ಅನರ್ಹರಿಗೆ ಮನೆ ನೀಡಿದರೆ ಕ್ರಿಮಿನಲ್ ಮೊಕದ್ದಮೆ

7

ಅನರ್ಹರಿಗೆ ಮನೆ ನೀಡಿದರೆ ಕ್ರಿಮಿನಲ್ ಮೊಕದ್ದಮೆ

Published:
Updated:

ಚಿತ್ರದುರ್ಗ: ಬಡವರಿಗೆ ಸಿಗಬೇಕಾದ ಮನೆಗಳನ್ನು ಫಲಾನುಭವಿಗಳು ಶ್ರೀಮಂತರಿಗೆ  ನೀಡಿದ ಬಗ್ಗೆ ದೂರು ನೀಡಿದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಣ ವಸೂಲಿ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಎಚ್ಚರಿಸಿದರು.ಶುಕ್ರವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಶ್ವಾನಪ್ರದರ್ಶನ ಉದ್ಘಾಟಿಸಿದ ನಂತರ  ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ವಸತಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಜಿಪಿಎಸ್ ಪದ್ಧತಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಪದ್ಧತಿ ಅನುಷ್ಠಾನದಿಂದಾಗಿ ಸರ್ಕಾರದಿಂದ ಬಿಡುಗಡೆಯಾದ ಹಣ ನೇರವಾಗಿ ಫಲಾನುಭವಿಗೆ ತಲುಪಲಿದೆ. ಇದಿರಿಂದಾಗಿ ಬಡ ಜನರು ಯಾವ ಅಧಿಕಾರಿ ಹಾಗೂ ಕಚೇರಿಯ ಬಳಿ ಹೋಗಿ ಕಾದು ಕುಳಿತುಕೊಳ್ಳವ ಸಂದರ್ಭವೇ ಬರುವುದಿಲ್ಲ. ಜಿಪಿಎಸ್ ಅಳವಡಿಕೆ ಆರಂಭದಲ್ಲಿ ಕಷ್ಟವಾಗಬಹುದು. ಆದರೆ, ಸಮರ್ಥವಾಗಿ ಅನುಷ್ಠಾನಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದರು.ಬಡವರಿಗೆ ಸೇರಬೇಕಾದ ಮನೆಗಳು ಅನರ್ಹರ ಪಾಲಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಸಂಬಂಧಪಟ್ಟ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಸಾರ್ವಜನಿಕರು ಇಂತಹ ಅನ್ಯಾಯ ನೋಡಿ ಸುಮ್ಮನೆ ಕುಳಿತುಕೊಳ್ಳದೆ ದೂರು ದಾಖಲಿಸಬೇಕು. ಕೊಳಚೆ ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳನ್ನು ಮಾರಾಟ ಮಾಡುವುದು, ದೌರ್ಜನ್ಯದಿಂದ ಪಡೆದುಕೊಳ್ಳುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಿದ್ದು, ಇನ್ನು ಮುಂದೆ ಮನೆಯನ್ನು ಹೆಣ್ಣುಮಕ್ಕಳ ಹೆಸರಿನಲ್ಲಿ ನಿರ್ಮಿಸಿ, ಅದನ್ನು ಮುಂದಿನ ಹತ್ತು ವರ್ಷ ಮಾರಾಟ ಮಾಡದಂತೆ ಕಾಯ್ದೆ ರೂಪಿಸಲಾಗುವುದು ಎಂದರು.ಗೌರಿಬಿದನೂರಿನಲ್ಲಿ ಅನರ್ಹರಾಗಿರುವ ಹಣವಂತರಿಗೆ 28 ಮನೆ ನೀಡಲಾಗಿದೆ. ಇದೇ ರೀತಿ ಮನೆ ವಿತರಣೆಯಲ್ಲಿ ಲೋಪವೆಸಗಿರುವ 18 ಪಿಡಿಒಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ತೀರ್ಮಾನಿಸಿದೆ.ಜತೆಗೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುವುದು. ಬೆಂಗಳೂರು ಹಾಗೂ ಮೈಸೂರಿನಲ್ಲಿ 24 ಸಾವಿರ ಮನೆ ನಿರ್ಮಾಣ ಮಾಡಿ ಕೊಳೆಗೇರಿ ನಿವಾಸಿಗಳಿಗೆ ಹಸ್ತಾಂತರಿಸಲಾಗಿದೆ. ರಾಜ್ಯಾದ್ಯಂತ ವಾಸ ಮಾಡುತ್ತಿರುವ 2,227 ಕೊಳಗೇರಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯವೂ ನಡೆಯುತ್ತಿದೆ ಎಂದರು.ರಾಜ್ಯದಲ್ಲಿರುವ ವಸತಿ ಸಮಸ್ಯೆ ಪರಿಹರಿಸಲು 50 ಸಾವಿರ ಮನೆ ನಿರ್ಮಾಣ ಮಾಡಲು ರಾಜೀವ್ ಆವಾಸ್ ಯೋಜನೆಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ 50 ತಾಲ್ಲೂಕು ಹಾಗೂ 50 ಪಟ್ಟಣ ಆಯ್ಕೆ ಮಾಡಿಕೊಳ್ಳಲಾಗಿದೆ.

 

ಇದೇ ಕೆಲಸ ಮುಂದುವರಿಸಿಕೊಂಡು ಹೋದರೆ ಮುಂದಿನ 3  ವರ್ಷ ರಾಜ್ಯದಲ್ಲಿ ಮನೆ ಸಮಸ್ಯೆಗಳು ಬಗೆ ಹರಿಯಲಿವೆ.  ಈ ವರ್ಷ 50 ಸಾವಿರ ಮನೆಗಳನ್ನು ರಾಜೀವ ಆವಾಸ್ ಯೋಜನೆಯಲ್ಲಿ ಕೊಳಚೆ ಅಭಿವೃದ್ದಿ ಮಂಡಳಿ ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ 50 ತಾಲ್ಲೂಕುಗಳು, 50 ಪಟ್ಟಣಗಳನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಸಚಿವರು ಮನೆಗಳನ್ನು  ಅರ್ಹರಿಗೆ ನೀಡಿದರೆ ಮುಂದಿನ 2-3 ವರ್ಷಗಳಲ್ಲಿ ಮನೆಗಳಿಗೆ ಬೇಡಿಕೆ ಬರುವುದಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry