ಅನನ್ಯ ಮಿತ್ರ

7

ಅನನ್ಯ ಮಿತ್ರ

Published:
Updated:

ಈ ಬಾರಿಯ ಪ್ರತಿಷ್ಠಿತ `ಅನಕೃ ಪ್ರಶಸ್ತಿ~ ಕನ್ನಡದ ಹೆಸರಾದ ಲೇಖಕ ಪ್ರೊ. ಅ.ರಾ.ಮಿತ್ರರ ಮಡಿಲು ಸೇರಿದೆ. ಜೊತೆಗೆ ಲಕ್ಷ ರೂಪಾಯಿಯ ತಾಂಬೂಲ ವೀಳ್ಯವೂ ಅದರ ಬುಡಕ್ಕಿದೆ. ಈ ಪ್ರಶಸ್ತಿ, ಮಿತ್ರರು ಕಳೆದ ಐವತ್ತು ವರ್ಷಗಳಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಮಾಡಿದ ಒಟ್ಟು ಸಾಧನೆಗಾಗಿಯೇ ಬಂದದ್ದಾದರೂ ಅವರ ಇತ್ತೀಚಿನ ಅಪೂರ್ವಕೃತಿ `ಕುಮಾರವ್ಯಾಸ ಭಾರತ-ಕಥಾಮಿತ್ರ~ವೂ ಅದಕ್ಕೆ ಮುಖ್ಯ ಕಾರಣವಾಗಿದೆ.`ಕುಮಾರವ್ಯಾಸ ಭಾರತ~ವನ್ನು ತಿರುತಿರುಗಿ ಓದಿ, ಚಿಂತಿಸಿ ಮತ್ತೆ ಮತ್ತೆ ಮೆಲುಕುಹಾಕಿ, ಆನಂದಿಸಿ ರಕ್ತಗತ ಮಾಡಿಕೊಂಡ ಯಾರಾದರೂ ಇಬ್ಬರ ಹೆಸರನ್ನು ಹೇಳಿ ಎಂದರೆ ನಾನು ಅ.ರಾ.ಮಿತ್ರರಿಗೆ ನನ್ನ ಮೊದಲ ಓಟು ಹಾಕುತ್ತೇನೆ. ಅದಕ್ಕೆ ಸರಿಸಮನಾದ ಎರಡನೆಯ ಹೆಸರು ನನಗೆ ಹೊಳೆಯುತ್ತಿಲ್ಲ. ಆ ಭಾರತವನ್ನು ಜೀವನಪೂರ್ತಿ ಗಮಕವಾಗಿ ವಾಚಿಸಿ ವ್ಯಾಖ್ಯಾನ ಮಾಡಿ, ನಾಡಿನಾದ್ಯಂತ ಅದನ್ನು ಪ್ರಸಾರ ಮಾಡಿದ ಹಿರಿಯರನ್ನು ನಾನು ಮರೆತಿಲ್ಲ. ಆದರೆ ಇತರ ಶ್ರೇಷ್ಠ ಕನ್ನಡ ಕಾವ್ಯಗಳ ಗಾಢ ಪರಿಚಯವನ್ನು ಮಾಡಿಕೊಂಡಿದ್ದು, ಕುಮಾರವ್ಯಾಸನ ಕಥನ ಕ್ರಮವನ್ನು, ಪಡೆನುಡಿಗಳನ್ನು, ಸದ್ಯಕ್ಕೆ ಲುಪ್ತವಾಗಿರುವ ವಿಶಿಷ್ಟ ಶಬ್ದಗಳನ್ನು, ಅವನ ವಾಕ್ಯವಕ್ರತೆಗಳ ಸೊಗಸನ್ನು, ವಿಚಿತ್ರ ವ್ಯಾಕರಣಾಂಶಗಳ ಸೃಷ್ಟಿಯನ್ನು ಮನೋಗತ ಮಾಡಿಕೊಂಡು ಅದನ್ನು ರಸಾತ್ಮಕವಾದ ಹೊಸಗನ್ನಡ ಧಾರೆಯಾಗಿ ಪುಸ್ತಕ ರೂಪದಲ್ಲಿ ಇಡಿಯಾಗಿ ಹರಿಯಬಿಟ್ಟವರು ಮಾತ್ರ ಮಿತ್ರರೇ.ಅವರ ಕುಮಾರವ್ಯಾಸ ಉಪಾಸನೆ ನಿನ್ನೆ ಮೊನ್ನೆಯದಲ್ಲ; ಬಾಲ್ಯದಲ್ಲಿಯೇ ಮೊಳಕೆಯೊಡೆದದ್ದು. ಕುಮಾರವ್ಯಾಸನನ್ನು ಕುರಿತು ಅವರು ಐನೂರಕ್ಕೂ ಮೀರಿ ಭರ್ಜರಿ ಉಪನ್ಯಾಸ ನೀಡಿದ್ದಾರೆ. ಶ್ರೀಮತಿ ನಾಗವಲ್ಲಿಯವರ ವಾಚನಕ್ಕೆ ಸರಿಮಿಗಿಲಾಗಿ ಐವತ್ತು ಧ್ವನಿಮುದ್ರಿಕೆಗಳಲ್ಲಿ ಉತ್ಕೃಷ್ಟ ವ್ಯಾಖ್ಯಾನ ನೀಡಿದ್ದಾರೆ. ತನ್ನ ಕೃತಿ `ಕಾವ್ಯಕೆ ಗುರು~ ಎನ್ನುವ ಕವಿಯ ಹೆಮ್ಮೆಯ ಮಾತನ್ನು ಸಹೃದಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಮ್ಮ ರಸಾನುಭವವನ್ನು ಹತ್ತಿಕ್ಕಿಕೊಳ್ಳಲಾರದವರಂತೆ, `ಸುಧಾ~ ವಾರಪತ್ರಿಕೆಯಲ್ಲಿ ಎಪ್ಪತ್ತೈದು ಕಂತುಗಳಲ್ಲಿ ಅದನ್ನು ಧಾರಾವಾಹಿಯಾಗಿ ಹರಿಸಿ ಕರ್ನಾಟಕದ ಮನೆಮನೆಯನ್ನು ಮುಟ್ಟಿದ್ದಾರೆ. ಈ ಕೃತಿ ಡಾ. ಕೃಷ್ಣಶಾಸ್ತ್ರಿಗಳ `ವಚನ ಭಾರತ~ವನ್ನು ಹೋಲುವಂಥದು. ಶಾಸ್ತ್ರಿಗಳು ತಮ್ಮ ಆಕರ್ಷಕ ಗದ್ಯಶೈಲಿಯಲ್ಲಿ ವ್ಯಾಸರನ್ನು ಕನ್ನಡಿಗರಿಗೆ ನೀಡಿ ಮಾಡಿದ ಸೇವೆಯನ್ನು ಮಿತ್ರರು ಕುಮಾರವ್ಯಾಸನ ವಿಷಯಕ್ಕೆ ಮಾಡಿದ್ದಾರೆ.ತಮ್ಮ ಬರೆಹಗಳಿಂದ, ವಿಶಿಷ್ಟ ಉಪನ್ಯಾಸಗಳಿಂದ, ವಿನೋದಪೂರ್ಣ ಮಾತುಕತೆಗಳಿಂದ ಬಹಳ ಜನಪ್ರಿಯರಾದ ವ್ಯಕ್ತಿ ಮಿತ್ರ. ಅವರದು ಆಕರ್ಷಕವಾದ ಮಾತುಗಾರಿಕೆ. ನಾಲ್ಕು ವರ್ಷಗಳ ಹಿಂದೆ ಅಮೆರಿಕದ ವಾಷಿಂಗ್‌ಟನ್ ಡಿಸಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಅವರ ಭಾಷಣ ಕೇಳಲು ಜನ ಕಿಕ್ಕಿರಿದು ಸೇರಿದ್ದರು. ನಾನೂ ಅಲ್ಲಿದ್ದೆ. ಅವರ ಇಡೀ ಉಪನ್ಯಾಸವನ್ನು ಜನ ಮೈಯೆಲ್ಲ ಕಿವಿಯಾಗಿ ಕೇಳಿದರು. ನಡುವೆ ಬಾರಿಬಾರಿಗೂ ಪ್ರಶಂಸೆಯ ಚಪ್ಪಾಳೆ ಬೇರೆ. ಅದು ಮುಗಿದಾಗ, ಎಂಥ ಸೊಗಸಾದ ಉಪನ್ಯಾಸ ಎಂದು ಎಲ್ಲರ ಮುಖದಲ್ಲಿ ಮೆಚ್ಚುಗೆ: ಹಾಗೆಯೇ ಅದು ಮುಗಿದೇ ಹೋಯಿತಲ್ಲ ಎಂದು ಒಂದು ಬಗೆಯ ಪೆಚ್ಚುಕಳೆ.ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದ ಮಿತ್ರ ಮುಂದೆ ಸರ್ಕಾರೀ ಕಾಲೇಜಿನಲ್ಲಿ ಅಧ್ಯಾಪಕರಾದರು. ಜನಪ್ರಿಯ ಅಧ್ಯಾಪಕ ಎಂದು ಹೋದ ಕಡೆಯಲ್ಲೆಲ್ಲ ಮೆಚ್ಚುಗೆ ಗಳಿಸಿದರು. ಕಡೆಯಲ್ಲಿ, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರೂ ಆಗಿ ನಿವೃತ್ತರಾದರು.

ಮಿತ್ರ ನಾಡಿಗೆ ಮೊದಲು ಪ್ರಕಟವಾದದ್ದು ಒಬ್ಬ ಸತ್ವಶಾಲೀ ಪ್ರಬಂಧಕಾರರಾಗಿ.ಕನ್ನಡದ ಪ್ರಬಂಧ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಾ.ಕುಲಕರ್ಣಿ, ಪುತಿನ, ಎ.ಎನ್.ಮೂರ್ತಿರಾವ್, ತೀನಂಶ್ರೀ, ಗೊರೂರು, ಪ್ರಭುಶಂಕರರಂಥ ಶ್ರೇಷ್ಠ ಪ್ರಬಂಧಕಾರರ ಸಾಲಿಗೆ ಮಿತ್ರ ಸೇರುತ್ತಾರೆ. `ಆರತಕ್ಷತೆ~ ಮತ್ತು `ನಾನೇಕೆ ಕೊರೆಯುತ್ತೇನೆ~ ಎಂಬ ಎರಡು ದೊಡ್ಡ ಪ್ರಬಂಧ ಸಂಪುಟಗಳಲ್ಲಿ ಅವರ ನೂರು ಪ್ರಬಂಧಗಳು ಸಂಗ್ರಹಗೊಂಡಿವೆ. `ಆರತಕ್ಷತೆ~ಯಂಥ ಪ್ರಬಂಧದಲ್ಲಿ ಮಿತ್ರರ ಕಲ್ಪನಾವಿಲಾಸ ಮತ್ತು ಸಂಪದ್ಭರಿತವಾದ ಮೋಹಕ ಗದ್ಯಶೈಲಿಯನ್ನು ಕಾಣಬಹುದು. ಬಹುಮಟ್ಟಿಗೆ ಅವರ ಎಲ್ಲ ಪ್ರಬಂಧಗಳಲ್ಲಿಯೂ ಪ್ರಾಚೀನರಿಂದ ಸಮಕಾಲೀನರವರೆಗೆ ಶ್ರೇಷ್ಠ ಕವಿಗಳ ಸಾಲುಗಳು ಸಮಯೋಚಿತವಾಗಿ ಹಣಿಕಿ ಪ್ರಬಂಧಕ್ಕೆ ಹೊಸ ಆಯಾಮವನ್ನು ಕೊಡುತ್ತವೆ. ಅವರ ಎಲ್ಲ ಪ್ರಬಂಧಪತ್ತಲಗಳಿಗೂ ನಿರ್ಮಲ ಹಾಸ್ಯದ ಜರಿಯಂಚು, ಒಡಲುಗಳು ಇದ್ದೇ ಇರುತ್ತವೆ. `ಬೀಳ್ಕೊಡಿಗೆ~, `ಬಾಲ್ಕನಿಯ ಬಂಧುಗಳು~, `ಕಿರುದಾರಿ~ ಮೊದಲಾದ ಬರೆಹಗಳಲ್ಲಿ ಸೂಕ್ಷ್ಮಚಿಂತನೆಯ ಹೊಳಹುಗಳೂ ಇವೆ.ಮಿತ್ರರ `ವಚನಕಾರರು ಮತ್ತು ಶಬ್ದಕಲ್ಪ~ ಎಂಬ ಪುಸ್ತಕ ಕನ್ನಡಕ್ಕೆ ಹೊಸಬಗೆಯ ಕೊಡುಗೆ. ವಚನ ಸಾಹಿತ್ಯದ ಬಗ್ಗೆ ಈವರೆಗೆ ವಿಪುಲವಾದ ವಿಮರ್ಶೆ ಬಂದಿದೆ. ಆದರೆ ಮಿತ್ರರ ಈ ಕೃತಿ ಮಾತ್ರ ಆ ವಿಮರ್ಶೆಯ ರಾಶಿಯಲ್ಲೇ ಅನನ್ಯವಾದದ್ದು. ಇತರ ಬರೆಹಗಳೆಲ್ಲ ವಚನಗಳ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಶಯಗಳನ್ನು ವಿವರಿಸುವಂಥವು. ಆದರೆ ವಚನಕಾರರಿಂದ ಹೊಸ ಶಬ್ದಸೃಷ್ಟಿ ಮತ್ತು ಮಾತಿನ ಬಗೆಬಗೆ ವಿನ್ಯಾಸಗಳನ್ನು ಕುರಿತು ವಿಶೇಷ ಜಿಜ್ಞಾಸೆ ನಡೆದಿರುವುದು ಈ ಕೃತಿಯಲ್ಲಿಯೇ.ಛಂದಸ್ಸಿನಂಥ ಕ್ಲಿಷ್ಟಶಾಸ್ತ್ರದಲ್ಲಿ ಮಿತ್ರರ ಪ್ರೌಢಗ್ರಹಿಕೆಯನ್ನು ಮತ್ತು ಪದ್ಯರಚನಾ ಸಾಮರ್ಥ್ಯವನ್ನು ಕೂಡಿಯೇ ಸೂಚಿಸುವ ಗ್ರಂಥ ಅವರ `ಛಂದೋಮಿತ್ರ~. ಕನ್ನಡ ಛಂದಸ್ಸನ್ನು ಕುರಿತು ಒಂದು ಸಹಸ್ರ ವರ್ಷದಷ್ಟು ಪ್ರಾಚೀನವಾದ ನಾಗವರ್ಮನಿಂದ ಹಿಡಿದು ಈ ಕಾಲದ ಅನೇಕ ವಿದ್ವಾಂಸರು ಬರೆದಿದ್ದಾರೆ. ಆದರೆ ಛಂದೋಮಿತ್ರ ಅವುಗಳೆಲ್ಲಕ್ಕಿಂತ ಭಿನ್ನವಾದ ಸ್ವರೂಪದ್ದು. ನಾಗವರ್ಮನ ನಂತರ ರೂಪುಗೊಂಡ ವಚನ, ಕೀರ್ತನೆ, ಸಾಂಗತ್ಯ, ಆಧುನಿಕ ಛಂದಸ್ಸು ಇವುಗಳನ್ನೂ ಈ ಗ್ರಂಥ ಒಳಗೊಂಡಿದೆ. ಅಷ್ಟೇ ಅಲ್ಲ, ಹೇರಳವಾಗಿ ಕೊಡಲಾಗಿರುವ ನಿದರ್ಶನ ಪದ್ಯಗಳು ಕೂಡ ಸ್ವತಃ ಲೇಖಕರೇ ರಚಿಸಿದಂಥವು. ಇವು ಶಾಸ್ತ್ರನಿರೂಪಣೆಗೆ ಸ್ವಲ್ಪವೂ ಧಕ್ಕೆ ತಾರದೆ ತುಂಬ ವಿನೋದಪರ ರಚನೆಗಳಾಗಿರುವುದು ಒಂದು ವಿಶೇಷ.`ಪ್ರೇಮನದಿಯ ದಡಗಳಲ್ಲಿ~ ಮಿತ್ರರ ಇನ್ನೊಂದು ಗಮನಾರ್ಹ ಕೃತಿ. ಭಾರತೀಯ ಪುರಾಣ, ಜಾನಪದ ಮತ್ತು ಪ್ರಾಚೀನ ಕಾವ್ಯಗಳಲ್ಲಿ ಬರುವ ಅನೇಕ ಕಥಾ ಬಿಂದುಗಳನ್ನು ಆಧರಿಸಿ ರೂಪಿಸಿದ ಇಪ್ಪತ್ತೊಂದು ಕಥೆಗಳು ಇವು. ಪಾಶ್ಚಾತ್ಯ ಕೃತಿಮೂಲಗಳಿಂದ ಆಯ್ದುಕೊಂಡ ಕಥಾ ವಸ್ತುಗಳೂ ಇವೆ. ಲೇಖಕರು ಮೂಲದ ಕಥಾನಕ್ಷೆಯನ್ನಷ್ಟೇ ಸ್ವೀಕರಿಸಿ, ತಮ್ಮ ಯಥೋಚಿತ ಕಲ್ಪನೆಯಿಂದ ಅವಕ್ಕೆ ಹೊಸ ವಿವರಗಳನ್ನು, ಸಂವಾದವನ್ನು, ನಾಟಕೀಯ ಅಂಶಗಳನ್ನು ಅಳವಡಿಸಿದ್ದಾರೆ. ಈ ಕಥೆಗಳು ವೈವಿಧ್ಯಪೂರ್ಣವಾಗಿದೆ. ಬೃಹಸ್ಪತಿಯ ಪತ್ನಿಯಾದ ತಾರೆ ತನ್ನ ಗಂಡನ ಶಿಷ್ಯನಾದ ಚಂದ್ರನನ್ನೇ ಒಲಿದು ಕೂಡಿ ಒಬ್ಬ ಮಗನನ್ನೂ ಪಡೆದು ನಂತರ ಗಂಡನ ಮನೆಗೆ ಮರಳಿದ `ಚಂದ್ರಮೋಹನ~ ಎಂಬ ಪ್ರಣಯ ಕಥೆ, ಮಗಳಾದ ಸರಸ್ವತಿಯನ್ನೇ ಮದುವೆಯಾಗಿಬಿಟ್ಟ ಬ್ರಹ್ಮನ ವಿಚಿತ್ರ ಕಥೆ, ಅಣ್ಣನಾದ ಯಮನನ್ನೇ ಮದುವೆಯಾಗುವ ಹಟತೊಟ್ಟು, ಅವನು ಒಪ್ಪದಿದ್ದಾಗ ಯಮುನಾನದಿಯಾಗಿ ಭೂಮಿಗೆ ಹರಿದುಹೋದ ಯಮಿಯ ಕಥೆ- ಇವೆಲ್ಲ ತುಂಬ ಮಾನವೀಯವಾಗಿ ನಿರೂಪಿತವಾಗಿದೆ.`ಮಹಾಭಾರತದ ಪಾತ್ರ ಸಂಗತಿಗಳು~ ಮಿತ್ರರು ಎರಡು ವರ್ಷಗಳ ಹಿಂದೆ ಹೊರತಂದ ಮೂರು ಸಂಪುಟಗಳ ಕುತೂಹಲಕರವಾದ ಉಪಯುಕ್ತ ಗ್ರಂಥ. ಮಹಾಭಾರತ ಕಾವ್ಯವನ್ನು ಬಲ್ಲವರಿಗೆ ಪಾಂಡವರು, ಕೌರವರು, ಯಾದವರು, ವಿರಾಟರು ಮೊದಲಾದವರಲ್ಲಿ ಬರುವ ಮುಖ್ಯ ಪಾತ್ರಗಳಷ್ಟೇ ಗೊತ್ತು. ಇವಲ್ಲದೆ ನೂರಾರು ಪುಟ್ಟ ಪಾತ್ರಗಳೂ ಅಲ್ಲಿವೆ. ಕೃಷ್ಣನ ಸಾರಥಿಯಾದ ದಾರುಕ, ಪರಾಶರರ ತಾಯಿ ಅದೃಶ್ಯಂತಿ, ಘಟೋತ್ಕಚನ ಮಗ ಡುಂಡುಭ- ಇಂಥ ಇನ್ನೂರ ಎಂಬತ್ತು ಪಾತ್ರಗಳನ್ನು ಕಲೆಹಾಕಿ ಮಿತ್ರ ಆ ಪಾತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.ಹಾಗೆಯೇ ಆ ಕಾಲದ ನದಿಗಳು, ಸಪ್ತಸಾಗರಗಳು, ಜಂಬೂದ್ವೀಪ, ಚಕ್ರವ್ಯೆಹದಂಥ ಯುದ್ಧವ್ಯೆಹಗಳ ವಿವರಗಳೂ ಇವೆ. ಕನ್ನಡ, ತೆಲುಗು, ಹಿಂದಿ, ಸಂಸ್ಕೃತಗಳಲ್ಲಿನ ಮಹಾಭಾರತಗಳು, ಅವುಗಳ ವ್ಯಾಖ್ಯಾನಗಳು, ಪುರಾಣ ಚರಿತ್ರಕೋಶಗಳು- ಇವನ್ನೆಲ್ಲ ಅಧ್ಯಯನ ಮಾಡಿ ರಚಿಸಿದ ಒಂದು ಮೌಲಿಕಗ್ರಂಥ ಇದು.`ಒಳನೋಟಗಳು~ ಎಂಬ ಎಂಟು ಸಾಹಿತ್ಯಕ ಲೇಖನಗಳ ಸಂಕಲನದಲ್ಲಿ ಮಿತ್ರರು ಲಕ್ಷ್ಮೀಶ, ಪುರಂದರದಾಸ ಮೊದಲಾದ ಕವಿಗಳ ಬಗ್ಗೆ ಮತ್ತು ಕಾವ್ಯಮೀಮಾಂಸೆ, ಛಂದಸ್ಸುಗಳ ಬಗ್ಗೆ ಬರೆದಿದ್ದಾರೆ. `ಕವಿಗಳ ಬೆನ್ನೇರಿ~ ಎಂಬ ಅವರ ಇನ್ನೊಂದು ಸೊಗಸಾದ ಪುಸ್ತಕ ಈಚೆಗೆ ಪ್ರಕಟವಾಗಿದೆ.ಅ.ರಾ. ಮಿತ್ರರ ಸಾಹಿತ್ಯ ಸೇವೆಯನ್ನು ಗೌರವಿಸಿ ಈ ಹಿಂದೆಯೇ ಅವರಿಗೆ ಶಿವರಾಮಕಾರಂತ ಪ್ರಶಸ್ತಿ, ಗೊರೂರು ಪ್ರಶಸ್ತಿ ಮತ್ತು ವೆಂಕಟಾಚಲಶಾಸ್ತ್ರಿ ವಿದ್ವತ್ ಪ್ರಶಸ್ತಿಗಳು ಸಂದಿವೆ. ಈಗ ಕನ್ನಡದ ಕಾದಂಬರಿ ಲೋಕದ ಸಾರ್ವಭೌಮ ಎಂದು ಹೆಸರಾದ ಅನಕೃ ಪ್ರಶಸ್ತಿ ಅವರನ್ನು ಒಲಿದು ಬಂದಿದೆ.ಕೌಟುಂಬಿಕ ಜೀವನದಲ್ಲೂ ಮಿತ್ರ ಅದೃಷ್ಟವಂತರು. ಮನೆಗೆ ಬಂದವರನ್ನು ನಗುನಗುತ್ತ ಆದರಿಸುವ ಪತ್ನಿ ಲಲಿತಾ, ಅಧ್ಯಯನ ಕಾರ್ಯದಲ್ಲಿ ತಂದೆಗೆ ನೆರವಾಗುವ ಮಗಳು ಸೌಮ್ಯ, ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ಮಗ ಕೀರ್ತಿ ಇದು ಮಿತ್ರರ ಹಿತಮಿತವಾದ ಕುಟುಂಬ.

(ಬೆಂಗಳೂರಿನ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಇಂದು ಅ.ರಾ.ಮಿತ್ರರಿಗೆ ಅ.ನ.ಕೃ. ಪ್ರಶಸ್ತಿ ಪ್ರದಾನ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry