ಅನನ್ಯ ನೃತ್ಯ ಸಿಂಚನ

7

ಅನನ್ಯ ನೃತ್ಯ ಸಿಂಚನ

Published:
Updated:

ಕಪಿಲ ಮುನಿಯ ಉಗ್ರಕೋಪಕ್ಕೆ ಸಾಗರವಂಶ ಸುಟ್ಟು ಭಸ್ಮವಾಯಿತು. ಸಂತತಿಯ ಕುಡಿಯಾಗಿ ಉಳಿದ ಮೊಮ್ಮಗ ಭಗೀರಥ ತನ್ನ ಹಿರಿಯರಿಗೆಲ್ಲಾ ಮೋಕ್ಷ ಸಿಗಲಿ ಎಂಬ ಕಾರಣಕ್ಕೆ ಬ್ರಹ್ಮನನ್ನು ಒಲಿಸಲು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದ.ಆಕೆಯ ಭೋರ್ಗರೆತಕ್ಕೆ ಧರೆ ತತ್ತರಿಸುವಂತಾದಾಗ ಮತ್ತೆ ಶಿವನನ್ನು ಪ್ರಾರ್ಥಿಸಿ ಆಕೆಯ ರಭಸವನ್ನು ಇಳಿಸಿದ ಭಗೀರಥನ ಪ್ರಯತ್ನದ ಪೌರಾಣಿಕ ಕಥೆ ಕಾಲಕಾಲಕ್ಕೆ ಕಲೆಯ ವಿವಿಧ ಪ್ರಕಾರಗಳಲ್ಲಿ ಹೇಳುತ್ತಲೇ ಬರಲಾಗಿದೆ.  ಶಿವನ ಶಿರದಿಂದ ಧುಮ್ಮಿಕ್ಕಿ, ಧವಳ ಗಿರಿಯಿಂದ ಹರಿದಿದ್ದ ಸ್ಫಟಿಕದಷ್ಟು ಶುದ್ಧವಾದ  ಗಂಗೆ ಇಂದು ಮಲಿನಳಾಗಿದ್ದಾಳೆ, ಕಲ್ಮಶದೊಂದಿಗೆ ಹೆಣ ಎಸೆಯುವ ದೊಡ್ಡದೊಂದು ಕೊಳಚೆ ಪ್ರದೇಶದಂತಾಗಿದೆ ನದಿ ದಡ.ಮನುಕುಲದ ಒಳಿತಿಗಾಗಿ  ಸ್ವರ್ಗದಿಂದ ಭೂಲೋಕಕ್ಕೆ ಇಳಿದ ದೇವತೆ ಇಂದು ತನ್ನ ಉಳಿವಿಗೆ  ಪ್ರಾರ್ಥಿಸಿಕೊಳ್ಳಬೇಕಾಗಿದೆ. ಈ ವಿಪರ್ಯಾಸವನ್ನು ಆಧಾರವಾಗಿಟ್ಟುಕೊಂಡು, ನವರಸಗಳನ್ನೂ ಒಡಿಸ್ಸಿ ನೃತ್ಯಪಟು ಸರಿತಾ ಮಿಶ್ರಾ ಪ್ರಸ್ತುತ ಪಡಿಸಲಿದ್ದಾರೆ. `ಹೂಬಿಡುವ ಮರ~ (ದಿ ಫ್ಲವರಿಂಗ್ ಟ್ರೀ) ಕತೆಯ ಮೂಲ ಹೃದಯಸ್ಪರ್ಶಿ ಜಾನಪದ ಕಥನದಲ್ಲಿದೆ.  ಆಕೆ ಒಬ್ಬ ವಿಶೇಷ ಶಕ್ತಿಯುಳ್ಳ ಹುಡುಗಿ. ನೃತ್ಯದಲ್ಲಿ ತಲ್ಲೆನಳಾಗುತ್ತಳೇ ಹೂ ಬಿಡುವ ಮರವಾಗಿ ಬದಲಾಗುವ ವೈಶಿಷ್ಟ್ಯ ಅವಳದು.

 

ಹೀಗೆ ಅರಳಿದ ಹೂವಿನ ಘಮಲು ಬಹಳ ದೂರದವರೆಗೆ ಹಬ್ಬುತ್ತಿತ್ತು. ಆ ಕಂಪನ್ನು  ಅರಸುತ್ತ ಬಂದ ಯುವಕ ಆಕೆ ನೃತ್ಯ ನೋಡಿ ಮಾರು ಹೋಗುತ್ತಾನೆ. ನರ್ತಿಸುತ್ತಲೇ  ಮರವಾಗಿ ಬದಲಾಗುವ ಪರಿ ನೋಡಿ ಬೆರಗಾಗುತ್ತಾನೆ. ಹೀಗೆ ಒಂದಾದ ಪ್ರೇಮಿಗಳು ಸ್ವಲ್ಪ ಸಮಯದ ಬಳಿಕ ಅನಿವಾರ್ಯ ಕಾರಣಗಳಿಂದ ದೂರವಾಗುತ್ತಾರೆ.ಆತ ಮರಳಿದಾಗ ಕಾಲ ಬದಲಾಗಿತ್ತು. ಹೂದುಂಬಿಕೊಂಡಿದ್ದ ಮರ ಬೋಳಾಗಿ ನಿಂತಿತ್ತು. ತನ್ನ ಪ್ರೇಯಸಿಯನ್ನು ಹುಡುಕಲಾರದೆ ನೆನಪುಗಳಲ್ಲಿಯೇ ಕಳೆದು ಹೋಗುತ್ತಾನೆ. ಕೊನೆಗೂ ಆಕೆ ಮತ್ತೆ ಚಿಗುರಿ, ಹೂ ಅರಳಿ,  ಮತ್ತೆ ತನ್ನ ಪ್ರಿಯಕರನನ್ನು ಸೇರುತ್ತಾಳೆ. ಈ ಜನಪದ ಕತೆಯನ್ನೇ  ಚಿತ್ರಾ ಚಂದ್ರಶೇಖರ್ ಸೌಮಾನ್ಸ ನೃತ್ಯ ಪ್ರಕಾರದ ಮೂಲಕ ಪ್ರದರ್ಶಿಸಲಿದ್ದಾರೆ. ಆಕೆಯ ಸಂತಸ, ನೋವು, ಪ್ರೇಮಿಗಳ ವಿಯೋಗದ ರಸಗಳು ಹೆಜ್ಜೆ ಗೆಜ್ಜೆಗಳಲ್ಲಿ ಧ್ವನಿಸಲಿವೆ.ಅನನ್ಯ ಸಂಸ್ಥೆಯು `ನೃತ್ಯ ಸಿಂಚನ~ ಕಾರ್ಯಕ್ರಮದಲ್ಲಿ ಈ ಎರಡು ನೃತ್ಯ ರೂಪಕಗಳನ್ನು ಆಯೋಜಿಸಿದೆ.

ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರಂ. ಶುಕ್ರವಾರ ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry