ಅನನ್ಯ `ಸೆಲ್ಯುಲಾಯ್ಡ ಮ್ಯಾನ್'

7

ಅನನ್ಯ `ಸೆಲ್ಯುಲಾಯ್ಡ ಮ್ಯಾನ್'

Published:
Updated:

ಹಲವು ಭಾರತೀಯ ಭಾಷೆಗಳಲ್ಲಿ ಈಗ ಡಾಕ್ಯುಮೆಂಟರಿ (ಕಿರುಚಿತ್ರ)ಗಳ ನಿರ್ಮಾಣ ಆಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸರ್ಕಾರದ ಮತ್ತು ಜನರ ಗಮನ ಸೆಳೆಯಲು ಸಿನಿಮಾಗಳಿಗಿಂತ ಡಾಕ್ಯುಮೆಂಟರಿಗಳು ಹೆಚ್ಚು ಪರಿಣಾಮಕಾರಿ. ಸಿನಿಮಾ ನಿರ್ಮಾಣದಲ್ಲಿ ತರಬೇತಿ ಪಡೆದ ಪ್ರತಿಭಾವಂತರು ಕಥಾಚಿತ್ರ(ಫೀಚರ್)ಗಳ ನಿರ್ಮಾಣಕ್ಕೆ ಕೈಹಾಕುವ ಮೊದಲು ಡಾಕ್ಯುಮೆಂಟರಿಗಳನ್ನು ಮಾಡಿ ಅನುಭವ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿವರ್ಷ ಹಲವು ಭಾರತೀಯ ಭಾಷೆಗಳಲ್ಲಿ ನೂರಾರು ಡಾಕ್ಯುಮೆಂಟರಿಗಳು ನಿರ್ಮಾಣವಾಗುತ್ತಿವೆ.ಅವಕಾಶವಂಚಿತ ಜನ ಸಮುದಾಯಗಳು, ಬರ, ಪ್ರವಾಹ ಇತ್ಯಾದಿ ಪ್ರಾಕೃತಿಕ ಏರುಪೇರುಗಳಿಂದ ಸಂಕಷ್ಟಕ್ಕೆ ತುತ್ತಾಗುವ ಜೀವ ಸಂಕುಲ, ಪರಿಸರ ನಾಶದ ಪರಿಣಾಮಗಳು ಸೇರಿದಂತೆ ಹತ್ತಾರು ಜ್ವಲಂತ ಸಮಸ್ಯೆಗಳು ಹಾಗೂ ಹಲವಾರು ಕ್ಷೇತ್ರಗಳಲ್ಲಿ ದುಡಿದ ಗಣ್ಯರ ಬದುಕು- ಸಾಧನೆಗಳನ್ನು ಕಟ್ಟಿಕೊಡುವ ಡಾಕ್ಯುಮೆಂಟರಿಗಳು ಈಗ ನಿರ್ಮಾಣವಾಗುತ್ತಿವೆ. ಕಥಾಚಿತ್ರಕ್ಕೆ ಸೂಕ್ತವಾಗದ ಅನೇಕ ವಿಷಯ, ಸಂಗತಿಗಳನ್ನು ಡಾಕ್ಯುಮೆಂಟರಿಗಳ ಮೂಲಕ ಕಟ್ಟಿಕೊಡುವುದು ಸುಲಭ.ಆದರೆ ಇವು ಕಮರ್ಷಿಯಲ್ ಸಿನಿಮಾಗಳಂತೆ ದೊಡ್ಡ ಪ್ರಮಾಣದಲ್ಲಿ ಜನರ ಗಮನಕ್ಕೆ ಬರುವುದಿಲ್ಲ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಕೆಲವು ಡಾಕ್ಯುಮೆಂಟರಿಗಳು ಪ್ರದರ್ಶನವಾಗುತ್ತವೆ. ಕೆಲವು ಟೀವಿ ಚಾನೆಲ್‌ಗಳ ಮೂಲಕ ಜನರ ಗಮನಕ್ಕೆ ಬರುತ್ತವೆ. ಈಗ ಅಲ್ಲಲ್ಲಿ ಡಾಕ್ಯುಮೆಂಟರಿಗಳ ಉತ್ಸವಗಳೂ ನಡೆಯುತ್ತವೆ.ಇತ್ತೀಚೆಗೆ ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ `ಪನೋರಮಾ' ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆ ಸಮಿತಿಯ ಮುಂದೆ 140 ಡಾಕ್ಯುಮೆಂಟರಿಗಳು ಪರಿಶೀಲನೆಗೆ ಬಂದಿದ್ದವು. ಅವುಗಳ ಪೈಕಿ 19 ಕಿರುಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾದವು. ಅವುಗಳಲ್ಲಿ ಕೆಲವು ಸಿನಿಮಾಗಳಷ್ಟೇ ಪರಿಣಾಮಕಾರಿಯಾಗಿದ್ದವು.ಈ ಡಾಕ್ಯುಮೆಂಟರಿಗಳ ಪೈಕಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ (ಫಿಲ್ಮ್ ಇನ್‌ಸ್ಟಿಟ್ಯೂಟ್) ಸಂಸ್ಥೆಯ `ಫಿಲ್ಮ್ ಆರ್ಕ್ವೈವ್'ನ ರೂವಾರಿ ಪಿ.ಕೆ. ನಾಯರ್ ಅವರನ್ನು ಕುರಿತ ಎರಡು ಗಂಟೆಗಳಿಗೂ ಹೆಚ್ಚಿನ ಅವಧಿಯ (ಹಿಂದಿ, ಇಂಗ್ಲಿಷ್, ಬೆಂಗಾಲಿ ಮತ್ತು ಕನ್ನಡದಲ್ಲಿ ವಿವರಣೆಗಳಿರುವ) `ಸೆಲ್ಯುಲಾಯ್ಡ ಮ್ಯಾನ್' ಹೆಚ್ಚು ಗಮನ ಸೆಳೆಯಿತು. ಈ ಡಾಕ್ಯುಮೆಂಟರಿ ಚಿತ್ರ ಭಾರತೀಯ ಸಿನಿಮಾ ಇತಿಹಾಸದ ಮಹತ್ವದ ಸಂಗತಿಗಳತ್ತ ಗಮನ ಸೆಳೆಯುತ್ತದೆ.ದಾದಾ ಸಾಹೇಬ್ ಫಾಲ್ಕೆ ನಿರ್ದೇಶನದ ದೇಶದ ಮೊದಲ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ' (1913)ದಿಂದ ಹಿಡಿದು ನೂರಾರು ಹಳೆಯ ಸಿನಿಮಾಗಳನ್ನು ಸಂಗ್ರಹಿಸಿದ ನಾಯರ್ ಅವರ ಪರಿಶ್ರಮವನ್ನು ಸೆಲ್ಯುಲಾಯ್ಡ ಮ್ಯಾನ್ ಕಟ್ಟಿಕೊಡುತ್ತದೆ. `ರಾಜಾ ಹರಿಶ್ಚಂದ್ರ'ದಿಂದ ಹಿಡಿದು ಟಾಕಿ ಸಿನಿಮಾಗಳು ಬರುವವರೆಗೆ ದೇಶದಲ್ಲಿ ನಿರ್ಮಾಣವಾದ ಮೂಕಿ ಚಿತ್ರಗಳ ಸಂಖ್ಯೆ 1700. ಆದರೆ ಅವುಗಳಲ್ಲಿ ಈಗ ನೋಡಲು ಸಿಗುವ ಚಿತ್ರಗಳ ಸಂಖ್ಯೆ ಕೇವಲ 9. ಈ ಚಿತ್ರಗಳನ್ನು ಪತ್ತೆ ಹಚ್ಚಿ ಸಂಗ್ರಹಿಸಿದ ಯಶಸ್ಸು ನಾಯರ್ ಅವರದು.ಕೆ.ಪಿ. ನಾಯರ್ ಭಾರತೀಯ (ವಿವಿಧ) ಭಾಷೆಗಳ ಹಳೆಯ ಸಿನಿಮಾಗಳಲ್ಲದೆ ನೂರಾರು ಚಾರಿತ್ರಿಕ ಮಹತ್ವದ ವಿದೇಶಿ ಸಿನಿಮಾಗಳನ್ನೂ ಸಂಗ್ರಹಿಸಿದ್ದಾರೆ. ಪುಣೆಯ ಸಿನಿಮಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ಸಿನಿಮಾ ಉದ್ಯಮಿಗಳು ಹಾಗೂ ದೇಶದ ಸಿನಿಮಾ ಸೊಸೈಟಿಗಳ ಮೂಲಕ ಸಾರ್ವಜನಿಕರು ಅವನ್ನು ನೋಡುವ ಅವಕಾಶವಿದೆ.ಪುಣೆಯ ಸಿನಿಮಾ ತರಬೇತಿ ಸಂಸ್ಥೆಯ ಪದವೀಧರರೂ ಆದ ನಾಯರ್ ಸಿನಿಮಾ ನಿರ್ಮಾಣದಲ್ಲಿ ಮುಂದುವರಿಯುವ ಬದಲು ಅವನ್ನು ಸಂಗ್ರಹಿಸಿ, ಸಂರಕ್ಷಿಸಿಡುವ ಕೆಲಸಕ್ಕೆ ತೊಡಗಿದರು. ಅಷ್ಟೇ ಅಲ್ಲ, ನಾಯರ್ ನೆನಪಿನಲ್ಲಿ ವಿಶ್ವ ಸಿನಿಮಾ ಬಗೆಗಿನ ನೂರಾರು ಮಾಹಿತಿಗಳಿವೆ. ಒಂದರ್ಥದಲ್ಲಿ ಅವರು ಸಿನಿಮಾ ವಿಶ್ವಕೋಶ ಇದ್ದಂತೆ. ಅವರ ಸ್ಮರಣ ಶಕ್ತಿ ಅಗಾಧ. ಸರ್ಕಾರಿ ವ್ಯವಸ್ಥೆಯಲ್ಲಿ ಇದ್ದುಕೊಂಡೇ ಅವರು ಎಷ್ಟೆಲ್ಲ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಭಾರತೀಯ ಸಿನಿಮಾರಂಗ ಅವರಿಗೆ ಋಣಿಯಾಗಿರಬೇಕು.ಪುಣೆಯಲ್ಲಿ ಫಿಲ್ಮ್ ಆರ್ಕ್ವೈವ್ ಆರಂಭವಾದದ್ದು 1964ರಲ್ಲಿ. ಆರಂಭದಲ್ಲೇ ಅಲ್ಲಿಗೆ ಸೇರಿದ ನಾಯರ್ ಆರ್ಕ್ವೈವ್‌ನ ಮಹತ್ವವನ್ನು ಅರ್ಥಮಾಡಿಕೊಂಡರು. ಮೊದಲ `ರಾಜಾ ಹರಿಶ್ಚಂದ್ರ'ದ ನೆಗೆಟಿವ್‌ಗಳನ್ನು ಫಾಲ್ಕೆ ಅವರ ಮಗ ಪ್ರಭಾಕರ ಫಾಲ್ಕೆ ಅವರ ನಾಸಿಕ್ ಮನೆಯಲ್ಲಿದೆ ಎಂಬ ಮಾಹಿತಿ ಪಡೆದು ಅಲ್ಲಿಗೆ ಹೋಗಿ ಅದನ್ನು ಸಂಗ್ರಹಿಸಿ ತಂದರು. ಅವರದೇ ಇನ್ನೊಂದು ಚಿತ್ರ `ಕಾಳಿ ಮರ್ದನ'ದ ಕೆಲವು ತುಣುಕುಗಳನ್ನು ಸಂಗ್ರಹಿಸಲು ಅವರಿಗೆ ಸಾಧ್ಯವಾಯಿತು.ಅದರ ನಿರ್ಮಾಣದ ಸಮಯದಲ್ಲಿ ಫಾಲ್ಕೆ ಅವರು ಮಾಡಿಕೊಂಡ ಕೈಬರಹದ ಟಿಪ್ಪಣಿಗಳ ಆಧಾರದ ಮೇಲೆ ಕಾಳಿಮರ್ದನದ ತುಣುಕುಗಳನ್ನು ಜೋಡಿಸುವ ಪ್ರಯತ್ನವನ್ನು ನಾಯರ್ ಮಾಡಿದರು. ಆದರೆ ಆ ಚಿತ್ರದ ಪೂರ್ಣ ಪ್ರತಿ ದಕ್ಕಲಿಲ್ಲ. `ರಾಜಾ ಹರಿಶ್ಚಂದ್ರ' ಸೇರಿದಂತೆ ಹತ್ತಾರು ಹಳೆಯ ಸಿನಿಮಾಗಳನ್ನು ಈಗ ಡಿಜಿಟಲ್ ಚಿತ್ರಗಳನ್ನಾಗಿ ಪರಿವರ್ತಿಸಿ ಪುಣೆಯ ಆರ್ಕ್ವೈವ್‌ನಲ್ಲಿ ಇರಿಸಲಾಗಿದೆ.`ಸೆಲ್ಯುಲಾಯ್ಡ ಮ್ಯಾನ್' ಚಿತ್ರ ನಾಯರ್ ಅವರ ಪರಿಶ್ರಮವನ್ನಷ್ಟೇ ಕಟ್ಟಿಕೊಡುವುದಿಲ್ಲ. ಭಾರತೀಯ ಸಿನಿಮಾರಂಗ ನಡೆದು ಬಂದ  ದಾರಿಯನ್ನೂ ಅದು ದಾಖಲಿಸುತ್ತದೆ. 1950ಕ್ಕಿಂತ ಮೊದಲು ನಿರ್ಮಾಣವಾದ ಸುಮಾರು 45ಕ್ಕೂ ಹೆಚ್ಚು ಸಿನಿಮಾಗಳನ್ನು ಸಂಗ್ರಹಿಸಿದ್ದು ಎಲ್ಲಿಂದ, ಅವುಗಳನ್ನು ನಿರ್ಮಿಸಿದವರು ಯಾರು, ಇತ್ಯಾದಿ  ಕುತೂಹಲಕರ ಮಾಹಿತಿಗಳನ್ನು ನಾಯರ್ ಅವರೇ ವಿವರಿಸಿದ್ದಾರೆ.1960-70ರ ದಶಕದಲ್ಲಿ ಅವರು ಮುಂಬೈ, ಕಾಕಿನಾಡ, ವಿಜಯವಾಡ, ಕೋಲ್ಕತ್ತ, ಮದರಾಸ್ ಮತ್ತಿತರ ನಗರಗಳಿಗೆ ಹೋಗಿ ಹಳೆಯ ಚಿತ್ರಗಳ ನೆಗೆಟಿವ್‌ಗಳಿಗಾಗಿ ನಿರ್ಮಾಪಕರು, ವಿತರಕರನ್ನು ಸಂಪರ್ಕಿಸಿ ಹಳೆಯ ಚಿತ್ರಮಂದಿರಗಳ ಉಗ್ರಾಣಗಳಲ್ಲಿ ಹುಡುಕಾಡಿದ್ದಾರೆ.1930ರಲ್ಲಿ ನಿರ್ಮಾಣವಾದ ಮಲಯಾಳಂನ ಎರಡನೇ (ಮೊದಲ ಚಿತ್ರ ಸಿಕ್ಕಿಲ್ಲ) ಚಿತ್ರ `ಮಾರ್ತಾಂಡ ವರ್ಮಾ'ದ ನೆಗೆಟಿವ್‌ಗಳು ಒಂದು ಪುಸ್ತಕದ ಅಂಗಡಿಯಲ್ಲಿ ಸಿಕ್ಕಿದುವಂತೆ. ಈ ಚಿತ್ರ ಸೆನ್ಸಾರ್ ಆಗಿರಲಿಲ್ಲ. ಕಾಪಿರೈಟ್ ಉಲ್ಲಂಘನೆಗೆ ಸಂಬಂಧಿಸಿದ ವಿವಾದದಿಂದಾಗಿ ಅದನ್ನು ವಶಪಡಿಸಿಕೊಂಡವರು ಅವನ್ನು ಉಗ್ರಾಣದ ಮೂಲೆಗೆ ಎಸೆದಿದ್ದರು. ಅದನ್ನು ಪತ್ತೆ ಹಚ್ಚಿ ಪುಣೆಯ ಆರ್ಕ್ವೈವ್‌ಗೆ ತಲುಪಿಸಲು ನೆರವಾದವರು ನಿರ್ದೇಶಕ ಅಡೂರು ಗೋಪಾಲಕೃಷ್ಣನ್.1920-30ರ ಅವಧಿಯಲ್ಲಿ ಶಿವರಾಮ ಕಾರಂತರು ನಿರ್ಮಿಸಿದ ಕನ್ನಡ ಚಿತ್ರದ ನೆಗೆಟಿವ್‌ಗಳು ಸಹ ಸಿಕ್ಕಿಲ್ಲ. ಕನ್ನಡದ ಆರಂಭ ಕಾಲದ ಸಿನಿಮಾಗಳೂ ಸಿಕ್ಕಿಲ್ಲ. ಕನ್ನಡದ `ವಸಂತಸೇನಾ' (ಆರ್. ನಾಗೇಂದ್ರರಾವ್ ನಟಿಸಿದ್ದ) ಚಿತ್ರದ ಪ್ರತಿ ಸಿಕ್ಕಿದೆ. 1931ರಲ್ಲಿ ನಿರ್ಮಾಣವಾದ ಬೆಂಗಾಳಿ ಚಿತ್ರ `ಜಮಾಯಿ ಬಾಬು', 1936ರಲ್ಲಿ ನಿರ್ಮಾಣವಾದ ಮರಾಠಿ ಭಾಷೆಯ `ಸಂತ ತುಕಾರಾಂ' ಇತ್ಯಾದಿ ಹಲವು ಹಳೆಯ ಸಿನಿಮಾಗಳನ್ನು ಸಂಗ್ರಹಿಸಿದ ಬಗ್ಗೆ ಚಿತ್ರದಲ್ಲಿ ಮಾಹಿತಿಗಳಿವೆ.ನಾಯರ್ ಅವರ ಪರಿಶ್ರಮ, ಸಿನಿಮಾ ಬಗ್ಗೆ ಅವರಿಗೆ ಇದ್ದ ಬದ್ಧತೆ, ಅವರ ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ಡಾಕ್ಯುಮೆಂಟರಿಯ ಉದ್ದಕ್ಕೂ ನಾಸಿರುದ್ದೀನ್ ಷಾ, ಅಡೂರು ಗೋಪಾಲಕೃಷ್ಣನ್, ಫಾಲ್ಕೆ ಅವರ ಮೊಮ್ಮಗ ವಿವೇಕ್ ಅಠಾವಳೆ, ಪತ್ರಕರ್ತ ರಶೀದ್ ಇರಾನಿ, ನಟಿ ಶಬಾನಾ ಅಜ್ಮಿ, ಸಾಹಿತಿ ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾಸರವಳ್ಳಿ, ಕೇತನ್ ಮೆಹ್ತಾ, ಬಾಲಾ ನಾಯಕ್, ನಸ್ರೀನ್ ಮುನ್ನಿ, ಕೆ.ಎ.ಬೀರ್, ರಮೇಶ್ ಸಿಪ್ಪಿ, ಯಶ್ ಚೋಪ್ರಾ, ಕಮಲಹಾಸನ್, ನಟಿ ಸಿತಾರಾದೇವಿ, ರಾಜ್ ಹಿರಾನಿ, ಋತ್ವಿಕ್‌ಘಟಕ್ ಅವರ ಪತ್ನಿ ಸುರಯ್ಯಾ ಘಟಕ್, ಶಾಜಿ ಕರಣ್, ಜಯಾ ಬಾಧುರಿ, ಜಾನ್ಹು ಬರುವಾ, ಬಾಲು ಮಹೇಂದ್ರ, ನರಹರಿರಾವ್ ಸೇರಿದಂತೆ ಹಲವರು ನಾಯರ್ ಅವರ ಆಸಕ್ತಿ ಹಾಗೂ ಅವರ ಪರಿಶ್ರಮದ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.ಸಾಗರ (ಶಿವಮೊಗ್ಗ ಜಿಲ್ಲೆಯ) ಸಮೀಪದ ಹೆಗ್ಗೋಡಿನ `ನೀನಾಸಂ'ನಲ್ಲಿ ಕೆ.ವಿ.ಸುಬ್ಬಣ್ಣ ಸಂಘಟಿಸುತ್ತಿದ್ದ ಸಿನಿಮಾ ರಸಗ್ರಹಣ ಶಿಬಿರಗಳು, ಅವುಗಳಲ್ಲಿ ಭಾಗವಹಿಸಿದ ಸ್ಥಳೀಯರ ಅಭಿಪ್ರಾಯಗಳು ಸೇರಿದಂತೆ ಸಿನಿಮಾ ಕುರಿತು ಜನಸಾಮಾನ್ಯರಲ್ಲಿ ಅಭಿರುಚಿ ಬೆಳೆಸುವ ವಿಷಯದಲ್ಲಿ `ಫಿಲ್ಮ್ ಆರ್ಕ್ವೈವ್' ವಹಿಸಿದ ಪಾತ್ರ ಇತ್ಯಾದಿಗಳ ಬಗ್ಗೆ ಮಾಹಿತಿಗಳಿವೆ.ನಾಯರ್ ಅವರಿಗೆ ಬಾಲ್ಯದಲ್ಲೇ ಸಿನಿಮಾದ ಆಸಕ್ತಿ ಹುಟ್ಟಿತು. ಅದಕ್ಕೆ ಕಾರಣವಾದದ್ದು ತಿರುವನಂತಪುರದ ಒಂದು ಹಳೆಯ ಚಿತ್ರಮಂದಿರ. ಬಾಲ್ಯದಲ್ಲೇ ಸಿನಿಮಾದ ಸೆಳೆತಕ್ಕೆ ಸಿಕ್ಕ ನಾಯರ್ ಅದರಿಂದ ಉತ್ತೇಜನಗೊಂಡು ಸಿನಿಮಾ ನಿರ್ಮಾಣದಲ್ಲಿ ತರಬೇತಿ ಪಡೆಯಲು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿದರು. `ಬೈಸಿಕಲ್ ಥೀವ್ಸ್' ಮತ್ತು `ರಾಶೋಮನ್' ಚಿತ್ರಗಳನ್ನು ನೋಡಿದ ನಂತರ ಅವರ ದೃಷ್ಟಿಕೋನ ಬದಲಾಯಿತು. ಈಗ ನಾಯರ್ ಜೀವನದ ಸಂಜೆಯಲ್ಲಿದ್ದಾರೆ. ಆದರೆ ಅವರ ಸಿನಿಮಾಸಕ್ತಿ ಮಾತ್ರ ಕುಗ್ಗಿಲ್ಲ.ಡಾಕ್ಯುಮೆಂಟರಿಯಲ್ಲಿ ಅವರ ಬದುಕಿನ ವೈಯಕ್ತಿಕ ವಿವರಗಳಿವೆ. ನಾಯರ್ ಪುತ್ರಿ ತಂದೆಯ ಗುಣ, ಸ್ವಭಾವಗಳನ್ನು ಕುರಿತು ಆಡಿರುವ ಮಾತುಗಳು ಅವರಿಗೆ ಸಿನಿಮಾ ಬಗ್ಗೆ ಇದ್ದ ಬದ್ಧತೆ, ಆಸಕ್ತಿ ಇತ್ಯಾದಿಗಳನ್ನು ಕಟ್ಟಿಕೊಡುತ್ತವೆ. ನಿವೃತ್ತಿ ನಂತರ ಅವರು ಕೇರಳಕ್ಕೆ ಹೋಗಿ ಅಲ್ಲಿ ನೆಲೆಸುವ ಪ್ರಯತ್ನ ಮಾಡಿದರು. ಅಲ್ಲಿನ ಏಕತಾನದ ಜೀವನದಿಂದ ಬೇಸರಗೊಂಡು ಮತ್ತೆ ಪುಣೆಗೆ ಬಂದರು. ಅವರು ಪ್ರತಿವರ್ಷ ಪಣಜಿ ಚಿತ್ರೋತ್ಸವಕ್ಕೆ ಸಹಾಯಕರೊಬ್ಬರ ಜೊತೆಯಲ್ಲಿ ಬರುತ್ತಾರೆ. ಹತ್ತು ದಿನಗಳ ಕಾಲ ಆಸಕ್ತಿಯಿಂದ ಕುಳಿತು ಸಿನಿಮಾ ನೋಡುತ್ತಾರೆ. ಚರ್ಚೆಗಳಲ್ಲಿ ಸಿನಿಮಾ ವಿದ್ಯಾರ್ಥಿಯಂತೆ ಆಸಕ್ತಿಯಿಂದ ಭಾಗವಹಿಸುತ್ತಾರೆ!ಪುಣೆಯ `ಸಿನಿಮಾ ಆರ್ಕ್ವೈವ್'ನಲ್ಲಿ 12 ಸಾವಿರ ಸಿನಿಮಾಗಳಿವೆ. ಅವುಗಳಲ್ಲಿ 8 ಸಾವಿರ ಭಾರತೀಯ ಸಿನಿಮಾಗಳು. ಕಳೆದ ಒಂದು ಶತಮಾನದ ಅವಧಿಯಲ್ಲಿ ಭಾರತೀಯ ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳ ಸಂಖ್ಯೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಫಿಲ್ಮ್ ನೆಗೆಟಿವ್‌ಗಳಲ್ಲಿನ ರಾಸಾಯನಿಕವನ್ನೆಲ್ಲ ಕೆರೆದು ತೆಗೆದ ಮೇಲೆ ಉಳಿಯುವ ರೀಲುಗಳು ಪ್ಲಾಸ್ಟಿಕ್ ಬಳೆಗಳ ತಯಾರಿಕೆಗೆ ಕಚ್ಛಾವಸ್ತುವಂತೆ! ಹಳೆಯ ಸಿನಿಮಾಗಳು ಕೊನೆಗೆ ಬಳೆಗಳಾಗುತ್ತವೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ, ಸಾವಿರಾರು, ಕಲಾವಿದರು, ತಂತ್ರಜ್ಞರು ಅಪಾರ ಶ್ರಮ ಹಾಕಿ ನಿರ್ಮಿಸಿದ ಸಿನಿಮಾಗಳು ಕೆಲ ವರ್ಷಗಳ ನಂತರ `ಮೌಲ್ಯ' ಕಳೆದುಕೊಂಡು ಬಳೆಗಳ ರೂಪ ಪಡೆಯುವುದು ಮಾತ್ರ ವಿಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry