ,ಪರಿಶಿಷ್ಟ ವರ್ಗ ಹಾಗೂ ಬಡತನರೇಖೆ ಗಿಂತ ಕೆಳಗಿರುವವರೇ ಅಧಿಕವಾಗಿದ್ದಾರೆ.ಆದರೆ ಇವರಿಗೆ ಇದುವರೆಗೂ ತಮ್ಮ ವಾಸದ ಮನೆಗಳಿಗೆ ಕಾಯಂ ಹಕ್ಕು ಪತ್ರ ದೊರೆಯದೆ ಹಲವು ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ.  ಕಾಯಂ ಹಕ್ಕು ಪತ್ರವಿಲ್ಲದಿರುವುದರಿಂದ ಸುಸಜ್ಜಿತವಾದ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆ ಅಥವಾ ಇನ್ಯಾವುದೇ ಯೋಜನೆಯಲ್ಲಿ ಸಾಲ ಸೌಲಭ್ಯ ದೊರೆಯದಂತಾಗಿದೆ. ಹೀಗಾಗಿ ಬಹುತೇಕರು ನಿರ್ಮಿಸಿ ಕೊಂಡಿರುವ ಮನೆಗಳು ಸೂಕ್ತ ಅಡಿಪಾಯವಿಲ್ಲದ ಕಚ್ಚಾ ಮನೆಗಳಾಗಿವೆ. ಇದರಿಂದ ಇವುಗಳು ಮಳೆಗಾಲದ ಸಂದರ್ಭದಲ್ಲಿ  ಮನೆಗಳು ಭಾಗಶಃ ಅಥವಾ ಪೂರ್ಣವಾಗಿ ಕುಸಿಯುವುದು ಸಾಮಾನ್ಯಸಂಗತಿಯಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಕಾರಣ ದಿಂದಾಗಿ ಅಂಬೇಡ್ಕರ್‌ನಗರದಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ನಿದರ್ಶನವೂ ಸಹ ಇದೆ. ಸಾಕಷ್ಟು ಮನೆಗಳ ಗೋಡೆ ಕುಸಿದಿದೆ.ಅನಧಿಕೃತವಾಗಿ ಮನೆ ನಿರ್ಮಿಸಿ ಕೊಂಡವರಿಗೆ ಹಕ್ಕು ಪತ್ರ ನೀಡುವ ಪ್ರಯತ್ನ  2002ರಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಅವಧಿಯಲ್ಲಿ ಹಾಗೂ ಹಿಂದಿನ ಪಟ್ಟಣ ಪಂಚಾಯಿತಿ ಅವಧಿಯಲ್ಲಿ ನಡೆದಿತ್ತು. ಸೆಪ್ಟೆಂಬರ್ 5,2011ರ ಆಶ್ರಯ ಸಮಿತಿ ಸಭೆ ಹಾಗೂ ನವೆಂಬರ್ 4,2011ರಂದು ನಡೆದ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ಕೊಂಡವರಿಗೆ 20ಗಿ30 ಅಳತೆಯ ನಿವೇಶನ ಉಚಿತವಾಗಿ ಕೊಡುವ ಬಗ್ಗೆ ತೀರ್ಮಾನ ತೆಗೆದು ಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದೆ. ಸಮಸ್ಯೆ ಉಳಿದೆ ಹೋಯಿತು.ತಮ್ಮ ಪಟ್ಟಣ ಪಂಚಾಯಿತಿ ಅವಧಿಯಲ್ಲಿ ಹೌಸಿಂಗ್‌ಬೋರ್ಡ್ ಕಾಲೊನಿಯಲ್ಲಿ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ಕೊಂಡವರಿಗೆ ಹಕ್ಕು ಪತ್ರ ನೀಡಲು ಮನೆಗೆ ಪ್ರತಿ ಅಡಿಗೆ ರೂ.4. ಖಾಲಿ ಜಾಗಕ್ಕೆ ಅಡಿಗೆ ರೂ.10 ನಿಗಧಿ ಪಡಿಸಲಾಗಿತ್ತು. ಹಿಳುವಳ್ಳಿ ನಿವೇಶನದಲ್ಲಿ ಮನೆ ನಿರ್ಮಿಸಿ ಕೊಂಡವರಿಗೆ  ಅಡಿಗೆ ರೂ.15 ಹಾಗೂ ಒತ್ತುವರಿ ಜಾಗಕ್ಕೆ 25 ನಿಗಧಿ ಪಡಿಸಲಾಗಿತ್ತು. ಆದರೆ ಇದಕ್ಕೆ ಕೆಲವರು ಅಡ್ಡಿವುಂಟು ಮಾಡಿದರು ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಘುವೀರ್.ಈ ಬಗ್ಗೆ `ಪ್ರಜಾವಾಣಿ' ಸಂಸದ ಕೆ.ಜಯಪ್ರಕಾಶ್‌ಹೆಗ್ಡೆ ಅವರನ್ನು ಸಂಪರ್ಕಿಸಿದಾಗ  ಅಕ್ರಮ ಮನೆ ನಿರ್ಮಿಸಿ ಕೊಂಡವರಿಗೆ ಹಕ್ಕು ಪತ್ರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಗಮನಕ್ಕೆ ತರಲಾಗಿದೆ.ಜಿಲ್ಲಾಧಿಕಾರಿಗಳು ಹಾಗೂ ತಾವು ಸ್ಥಳವನ್ನು ಒಟ್ಟಿಗೆ ಪರಿಶೀಲನೆ ಮಾಡಿ ಹಕ್ಕು ಪತ್ರ ಕೊಡುವ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಶಾಸಕ ಡಿ.ಎನ್.ಜೀವರಾಜ್.ಅನಧಿಕೃತ ಮನೆ ನಿರ್ಮಿಸಿ ಕೊಂಡವರಿಗೆ ಹಕ್ಕುಪತ್ರ ನೀಡಿದರೆ ಮಾತ್ರ ಎಲ್ಲಾ ರೀತಿ ಸೌಲಭ್ಯಗಳು ದೊರೆಯುವಂತಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಮೃತ್ಯುಂಜಯ.ಒಟ್ಟಿನಲ್ಲಿ ಇದುವರೆಗೆ ಆಡಳಿತ ನಡೆಸಿದ ಸರ್ಕಾರಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸದಿರುವುದು ವಿಷಾದದ ಸಂಗತಿಯಾಗಿದ್ದು ಇನ್ನಾದರೂ ಸರ್ಕಾರ ಅನಧಿಕೃತ ಮನೆ ನಿರ್ಮಿಸಿ ಕೊಂಡವರಿಗೆ ಹಕ್ಕು ಪತ್ರ ನೀಡಿ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡ ಬೇಕೆಂಬುದು ಬಡಾವಣೆ ನಿವಾಸಿಗಳ ಒತ್ತಾಯವಾಗಿದೆ.

 

ಪ್ರತಿಕ್ರಿಯಿಸಿ (+)