ಅನನ್ಯ ಶೈಲಿಯ ಆಟಗಾರ...

7

ಅನನ್ಯ ಶೈಲಿಯ ಆಟಗಾರ...

Published:
Updated:
ಅನನ್ಯ ಶೈಲಿಯ ಆಟಗಾರ...

ಸಚಿನ್ ತೆಂಡೂಲ್ಕರ್ ಅವರ ಈ ಎತ್ತರದ ಸಾಧನೆಯ ಸಂದರ್ಭದಲ್ಲಿ ಮತ್ತೆ ಮತ್ತೆ ರಮಾಕಾಂತ್ ಅಚ್ರೇಕರ್ ನೆನಪಾಗುತ್ತಾರೆ. ಬಹುಶಃ ಅಚ್ರೇಕರ್ ಅದೊಂದು ದಿನ ತೆಗೆದುಕೊಂಡ ಆ ತೀರ್ಮಾನ ಒಬ್ಬ ಸಚಿನ್ ತೆಂಡೂಲ್ಕರ್ ಅವರನ್ನು ರೂಪಿಸಿತು ಎಂಬುದನ್ನು ನಾವು ಮರೆಯುವಂತಿಲ್ಲ. ಸಚಿನ್ ಅವರ ಬಲಗೈ `ಗ್ರಿಪ್' ಬಹಳ ವಿಶಿಷ್ಟವಾದುದು.ಸಾಮಾನ್ಯವಾಗಿ ಈ `ಗ್ರಿಪ್' ಸ್ವಲ್ಪ ಮೇಲಿರುತ್ತೆ. ಇದು ಸಾಂಪ್ರದಾಯಿಕವಾಗಿರುವುದಕ್ಕಿಂತ ಒಂದಿಷ್ಟು ಭಿನ್ನ. ಇದರಿಂದಾಗಿ ಬ್ಯಾಟ್‌ನ `ಹ್ಯಾಂಡಲ್' ಮೇಲೆ ಬಲಗೈ ಮತ್ತು ಎಡಗೈ ನಡುವೆ ಒಂದಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಸ್ಟ್ರೋಕ್‌ಗಳಿಗೆ ಬಲಗೈ ಬಲ ಕೊಡುತ್ತದೆ, ಎಡಗೈ `ದಿಕ್ಕು' ತೋರಿಸುತ್ತದೆ. ಆದರೆ ಸಚಿನ್ ಎಳವೆಯಲ್ಲಿ ಅಚ್ರೇಕರ್ ಅವರ ಬಳಿ ತರಬೇತಿಗೆ ಹೋಗುತ್ತಿದ್ದಾಗ `ಕೋಚಿಂಗ್ ಮ್ಯಾನುವೆಲ್'ನಲ್ಲಿ ಇರುವುದಕ್ಕಿಂತ ಭಿನ್ನವಾಗಿದ್ದ ಸಚಿನ್ `ಸ್ವಾಭಾವಿಕ ಶೈಲಿ'ಯನ್ನು ಅವರು ಗಮನಿಸಿದರು. ಅಚ್ರೇಕರ್ ಅದನ್ನು ಬದಲಿಸಲು ಹೋಗಲಿಲ್ಲ. ಹಾಗೆಯೇ ಆಡಲು ಬಿಟ್ಟರು. ಬಹುಶಃ ಅಂದು ಅವರು ಆ ತೀರ್ಮಾನ ತೆಗೆದುಕೊಳ್ಳದಿದ್ದರೆ ನಮಗೆ ನಮ್ಮ `ಇಂದಿನ ಸಚಿನ್' ಸಿಗುತ್ತಿರಲಿಲ್ಲ.ಸಚಿನ್ ಸುದೀರ್ಘ ಕಾಲದ ಆಟದ ಶೈಲಿಯಲ್ಲಿ ಮಹತ್ತರ ಬದಲಾವಣೆಗಳು ಕಂಡು ಬಂದಿಲ್ಲ. ಆದರೆ ನಿಲ್ಲುವ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಆಗಿದೆ. ಎರಡು ಪಾದಗಳ ನಡುವಣ ಅಂತರ ಹೆಚ್ಚಾದಂತೆನಿಸಿದೆ. ಬ್ಯಾಟ್ ಹಿಡಿದು ಬಗ್ಗುವುದೂ ಜಾಸ್ತಿಯಾಗಿತ್ತು.

ಸಚಿನ್ ಆರಂಭದ ದಿನಗಳಿಂದಲೂ ಆಕ್ರಮಣಕಾರಿ ಎಂದೇ ಜನಜನಿತ. ಆದರೆ ಅವರ ಮಾತುಗಳು, ಹಾವಭಾವಗಳು ಎಂದೂ ಆಕ್ರಮಣಕಾರಿಯಾಗಿರುತ್ತಿರಲಿಲ್ಲ! ಆಟ ಮಾತ್ರ ಹಾಗಿತ್ತು. ಹೀಗಾಗಿಯೇ ಎರಡೂವರೆ ದಶಕಗಳ ಹಿಂದೆ ಡೆನಿಸ್ ಲಿಲಿ ಅವರು ವೇಗದ ಬೌಲರ್‌ಗಳಿಗೆ ತರಬೇತು ನೀಡುತ್ತಿದ್ದ ಶಿಬಿರಕ್ಕೆ ಸೇರ್ಪಡೆಗೊಳ್ಳಲು ಸಚಿನ್ ಹೋಗಿದ್ದರಂತೆ. ಆಗ ಡೆನಿಸ್ ಅವರು `ನಿನಗೆ ಈ ತರಬೇತಿ ಬೇಡ. ನೀನು ಬ್ಯಾಟಿಂಗ್‌ನತ್ತ ಗಮನ ಕೇಂದ್ರೀಕರಿಸು' ಎಂದು ವಾಪಸು ಕಳುಹಿಸಿದ್ದರಂತೆ. ಆ ನಂತರದ ದಿನಗಳಲ್ಲಿ ಸಚಿನ್ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಮನೋಭಾವ ಸ್ಫೋಟಗೊಳ್ಳುತ್ತಾ ಬಂದಿತು.ಸಚಿನ್ `ಕಟ್' ಮತ್ತು `ಪುಲ್' ಎರಡರಲ್ಲಿಯೂ ನಿರಾಯಾಸವಾಗಿರುತ್ತಿದ್ದುದು ಕಂಡು ಬಂದರೆ, `ಆಫ್ ಡ್ರೈವ್' `ಆನ್ ಡ್ರೈವ್'ಗಳಲ್ಲಿಯೂ ಲೀಲಾಜಾಲವಾಗಿ ಚೆಂಡನ್ನು ಅಟ್ಟುತ್ತಿದ್ದರು. `ಸ್ಕ್ವೈರ್ ಕಟ್' ಮತ್ತು `ಆನ್ ಡ್ರೈವ್' ಅವರ ಅತ್ಯುತ್ತಮ ಶೈಲಿಯಾಗಿದ್ದು, ಅದರಲ್ಲಿ ಪರಿಪೂರ್ಣತೆ ಕಾಣಬಹುದಿತ್ತು. ಸಚಿನ್ ಆಟದ ಮೋಹಕತೆ ಕೂಡಾ ಈ ಶೈಲಿಗಳಲ್ಲೇ ಅಡಗಿತ್ತು. ಸುನಿಲ್ ಗಾವಸ್ಕರ್  `ಸ್ಟ್ರೈಟ್ ಡ್ರೈವ್'ನಲ್ಲಿ ಹೆಸರುವಾಸಿಯಾಗಿದ್ದವರೇ. ಆದರೆ ಸಚಿನ್ `ಸ್ಟ್ರೋಕ್'ಗಳ ಅಂದದ ಬಗ್ಗೆ ಶಕ್ತಿಯ ಬಗ್ಗೆ ಗಾವಸ್ಕರ್‌ಗೆ ಇನ್ನಿಲ್ಲದ ಅಭಿಮಾನ. ಸಚಿನ್ ಬಹುತೇಕ ಎಲ್ಲಾ `ಸ್ಟ್ರೋಕ್'ಗಳಲ್ಲಿಯೂ ಎತ್ತಿದ ಕೈ. ಆದರೆ ಸ್ಕ್ವೇರ್ ಲೆಗ್‌ನತ್ತ ಹೋಗುವ ಆರ್ಥೋಡಕ್ಸ್ ಸ್ವೀಪ್ ಮಾಡುತ್ತಿದ್ದುದು ತೀರಾ ಕಡಿಮೆ. ಆದರೆ ಬಹಳಷ್ಟು ಸಲ  `ಪೆಡಲ್ ಸ್ವೀಪ್' ಮಾಡುತ್ತಿದ್ದರು. ಇಲ್ಲಿ ಚೆಂಡು ಫೈನ್ ಲೆಗ್‌ನತ್ತ ಹೋಗುತ್ತಿತ್ತಾದರೂ, ಅಲ್ಲಿ ಹೆಚ್ಚು ಬಲ ಇರುತ್ತಿರಲಿಲ್ಲವೆನ್ನಿ.  ವಿಶೇಷವೆಂದರೆ ಸಚಿನ್ ಈಚೆಗಿನ ದಿನಗಳಲ್ಲಿ ಆರ್ಥೋಡಕ್ಸ್ ಸ್ವೀಪ್ ಶುರು ಮಾಡಿಕೊಂಡಿದ್ದರು. ಈ ಬದಲಾವಣೆ ಸಚಿನ್ ಅವರಲ್ಲಿನ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ಈ ರೀತಿ ಆಡಿದರೆ ಹೆಚ್ಚು ರನ್ ಗಳಿಕೆ ಸಾಧ್ಯ ಎಂಬುದು ಅವರಿಗೆ ಅನಿಸತೊಡಗಿರಲೂಬಹುದು.ಮೊದಮೊದಲು ಸಚಿನ್ ಸ್ಪಿನ್ನರ್‌ಗಳ ಎಸೆತಗಳನ್ನು ಮುನ್ನುಗ್ಗಿ ಬಾರಿಸುತ್ತಿದ್ದರು. ಅಬ್ದುಲ್ ಖಾದಿರ್ ಅಥವಾ ಶೇನ್ ವಾರ್ನ್ ಅವರಂತಹ ಘಟಾನುಘಟಿಗಳನ್ನೇ ಈ ರೀತಿ ಎದುರಿಸಿದ್ದರು. ಲೆಗ್ ಸ್ಪಿನ್ನರ್‌ಗಳಿಂದ ಬಂದ ಚೆಂಡಿಗೆ ಮುನ್ನುಗ್ಗಿ ಬಾರಿಸುವುದು ಅದೆಷ್ಟು ಕಷ್ಟ ಎಂಬುದು ಗೊತ್ತಿರುವಂತದ್ದು ತಾನೆ. ಮೊದಲ ಹತ್ತು ವರ್ಷ ಹೀಗೆ ಆಡುತ್ತಿದ್ದ ಸಚಿನ್ ನಂತರದ ದಿನಗಳಲ್ಲಿ ನಿಂತಲ್ಲೇ ಆಡತೊಡಗಿದರು. 1998ರಲ್ಲಿ ಮದ್ರಾಸ್‌ನಲ್ಲಿ ಸಚಿನ್ ಆಸ್ಟ್ರೇಲಿಯಾದ ಎದುರು ಆಡಿದ್ದನ್ನು ಮರೆಯಲು ಅಸಾಧ್ಯ. ಆಗ ಶೇನ್ ವಾರ್ನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಅವರ ಎಸೆತಗಳಲ್ಲಿ ಸಚಿನ್ ಮುನ್ನುಗ್ಗಿ ಹೊಡೆಯುತ್ತಾ, ಚೆಂಡನ್ನು ಮೈದಾನದ ಎಲ್ಲಾ ದಿಕ್ಕುಗಳಿಗೂ ಕಳುಹಿಸಿದ್ದರು. ಈಚೆಗೆ ಸಚಿನ್ ಅವರಿಂದ ಅಂತಹ ಆಟ ಕಂಡು ಬರಲಿಲ್ಲ. ಹೆಚ್ಚಿನ ಜವಾಬ್ದಾರಿಯ ಒತ್ತಡಗಳಿಂದಾಗಿ ಸಚಿನ್ ಅವರಲ್ಲಿದ್ದ ಸ್ವಾಭಾವಿಕ ಆಟದ ಸೊಗಡು ಕಡಿಮೆಯಾಯಿತು. ಅದನ್ನು ಅವರೇ ಹಿಂದೊಮ್ಮೆ ಒಪ್ಪಿಕೊಂಡಿದ್ದರು. ಕಾಲಕ್ಕೆ ತಕ್ಕಂತೆ ತಮ್ಮ ಶೈಲಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದರು ಎಂದರೂ ಅತಿಶಯೋಕ್ತಿ ಎನಿಸಲಿಕ್ಕಿಲ್ಲ.ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಂಬಂಧಿಸಿದಂತೆ ಸಚಿನ್ ಮಿಂಚಲಿಕ್ಕೆ ಐದು ವರ್ಷ ಕಾಯಬೇಕಾಯಿತು. 1989ರಲ್ಲಿ ಪಾಕಿಸ್ತಾನದ ಎದುರು ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಆಗಿ ಅವರು ಆಡಲಿಳಿದಿದ್ದರು. ಆಗ ಅವರಿಗೆ ಹೆಚ್ಚು ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ಅವರಿಂದ ಆಗ ಶತಕಗಳೇ ಬರಲಿಲ್ಲ. ಒಂದು ದಿನದ ಪಂದ್ಯಗಳಲ್ಲಿ ಅವರು ಮೊದಲ ಶತಕ ಗಳಿಸಲು 79 ಪಂದ್ಯಗಳವರೆಗೆ ಕಾಯಬೇಕಾಯಿತು. 1994ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ನವಜೋತ್ ಸಿಧು ಆರಂಭ ಆಟಗಾರರಾಗಿದ್ದರು. ಅದೊಂದು ದಿನ ಸಿಧು ಕೊರಳ ನೋವಿನಿಂದ ಆಡಲಿಳಿಯಲಿಲ್ಲ. ಆಗ ಸಚಿನ್‌ಗೆ ಅವಕಾಶ ಸಿಕ್ಕಿತು.ಅದು ಒಂದು ದಿನದ ಪಂದ್ಯಕ್ಕೆ ಸಂಬಂಧಿಸಿದಂತೆ ಸಚಿನ್‌ಗೆ ಮರುಹುಟ್ಟು ನೀಡಿದಂತಹ ಅವಕಾಶ. ಆಗ ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 49 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ಅಂದಿನಿಂದ ಈವರೆಗೆ ಅವರು ಆರಂಭ ಆಟಗಾರರಾಗಿಯೇ ಆಡುತ್ತಾ ಬಂದರು. ಆದರೆ ಅವರ ಸಾಮರ್ಥ್ಯ ಪಂದ್ಯದಿಂದ ಪಂದ್ಯಕ್ಕೆ ಪ್ರಖರಗೊಳ್ಳುತ್ತಾ ಬಂದಿತ್ತು. 2010ರಲ್ಲಿ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾದ ಎದುರು ನಡೆದಿದ್ದ ಪಂದ್ಯದಲ್ಲಿ ಸಚಿನ್ ಗಳಿಸಿದ್ದ ದ್ವಿಶತಕವೇ ಇದಕ್ಕೆ ಸ್ಪಷ್ಟ ನಿದರ್ಶನ. ಅಂದು ಸಚಿನ್ ಅವರ ಎಲ್ಲಾ `ಸ್ಟ್ರೋಕ್'ಗಳೂ ಕಂಡು ಬಂದಿತ್ತು.ಸಚಿನ್ ಅವರ ಆಟದ ತಂತ್ರಗಳ ಬಗ್ಗೆ ಮಾತನಾಡಲು ಹುಲುಮಾನವರಿಂದ ಸಾಧ್ಯವಿಲ್ಲ. ಅಷ್ಟೊಂದು ನಿಗೂಢ, ಅಷ್ಟೇ ವೈವಿಧ್ಯಮಯ. ಆದರೆ ಈಚೆಗಿನ ದಿನಗಳಲ್ಲಿ ಆಫ್ ಸ್ಟಂಪ್‌ನಲ್ಲಿ ಬಿದ್ದು ಒಳಗೆ ಬರುತ್ತಿದ್ದ ಚೆಂಡಿಗೆ ಸಚಿನ್ ಅನೇಕ ಬಾರಿ ವಿಚಲಿತರಾಗಿ ಬಲಿಯಾಗುತ್ತಿದ್ದುದು ಮಾತ್ರ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿತ್ತು. ಈಚೆಗೆ ಹಲವು ಇನಿಂಗ್ಸ್‌ಗಳಲ್ಲಿ ಅವರು ಇಂತಹದೇ ಎಸೆತಗಳಿಗೆ ಸತತವಾಗಿ ಬೌಲ್ಡ್ ಆಗಿದ್ದರು. ಈ ತಾಂತ್ರಿಕ ನ್ಯೂನತೆಯ ಲಾಭವನ್ನು ಎದುರಾಳಿ ದೇಶಗಳ ಬೌಲರ್‌ಗಳು ಪಡೆದುಕೊಂಡಿದ್ದರು. ಈ ದೌರ್ಬಲ್ಯವೇ ಕೊನೆಗೆ ಸಚಿನ್ ಅವರಿಗೆ ಮುಳುವಾಯಿತೆನ್ನಬಹುದೇನೋ? ಅದೇನೇ ಇದ್ದರೂ, ಸಚಿನ್ ಭಾರತ ಕಂಡ ಒಬ್ಬ ಪರಿಪೂರ್ಣ ಆಟಗಾರ.ಪೂರ್ಣ ಹೆಸರು: ಸಚಿನ್ ರಮೇಶ್ ತೆಂಡೂಲ್ಕರ್ಜನನ: ಏಪ್ರಿಲ್ 24, 1973, ಮುಂಬೈವಯಸ್ಸು: 39 ವರ್ಷ 244 ದಿನಅಡ್ಡ ಹೆಸರು: ತೆಂಡ್ಲ್ಯಾ, ಲಿಟಲ್ ಮಾಸ್ಟರ್, ಮಾಸ್ಟ ಬ್ಲಾಸ್ಟರ್ಬ್ಯಾಟಿಂಗ್ ಶೈಲಿ: ಬಲಗೈ ಬ್ಯಾಟ್ಸ್‌ಮನ್ಬೌಲಿಂಗ್ ಶೈಲಿ: ಆಪ್ ಸ್ಪಿನ್ನರ್, ಲೆಗ್‌ಬ್ರೇಕ್ ಗೂಗ್ಲಿ ಪ್ರತಿನಿಧಿಸಿದ ಪ್ರಮುಖ ತಂಡಗಳು: ಭಾರತ, ಏಷ್ಯನ್ ಇಲೆವೆನ್, ಮುಂಬೈ ಇಂಡಿಯನ್ಸ್, ಯಾರ್ಕ್‌ಷೈರ್ಎತ್ತರ: 5.5 ಅಡಿಪದಾರ್ಪಣೆ: ಪಾಕಿಸ್ತಾನ ವಿರುದ್ಧ, ಡಿಸೆಂಬರ್ 18, 1989

(ಗುಜ್ರನ್‌ವಾಲಾ, ಪಾಕ್)ಕೊನೆಯ ಪಂದ್ಯ: ಪಾಕ್ ವಿರುದ್ಧ, 18-3-2012 (ಢಾಕಾ)ಸಚಿನ್ ಕುಟುಂಬ: ಪತ್ನಿ ಅಂಜಲಿ, ಮಕ್ಕಳು: ಅರ್ಜುನ್, ಸಾರಾಇಷ್ಟದ ನಟ: ಅಮಿತಾಭ್ ಬಚ್ಚನ್ಇಷ್ಟದ ಗಾಯಕಿ: ಲತಾ ಮಂಗೇಷ್ಕರ್ಸಚಿನ್ ವಿಶೇಷಗಳು

*ಸಚಿನ್ ಬಲಗೈ ಬ್ಯಾಟ್ಸ್‌ಮನ್. ಆದರೆ ಸಹಿ ಮಾಡುವುದು ಎಡಗೈನಲ್ಲಿ.

* ವಿಶ್ವದಲ್ಲಿ ಅತಿ ಹೆಚ್ಚು ತೂಕದ ಬ್ಯಾಟ್ ಬಳಸುವುದು ಸಚಿನ್        (1.350 ಗ್ರಾಂ).

*ತೆಂಡೂಲ್ಕರ್‌ಗೆ ಕಾರುಗಳೆಂದರೆ ತುಂಬಾ ಪ್ರಿಯ. ಕಾರುಗಳ ಸಂಗ್ರಹವೇ ಅವರ ನಿವಾಸದಲ್ಲಿದೆ.

*ಸಚಿನ್ ಸಾಯಿಬಾಬಾ ಅವರ ಪರಮ ಭಕ್ತ. ಸಚಿನ್ ಅವರ ಕ್ರಿಕೆಟ್ ಕಿಟ್‌ನಲ್ಲಿ ಸಾಯಿಬಾಬಾ ಅವರ ಫೋಟೊವಿದೆ.

*ಸಚಿನ್ ಅಂಗಳದೊಳಗೆ ಬ್ಯಾಟ್ ಮಾಡಲು ಕಾಲಿಡುವ ಮುನ್ನ ಸೂರ್ಯನತ್ತ ನೋಡುತ್ತಾರೆ.

*ಶತಕ ಗಳಿಸಿದಾಗ ಆಕಾಶ ನೋಡಿ ನಮಿಸುತ್ತಾರೆ. ಕಾರಣ ತಂದೆ ತಮ್ಮ ಆಟ ವೀಕ್ಷಿಸುತ್ತಿದ್ದಾರೆ ಎಂಬ ನಂಬಿಕೆ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry