ಸೋಮವಾರ, ಮಾರ್ಚ್ 8, 2021
31 °C
ಡಿಸಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ, ಎಸ್‌ಪಿ ನೇತೃತ್ವದಲ್ಲಿ ತಂಡ ರಚನೆ

ಅನಧಿಕೃತ ಹೋಂ ಸ್ಟೇ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಧಿಕೃತ ಹೋಂ ಸ್ಟೇ ಮೇಲೆ ನಿಗಾ

ಮಡಿಕೇರಿ:  ಅನಧಿಕೃತ ಹೋಂ ಸ್ಟೇಗಳ ಬಗ್ಗೆ ದೂರು ನೀಡಿದರೆ ಅಂತಹ ಹೋಂ ಸ್ಟೇಗಳ ಮೇಲೆ ದಾಳಿ ಮಾಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಅವರ ಉಸ್ತುವಾರಿಯಲ್ಲಿ ಉಪ–ಸಮಿತಿಯನ್ನು ರಚಿಸಲಾಗಿದೆ.ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಪರಿಷತ್‌ ಸಭೆಯಲ್ಲಿ ಉಪ–ಸಮಿತಿಯನ್ನು ರಚಿಸಲಾಯಿತು.ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷರಾದ ಚೋಡುಮಾಡ ಶರೀನ್ ಸುಬ್ಬಯ್ಯ, ನಗರಸಭೆ ಅಧ್ಯಕ್ಷೆ ಜುಲೇಕಾಬಿ, ಹೋಂ ಸ್ಟೇ ಅಸೋಸಿಯೇಶನ್‌ ಸದಸ್ಯರು ಇದ್ದರು.ಈಚೆಗೆ ಅನಧಿಕೃತ ಹೋಂ ಸ್ಟೇಗಳಲ್ಲಿ ನಡೆಯುತ್ತಿರುವ ಅಕ್ರಮ ಚಟು ವಟಿಕೆಗಳು ಹಾಗೂ ಜಿಲ್ಲೆಗೆ ಕೆಟ್ಟಹೆಸರು ಬರುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಅನಧಿಕೃತ ಹೋಂ ಸ್ಟೇಗಳ ಹಾವಳಿ ತಡೆಯಬೇಕು ಎಂದು ಹೋಂ ಸ್ಟೇ ಸಂಘದ ‌ ಸದಸ್ಯರು ಒತ್ತಾಯಿಸಿದರು.ಬಾಡಿಗೆ ಮನೆ ಪಡೆದು ಹೋಂ ಸ್ಟೇ ನಡೆಸುವುದನ್ನು ನಿಷೇಧಿಸಬೇಕು, ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಸರು ನೋಂದಾಯಿಸದಿರುವರಿಗೆ ಅವಕಾಶ ನೀಡಬಾರದು. ಇಂತಹ ಅನಧಿಕೃತ ಹೋಂ ಸ್ಟೇಗಳ ಮೇಲೆ ಅಚಾನಕ್‌ ಆಗಿ ದಾಳಿ ಮಾಡಲು ಆಗ್ರಹಿಸಿದರು.ಶಾಸಕ ಕೆ.ಜಿ.ಬೋಪಯ್ಯ, ‘ಕಾಫಿ ತೋಟಗಳ ಮಧ್ಯೆದಲ್ಲಿ ದೊಡ್ಡ ದೊಡ್ಡ ಕಟ್ಟಡ ನಿರ್ಮಿಸುವುದು, ಈಜುಕೊಳ ನಿರ್ಮಿಸಿ ಹೋಂ ಸ್ಟೇ ನಡೆಸುತ್ತಿರುವುದು ಎಷ್ಟು ಸರಿ? ಇದಕ್ಕೆ ತಡೆಯೊಡ್ಡುವವರು ಯಾರು?’ ಎಂದು ಪ್ರಶ್ನಿಸಿದರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಅನಧಿಕೃತ ಹೋಂ ಸ್ಟೇಗಳನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದರು.ತಂಡದಲ್ಲಿ ಸೆಸ್ಕಾಂ, ವಾಣಿಜ್ಯ ತೆರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ, ನಗರಸಭೆ ಅಥವಾ ಸ್ಥಳೀಯ ಆಡಳಿತ (ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು) ಅಧಿಕಾರಿಗಳು ಇದರಲ್ಲಿ ಸದಸ್ಯರು ಇರುತ್ತಾರೆ. ಇದರ ಉಸ್ತುವಾರಿ ಎಸ್‌.ಪಿ ನೋಡಿಕೊಳ್ಳಲಿ. ಇದು ನಿಗದಿತ ಅವಧಿಯವರೆಗೆ (ಎರಡು ತಿಂಗಳ ಕಾಲ) ಮಾತ್ರ ತಪಾಸಣೆ ನಡೆಯಲಿ ಎಂದು ಹೇಳಿದರು. 

ಸಕಾಲ ಯೋಜನೆ: ಹೋಂ ಸ್ಟೇಗಳಿಗೆ ಅನುಮತಿ ನೀಡುವುದನ್ನು ಸಕಾಲ ಯೋಜನೆ ವ್ಯಾಪ್ತಿಯಡಿ ತರಲಾಗಿದೆ. ಇದರಿಂದ ಹೋಂ ಸ್ಟೇಗಳಿಗೆ ನಿಗದಿತ ಕಾಲಾವಧಿಯಲ್ಲಿ ಅನುಮತಿ ದೊರೆಯ ಲಿದೆ. ಅಧಿಕೃತವಾಗಿ ಹೋಂ ಸ್ಟೇ ನಡೆಸಲು ಬಯಸುವವರಿಗೆ ಅನುಕೂಲ ಎಂದು ಜಿಲ್ಲಾಧಿಕಾರಿ ಹೇಳಿದರು.ರ‍್ಯಾಫ್ಟಿಂಗ್‌: ಜಿಲ್ಲೆಯ ದುಬಾರೆಯಲ್ಲಿನ ಸಾಹಸ ಜಲಕ್ರೀಡೆ (ರ‍್ಯಾ‌ಫ್ಟಿಂಗ್‌) ಸಂಬಂಧಿಸಿ ದೂರುಗಳು ಬರುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ರಿವರ್‌ ರ‍್ಯಾಫ್ಟಿಂಗ್‌ ನಿರ್ವಹಣೆಯನ್ನು ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದರ ಜೊತೆ ಬರಪೊಳೆ ರ‍್ಯಾಫ್ಟಿಂಗ್‌ ಅನ್ನು ಕೂಡ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ ಸರ್ಕಾರಿ ಸಂಸ್ಥೆಗೆ ವಹಿಸಲು ತೀರ್ಮಾನಿಸಲಾಯಿತು.ಉಚಿತ ವೈಫೈ ಸೇವೆ:  ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಉಚಿತವಾಗಿ ವೈ–ಫೈ (ಇಂಟರ್‌ನೆಟ್‌ ಸೇವೆ) ಮತ್ತು ಇನ್ನಿತರ ಸೇವೆಗಳನ್ನು ಕಲ್ಪಿಸಲು  ಬಿಎಸ್‌ಎನ್‌ಎಲ್‌ ಮತ್ತು ಇತರೆ ಖಾಸಗಿ ಕಂಪೆನಿಗಳ ಜತೆ ಮಾತುಕತೆ ನಡೆದಿದ್ದು, ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿವಾರಿ ತಿಳಿಸಿದರು. 

ಮಲ್ಟಿ ಲೆವೆಲ್‌ ಪಾರ್ಕಿಂಗ್‌: ಮಡಿಕೇರಿ ನಗರಕ್ಕೆ ಪ್ರವಾಸಿಗರ ಸಂಖೈ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನ ನಿಲುಗಡೆಗೆ 'ಮಲ್ಟಿ ಲೆವಲ್ ಪಾರ್ಕಿಂಗ್' ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಮಡಿಕೇರಿಯ ಕಾವೇರಿ ಕಲಾಕ್ಷೇತ್ರವಿರುವ ಜಾಗದಲ್ಲಿ  ಮಾಡ ಬಹುದಾಗಿದೆ ಎಂದು ಡಿಸಿ ಹೇಳಿದರು.

ಶಾಸಕ ಅಪ್ಪಚ್ಚು ರಂಜನ್‌, ಈ ಜಾಗ ಸಾಕಾಗದು.ಎಪಿಎಂಸಿಗೆ ಸೇರಿದ ಜಾಗದಲ್ಲಿ ಮಾಡಬಹುದು ಎಂದರು.ಶಾಸಕ ಕೆ.ಜಿ. ಬೋಪಯ್ಯ ಅದಕ್ಕೆ ‘ಈ ಜಾಗವನ್ನು ಇತರ ಕೆಲಸಗಳಿಗೆ ಪಡೆಯಲು ಸಾಧ್ಯವಿಲ್ಲವೆಂದು ರಾಜ್ಯ ಮಟ್ಟದ ಐಎಎಸ್‌ ಅಧಿಕಾರಿಗಳೇ ತಡೆ ಒಡ್ಡಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಾವು ಈ ಕೂಡ ಈ ಜಾಗವನ್ನು ಪಡೆಯಲು ಯತ್ನಿಸಿದ್ದೇವು. ಆದರೆ, ಇದು ಆಗಲಿಲ್ಲ ಕಾನೂನಿನ ಅಡಚಣೆ ಇದೆ’ ಎಂದರು.ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಸತ್ಯಾ ಅವರು, ಈಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬೇರೆಡೆ ಸ್ಥಳಾಂತರಿಸಿ, ಇಲ್ಲಿರುವ ವಿಸ್ತಾರವಾದ ಜಾಗದಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಮಾಡಬಹುದು ಎಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ತಿವಾರಿ ಮಾತನಾಡಿ, ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಮಾಡಲು ಸೂಕ್ತ ಜಾಗವನ್ನು ತಿಳಿಸಿದರೆ, ಸರ್ಕಾರದ ವತಿಯಿಂದಲೇ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಮಡಿಕೇರಿಯ ವಾಹನ ಪಾರ್ಕಿಂಗ್‌ ಸಮಸ್ಯೆ ನೀಗಿಸ ಬಹುದು ಎಂದರು. ಸ್ಥಳ ಅಂತಿಮ ಆಗದೇ ಚರ್ಚೆ ಮುಕ್ತಾಯವಾಯಿತು. ***

ಹೋಂ ಸ್ಟೇಗಳಲ್ಲಿನ ಅನಾಚಾರದಿಂದ ಜಿಲ್ಲೆ ಜನರು ತಲೆತಗ್ಗಿಸುವ ಸ್ಥಿತಿ ಇದೆ. ಹೋಂ ಸ್ಟೇ ಪರಿಕಲ್ಪನೆ   ಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ

ಕೆ.ಜಿ. ಬೋಪಯ್ಯ

ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.